ಮಡಿಕೇರಿ: ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಸಂಘದ ಸದಸ್ಯತ್ವ ಮತ್ತು ಜನಗಣತಿ ಅಭಿಯಾನ ಹಾಗೂ ಲೋಗೋ ಬಿಡುಗಡೆ ಕಾರ್ಯಕ್ರಮವು ಕುಲಾಲ ಸಂಘ ಚೇರಂಬಾಣೆಯ ಆಶ್ರಯದಲ್ಲಿ ಭಾನುವಾರ ನಡೆದ ಸುಂದರ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ಕೊಟ್ಟ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಮುತ್ತಮ್ಮ ಕೋಟಿ ಅವರು ಕೊಡಗು ಜಿಲ್ಲೆಯ ಕುಲಾಲ ಕುಂಬಾರ ಸಂಘದ ಹೊಸ ಲೋಗೋವನ್ನು ಬಿಡುಗಡೆಗೊಳಿಸಿದರು.
ಮೊದಲಿಗೆ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಸದಸ್ಯತ್ವ ಅಭಿಯಾನಕ್ಕೂ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕುಲಾಲ ಕುಂಬಾರ ಸಂಘವು ಜಿಲ್ಲೆಯಲ್ಲಿ ಸದೃಢಗೊಳ್ಳುತ್ತಿದ್ದು ಸಮಾಜ ಬಾಂಧವರು ಸಂಘಟನೆಗಾಗಿ ಉತ್ಸುಕರಾಗಿದ್ದಾರೆ. ಈಗಾಗಲೇ ಯುವ ಘಟಕ ಮತ್ತು ಮಹಿಳಾ ಘಟಕ ರಚನೆಯಾಗಿ ಸಕ್ರಿಯವಾಗಿದ್ದು ಜಿಲ್ಲೆಯ ಕುಲಾಲ ಕುಂಬಾರ ಸಂಘಕ್ಕೆ ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕುಲಬಾಂಧವರು ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಸದಸ್ಯತ್ವ ಪಡೆದು ಸಂಘವನ್ನು ಸದೃಢಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರಸ್ತಾವಿಕ ನುಡಿಯನ್ನಾಡಿದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ ಇವರು ಜಿಲ್ಲೆಯ ಕುಲಬಾಂಧವರು ಕುಲಾಲ ಕುಂಬಾರ ಸಂಘದ ಸದಸ್ಯತ್ವವನ್ನು ಪಡೆಯುವ ಮೂಲಕ ಜಿಲ್ಲೆಯಲ್ಲಿ ಸಂಘವನ್ನು ಇನ್ನಷ್ಟು ಸದೃಢಗೊಳಿಸಬೇಕಾಗಿದೆ. ಆ ಮೂಲಕ ಇಲ್ಲಿಯ ಕುಲಬಾಂಧವರಿಗೆ ಕಷ್ಟಕಾರ್ಪಣ್ಯಕ್ಕೆ ನೆರವಾಗಲು ಸಂಘವು ಕಟಿಬದ್ಧವಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಂಘದ ಅಧ್ಯಕ್ಷ ಕುಶಾಲಪ್ಪ ಕೆ ಅವರು ಜಿಲ್ಲೆಯ ಕುಲಾಲ ಕುಂಬಾರ ಸಂಘದ ಮುಂದಿನ ಕಾರ್ಯ ಯೋಜನೆಗಳನ್ನು ಸಭೆಗೆ ತಿಳಿಸಿದರು. ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತರಿಗೆ ನೆರವು, ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮಾರ್ಗದರ್ಶನ, ಔದ್ಯೋಗಿಕ ಮಾರ್ಗದರ್ಶನ ಮುಂತಾದ ಹತ್ತು ಹಲವು ಯೋಜನೆಗಳ ಮೂಲಕ ಕುಲಬಾಂಧವರ ಏಳಿಗೆಗಾಗಿ ಶ್ರಮಿಸಲು ಸಂಘವು ಮುನ್ನಡೆಯುತ್ತಿದೆ. ಸಮಾನತೆ, ಸರಳತೆ, ಸಂಘಟನೆ, ಸೇವೆಯ ಮೂಲಕ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟೋಣ. ಆ ಮೂಲಕ ನಮ್ಮ ಕುಲಬಾಂಧವರ ಏಳಿಗೆಗಾಗಿ ಶ್ರಮಿಸೋಣ ಎಂದು ಕರೆ ನೀಡಿದರು.
ಜಿಲ್ಲೆಯ ಕುಲಬಾಂಧವರು ಸಂಘದ ಸದಸ್ಯತ್ವವನ್ನು ಪಡೆಯಬೇಕು ಮತ್ತು ನಿಖರವಾಗಿ ಜಿಲ್ಲೆಯಲ್ಲಿ ಕುಲಾಲ ಬಾಂಧವರ ಜನಗಣತಿ ಆಗಬೇಕಾಗಿದೆ. ಅದಕ್ಕಾಗಿ ಜಿಲ್ಲಾ ಸಂಘದ ವತಿಯಿಂದ ಜನಗಣತಿ ಆರಂಭ ಮಾಡಲಾಗಿದೆ. ಇದಕ್ಕಾಗಿ ಜಿಲ್ಲೆಯ ಕುಲಬಾಂಧವರು ಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಂಘದ ಮಾಜಿ ಅಧ್ಯಕ್ಷ ಎo.ಡಿ. ನಾಣಯ್ಯ ಅವರು ಸಂಘದ ಬೆಳವಣಿಗೆಯ ಬಗ್ಗೆ ಹಿತವನ್ನು ನುಡಿದರು.ಹಲವು ಗಣ್ಯರು ಸಭೆಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸಂಘದ ಲೋಗೋ ಮಾಡಲು ಸಹಕರಿಸಿದ ಹೆಮ್ಮಾಡುವಿನ ಮನು ದೇವಪ್ಪ ಮತ್ತು ಆಶಾ ದಂಪತಿಗಳ ಪುತ್ರಿ ಮಧುರ ಇವರಿಗೆ ಧನ್ಯವಾದ ತಿಳಿಸಲಾಯಿತು.
ಸಂಘದ ಏಳಿಗೆಗಾಗಿ ಶ್ರಮಿಸುತ್ತಿರುವ ಬಾಂಧವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಅಚ್ಚುಕಟ್ಟಾಗಿ ಕಾರ್ಯಕ್ರಮ ವ್ಯವಸ್ಥೆಗೊಳಿಸಿದ ಕುಲಾಲ ಕುಂಬಾರ ಸಂಘ ಚೇರಂಬಾಣೆಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರಿಗೆ ಜಿಲ್ಲಾ ಸಂಘದಿಂದ ಕೃತಜ್ಞತೆ ಸಲ್ಲಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ ಚೆರಂಬಾಣೆಯ ಗೌರವಾಧ್ಯಕ್ಷ ನಾಗರಾಜು, ಕುಲಾಲ ಸಂಘ ತೊಟ್ಲುಕುಂಞಿ ಚೇರಂಬಾಣೆಯ ಅಧ್ಯಕ್ಷ ನಾಣಯ್ಯ, ಜಿಲ್ಲಾ ಸಂಘದ ಖಜಾಂಜಿ ಗಿರೀಶ್ ಮಡಿಕೆ ಬೀಡು, ಪದಾಧಿಕಾರಿಗಳಾದ ಸುರೇಶ್ ಕುಲಾಲ್ ಮಡಿಕೇರಿ, ಅಪ್ಪಾಜಿ ಕುಶಾಲನಗರ, ವಿಟ್ಟಲ್ ಮಡಿಕೆ ಬಿಡು, ಮಂಜು ಮಡಿಕೆ ಬೀಡು, ಅರುಣ್ ಚೆರಂಬಾಣೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಲಾಲ ಕುಂಬಾರ ಸಂಘದ ಪದಾಧಿಕಾರಿಗಳು ಮತ್ತು ಚೇರಂಬಾಣೆ ಕುಲಾಲ ಕುಂಬಾರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಲಲಿತಾ ಪ್ರಾರ್ಥಿಸಿದರು. ಪವನ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ್ ಕುಲಾಲ್ ಮೂರ್ನಾಡು ಸ್ವಾಗತಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ