ಮಂಗಳೂರು: ಭ್ರಷ್ಟಾಚಾರದ ಕಳಂಕ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯ ಪಾಠ ಮಾಡುತ್ತಾರೆ, ಆತ್ಮಸಾಕ್ಷಿಯ ವಿಚಾರ ಮಾತನಾಡುತ್ತಾರೆ. 40 ವರ್ಷಗಳ ರಾಜಕೀಯ ಜೀವನದಲ್ಲಿ ತಾನು ಪರಿಶುದ್ಧ ಎಂದು ಹೇಳಿಕೊಳ್ಳುವ ಅವರು ನಿಜಕ್ಕೂ ಪ್ರಾಮಾಣಿಕರಾಗಿದ್ದರೆ, ಆತ್ಮಸಾಕ್ಷಿ ಅನ್ನುವುದು ಅವರಿಗಿದ್ದರೆ ರಾಜೀನಾಮೆ ನೀಡಿ ತನಿಖೆ ಎದುರಿಸಿ, ನ್ಯಾಯಾಲಯದಲ್ಲಿ ಪರಿಶುದ್ಧರಾಗಿ ಹೊರಗೆ ಬರಲಿ ಎಂದು ದ.ಕ ಜಿಲ್ಲಾ ಬಿಜೆಪಿ ವಕ್ತಾರರಾದ ರಾಜಗೋಪಾಲ ರೈ ಆಗ್ರಹಿಸಿದರು.
ಈ ಕುರಿತು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಅವರು, ಸಿದ್ದರಾಮಯ್ಯನವರು ಆತ್ಮಸಾಕ್ಷಿಯಂತೆ ನಡೆದುಕೊಳ್ಳುವುದಿದ್ದರೆ ಆರೋಪ ಬಂದ ಕೂಡಲೇ ರಾಜೀನಾಮೆ ನೀಡಿ ಹೊರಗೆ ಬರಬೇಕಿತ್ತು. ನಂತರ ತನಿಖೆ ಎದುರಿಸಿ ಪರಿಶುದ್ಧರಾಗಿ ಬಂದರೆ ನಂತರ ಪುನಃ ಮುಖ್ಯಮಂತ್ರಿಯಾಗಿ ಮುಂದುವರಿಯಬಹುದಿತ್ತು. ಆದರೆ ಅಧಿಕಾರದ ದಾಹದಿಂದ, ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ರೈ ಟೀಕಿಸಿದರು.
ತಾವು ತಪ್ಪೇ ಮಾಡಿಲ್ಲ ಎನ್ನುವ ಮುಖ್ಯಮಂತ್ರಿಗಳು, ಮುಡಾ ಹಗರಣದ ಕೇಸನ್ನು ಇ.ಡಿ ಕೈಗೆತ್ತಿಕೊಳ್ಳುತ್ತಿದ್ದಂತೆ ಪತ್ನಿಯ ಹೆಸರಲ್ಲಿ ಪಡೆದ 14 ನಿವೇಶಗಳನ್ನೂ ಹಿಂದಿರುಗಿಸುತ್ತಾರೆ. ಹಾಗಾದರೆ ಮೊದಲೇ ಈ ಕೆಲಸ ಮಾಡಲಿಲ್ಲ ಏಕೆ? ಪರಿಶುದ್ಧತೆಯ ಸೋಗು ಹಾಕಿಕೊಂಡು ಭ್ರಷ್ಟಾಚಾರ ನಡೆಸಿದರೆ ಜನತೆಗೆ ಗೊತ್ತಾಗದೆ ಇರುವುದಿಲ್ಲ ಎಂದು ರಾಜಗೋಪಾಲ ರೈ ವಾಗ್ದಾಳಿ ನಡೆಸಿದರು.
ಪತ್ನಿ ಪಾರ್ವತಿಯವರೇ ಪತ್ರ ಬರೆದಂತೆ ಭಾವನಾತ್ಮಕ ಬರೆಸಿರುವ ಸಿದ್ದರಾಮಯ್ಯನವರು, ಆ ಮೂಲಕ ತಮ್ಮನ್ನು ತಾವು ಪ್ರಾಮಾಣಿಕರು ಎಂದು ಹೇಳಿಕೊಳ್ಳಲು ಹೊರಟಿದ್ದಾರೆ. ಇದು ಅವರ ದ್ವಿಮುಖ ಧೋರಣೆಯನ್ನು ತೋರಿಸುತ್ತದೆ ಎಂದು ರೈ ಹೇಳಿದರು.
ಮುಸ್ಲಿಂ ಓಲೈಕೆಯ ರಾಜಕಾರಣದ ಪರಮಾವಧಿ ತಲುಪಿರುವ ಸಿದ್ದರಾಮಯ್ಯ ಮತ್ತು ಅವರ ಕಾಂಗ್ರೆಸ್ ಸರಕಾರ ಚೌತಿಯ ಪೂಜೆಗೆ ಪ್ರತಿಷ್ಠಾಪಿಸಿದ ಗಣಪತಿಯ ಮೂರ್ತಿಯನ್ನೂ ಪೊಲೀಸರ ಮೂಲಕ ವಶಕ್ಕೆ ಪಡೆದು ಠಾಣೆಯಲ್ಲಿ ಕೂರಿಸುತ್ತಾರೆ. ಕುಕ್ಕರ್ ಬಾಂಬ್ ಸ್ಫೋಟಿಸಿದವನನ್ನು, ವಿಧಾನ ಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದವನನ್ನು ಬ್ರದರ್ಸ್ ಎನ್ನುವವರು ಹಿಂದೂಗಳ ಹಬ್ಬಗಳಿಗೆ ಅಡ್ಡಿಪಡಿಸುತ್ತಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಾರೆ. ಇಂಥವರಿಗೆ ಆತ್ಮಸಾಕ್ಷಿ ಎಂಬುದು ಇದೆಯೇ? ಎಂದು ಜಿಲ್ಲಾ ಬಿಜೆಪಿ ವಕ್ತಾರರು ಪ್ರಶ್ನೆ ಹಾಕಿದರು.
ರಾಷ್ಟ್ರಧ್ವಜಕ್ಕೆ ಅವಮಾನ:
ಮುಖ್ಯಮಂತ್ರಿಗಳ ಸಹಾಯಕನೊಬ್ಬ ರಾಷ್ಟ್ರಧ್ವಜವನ್ನು ಕೈಯ್ಯಲ್ಲಿ ಹಿಡಿದುಕೊಂಡು ಸಿದ್ದರಾಮಯ್ಯನವರ ಬೂಟಿನ ಲೇಸ್ ಕಟ್ಟುತ್ತಾರೆ. ಅದು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನವಲ್ಲವೆ? ಆಗ ಸಿದ್ದರಾಮಯ್ಯನವರ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು? ಎಂದು ರಾಜಗೋಪಾಲ ರೈ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರು ತಕ್ಷಣವೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ತನಿಖೆ ಎದುರಿಸಿ ಕಳಂಕ ರಹಿತರಾಗಿ ಹೊರಗೆ ಬರಲಿ. ಅನಂತರ ಮುಖ್ಯಮಂತ್ರಿ ಹುದ್ದೆಯಲ್ಲಿ ಬೇಕಿದ್ದರೆ ಮುಂದುವರಿಯಲಿ. ಅಲ್ಲಿಯ ವರೆಗೂ ಕಾಂಗ್ರೆಸ್ ಪಕ್ಷ ಹೊಸ ನಾಯಕನನ್ನು ಮುಖ್ಯಮಂತ್ರಿ ಮಾಡಲಿ ಎಂದು ಅವರು ಆಗ್ರಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ