ಸಾಮಾಜಿಕ ಅನಿವಾರ್ಯತೆ ಔದ್ಯಮಿಕ ಪ್ರಯೋಗಶೀಲತೆಗೆ ಪೂರಕ:ಡಾ.ಬಿ.ಎ. ಕುಮಾರ್ ಹೆಗ್ಡೆ
ಉಜಿರೆ:ನರ ಸ್ವಭಾವ, ಸಾಮಾಜಿಕ ಅಗತ್ಯತೆ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ನೂತನ ವಿಚಾರಗಳನ್ನು ಹೊಳೆಸಿಕೊಳ್ಳುವ ಸಾಮರ್ಥ್ಯ ಔದ್ಯಮಿಕ ಪ್ರಯೋಗಶೀಲತೆಗೆ ಸಹಾಯಕವಾಗುತ್ತದೆ ಎಂದು ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ. ಕುಮಾರ್ ಹೆಗ್ಡೆ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಬಿ.ವೋಕ್ ರೀಟೇಲ್ ಅಂಡ್ ಸಪ್ಲೇ ಚೈನ್ ಮ್ಯಾನೇಜಮೆಂಟ್ ವಿಭಾಗ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಘಟಕ ಸಹಯೋಗದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಆಲೋಚನೆಗಳಿಂದ ಪ್ರಭಾವ ; ಭವಿಷ್ಯದ ಉದ್ಯಮಿಗಳಿಗಾಗಿ ಬೂಟ್ ಕ್ಯಾಂಪ್’ ಶೀರ್ಷಿಕೆಯ ಮೂರು ದಿನಗಳ ಬೂಟ್ ಕ್ಯಾಂಪ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರ ಕಂಡ ಎಲ್ಲ ಶ್ರೇಷ್ಠ ಉದ್ಯಮಿಗಳು ಆಯಾ ಕಾಲದ ಸಾಮಾಜಿಕ ಸ್ಥಿತಿಯನ್ನು ಅತ್ಯಂತ ಕೂಲಂಕುಶವಾಗಿ ಗಮನಿಸಿದವರು. ಜನರ ಸ್ವಭಾವ ಮತ್ತು ನಿರೀಕ್ಷೆಗಳಿಗೆ ತಕ್ಕಂತೆಯೇ ಔದ್ಯಮಿಕ ಪ್ರಯೋಗಗಳನ್ನು ಕೈಗೊಂಡು ಯಶಸ್ಸು ಸಾಧಿಸಿದರು ಎಂದು ಹೇಳಿದರು. ನವೀನ ಮಾದರಿಯ ಉದ್ಯಮಗಳನ್ನು ಸ್ಥಾಪಿಸಲು ಇಚ್ಚಿಸುವವರು ಕುತೂಹಲದ ಗುಣವನ್ನು ಕಾಯ್ದುಕೊಳ್ಳಬೇಕು. ಸಾಮಾಜಿಕ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಅದಕ್ಕೆ ಪ್ರತಿಸ್ಪಂದಿಸುವ ನಿಟ್ಟಿನಲ್ಲಿ ಯೋಚಿಸಿದಾಗ ಔದ್ಯಮಿಕವಾದ ಹೊಸ ಐಡಿಯಾಗಳು ಹೊಳೆಯುತ್ತವೆ. ಬೂಟ್ ಕ್ಯಾಂಪ್‌ಗಳು ಈ ದೃಷ್ಟಿಯಿಂದ ಪ್ರೇರಣಾತ್ಮಕ ಪಾತ್ರ ವಹಿಸುತ್ತವೆ ಎಂದು ನುಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿ.ವೋಕ್ ರೀಟೇಲ್ ಅಂಡ್ ಸಪ್ಲೇ ಚೈನ್ ಮ್ಯಾನೇಜಮೆಂಟ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಸ್ವತಃ ಸಿದ್ಧಪಡಿಸಿದ ಕರಕುಶಲ ವಸ್ತುಗಳು, ಆಹಾರ ಉತ್ಪನ್ನಗಳು, ಕಾರ್ಯಕ್ರಮಗಳ ನಿರ್ವಹಣೆ, ತಾಂತ್ರಿಕ ಸೇವೆಗಳು, ಹಣಕಾಸು ಸಲಹಾ ಸಂಸ್ಥೆಗಳು, ಟ್ರಾವೆಲಿಂಗ್ ಏಜೆನ್ಸಿ ಸೇರಿದಂತೆ ಹದಿನೈದು ವೈವಿಧ್ಯಮಯ ಸ್ಟಾರ್ಟಪ್‌ಗಳ ಲೋಕಾರ್ಪಣೆ ಮಾಡಲಾಯಿತು. ವಿಭಾಗದ ಮುಖ್ಯಸ್ಥ ಅಶ್ವಿತ್ ಹೆಚ್.ಆರ್. ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಡೆಕ್ಕನ್ ಗ್ರುಪ್ ಆಫ್ ಕಂಪನೀಸ್ ನಿರ್ದೇಶಕರಾದ ಮಹ್ಮದ್ ಬಾಷಿಲ್ ಖಾದರ್, ಉದ್ಯಮಗಳ ಅಭಿವೃದ್ಧಿ ಘಟಕದ ಸಂಯೋಜಕರಾದ ಸ್ವಾತಿ ಬಿ, ಸುಮನ್ ಜೈನ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಇಶಾ ಸ್ವಾಗತಿಸಿದರು, ಶಾಂಭವಿ ಅತಿಥಿಗಳನ್ನು ಪರಿಚಯಿಸಿದರು, ಅರ್ಚನ ವಂದಿಸಿದರು. ಅನುಷಾ ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ