ವೆಲ್‌ನೆಸ್ ರೂಮ್‌ನ ಉದ್ಘಾಟನೆ, ಬಡ್ಡಿಸ್ ಮೂಮೆಂಟ್ ಚಾಲನೆ ಮತ್ತು ಮಾನಸಿಕ ಸ್ವಾಸ್ಥ್ಯ ಕುರಿತ ಅಧಿವೇಶನ ಕಾರ್ಯಕ್ರಮ
ವಿದ್ಯಾಗಿರಿ: ಅನಾರೋಗ್ಯ ಮತ್ತು ಕ್ಷೇಮ ಎಂಬುದು ಎರಡು ಭಿನ್ನ ವಿಚಾರಗಳು. ಕ್ಷೇಮ ತರಬೇತಿ ಕೇಂದ್ರವು ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆ, ವೈಯಕ್ತಿಕ ಸಂಬAಧಗಳು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ವಿಚಾರಿಸಿ, ಸಮಾಲೋಚಿಸುವ ಕಾರ್ಯವನ್ನು ಮಾಡುತ್ತವೆ. ಇದೊಂದು ಮಾನಸಿಕ ಆರೋಗ್ಯವನ್ನು ಉನ್ನತೀಕರಣದ ಪರಿಕಲ್ಪನೆಯಾಗಿದೆ ಎಂದು ಉಡುಪಿಯ ಎವಿ ಬಾಳಿಗಾ ಸಂಸ್ಥೆಯ ಮನೋವೈದ್ಯ ಡಾ ಪಿ ವಿ ಭಂಡಾರಿ ಹೇಳಿದರು .
ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆಳ್ವಾಸ್ ಸೆಂಟರ್ ಫಾರ್ ವೆಲ್ ನೆಸ್ ಟ್ರೈನಿಂಗ್ ಆಶ್ರಯದಲ್ಲಿ ಪದವಿ ಎವಿ ಕೊಠಡಿಯಲ್ಲಿ ಸೋಮವಾರ ನಡೆದ "ವೆಲ್‌ನೆಸ್ ರೂಮ್‌ನ ಉದ್ಘಾಟನೆ, ಬಡ್ಡಿಸ್ ಮೂಮೆಂಟ್ ಚಾಲನೆ ಮತ್ತು ಮಾನಸಿಕ ಸ್ವಾಸ್ಥ್ಯ ಕುರಿತ ಅಧಿವೇಶನ ಕಾರ್ಯಕ್ರಮ" ಉದ್ಘಾಟಿಸಿ ಅವರು ಮಾತನಾಡಿದರು .
ಆತಂಕದ ಅಸ್ವಸ್ಥತೆಗಳು, ಖಿನ್ನತೆ, ನಿದ್ರಾ ಭಂಗಗಳು, ಮಾದಕ ವ್ಯಸನ, ಒತ್ತಡ ಸಂಬಂಧಿತ ಸಮಸ್ಯೆಗಳು ಹಾಗೂ ತಿನ್ನುವ ಕ್ರಮದಲ್ಲಿನ ಅಸ್ವಸ್ಥತೆ ಸಾಮಾನ್ಯ ಮಾನಸಿಕ ಆರೋಗ್ಯದ ಮುಖ್ಯ ಸವಾಲುಗಳಾಗಿವೆ ಎಂದರು.
ಸಮಯ ನಿರ್ವಹಣೆ, ಒತ್ತಡ ನಿರ್ವಹಣೆ, ಸಾಮಾಜಿಕ ಸಂಪರ್ಕಗಳು, ಅಗತ್ಯವಿದ್ದಾಗ ಸಹಾಯವನ್ನು ಹುಡುಕುವುದೆಲ್ಲ ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸುವ ತಂತ್ರಗಳಾಗಿವೆ ಎಂದು ಹೇಳಿದರು .
ನಿಮ್ಮ ಪ್ರೀತಿಪಾತ್ರರೊಂದಿಗೆ ನಿಮ್ಮ ಸಮಸ್ಯೆಗಳನ್ನು ಚರ್ಚಿಸುವುದರೊಂದಿಗೆ ಬಹುತೇಕ ಸಮಸ್ಯೆಗಳಿಗೆ ಮೂಲ ಪರಿಹಾರ ಸಿಗುತ್ತವೆ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ, ವಿಶ್ರಾಂತಿ ತಂತ್ರಗಳ ಪಾಲನೆ ಮಾಡುವುದರಿಂದ ಉತ್ತಮವಾದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.
ಉತ್ತಮವಾದ ಆರೋಗ್ಯ ಪಡೆಯಬೇಕಾದರೆ, ಹೆಚ್ಚೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು . ಪುಸ್ತಕಗಳು ಒಳ್ಳೆಯ ವಿರಾಮದಾಯಕವನ್ನು ಒದಗಿಸುತ್ತದೆ. ವಿದ್ಯಾರ್ಥಿಗಳೊಂದಿಗೆ ಬೆರೆಯುವುದು, ಕ್ಯಾಂಪಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದು ಸಾಮಾಜಿಕ ಸಂಪರ್ಕವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು .
ಮಾನಸಿಕ ಅಸ್ವಸ್ಥತೆಯು ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವುದರಿಂದ , ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಆದ್ಯತೆ ನೀಡಿ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಪ್ರಸ್ತುತ ಕಾಲಮಾನದಲ್ಲಿ ಮನುಷ್ಯ ಹೆಚ್ಚೆಚ್ಚು ಸ್ವಾರ್ಥಿಗಳಾಗಿ ವರ್ತಿಸುವವನಾಗುತ್ತಿದ್ದಾನೆ. ತನ್ನ ಸಮಸ್ಯೆಯೇ ಅತ್ಯಂತ ಸೂಕ್ಶ್ಮವಾದದ್ದು, ಬೇರೆಯವರ ಸಮಸ್ಯೆಗಳಿಗೆ ಸ್ಪಂದಿಸಲು ಸಮಯವೇ ಇಲ್ಲ ಎಂದು ಭಾವಿಸುವ ಮನೋಭಾವ ಬೆಳೆಸಿಕೊಂಡಿದ್ದಾನೆ. ಅತಿಯಾದ ಯೋಚನೆ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ . ಆದ್ದರಿಂದ , ವಿದ್ಯಾರ್ಥಿಗಳು ತಮ್ಮ ಕುಟುಂಬದ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯಬೇಕು. ಇಂತಹ ತರಬೇತಿ ಕೇಂದ್ರವು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಹೆಚ್ಚು ಪೂರಕವಾಗುತ್ತದೆ ಎಂದು ಹೇಳಿದರು.
ನೂತನವಾಗಿ ಉದ್ಘಾಟನೆಗೊಂಡ ಆಳ್ವಾಸ್ ವೆಲ್‌ನೆಸ್ ತರಬೇತಿ ಕೇಂದ್ರದಲ್ಲಿ ಓದಿನ ಮೂಲಕ ಚಿಕಿತ್ಸೆ, ಮಂಡಲ ಕಲಾ ಚಿಕಿತ್ಸೆ ಮತ್ತು ಸಂಗೀತ ಕಲಾ ಚಿಕಿತ್ಸಾ ಕ್ರಮವಿಧಾನಗಳಿವೆ .ಈ ಕೇಂದ್ರವು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಲು ಮತ್ತು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಉತ್ತಮ ಸಮುದಾಯವನ್ನು ಬೆಳೆಸುವ ಗುರಿಯನ್ನು ಹೊಂದಿದೆ ಎಂದರು.
ಆಳ್ವಾಸ್ ವೆಲ್‌ನೆಸ್ ತರಬೇತಿ ಕೇಂದ್ರದ ನಿರ್ದೇಶಕಿ ಡಾ ದೀಪಾ ಕೊಠಾರಿ, ಆಳ್ವಾಸ್ ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಡಾ ಮೂಕಾಂಬಿಕಾ ಜಿ ಎಸ್, ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ ಆಡ್ರಿ ಪಿಂಟೋ, ಕಾಲೇಜಿನ ಕುಲಸಚಿವ (ಮೌಲ್ಯ ಮಾಪನ) ನಾರಾಯಣ ಶೆಟ್ಟಿ, ವಿವಿಧ ವಿಭಾಗದ ವಿದ್ಯಾರ್ಥಿ ಪ್ರತಿನಿಧಿಗಳು ಭಾಗಿಯಾಗಿದ್ದರು. ಸಮಾಜಕಾರ್ಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ ಸ್ವಪ್ನಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ