ಉಜಿರೆ: ದಶಮಾನೋತ್ಸವದ ಸಂಭ್ರಮದಲ್ಲಿರುವ ಯಕ್ಷ ಭಾರತಿ (ರಿ) ಕನ್ಯಾಡಿ ಹಾಗೂ ತುಳು-ಶಿವಳ್ಳಿ ಸಭಾ (ರಿ) ಬೆಳ್ತಂಗಡಿ, ಆಶ್ರಯದಲ್ಲಿ ಶ್ರೀ. ಧ. ಮಂ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಮತ್ತು ಇತರ ಸಂಘ ಗಣಗಳಾದ ರೋಟರಿ ಕ್ಲಬ್ ಬೆಳ್ತಂಗಡಿ, ಗ್ರಾಮ ಪಂಚಾಯತು ಧರ್ಮಸ್ಥಳ, ಪ್ರಾ. ಕೃ. ಪ.ಸ ಸಂಘ (ನಿ) ಧರ್ಮಸ್ಥಳ, ಜನಾರ್ಧನ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ, ಉಜಿರೆ ಇವುಗಳ ಸಹಯೋಗದಲ್ಲಿ ಶ್ರೀ ಕೃಷ್ಣ ಆಸ್ಪತ್ರೆ, ಕಕ್ಕಿಂಜೆ, ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಜುಲೈಕಾ ಯೆನಪೋಯ ಕ್ಯಾನ್ಸರ್ ಆಸ್ಪತ್ರೆ, ದೇರಳಕಟ್ಟೆ ಇದರ ಸಹಕಾರದಲ್ಲಿ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವು ಇಂದು (ಅಕ್ಟೋಬರ್ 13) ಬೆಳಗ್ಗೆ ಹರಿಹರಾನುಗ್ರಹ ಕಲ್ಯಾಣ ಮಂಟಪ ಕನ್ಯಾಡಿ-11 ಇಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಉಜಿರೆಯ ಲಕ್ಷ್ಮೀ ಗ್ರೂಪ್ಸ್ ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಮಾತನಾಡಿದರು. ದೀಪ ಬೆಳಗುವ ಮೂಲಕ ಶಿಬರಕ್ಕೆ ಚಾಲನೆ ನೀಡಿದ ಅವರು ಆರೋಗ್ಯವೇ ಭಾಗ್ಯ ಎಂದು ಹೇಳಿದರು. ಹಸಿದವನಿಗೆ ಮಾತ್ರ ಅನ್ನದ ಬೆಲೆ, ಮಹತ್ವ ತಿಳಿದಿರಲು ಸಾಧ್ಯ, ಅದೇ ರೀತಿ ಯಾರು ಕಷ್ಟಗಳನ್ನು ಎದುರಿರುತ್ತಾರೆಯೋ ಅವರು ಮಾತ್ರ ಇತರರ ಕಷ್ಟಗಳಲ್ಲಿ ಜೊತೆಯಾಗಿ ಸಹಾಯ ಹಸ್ತ ಚಾಚಲು ಮುಂದೆಬರುತ್ತಾರೆ.
ಇಂತಹ ಆರೋಗ್ಯ ಶಿಬಿರಗಳು ಹಲವರಿಗೆ ಸಹಕಾರಿಯಾಗಲಿದೆ. ಆರೋಗ್ಯ ಸೌಲಭ್ಯಗಳು ಸಿಗದೇ ಇರುವ ಅದೆಷ್ಟೋ ಮಂದಿ ನಮ್ಮ ನಡುವೆ ಇರಬಹುದು. ಅವರಿಗೆ ಈ ಆರೋಗ್ಯ ಶಿಬಿರವು ಸಹಾಯಕವಾಗಲಿ. ಶಿಬಿರದ ಅನುಕೂಲ ಎಲ್ಲರೂ ಪಡೆಯುವಂತೆ ಆಗಲಿ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿ ಯಕ್ಷ ಭಾರತಿ(ರಿ) ಇದರ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ ಮಾತನಾಡಿದರು. ಸಮಾಜ ಸೇವೆಗೆ ಒಂದು ಉತ್ತಮ ಉದಾಹರಣೆ ಎಂದರೆ ಅದು ಮುರಳಿ ಕೃಷ್ಣ ಇರ್ವತ್ರಾಯ ಅವರು. ಅವರನ್ನು ಕಂಡು ಸಮಾಜ ಸೇವೆಗೆ ಮಾಡುವುದಕ್ಕೆ ನಾವುಗಳು ಪ್ರೇರಿತರಾಗಬೇಕು ಎಂದು ಹೇಳಿದರು.
ರಾ. ಸೇ. ಯೋಜನಾ ಘಟಕದ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್ ಮಾತನಾಡುತ್ತಾ, ದಶಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಯಕ್ಷ ಭಾರತೀ (ರಿ) ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಮುಂದೆ ಇವರಿಂದ ಇನ್ನೂ ಹಲವಾರು ಇಂತಹ ಆರೋಗ್ಯ ತಪಾಸಣಾ ಶಿಬಿರಗಳು ನಮ್ಮ ಸುತ್ತು ಮುತ್ತಲಿನ ಪ್ರದೇಶಗಳಲ್ಲಿ ನಡೆದು ಜನರಿಗೆ ಸಹಕಾರಿಯಾಗಿ ಉತ್ತಮ ರೀತಿಯಲ್ಲಿ ಈ ತಂಡ ಶತಮಾನೋತ್ಸವ ವನ್ನೂ ಕೂಡ ಆಚರಿಸುವಂತೆ ಆಗಿಲಿ ಎಂದು ಶುಭನುಡಿಗಳನ್ನಾಡಿದರು.
ಡಾ.ಮುರಳಿ ಕೃಷ್ಣ ಇರ್ವತ್ರಾಯ, ವೈದ್ಯಕೀಯ ನಿರ್ದೇಶಕರು, ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ, ಧರ್ಮಸ್ಥಳ ಗ್ರಾಮ ಪಂಚಾಯತು ಅಧ್ಯಕ್ಷೆ ವಿಮಲಾ, ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಲ.ದೇವರಾಜ್ ಶೆಟ್ಟಿ ಹಿಬರೋಡಿ, ಪ್ರಾ. ಕೃ. ಪ.ಸ ಸಂಘ (ನಿ) ಧರ್ಮಸ್ಥಳ ಇದರ ಅಧ್ಯಕ್ಷ ಪ್ರೀತಂ ಡಿ, ಪ್ರಾ. ಕೃ. ಪ.ಸ ಸಂಘ (ನಿ) ಮುಂಡಾಜೆ ಇದರ ಅಧ್ಯಕ್ಷ ಜನಾರ್ಧನ ಗೌಡ, ಶ್ರೀ ಜನಾರ್ಧನ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟ್ ಉಜಿರೆ ಇದರ ಅಧ್ಯಕ್ಷ ಗಂಗಾಧರ ರಾವ್ ಕೇವುಡೇಲು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುರಳಿ ಕೃಷ್ಣ ಆಚಾರ್ಯ ನಿರೂಪಿಸಿ ವಿದ್ಯಾ ಕುಮಾರ್ ಸ್ವಾಗತಿಸಿದರು.
ಸುಮಾರು 200ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣಾ ಶಿಬಿರದಿಂದ ಪ್ರಯೋಜನವನ್ನು ಪಡೆದುಕೊಂಡರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ