ನವರಾತ್ರಿ ವಿಶೇಷ: ಹೊರನಾಡು ಅನ್ನಪೂರ್ಣೇಶ್ವರಿ

Upayuktha
0


ಲಿಯುಗದಲ್ಲಿ ಮನುಷ್ಯನ ಪ್ರಾಣವು ಅನ್ನಮಯ ಇಂತಹ ಅನ್ನದ ದೇವತೆ ಅನ್ನಪೂರ್ಣೇಶ್ವರಿ. ಅನ್ನಪೂರ್ಣೇಶ್ವರಿ ದೇವಿ ಪಾರ್ವತಿದೇವಿಯ ಇನ್ನೊಂದು ರೂಪವೆಂದು ಹೇಳಲಾಗುತ್ತದೆ. ಅನ್ನಪೂರ್ಣೇಶ್ವರಿಯ ದೇವಾಲಯಗಳು ಬಹಳ ಕಡಿಮೆಯಾಗಿದೆ ಕೆಲವೇ ಅನ್ನಪೂರ್ಣಾದೇವಿಯ ದೇವಾಲಯಗಳಲ್ಲಿ ಒಂದಾಗಿರುವ ಕರ್ನಾಟಕದ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯವೂ ಒಂದಾಗಿದೆ. ಚಿಕ್ಕಮಗಳೂರಿನಿಂದ ನೂರು ಕಿ.ಮೀ ದೂರದಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಅನ್ನಪ್ರಾಶನ ಮಾಡಿಸಿದರೆ ಮಗುವೆಗೆ ಎಂದಿಗೂ ಅನ್ನದ ಕೊರತೆ ಆಗುವುದಿಲ್ಲ ಎಂಬ ನಂಬಿಕೆ ಇದೆ.  ಅನ್ನಪೂರ್ಣೇಶ್ವರಿ ಆಹಾರ ಮತ್ತು ಸಮೃದ್ಧಿಗಳ ದೇವತೆಯಾಗಿದ್ದಾಳೆ. ಹೊರನಾಡು ಪಶ್ಚಿಮಘಟ್ಟಗಳ ಮಧ್ಯದಲ್ಲಿ ಭದ್ರಾನದಿಯ ತೀರದಲ್ಲಿ ಇದೆ. ಅನ್ನಪೂರ್ಣೇಶ್ವರಿಯ ವಿಗ್ರಹವು 6 ಅಡಿ ವಿಗ್ರಹವಾಗಿದ್ದು ನಿಂತುಕೊಂಡ ಭಂಗಿಯಲ್ಲಿದೆ. ಚತುರ್ಭುಜಧಾರಿಯಾಗಿ ಪೀಠದಲ್ಲಿ ನಿಂತಿರುವ ದೇವಿಯ ತನ್ನ ಕೈಯಲ್ಲಿ ಶಂಖ, ಚಕ್ರ, ಶ್ರೀಚಕ್ರ ಮತ್ತು ಗಾಯತ್ರಿ ದೇವಿಯನ್ನು ಹಿಡಿದಿರುತ್ತಾಳೆ. ದೇವಿಯ ಮುಖದಲ್ಲಿ ಪ್ರಶಾಂತತೆ, ತೇಜಸ್ಸು ಮಮತೆಯನ್ನು ಕಾಣುತ್ತೇವೆ ದೇವಿಗೆ ಸುವರ್ಣದ ಆಭರಣಗಳಿಂದ ಅಲಂಕರಿಸಿರುತ್ತಾರೆ. 


ಇಲ್ಲಿಯ ಸ್ಥಳ ಪುರಾಣವನ್ನು ಕೇಳಿದರೆ ಅಗಸ್ತ್ಯ ಋಷಿಗಳು ಅನ್ನಪೂರ್ಣೇಶ್ವರಿಯನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿದರು ಎಂಬ ಕತೆಯನ್ನು ಕೇಳುತ್ತೇವೆ. 400 ವರ್ಷಗಳ ಹಿಂದೆ ಧರ್ಮಕರ್ತರ ಮನೆತನದವರು ಇಲ್ಲಿ ಸಣ್ಣ ಪ್ರಮಾಣದಲ್ಲಿದ್ದ ದೇವಾಲಯವನ್ನು ದೊಡ್ಡ ಪ್ರಮಾಣದಲ್ಲಿ ಕಟ್ಟಿಸಿದರು. ಮತ್ತು ಇಲ್ಲಿಯ ಆದರ ಆತಿಥ್ಯವು ವಿಶೇಷವಾಗಿದ್ದು, ಇಲ್ಲಿ ಬಂದ ಭಕ್ತರಿಗೆ ದಿನದಲ್ಲಿ ಮೂರು ಹೊತ್ತು ಪ್ರಸಾದವನ್ನು ನೀಡಲಾಗುತ್ತದೆ.


ಪೌರಾಣಿಕ ಹಿನ್ನೆಲೆಯಲ್ಲಿ ಅನ್ನಪೂರ್ಣೇಶ್ವರಿಯ ಕಥೆಯನ್ನು ತಿಳಿಯುವುದಾದರೆ ಬ್ರಹ್ಮದೇವರಿಗೆ ಐದು ಮುಖಗಳಿದ್ದು ಸೃಷ್ಟಿ ಕರ್ತನೆಂಬ ಅಹಂಕಾರವು ಬಂದಿತು ಆಗ ಶಿವನು ಬ್ರಹ್ಮನ ಆ 5ನೇ ಕಪಾಲವನ್ನು ಕತ್ತರಿಸಿ ಕೈಯಲ್ಲಿ ಹಿಡಿದನು. ಕ್ರೋಧಿತನಾದ ಬ್ರಹ್ಮದೇವರು ಆ ಕಪಾಲವು ನಿನ್ನ ಕೈಲ್ಲಿ ಅಂಟಿಕೊಂಡಿರಲಿ ಆ ಕಪಾಲವು ತುಂಬುವವರೆಗೂ ನಿನ್ನ ಕೈಯಿಂದ ಬಿಡಿಸಿಕೊಂಡು ಬರದೇ ಇರಲಿ ಹಾಗೂ ಆ ಕಪಾಲ ಅಲ್ಲಿಯೇ ಕೊಳೆಯಲಿ ಆ ಕಪಾಲ ತುಂಬುವವರೆಗೂ ನೀನು ಭಿಕ್ಷಾಟನೆ ಮಾಡು ಎಂಬ ಶಾಪವನ್ನು ಕೊಟ್ಟನು. ಶಿವನು ಎಲ್ಲ ಭಿಕ್ಷೆಯನ್ನು ಬೇಡಿದರೂ ಆ ಕಪಾಲ ತುಂಬಲಿಲ್ಲ ಹಾಗೂ ಶಿವನ ಕೈಯಿಂದ ಅದು ಹೊರಬರಲಿಲ್ಲ.. ಕೊನೆಗೆ ಶಿವನು ಪಾರ್ವತಿದೇವಿಯ ಬಳಿ ಬಂದು ಭಿಕ್ಷೆಯನ್ನು ಬೇಡಿದಾಗ ಅವಳು ಹಾಕಿದ ಧಾನ್ಯದಿಂದ ಕಪಾಲವು ತುಂಬಿ ಶಿವನಿಗೆ ಶಾಪವಿಮೋಚನೆಯಾಯಿತು ಎಂಬುದು ಪೌರಾಣಿಕ ಕಥೆಯಾಗಿದೆ. ಹೀಗಾಗಿ ಪಾರ್ವತಿ ದೇವಿಯು ಸಕಲ ಜೀವ ರಾಶಿಗಳಿಗೂ ಹೊಟ್ಟೆ ತುಂಬಾ ಅನ್ನ ನೀಡುವ ಅನ್ನಪೂರ್ಣೇಶ್ವರಿ ದೇವಿಯ ರೂಪವಾಗಿದ್ದಾಳೆ. ಇನ್ನೊಂದು ಕಥೆಯಲ್ಲಿ ಒಮ್ಮೆ ಶಿವ ಪಾರ್ವತಿಯರ ನಡುವೆ ಎಲ್ಲವೂ ಮಾಯೆ ಎಂಬ ವಾದವು ನಡೆಯಿತು. ಆಗ ಅನ್ನದ ಮಹತ್ವವನ್ನು ತೋರಿಸಲು ದೇವಿಯು ಅದೃಶ್ಯಳಾದಳು. ಆಗ ಶಿವಗಣ ದೇವತೆಗಳು ಎಲ್ಲರೂ ಆಹಾರಕ್ಕಾಗಿ ಭಿಕ್ಷೆಯನ್ನು ಬೇಡಬೇಕಾಯಿತು. ಆಗ ವಿಶ್ವದಲ್ಲಿ ಕಾಶಿನಗರದಲ್ಲಿ ಮಾತ್ರ ಒಂದು ಅಡುಗೆ ಮನೆಯಿದ್ದು ಅಲ್ಲಿ ಮಾತ್ರ ಆಹಾರ ದೊರಕುತ್ತಿತ್ತು. ಅಲ್ಲಿ ಅನ್ನಪೂರ್ಣೇಶ್ವರಿಯ ಅಡುಗೆ ಮನೆಯಾಗಿತ್ತು. ಆಗ ಶಿವನಿಗೆ ಅನ್ನದ ಮಹತ್ವ ತಿಳಿಯಿತು ಎಂದು ಹೇಳುತ್ತಾರೆ.


ಮನೆಯಲ್ಲಿ ಅಡುಗೆ ಮಾಡುವಾಗ ಪ್ರತಿಯೊಬ್ಬರೂ ಅನ್ನಪೂರ್ಣೇಶ್ವರಿಯ ಧ್ಯಾನವನ್ನು ಮಾಡಿ ಪೂಜಿಸಿ ಅಡುಗೆಯನ್ನು ಮಾಡಿದರೆ ಸಮೃದ್ಧಿಯಾಗುತ್ತದೆ ಹಾಗೂ ಮನೆಗೆ ಬರುವ ಯಾರೂ ಕೂಡ ಹಸಿವೆಯಿಂದ ಇರುವುದಿಲ್ಲವೆಂಬ ನಂಬಿಕೆ ವಿಶ್ವಾಸ ಇಂದಿಗೂ ಇದೆ. ಅನ್ನಪೂರ್ಣೇಶ್ವರಿಯು ಮೊದಲಿಗೆ ಕಾಶಿನಗರದಲ್ಲಿ ಪ್ರತ್ಯಕ್ಷಳಾದಳು ಎಂದು ಕೂಡ ಹೇಳುತ್ತಾರೆ. ಅನ್ನಪೂರ್ಣೇಶ್ವರಿ ದೇವಿ ಕಾಶಿಯ ಗಂಗಾ ತಟದಲ್ಲಿ ವಾಸ ಮಾಡುತ್ತಾಳೆ. ಅನ್ನಪೂರ್ಣೇಶ್ವರಿ ದೇವಿಯ ಕೇವಲ ಹೊಟ್ಟೆಯ ಹಸಿವನ್ನು ಮಾತ್ರ ನೀಗಿಸುವುದಲ್ಲದೇ ಜ್ಞಾನದ ಹಸಿವನ್ನು ಕೂಡ ತೃಪ್ತಿ ಪಡಿಸುವ ದೇವಿಯಾಗಿದ್ದಾಳೆ. ದೇವಿಯು ಸಮೃದ್ಧಿ ಮತ್ತು ಸಂತೃಪ್ತಿಯ ಪ್ರತೀಕವಾಗಿದ್ದಾಳೆ. ಊಟಕ್ಕೆ ಮೊದಲು ಅನ್ನಪೂರ್ಣೇಶ್ವರಿಯ ಮಂತ್ರವನ್ನು ಹೇಳಿ ಆಹಾರ ಸ್ವೀಕಾರ ಮಾಡುವ ಪದ್ಧತಿ ಧಾರ್ಮಿಕರಲ್ಲಿ ಇದೆ.

ದೇವಿ ಭಾಗವತ ಮತ್ತು ಸ್ಕಂದ ಪುರಾಣದಲ್ಲಿ, ಲಿಂಗ ಪುರಾಣದಲ್ಲಿ ಅನ್ನಪೂರ್ಣೇಶ್ವರಿಯ ಕತೆ ಬರುತ್ತದೆ.


- ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top