ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಅ.21ರಂದು ನಡೆಯುವ ಚುನಾವಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರ ಗೆಲುವು ನಿಶ್ಚಿತವಾಗಿದೆ ಎಂದು ದಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂಬಂಧ ಪ್ರಚಾರ ಅಭಿಯಾನ ಈಗಾಗಲೇ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು ನಾಡಿದ್ದು 15ರಂದು ಬಂಟ್ವಾಳದಲ್ಲಿ ನಡೆಯುವ ಜನಪ್ರತಿನಿಧಿಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ವಿಶೇಷವಾಗಿ ವಿಧಾನ ಪರಿಷತ್ತಿಗೆ ನಡೆಯುವ ಉಪಚುನಾವಣೆ - ಸ್ಥಳಿಯ ಸಂಸ್ಥೆಗಳ ಜನಪ್ರತಿನಿಧಿಗಳು ಸೇರಿ ಆಯ್ಕೆ ಮಾಡುವ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಪುತ್ತೂರು ಅವರನ್ನು ಕಣಕ್ಕಿಳಿಸಲಾಗಿದೆ. ಈ ಚುನಾವಣೆ ಅ.21ಕ್ಕೆ ನಡೆಯಲಿದೆ. ಕಿಶೋರ್ ಕುಮಾರ್ ಅವರು ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಎಬಿವಿಪಿಗಳಲ್ಲಿ ಸಂಘಟನಾತ್ಮಕ ಕೆಲಸಗಳನ್ನು ಮಾಡಿದ್ದಾರೆ. ನಂತರ ಬಿಜೆಪಿಯಲ್ಲಿ ಸತತವಾಗಿ ಮೂರು ಬಾರಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಾಗಿ ಪ್ರಸ್ತುತ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನಾ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅವರು ಜನಸಾಮಾನ್ಯರೊಂದಿಗೆ ಮತ್ತು ಯುವಕರ ಮಧ್ಯೆ ಬೆರೆತು ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತ ನಿರಂತರ ಜನಸಂಪರ್ಕದಲ್ಲಿದ್ದಾರೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಸ್ಥಳೀಯ ಗ್ರಾಮ ಪಂಚಾಯತ್‌ಗಳ ಪ್ರತಿನಿಧಿಗಳ ಜತೆಗೆ ನಿಕಟ ಸಂಪರ್ಕವಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ದ.ಕ ಜಿಲ್ಲೆಯಲ್ಲಿ ಎರಡು ಬಾರಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಂಪರ್ಕ ಮಾಡಿದ್ದಾರೆ, ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟ 6040 ಮತದಾರರಿದ್ದಾರೆ. ಈ ಸ್ಥಾನವನ್ನು ಗೆಲ್ಲುವ ಎಲ್ಲ ಸಂಖ್ಯಾ ಬಲ ಬಿಜೆಪಿಗೆ ಇದೆ. ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆಗಳನ್ನು ನಡೆಸಲಾಗಿದೆ. ಇದು ಬಿಜೆಪಿಯ ಕ್ಷೇತ್ರವಾಗಿದ್ದು, ಇದನ್ನು ಗೆಲ್ಲಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಎಂಎಲ್‌ಸಿ ಸ್ಥಾನ ಇದಾಗಿದ್ದು, ಈ ಬಾರಿ ಕಿಶೋರ್ ಕುಮಾರ್ ಪುತ್ತೂರು ಗೆಲ್ಲುವುದು ನಿಶ್ಚಿತವಾಗಿದೆ. ಎಲ್ಲ ಕಡೆ ಒಳ್ಳೆಯ ವಾತಾವರಣವಿದೆ ಎಂದು ಸತೀಶ್ ಕುಂಪಲ ಭರವಸೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ಪಂಚಾಯತ್ ಮಟ್ಟದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಜ್ಯ ಸರಕಾರ ಅನುದಾನ ನೀಡುತ್ತಿಲ್ಲ. ಇದಕ್ಕೆ ಕಾಂಗ್ರೆಸ್ ಸರಕಾರವೇ ಕಾರಣ ಎಂದು ಅಲ್ಲಲ್ಲಿ ಜನರೇ ಆಡಿಕೊಳ್ಳುತ್ತಿದ್ದಾರೆ ಎಎಂದು ಕುಂಪಲ ಟೀಕಿಸಿದರು.
ಅ.15ರಂದು ಬಂಟ್ವಾಳದ ಬಂಟರ ಭವನದಲ್ಲಿ ಚುನಾಯಿತ ಪ್ರತಿನಿಧಿಗಳ ಸಭೆಯನ್ನು ಬೆಳಗ್ಗೆ 10:30 ಗಂಟೆಗೆ ನಡೆಸಲಾಗುತ್ತಿದೆ. ಎಲ್ಲರಿಗೆ ಹುರುಪು ನೀಡುವ ಸಲುವಾಗಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಈ ಸಮಾವೇಶಲ್ಲಿ ಭಾಗವಹಿಸುತ್ತಿದ್ದಾರೆ. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕೂಡ ಈ ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಸಮಾವೇಶದಲ್ಲಿ ಒಟ್ಟಾರೆ 3 ಸಾವಿರಕ್ಕೂ ಹೆಚ್ಚು ಜನಪ್ರತಿನಿಧಿಗಳು ಭಾಗವಹಿಸುತ್ತಾರೆ. ಇದು ದ.ಕ ಜಿಲ್ಲೆಗೆ ಸೀಮಿತವಾದ ಸಮಾವೇಶ ಆಗಿರುತ್ತದೆ. ಉಡುಪಿ ಜಿಲ್ಲೆಗೆ ಬೇರೆ ಸಮಾವೇಶ ನಡೆಯುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರು ತಿಳಿಸಿದರು.
ರಾಹುಲ್ ಮತ್ತು ಸಿದ್ದರಾಮಯ್ಯ ನಾಯಕತ್ವ ಪ್ರಶ್ನಾರ್ಹ: ಸಂಸದ ಚೌಟ
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರು, ಹರ್ಯಾಣದಲ್ಲಿ ಬಿಜೆಪಿ ಸರಕಾರ ಬಂದಿದೆ. ಈ ಫಲಿತಾಂಶದ ಹಿನ್ನೆಲೆಯಲ್ಲಿ ನಮ್ಮ ಕಾರ್ಯಕರ್ತರ ಉತ್ಸಾಹ ಮತ್ತಷ್ಟು ಹೆಚ್ಚಾಗಿದೆ. ಹರ್ಯಾಣ ಚುನಾವಣೆಯಲ್ಲಿ ಇಂಡಿ ಅಲಯನ್ಸ್ ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆಯನ್ನು ಎದುರಿಸಿವೆ. ಅದೇ ರೀತಿ ಕರ್ನಾಟಕದಲ್ಲೂ ಆ ಪರಿಸ್ಥಿತಿ ಈ ಚುನಾವಣೆಯಲ್ಲಿ ಕಂಡು ಬರುತ್ತಿದೆ. ಕಾಂಗ್ರೆಸ್ ಮತ್ತು ಎಸ್‌ಡಿಪಿಐಗಳು ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಎದುರಿಸಿದ್ದವು. ಆದರೆ ಈಗ ಅವುಗಳು ಪ್ರತ್ಯೇಕವಾಗಿ ಎದುರಿಸುವ ಹಂತಕ್ಕೆ ಬಂದಿವೆ ಎಂದು ಹೇಳಿದರು.
ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿರುವ ಎಲ್ಲರೂ ಒಟ್ಟಾಗಿ ಈ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿಯವರ ನಾಯಕತ್ವ ಹಾಗೂ ಕರ್ನಾಟಕದಲ್ಲಿ ಸಿದ್ಧರಾಮಯ್ಯನವರ ನಾಯಕತ್ವದ ಮುಂದೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ ಎಂದು ಸಂಸದರು ನುಡಿದರು. ಹರ್ಯಾಣದ ಚುನಾವಣೆ ಫಲಿತಾಂಶಕ್ಕೆ ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡದಿರುವುದು ಕೂಡ ಒಂದು ಕಾರಣ ಎಂದು ಸಚಿವ ಕೋಳಿವಾಡ ಅವರು ನಿನ್ನೆ ಹೇಳಿಕೆ ನೀಡಿದ್ದರು. ಅದರ ಜತೆಗೆ ಇಂಡಿ ಅಲಯನ್ಸ್ ಇಡೀ ದೇಶದಲ್ಲಿ ಒಡೆದು ಹೋಗುತ್ತಿರುವ ವಾತಾವರಣ ಕಂಡು ಬರುತ್ತಿದೆ. ಈಗ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಮುಂದೆ ನಡೆಯುವ ಎಲ್ಲ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ ಎಂದು ಕ್ಯಾಪ್ಟನ್ ಚೌಟ ಪ್ರತಿಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಕಾರ್ಯದರ್ಶಿ ಹಾಗೂ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಚುನಾವಣೆಯ ಸಹ ಉಸ್ತುವಾರಿ ಹಾಗೂ ಎಂಎಲ್‌ಸಿ ಪ್ರತಾಪ್ ಸಿಂಹ ನಾಯಕ್, ಮಾಜಿ ಎಂಎಲ್‌ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲೆಯ ಉಪಾಧ್ಯಕ್ಷ ರಾಜೇಶ್ ರೈ ಕೆಡೆಂಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಯತೀಶ್ ಅರ್ವಾರ್ ಹಾಗೂ ಜಿಲ್ಲೆಯ ಪ್ರಮುಖರಾದ ವಿಕಾಸ್ ಕುಮಾರ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ