ಮಂಗಳೂರು: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ ಉಳುಮೆಗಾರರ ಮಕ್ಕಳಾದ ನಾವು ಅಕ್ಷರದ ಆವರಣವನ್ನೂ ಉಳುಮೆಯ ಹೊಲಗಳೆಂದೇ ಪರಿಭಾವಿಸಿ ಪರಿಪೂರ್ಣ ಉಳುಮೆಯಲ್ಲಿ ತೊಡಗಿಕೊಳ್ಳುವ ಮೂಲಕ ನಮ್ಮ ಬಾಳಬಟ್ಟೆಯ ನಾಳೆಗೆ ಬೇಕಾದ ಪೈರನ್ನು ನಾವೇ ರೂಪಿಸಿಕೊಳ್ಳಬಲ್ಲೆವು ಎಂದು ಮಂಗಳೂರು ವಿಶ್ವವಿದ್ಯಾಲಯ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ನಾಗಪ್ಪ ಗೌಡ ಹೇಳಿದರು.
ಅವರು ‘ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಘಟಕಗಳ ಸಹಯೋಗದಲ್ಲಿ ನಡೆದ ‘ಕಬ್ಬದುಳುಮೆ : ಹಳೆಗನ್ನಡ ಕಾವ್ಯದೋದು ಕಮ್ಮಟ’ವನ್ನು ಉದ್ಘಾಟಿಸಿ ಮಾತನಾಡಿದರು. ಹಳೆಗನ್ನಡವನ್ನು ಕಬ್ಬಿಣದ ಕಡಲೆ ಎಂದೇ ಕರೆದು ಅದನ್ನು ಸಾಮಾನ್ಯರ ಮಕ್ಕಳಿಂದ ದೂರಮಾಡಿದ ಪ್ರತಿಭೆಯ ರಾಜಕಾರಣವನ್ನು ಅರ್ಥಮಾಡಿಸಿ, ನಿರ್ಭೀತವಾಗಿಯೇ ಹೊಕ್ಕು ಆ ಪಠ್ಯಗಳ ಜೀವನ ಮೌಲ್ಯವನ್ನು ಅರಿಯುವ ಸರಿಯಾದ ಬಿಚ್ಚಿ ಕಟ್ಟುವಿಕೆಯನ್ನು ಸಾಧ್ಯವಾಗಿಸುವ ಕಬ್ಬದುಳುಮೆಯಂತಹ ಕಮ್ಮಟಗಳ ಕಡೆಗೆ ಶಿಕ್ಷಣಸಂಸ್ಥೆಗಳು ಕಾರ‍್ಯೋನ್ಮುಖವಾಗುವ ಅಗತ್ಯವಿದೆ ಎಂದವರು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ವಿಭಾಗ ಮುಖ್ಯಸ್ಥ ಜಯಪ್ರಕಾಶ್ ಶೆಟ್ಟಿಯವರು ಪ್ರಾಚೀನ ಕನ್ನಡವನ್ನೂ ಇಂದಿನ ಬದುಕಿನೊಂದಿಗೆ ಸಂಧಿಸಿಕೊಂಡು ಓದುವ ಓದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕಮ್ಮಟದ ಉದ್ದೇಶವನ್ನು ಪರಿಚಯಿಸಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಅವರು ವಹಿಸಿದ್ದರು. ಐಕ್ಯೂಎಸಿ ಸಂಚಾಲಕಿ ಮೇವಿ. ಮಿರಾಂದ, ಕನ್ನಡ ಸಹಾಯಕ ಪ್ರಾಧ್ಯಾಪಕಿ ರತ್ನಮಾಲ, ಅರ್ಚನ ಹಾಗೂ ಶಾಲಿನಿ ಉಪಸ್ಥಿತರಿದ್ದರು. ರಶ್ಮಿತ ಸ್ವಾಗತಿಸಿ, ಪ್ರಕೃತಿ ವಂದಿಸಿದ ಈ ಕಾರ‍್ಯಕ್ರಮವನ್ನು ನೈನಾ ಜೆ ಶೆಟ್ಟಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ