ದೀಪಾವಳಿ ಹಬ್ಬದಲ್ಲಿ ದಿವ್ಯತೆಯ ಆನಂದ ಅನುಭವಿಸೋಣ

Upayuktha
0


ಓಂ ಅಸತೋ ಮಾ ಸದ್ಗಮಯ, ತಮಸೋ ಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂ ಗಮಯ, ಓಂ ಶಾಂತಿ ಶಾಂತಿ ಶಾಂತಿಃ .ಪವಿತ್ರ ಜ್ಯೋತಿಯ ಎದುರು ಭಕ್ತಿ ಪೂರ್ವಕವಾಗಿ ಪಠಿಸುವ ಮಂತ್ರವಿದು. ಅವಾಸ್ತವಿಕತೆಯಿಂದ ವಾಸ್ತವದ ಕಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮರತ್ವದ ಕಡೆಗೆ ನನ್ನನ್ನು ನಡೆಸು ಎನ್ನುವ ಇದರ ಕಣ್ಣಿಗೆ ಗೋಚರಿಸುವ ತಾತ್ಪರ್ಯವಾದರೆ ಅದರ ಹಿಂದೆ ಅಡಗಿದ ತತ್ವಗಳು ಇನ್ನೂ ಅನೇಕ. ದೀಪದ ಬೆಳಕು ಜ್ಞಾನದ ಸಂಕೇತ. ದೀಪ ಬೆಳಗಿದಾಗ ಜಗದ ತಮವು ಕಳೆಯುವುದರೊಂದಿಗೆ ನಮ್ಮೊಳಗಿನ ಅಜ್ಞಾನದ ಕತ್ತಲೆಯೂ ದೂರವಾಗುತ್ತದೆ. ದೀಪವೆಂದರೆ ತನ್ನನ್ನು ಉರಿಸಿಕೊಂಡು ಜಗವನ್ನು ಬೆಳಗುವ ಪ್ರಭೆ. ಸುತ್ತ ತುಂಬಿದ ನಕಾರಾತ್ಮಕತೆಯನ್ನು ನೀಗಿಸುವ ಶಕ್ತಿ. ಸನಾತನ ಸಂಸ್ಕೃತಿಯಲ್ಲಿ ಉಚ್ಛ ಸ್ಥಾನವನ್ನು ಪಡೆದ ದೀಪಗಳಿಗಾಗಿಯೇ ಒಂದು ವಿಶೇಷ ಹಬ್ಬ ಅದುವೇ ದೀಪಾವಳಿ.


ಹಿಂದೂ ಪುರಾಣದಲ್ಲಿ ಶ್ರೀರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಆಯೋಧ್ಯೆಗೆ ಮರಳಿ ಬಂದಾಗ ಪುರಜನರು ದೀಪಗಳನ್ನು ಹಚ್ಚಿ ಸಂಭ್ರಮಾಚಾರಣೆಯನ್ನು ಮಾಡಿದ್ದರು ಅನ್ನುವುದಾಗಿ ಹೇಳುತ್ತದೆ ಆ ನೆನಪಿನ ದ್ಯೋತಕವಾಗಿ ನಾವು ದೀಪಾವಳಿಯನ್ನು ಆಚರಿಸುತ್ತೇವೆ. ಇದೇ ಅಲ್ಲದೆ ಅಮಾವಾಸ್ಯೆಯ ಹಿಂದಿನ ದಿನ ನರಕ ಚತುರ್ದಶಿ ಆ ದಿನ ಶ್ರೀ ಕೃಷ್ಣ ಪರಮಾತ್ಮ ದುಷ್ಟ ನಾರಕಾಸುರನನ್ನು ಸಂಹಾರ ಮಾಡಿದ ದಿನ ಎಂದೂ ಹೇಳಲಾಗಿದೆ. ಇನ್ನು ನಮ್ಮ ತುಳುನಾಡಿನಲ್ಲಿ ದೀಪಾವಳಿಯನ್ನು ವಿಶೇಷವಾಗಿ 'ತುಡರ್ ಪರ್ಬ' ಎಂದು ಆಚರಿಸುತ್ತಾರೆ. ದಾನವನಾದರೂ ಪರಮ ಭಕ್ತ, ದಾನ ಶೂರ, ಸತ್ಯ ಧರ್ಮಸಂಧ ಬಲಿ ಚಕ್ರವರ್ತಿ, ವಾಮನಾವತಾರಿ ಶ್ರೀ ವಿಷ್ಟುವಿಗೆ ದಾನ ನೀಡಲು ಒಪ್ಪಿದ ಮೂರು ಹೆಜ್ಜೆ ಭೂಮಿಯನ್ನು ನೀಡುವ ಸಲುವಾಗಿ ಪಾತಾಳಕ್ಕೆ ತಳ್ಳಲ್ಪಡುತ್ತಾನೆ. ಆತನು ತನ್ನ ಪ್ರಜೆಗಳನ್ನು ನೋಡಲು ವರ್ಷಕ್ಕೆ ಒಂದು ದಿನ ಭೂಮಿಗೆ ಬರಲು ಅವಕಾಶ ಪಡೆಯುತ್ತಾನೆ. ಅದೇ ರೀತಿ ಪ್ರಜಾಪ್ರೀತ ರಾಜ ಇಳೆಗೆ ಬರುವಾಗ ಆತನ ಪ್ರಿಯ ಜನರು ದೀಪ ಹಚ್ಚಿ ಪ್ರೀತಿಯಿಂದ ಸಂಭ್ರಮದಿಂದ ಸ್ವಾಗತಿಸುತ್ತಾರೆ ಎನ್ನುವುದಾಗಿ ಈ ಹಬ್ಬದ ಬಗೆಗಿನ ಪ್ರತೀತಿ. ಪುರಾಣ ಕಥೆಗಳು ಏನೇ ಆದರೂ ದೀಪಾವಳಿ ಅನ್ನುವುದು ಪ್ರಕೃತಿ ಮತ್ತು ಮಾನವರ ಅವಿನಾಭಾವ ಸಂಬಂಧದ ದ್ಯೋತಕ. 


ಈ ಹಬ್ಬ ನಮಗೆ ಹೊಸತನವನ್ನೂ ಸಂತಸವನ್ನೂ ನೀಡುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ ಸಂಭ್ರಮದ ದೀಪಾವಳಿ ನಮ್ಮೆದುರು ಬರಲಿದೆ. ಈಗಾಗಲೇ ಹಬ್ಬದ ತಯಾರಿ ಜೋರಾಗಿಯೇ ನಡೆಯುತ್ತಿದೆ. ಮನೆಯನ್ನು ಸ್ವಚ್ಛ ಮಾಡುವ ಕೆಲಸ ಪ್ರಾರಂಭವಾಗಿದೆ, ಹೊಸ ಬಟ್ಟೆಯ ಖರೀದಿಯೂ ಆಗುತ್ತಿದೆ, ಅದರ ಒಟ್ಟಿಗೆ ದೀಪವನ್ನು ಹಚ್ಚಲು ಸುಂದರ ಹಣತೆಗಳ ಖರೀದಿ ಕೂಡ ಭರದಿಂದ ಸಾಗಿದೆ. ಇಂತಹ ಒಂದು ಸುಸಂದರ್ಭದಲ್ಲಿ ಸೇವಾ ಭಾರತಿ ಇದರ ಅಂಗ ಸಂಸ್ಥೆಯಾದ ಮಂಗಳೂರಿನ ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ಹಣತೆಗಳಿಗೆ ಸುಂದರತೆಯ ಜೊತೆಗೆ ದಿವ್ಯತೆಯನ್ನೂ, ಭವ್ಯತೆಯನ್ನೂ ತುಂಬುವ ಕೆಲಸ ನಡೆಯುತ್ತಿದೆ. ಸುಮಾರು 30 ವರ್ಷಗಳಿಂದ ವಿಶೇಷ ಚೇತನರಿಗೆ ಬಲ ಮತ್ತು ಆತ್ಮಸ್ಥೈರ್ಯ ತುಂಬುವ ಕಾಯಕದಲ್ಲಿರುವ ಈ ಸಂಸ್ಥೆ ಸುಮಾರು 30 ಮಕ್ಕಳನ್ನು  ವೃತ್ತಿ ತರಬೇತಿ ಕೇಂದ್ರದಲ್ಲಿ ಸಜ್ಜುಗೊಳಿಸಿ ಅವರನ್ನು ಸ್ವಾವಲಂಬಿಗಳಾಗಿ ಬದುಕುವಂತೆ ಪ್ರೇರಣೆ ನೀಡಿದೆ. ಇಲ್ಲಿ ತರಬೇತಿ ಪಡೆದ ದಿವ್ಯಾಂಗರು ಸಾಮಾನ್ಯ ಹಣತೆಗೆ ತಮಗೆ ಇಷ್ಟವಾದ ರಂಗು ತುಂಬಿ ಅದರಲ್ಲಿ ತಮ್ಮ ಕನಸಿನ ಚಿತ್ತಾರವನ್ನು ಪಡಿ ಮೂಡಿಸುತ್ತಾರೆ. ಸಂಸ್ಥೆ ಇವರ ಮನೋವಿಕಾಸಕ್ಕೆ ಎಷ್ಟು ಒತ್ತು ನೀಡಿದೆ ಎನ್ನುವುದನ್ನು ಇಲ್ಲಿ ಸಿಂಗರಿಸಲ್ಪಟ್ಟ ಹಣತೆಯಲ್ಲಿ ನಾವು ಕಾಣಬಹುದು. ಇದೇ ರೀತಿ ಮಾಡಬೇಕು ಎಂಬ ಯಾವ ಕಟ್ಟು ಪಾಡುಗಳಲ್ಲಿ ತಮ್ಮ ಮನಸ್ಸಿನಲ್ಲಿರುವುದನ್ನು ಕೃತಿಗಿಳಿಸಿ ಸಂಭ್ರಮಿಸುವ ಸ್ವಾತಂತ್ರ್ಯವನ್ನು ವಿಶೇಷರಿಗೆ ಸಂಸ್ಥೆ ನೀಡಿದೆ.


ಎರಡು ತಿಂಗಳ ಮೊದಲೇ ಇಲ್ಲಿ ಹಣತೆಗಳನ್ನು ಸುಂದರವಾಗಿಸುವ ಕಾರ್ಯ ಪ್ರಾರಂಭವಾಗುತ್ತದೆ. ಹೀಗೆ ತಯಾರಿಸಿದ ಹಣತೆಗಳನ್ನು ದೀಪಾವಳಿ ಸಂಧರ್ಭದಲ್ಲಿ ಸಂಸ್ಥೆಯ ಆವರಣದಲ್ಲಿಯೇ ತಾತ್ಕಾಲಿಕ ಮಳಿಗೆಯನ್ನು ಹಾಕಿ ಮಾರಾಟ ಮಾಡುತ್ತಾರೆ. ಇದರಿಂದ ಬಂದ ಲಾಭಾಂಶದ ಒಂದು ಭಾಗವನ್ನು ವರ್ಷಾಂತ್ಯದಲ್ಲಿ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಿ ಎಲ್ಲಾ ಮಕ್ಕಳಿಗೆ ಉಡುಗೊರೆಯಾಗಿ ನೀಡುತ್ತಾರೆ. ವೃತ್ತಿ ತರಬೇತಿ ಕೇಂದ್ರದಲ್ಲಿ ಪೇಪರ್ ಕವರ್, ಹೂ, ಕ್ಯಾಂಡಲ್, ಹೂಗುಚ್ಛ, ಸ್ಕ್ರೀನ್ ಪ್ರಿಂಟಿಂಗ್, ಟೈಲರಿಂಗ್, ಪಿನೈಲ್, ಪೇಪರ್ ಬ್ಯಾಗ್, ಪರ್ಸ್, ಕೈಚೀಲಗಳನ್ನು ಮಾಡಲು ತರಬೇತಿ ನೀಡಲಾಗುತ್ತದೆ. ಇಲ್ಲಿ ತಯಾರಿಸಿದ ಉತ್ಪನ್ನಗಳನ್ನು ದೇವಸ್ಥಾನಗಳಿಗೆ, ಮೆಡಿಕಲ್‌ಗಳಿಗೆ, ಇನ್ನಿತರ ಮಳಿಗೆಗಳಿಗೆ ಮಾರಾಟ ಮಾಡುತ್ತಾರೆ. ಬಂದ ಲಾಭಾಂಶದಲ್ಲಿ ಕಾರ್ಯನಿರತ ವಿಶೇಷರಿಗೆ ಒಂದಂಶವಿಟ್ಟು ಉಳಿದದ್ದನ್ನು ದಿವ್ಯಾಂಗರ ಸಬಲೀಕರಣಕ್ಕಾಗಿ ಸಂಸ್ಥೆ ಉಪಯೋಗಿಸಿಕೊಳ್ಳುತ್ತದೆ. ಸಂಸ್ಥೆಯಲ್ಲಿ ಅನೇಕ ದಿವ್ಯಾಂಗ ಮಕ್ಕಳಿದ್ದು ಅವರಿಗೆ ಶಿಕ್ಷಣದ ಜೊತೆಗೆ ನೃತ್ಯ, ಕಂಪ್ಯೂಟರ್ ತರಬೇತಿ, ಯೋಗ, ಆಟೋಟ, ಪಿಸಿಯೋಥೆರಪಿ, ಸ್ಪೀಚ್ ಥೆರಪಿಯನ್ನು ನೀಡಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮ, ಹಬ್ಬಹರಿದಿನಗಳ ಆಚರಣೆ, ಬೇರೆ ಬೇರೆ ಸ್ಪರ್ಧೆಗಳ ಆಯೋಜನೆ ಹೀಗೆ ಮಕ್ಕಳ ವಿಕಾಸಕ್ಕೆ ಬೇಕಾದ ಎಲ್ಲಾ ಕೆಲಸಗಳು ಇಲ್ಲಿ ನಡೆಯುತ್ತದೆ. ಇಲ್ಲಿನ ಮಕ್ಕಳು ಒಂದು ಆರೋಗ್ಯಪೂರ್ಣ ಪರಿಸರದಲ್ಲಿ ಇದ್ದಾರೆ ಅನ್ನುವುದನ್ನು ಅವರ ನಗು, ಮಾತುಗಳಿಂದಲೇ ನಾವು ತಿಳಿದುಕೊಳ್ಳಬಹುದು. 


ದೀಪಾವಳಿ ಬೆಳಕಿನ ಹಬ್ಬ. ನಮ್ಮೊಳಗಿನ ಮತ್ತು ಸುತ್ತ ತುಂಬಿದ ಕತ್ತಲೆಯನ್ನು ದೂರ ಮಾಡುವ ಹಬ್ಬ ಹಾಗಾಗಿ ನಾವು ಒಂದು ಹೆಜ್ಜೆ ಮುಂದಿರಿಸಿ ಈ ಹಣತೆಗಳನ್ನು ಯಾಕೆ ತೆಗೆದುಕೊಳ್ಳ ಬಾರದು? ನಮ್ಮ ವೈಯಕ್ತಿಕ ಅಭಿಲಾಷೆಗಳಿಗಾಗಿ ನಾವು ಎಷ್ಟೊಂದು ಖರ್ಚು ಮಾಡುತ್ತೇವೆ ಇನ್ನೊಂದಷ್ಟು ಸಮಾಜದ ಉದ್ಧಾರಕ್ಕಾಗಿ, ದಿವ್ಯಾಂಗರ ಸಬಲೀಕರಣಕ್ಕಾಗಿ ಯಾಕೆ ಮಾಡಬಾರದು? ಸಮಾಜದ ಮುಖ್ಯವಾಹಿನಿಗೆ ದಿವ್ಯಾಂಗ ಬಂಧುಗಳನ್ನು ಪ್ರೀತಿಯಿಂದ ಬರಮಾಡಿಕೊಳ್ಳುವ ಪ್ರಯತ್ನ ಈ ದೀಪಾವಳಿಗೆ ಯಾಕಾಗಬಾರದು? ಶುಭ್ರವಾದ ಮನಸ್ಸು, ನಿಷ್ಕಲ್ಮಶ ನಗು, ಕಪಟ ವಂಚನೆ ಅರಿಯದ ಮಾತು, ನಿರ್ಮಲ ಪ್ರೀತಿ ನಾವು ಇಲ್ಲಿ ಅತೀ ಸಮೀಪದಲ್ಲಿ ಅನುಭವಿಸಬಹುದು. ಮನುಷ್ಯ ಹೃದಯವೈಶಾಲ್ಯತೆಯನ್ನು ಮೆರೆದಾಗ ಎಲ್ಲವನ್ನೂ ಒಪ್ಪಿ ಅಪ್ಪಿಕೊಳ್ಳುವವನಾಗುತ್ತಾನೆ. ಒಂದು ಆರೋಗ್ಯಪೂರ್ಣ ಸುಂದರ ಸಮಾಜವನ್ನು ಕಟ್ಟುವಲ್ಲಿ ನಾವು ಬದ್ಧರಾಗೋಣ. ಚೇತನದ ವಿಶೇಷರು ಪ್ರೀತಿಯಿಂದ ತಯಾರಿಸಿದ ದಿವ್ಯ ಹಣತೆಗಳನ್ನು ತೆಗೆದುಕೊಂಡು ಸಂಸ್ಥೆಗೆ ಬಲ ತುಂಬುವ ಕೆಲಸ ನಮ್ಮಿಂದಾಗಲಿ. ಖರೀದಿಸಲು ಇಚ್ಛೆ ಪಡುವವರು 8867875294 ಈ ನಂಬರಿಗೆ ಕರೆ ಮಾಡಿ. ಈ ದೀಪಾವಳಿಯನ್ನು ದಿವ್ಯತೆಯೊಂದಿಗೆ ಸಂಭ್ರಮದಿಂದ ಆಚರಿಸೋಣ.



- ಗೀತಾ ಲಕ್ಷ್ಮೀಶ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top