ಗೋವಾ: ಬಿಚೋಲಿ ಕರ್ಮಭೂಮಿ ಕನ್ನಡ ಸಂಘದ 10ನೇ ವರ್ಷಾಚರಣೆ

Upayuktha
0


ಪಣಜಿ: ಗೋವಾದ ಬಿಚೋಲಿಯಲ್ಲಿ ದಾಖಲೆಯ ರೀತಿಯಲ್ಲಿ ಪ್ರಸಕ್ತ ಸಮ್ಮೇಳನದಲ್ಲಿ 501 ಕುಂಭಗಳ ಮೆರವಣಿಗೆ ನಡೆಸಿ ದಾಖಲೆ ಮಾಡಿದ್ದಾರೆ. ಬಿಚೋಲಿ ಕರ್ಮಭೂಮಿ ಕನ್ನಡ ಸಂಘವು ಇಂದು 10 ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಕಳೆದ 10 ವರ್ಷಗಳಿಂದ ಗೋವಾದಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಸಮ್ಮೇಳನ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಬೆಳಗಾವಿ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.


ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಗೋವಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 27 ರಂದು ಭಾನುವಾರ ಬೆಳಿಗ್ಗೆ ಕರ್ಮಭೂಮಿ ಕನ್ನಡ ಸಂಘ ಬಿಚೋಲಿಯ 10 ನೇ ವಾರ್ಷಿಕೋತ್ಸವ ಹಾಗೂ 15 ನೇ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನವನ್ನು ಗೋವಾದ ಬಿಚೋಲಿಯ ಶ್ರೀಮತಿ ಹೀರಾಬಾಯಿ ಜಾಂಟಯೆ ಸ್ಮೃತಿ ಸಭಾಗೃಹದಲ್ಲಿ ಆಯೋಜಿಸಲಾಗಿತ್ತು. ಈ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಹುಕ್ಕೇರಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.


ಬೆಳಗಾವಿ ರಾಮದುರ್ಗದ ಹಳೆತೋರಗಲ್ಲ ರಾಮದುರ್ಗದ ಶ್ರೀ ಕರಿಸಿದ್ದೇಶ್ವರ ಪಟ್ಟದ ಪೂಜ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಈ ಸಂಧರ್ಭದಲ್ಲಿ ಗೋವಾ ಬಿಚೋಲಿ ಕ್ಷೇತ್ರದ ಶಾಸಕ ಚಂದ್ರಕಾಂತ ಶೇಟಯೆ, ಕಸಾಪ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ, ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ, ಕರ್ನಾಟಕ ರಾಜ್ಯೋತ್ಸವ ಸಮೀತಿಯ ಅಧ್ಯಕ್ಷ ಮುರಳಿ ಮೋಹನ್ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಸಮಿತಿಯ ಸಂಘಟನಾಧ್ಯಕ್ಷ ರಾಜೇಶ್ ಶೆಟ್ಟಿ, ಮಾಪ್ಸಾ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಗೋವಾ ಸಮ್ಮೇಳನದ ಸಂಚಾಲಕ, ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರಿನ ಅಧ್ಯಕ್ಷ ಮಹೇಶಬಾಬು ಸುರ್ವೆ ಸೇರಿದಂತೆ ಗೋವಾ ರಾಜ್ಯದ ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು.


ಸಭಾ ಕಾರ್ಯಕ್ರಮ ಆರಂಭಕ್ಕೂ ಮುನ್ನ 501 ಕುಂಭಗಳ ಮೆರವಣಿಗೆ ನಡೆಸಲಾಯಿತು. ಸಮ್ಮೇಳನದಲ್ಲಿ ವಿವಿಧ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನೀಡಿದರು. ಸಾಧಕರನ್ನು ಸನ್ಮಾನಿಸಲಾಯಿತು. ಗೋವಾ ಹಾಗೂ ಕರ್ನಾಟಕದ ವಿವಿಧೆಡೆಯಲ್ಲಿ ಈ ಸಮ್ಮೇಳನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಪಾಲ್ಗೊಂಡಿದ್ದರು. ರೇಣುಕಾ ಶಂಭು ಶೆಟ್ಟರ್ ಕಾರ್ಯಕ್ರಮ ನಿರೂಪಿಸಿದರು.


Post a Comment

0 Comments
Post a Comment (0)
To Top