ಕುಡ್ಲದ ಪಿಲಿಪರ್ಬ 3ನೇ ಆವೃತ್ತಿಗೆ ಮಂಗಳೂರು ನಗರ ಸಜ್ಜು: 11ರಂದು ಹುಲಿ ವೇಷಗಳ ಸ್ಪರ್ಧಾಕೂಟ

Upayuktha
0


ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಮೂರನೇ ವರ್ಷದ ಪಿಲಿ ಪರ್ಬ ಸ್ಪರ್ಧಾಕೂಟವು ಶುಕ್ರವಾರ (ಅ.11) ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಲಿದೆ.


ತುಳುನಾಡಿನ ನೆಲದ ಪರಂಪರೆಯ ಗತವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಹಾಗೂ ರಾಷ್ಟ್ರಮಟ್ಟದ ಮಾನ್ಯತೆ ಪಡೆದುಕೊಳ್ಳುತ್ತಿರುವ ಹುಲಿವೇಷ ಕುಣಿತದ ಕಲಾ ಶ್ರೇಷ್ಠತೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಸದುದ್ದೇಶದಿಂದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಹಾಗೂ ಶಾಸಕ ಡಿ.ವೇದವ್ಯಾಸ್ ಕಾಮತ್ ರವರ ನೇತೃತ್ವದಲ್ಲಿ ಆಯೋಜಿಸಿದ್ದ "ಕುಡ್ಲದ ಪಿಲಿಪರ್ಬ"ವು ಕಳೆದೆರಡು ಆವೃತ್ತಿಗಳಲ್ಲಿ ತುಳುನಾಡಿನ ಸಮಸ್ತ ದೈವ, ದೇವರುಗಳ ಆರ್ಶೀವಾದದಿಂದ ಅತ್ಯಂತ ಯಶಸ್ವಿಯಾಗಿದ್ದವು. ಇದೀಗ ಅದರ ಮೂರನೇ ಆವೃತ್ತಿಯ ಸ್ಪರ್ಧಾಕೂಟವು ಇದೇ ಅಕ್ಟೋಬರ್ 11 ರ ಶುಕ್ರವಾರದಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಗೆ ಸಂಭ್ರಮ-ಸಡಗರದಿಂದ ಆರಂಭವಾಗಲಿದೆ.


ಪ್ರತಿಷ್ಠಾನದ ಕಾರ್ಯದರ್ಶಿ ಗಿರಿಧರ ಶೆಟ್ಟಿ ಅವರು ಸುದ್ದಿಗೋಷ್ಠಿಯಲ್ಲಿ ಪಿಲಿ ಪರ್ಬದ ಮೂರನೇ ಆವೃತ್ತಿಯ ವಿವರ ಮಾಹಿತಿ ನೀಡಿದರು.


ಕೇವಲ ಕಲೆಯಾಗಿ ಮಾತ್ರವಲ್ಲದೇ, ಧಾರ್ಮಿಕವಾಗಿಯೂ ತುಳುನಾಡಿನಲ್ಲಿ ಹುಲಿವೇಷಕ್ಕೆ ಪ್ರಮುಖ ಸ್ಥಾನವಿದ್ದು ಇದೀಗ ಅದಕ್ಕೆ ಸ್ಪರ್ಧಾಕೂಟದ ಸ್ಪರ್ಶವೂ ಸಿಕ್ಕಿರುವುದು ಪ್ರತೀ ವರ್ಷವೂ ಹತ್ತು ಹಲವು ತಂಡಗಳು ತಮ್ಮದೇ ಆದ ಕಠಿಣ ಪರಿಶ್ರಮದಿಂದ ಸಿದ್ದಗೊಂಡು ಈ ದಿನಕ್ಕಾಗಿ ಕಾಯುತ್ತಿರುತ್ತವೆ.


ಕೇಂದ್ರ ಮೈದಾನದಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಭವ್ಯ ಹಾಗೂ ವಿಶಾಲ ವೇದಿಕೆಯಲ್ಲಿ, ಪರಿಣಿತ ತೀರ್ಪುಗಾರರ ಸಮ್ಮುಖದಲ್ಲಿ, ಜಿಲ್ಲೆ-ರಾಜ್ಯ-ದೇಶ- ವಿದೇಶಗಳಲ್ಲಿ ಪ್ರದರ್ಶನ ನೀಡಿರುವ ಕರಾವಳಿಯ ಜನಪ್ರಿಯ 10 ಹುಲಿವೇಷ ತಂಡಗಳು ಈ ಸ್ಪರ್ಧಾಕೂಟದಲ್ಲಿ ಪಾಲ್ಗೊಳ್ಳಲಿದ್ದು, ಇಡೀ ದಿನ ಕಡಲನಗರಿ ಹುಲಿಗಳ ಘರ್ಜನೆಗೆ ಸಾಕ್ಷಿಯಾಗಲಿದೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮಕ್ಕಳಿಂದ ಹಿಡಿದು ಹಿರಿಯರ ತನಕ ಪ್ರತಿಯೊಬ್ಬ ಕಲಾಪ್ರೇಮಿಗೂ ಮುಕ್ತ ಅವಕಾಶವಿದ್ದು, ಸ್ಪರ್ಧಾಕೂಟದಲ್ಲಿ ಒಂದಕ್ಕಿಂತ ಒಂದು ವಿಭಿನ್ನತೆಯಿಂದ ಕೂಡಿರುವ ಹುಲಿವೇಷ ತಂಡಗಳಿಂದ ಇಡೀ ದಿನ ಸ್ಪರ್ಧಾಕೂಟದ ಮನರಂಜನೆಯಲ್ಲಿ ಮಿಂದೇಳುವ ಅವಕಾಶವಿದೆ. ಜನಸಾಮಾನ್ಯರ ಮನರಂಜನೆಯೇ ಈ ಸ್ಪರ್ಧಾಕೂಟದ ಪ್ರಮುಖ ಉದ್ದೇಶವೂ ಆಗಿದೆ ಎಂದು ಅವರು ತಿಳಿಸಿದರು.


ಪಿಲಿಪರ್ಬದಲ್ಲಿ ಭಾಗವಹಿಸುವ ಹುಲಿವೇಷ ತಂಡಗಳು ವೈಭವದ ಮೆರವಣಿಗೆಯ ಮೂಲಕ ವೇದಿಕೆಗೆ ಪ್ರವೇಶ ಮಾಡಲಿದ್ದು, 20 ನಿಮಿಷಗಳ ಪ್ರದರ್ಶನ ನೀಡಲಿವೆ. ಪ್ರತಿ ತಂಡವೂ ಅಕ್ಕಿಮುಡಿ ಹಾರಿಸುವುದು ಕಡ್ಡಾಯವಾಗಿದ್ದು, ಕರಿಹುಲಿಗಳು, ಮರಿಹುಲಿಗಳು, ಹಿಮ್ಮೇಳ, ಧರಣಿ ಮಂಡಲ ಹೀಗೆ ಇಡೀ ಕೂಟವು ವೈವಿಧ್ಯತೆಯಿಂದ ಕೂಡಿರಲಿದೆ.


ಅಂತಿಮವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಿಗೆ, ಪ್ರಥಮ-ದ್ವಿತೀಯ-ತೃತೀಯ ಬಹುಮಾನ ನೀಡಿ ಗೌರವಿಸಲಾಗುವುದರ ಜೊತೆಗೆ ಶಿಸ್ತಿನ ತಂಡ, ಅತ್ಯುತ್ತಮ ಹುಲಿ ಮೆರವಣಿಗೆ ತಂಡ, ಪರ್ಬದ ಪಿಲಿ, ಕಪ್ಪು ಪಿಲಿ, ಮರಿ ಹುಲಿ, ಮುಡಿ, ತಾಸೆ, ಬಣ್ಣಗಾರಿಕೆ, ಧರಣಿ ಮಂಡಲ ಬಹುಮಾನವನ್ನೂ ನೀಡುವುದಾಗಿದ್ದು ತೀವ್ರ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. 


ಈ ಬಾರಿ, ರಾಷ್ಟ್ರಪ್ರಶಸ್ತಿ ವಿಜೇತ ಕರಾವಳಿಯ ಹೆಮ್ಮೆ ರಿಷಭ್‌ ಶೆಟ್ಟಿ, ಕನ್ನಡ ಚಿತ್ರರಂಗದಲ್ಲಿ ತನ್ನ ಅದ್ಭುತ ಪ್ರತಿಭೆ ಮೂಲಕ ಮಿಂಚುತ್ತಿರುವ ತುಳುನಾಡಿನ ಕಣ್ಮಣಿ ರಾಜ್ ಬಿ. ಶೆಟ್ಟಿ, ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್, ಅನೂಪ್ ಸಾಗರ್, ಸನಿಲ್ ಗುರು, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಅರ್ಜುನ್ ಕಾಪಿಕಾಡ್, ಸಮಿತಾ ಅಮೀನ್, ವಿನೀತ್ ಕುಮಾರ್, ಸೇರಿದಂತೆ ಅನೇಕ ಸಾಧಕರು, ಜನಪ್ರಿಯ ವ್ಯಕ್ತಿಗಳು ಪಿಲಿಪರ್ಬಕ್ಕೆ ಆಗಮಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದ್ದಾರೆ. ಈ ನಿಟ್ಟಿನಲ್ಲಿ ಹಿಂದಿಗಿಂತಲೂ ಅತ್ಯಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದೆ.


ಕಾರ್ಯಕ್ರಮಕ್ಕೆ ಆಗಮಿಸಲಿರುವ ಗಣ್ಯರು, ದಾನಿಗಳಿಗೆ ವಿಶೇಷ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಸ್ಪರ್ಧಾಕೂಟ ನಡೆಯುವ ಮೈದಾನದಲ್ಲಿ 5 ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಸುಸಜ್ಜಿತ ಪ್ರೇಕ್ಷಕ ಗ್ಯಾಲರಿ ನಿರ್ಮಿಸಲಾಗಿದೆ. ಅಲ್ಲಿಯೇ ದೊಡ್ಡ ಪರದೆಯ ವ್ಯವಸ್ಥೆಯನ್ನೂ ಮಾಡಲಾಗಿದ್ದು ಕಾರ್ಯಕ್ರಮಕ್ಕೆ ಬರಲು ಉತ್ಸುಕರಾಗಿದ್ದು ಜನಜಂಗುಳಿಯಿಂದಾಗಿ ಬರಲು ಸಾಧ್ಯವಾಗದೇ ಇರುವ ಹಿರಿಯರು ಹಾಗೂ ಮಕ್ಕಳಿಗಾಗಿ ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಲು ನೇರ ಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಮೈದಾನದಲ್ಲಿ ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಹಾಗೂ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ್ ಪಾಂಡೇಶ್ವರ ಮತ್ತಿತರ ಮುಖಂಡರಿದ್ದರು.



ಸ್ಪರ್ಧಾಕೂಟದಲ್ಲಿ ಪಾಲ್ಗೊಳ್ಳಲಿರುವ 10 ಹುಲಿವೇಷ ತಂಡಗಳು:-

1. ಟೀಮ್ ಪರಶುರಾಮ ಕುಡ್ಲ

2. ಪಾಂಡೇಶ್ವರ ಶಾರದಾ ಹುಲಿ 

3. ಟೀಮ್ ಹನುಮಾನ್ ಫ್ರೆಂಡ್ಸ್ ಫೈಸಲ್ ನಗರ

4. ಎಮ್.ಎಫ್.ಟಿ ಮುಳಿಹಿತ್ಲು 

5. ನಂದಿಗುಡ್ಡ ಫ್ರೆಂಡ್ಸ್ ಬಾಬುಗುಡ್ಡ

6. ಟ್ಯಾಲೆಂಟ್ ಟೈಗರ್ಸ್ ತುಳುನಾಡು

7. ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್

8. ಎಸ್ ಕೆ ಬಿ ಟೈಗರ್ಸ್ ಕುಂಪಲ

9. ಟೀಮ್ ಕಲ್ಲೇಗ ಟೈಗರ್ಸ್ ಪುತ್ತೂರು

10. ಮುಳುಹಿತ್ಲು ಫ್ರೆಂಡ್ಸ್ ಸರ್ಕಲ್ (ರಿ.)



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top