ಗುಬ್ಬಿ ವೀರಣ್ಣನವರ ಕಂಪನಿ, ನಂತರ ಚಾಮುಂಡೇಶ್ವರಿ ಕಂಪನಿ, ಎಡತೊರೆ ರಾಮಶೆಟ್ಟಿ ಕಂಪನಿ, ನಂತರ ಕನ್ನಡ ಚಿತ್ರರಂಗದಲ್ಲಿ ಸುಮಾರು 534 ಚಿತ್ರಗಳಲ್ಲಿ ಅಭಿನಯಿಸಿರುವ ಟಿ.ಎನ್.ಬಾಲಕೃಷ್ಣ ಅವರ ತಂದೆ-ತಾಯಿ, ದಿನಗೂಲಿಗಳು. ಭತ್ತ ಕುಟ್ಟೋ ಕೆಲಸ. ಅರಸೀಕೆರೆ ರೈಲ್ವೆ ಸ್ಟೇಷನ್ ಬಳಿ ಗುಡಿಸಲು ವಾಸ. ಬಾಲಣ್ಣ 2 ವರ್ಷದ ಮಗು. ಕಾಹಿಲೆಯ ಗಂಡನ್ನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲು, ಇವರ ಅಮ್ಮ, ಹಾಲು ಮಾರುವವಳಿಗೆ ಬಾಲಣ್ಣನ್ನ 8.ರೂಗೆ ಮಾರಿದ್ರು. 12ನೇ ವಯಸ್ಸಿಗೆ ನಾಟಕರಂಗ. ಲೋಯರ್ ಸೆಕಂಡರೀಲಿ ಎರಡು ಬಾರಿ ಡುಮ್ಕಿ. 12ನೇ ವರ್ಷದಲ್ಲಿ ಇದ್ದಕ್ಕಿದ್ದಂತೆ ಕಿವಿ ಕೇಳಿಸದ ಹಾಗಾಯ್ತು. ಅರಸೀಕೆರೆಗೆ ಬಂದ ಕಂಪನಿ ನಾಟಕಗಳನ್ನು ಚಾಪೆ ಸಂದೀಲಿ ನುಸಿದು, ನಾಟಕ ನೋಡಿ ಪಾತ್ರ ಕಲಿತರು. ಅರಸೀಕೆರೇಲಿ ನಾಟಕ ಕಂಪನಿಯ ಬೋರ್ಡು ಬರೀತಾ ಬೀದಿ ಬೀದೀಲಿ ಬೋರ್ಡ್ ಕಟ್ತಿದ್ರು. ಪಾರ್ಟು ನೋಡಿ ನೋಡಿ, ತುಟಿ ಚಲನೆ ಮೇಲೆ ಮಾತಾಡೋದು, ಪಾರ್ಟು ಮಾಡೋದು ಕಲಿತರು. 16 ವರ್ಷ ರಂಗಭೂಮೀಲೆ ಸೇವೆ ಮಾಡಿದ್ರು. ಸ್ವಲ್ಪ ಹುಷಾರಾಗಿದ್ರೆ, ಕಿವಿ ಕೇಳಿಸದಿದ್ರೂ, ಕಿವಿ ಕೇಳಿಸುವರಿಗಿಂತ ಚೆನ್ನಾಗಿ ಅಭಿನಯಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿ ಬಾಲಕೃಷ್ಣ.
ನಾನು ಚಿಕ್ಕಂದಿನಿಂದ ಗಮನಿಸುತ್ತಾ ಬಂದಿರುವಂತೆ ರಂಗಭೂಮಿಯಲ್ಲಿ ನೇರವಾಗಿ ಸತತವಾಗಿ ಆರಂಭದಿAದ ಮುಕ್ತಾಯವರೆಗೆ ನಾಟಕಗಳನ್ನಾಡುವಾಗ ಅಥವಾ ಚಲನಚಿತ್ರದ ಶೂಟಿಂಗ್‌ನಲ್ಲಿ ಇತರ ಕಲಾವಿದರೊಂದಿಗೆ ಭಾಗವಹಿಸುವಾಗ, ಜೊತೆಯ ಕಲಾವಿದರು ಆಡುವ ಸಂಭಾಷಣೆಯ ಪ್ರತಿ ಶಬ್ಧ, ಮುಖ್ಯವಾಗಿ ಅವರ ಮಾತಿನ ಮುಕ್ತಾಯದ ಶಬ್ಧ ಇವರ ಕಿವಿಗೆ ಸ್ಪಷ್ಟವಾಗಿ ಕೇಳಿಸಲೇಬೇಕು.
ನಾನು ನನ್ನ 7ನೇ ವರ್ಷದಿಂದ ರೇಡಿಯೋ ಮೂಲಕ ಹಾಗೂ ರಂಗಭೂಮಿಯ ಮೇಲೆ ಸಾವಿರಾರು ನಾಟಕಗಳಲ್ಲಿ ಅಭಿನಯಿಸಿರುವುದರಿಂದ, ಅಲ್ಲದೇ ನಾನೇ ನಾಟಕಕಾರನಾಗಿ, ನಿರ್ದೇಶಕನಾಗಿ ಹಾಗೂ ಸಾವಿರಾರು ನಾಟಕಗಳ ಪ್ರೇಕ್ಷಕನಾಗಿ ಈ ಬಗ್ಗೆ ಚೆನ್ನಾಗಿ ಅರಿತಿದ್ದೇನೆ ಹಾಗೂ ಅನುಭವ ಹೊಂದಿದ್ದೇನೆ. ಈ ಕಲಾವಿದ ಸುಮಾರು 534 ಚಲನಚಿತ್ರಗಳಲ್ಲಿ ನರಸಿಂಹರಾಜುರವರೊಂದಿಗೆ ಹಾಸ್ಯಪಾತ್ರಗಳಲ್ಲಿ, ರಾಜಕುಮಾರರೊಂದಿಗೆ ಪೋಷಕ ಹಾಗೂ ಖಳನಾಯಕನ ಪಾತ್ರದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ, ಸಂಪೂರ್ಣ ತಲ್ಲೀನತೆಯಿಂದ ಅಭಿನಯಿಸಬೇಕಾದರೆ, ಇತರ ಪಾತ್ರಗಳ ತುಟಿಯ ಚಲನವಲನ ಹಾಗೂ ದೇಹದ ಚಲನವಲನದಿಂದ ಅವರ ಮಾತುಗಳನ್ನು ಗಮನಿಸಿ, ಅದಕ್ಕೆ ತನ್ನ ಮುಖಾಭಿನಯ ಹಾಗೂ ನಂತರದ ಡಬ್ಬಿಂಗ್‌ನಲ್ಲಿ ತನ್ನ ಪಾತ್ರಕ್ಕೆ ತಾನೇ ತನ್ನ ಸಂಭಾಷಣೆಯನ್ನೂ ಜೋಡಿಸುವಾಗ, ಅನುಭವದಿಂದ ಪಡೆದಿದ್ದ ಆ ಕಲಾಚಾರ್ತುಯಕ್ಕೆ ನಾನು ನೂರು ಬಾರಿ ನಮಿಸುತ್ತೇನೆ.
ಅವರ ಅಂತಿಮ ದಿನಗಳಲ್ಲಿ ಶಿವಮೊಗ್ಗದಲ್ಲಿ ನಾನು ಹಾಗೂ ನನ್ನ ತಂದೆ ಎನ್.ಎಸ್. ವಾಮನ್ ಭದ್ರಾವತಿ ಆಕಾಶವಾಣಿಗಾಗಿ ಇವರನ್ನು ಸಂದರ್ಶಿಸಿದಾಗ, ಚೀಟಿಗಳಲ್ಲಿ ನಾವು ಬರೆದು ತೋರಿಸಿದ ಪ್ರಶ್ನೆಗಳಿಗೆ ಅವರು ನೀಡಿದ ದಿಢೀರ್ ಉತ್ತರಗಳು ನಮಗೆ ಅವರ ಬಗ್ಗೆ ಅಪಾರ ಅಭಿಮಾನ ಹೆಚ್ಚಿಸಿತು.
ಬಹಳ ಹಿಂದೆ ಕನ್ನಡಕ್ಕಾಗಿ ಕೇಂಗೇರಿ ಬಳಿ ಅಭಿಮಾನ್ ಸ್ಟೂಡಿಯೋ ಸ್ಥಾಪಿಸಲು ಪ್ರತಿ ಕನ್ನಡಿಗನಿಂದ ತಲಾ ಒಂದು ರೂಪಾಯಿ ಸಂಗ್ರಹಿಸುವ ಪ್ರಯತ್ನದಲ್ಲಿ ನನ್ನ ತಂದೆಯವರ ಅಪಾರ ಸಹಕಾರವೂ ಸೇರಿತ್ತು ಎಂಬುದು ನನ್ನ ಅಭಿಮಾನದ ವಿಷಯ.
ಸ್ವಯಂಗುರು ಇವರ ಅಚ್ಚು ಮೆಚ್ಚಿನ ಪಾತ್ರ. 'ಅಕ್ಕಮಹಾದೇವಿ' ನಾಟಕದಲ್ಲಿ ಮುದುಕಿ ಪಾತ್ರ, ಕುರುಕ್ಷೇತ್ರದಲ್ಲಿ ಶಕುನಿ ಪಾತ್ರ, ಗುಬ್ಬಿ ಕಂಪನೀಲಿ ಬಾಲಣ್ಣ ಮೆಚ್ಚಿದ ಪಾತ್ರಧಾರಿಗಳೂಂದ್ರೆ, ಹಾಡುಗಾರಿಕೇಲಿ ಸುಬ್ಬರಾಯ್ರು, ಹಾಸ್ಯ ಪಾತ್ರದಲ್ಲಿ ಮಹಾಬಲರಾಯ್ರು, ಖಳನಾಯಕನ ಪಾತ್ರದಲ್ಲಿ ಬೇಲೂರು ರಾಘವೇಂದ್ರರಾವ್, ಗುಬ್ಬಿ ಕಂಪನಿ, ಚಾಮುಂಡೇಶ್ವರಿ ಕಂಪನಿ, ಎಡತೊರೆ ರಾಮಶೆಟ್ಟಿ ಕಂಪನಿ ಹೀಗೆ ಸರ್ವಿಸ್ ಆಯ್ತು. ಸ್ವಂತ ನಾಟಕ ಕಂಪನಿ ಮಾಡಬೇಕು ಅಂತ ಬಯಕೆ ಇತ್ತು.ಇವರು ಹಲವಾರು ಚಿತ್ರಗಳ ಕಥೆ, ಸಂಭಾಷಣೆ ಬರೆದು, ಅಭಿನಯಿಸಿದ್ದಾರೆ. ಪಾತ್ರಗಳ ಮುಖಭಾವ ಬಂದಾಗ ಮಾತು ಬರಬಾರದು, ಮಾತು ಬಂದಾಗ ಮುಖಭಾವ ಬರಬಾರದು ವಿಂಗಡಣೆ ಇದ್ರೆ ಕ್ಲಿಕ್ ಆಗುತ್ತೆ. ಎಂದು ಇವರು ಆಗಾಗ ಹೇಳುತ್ತಿದ್ದರು. 1965-70ರ ದಶಕದಲ್ಲಿ ಸುಳ್ಯದ ದೇಸಾಯಿ ಕಂಪನಿಯವರು, ಕಿತ್ತೂರು ಚೆನ್ನಮ್ಮ ನಾಟಕಕ್ಕಾಗಿ ಆನೆ, ಕುದುರೆ, ಯುದ್ಧದ ದೃಶ್ಯ ರಂಗದ ಮೇಲೆ ವೈಭವಯುತವಾಗಿ ತಂದರು. ಕನ್ನಡ ಥಿಯೇಟರ್ಸ್ ನಾಟಕ ಕಂಪನಿಯಲ್ಲಿ, 'ರಾಜಾವಿಕ್ರಮ' ನಾಟಕದಲ್ಲಿ ಶ್ರೀಕಂಠಮೂರ್ತಿ ಅವರ ವಿಕ್ರಮನ ಪಾತ್ರದ ಮಾತುಗಾರಿಕೆ ಹಾಡುಗಾರಿಕೆ, ಜನಪ್ರಿಯವಾಗಿತ್ತು. ಹಂಸ ರತ್ನದ ಸರ ನುಂಗುವುದು, ಕೈ ಕಾಲು ಕಡಿಯಲ್ಪಟ್ಟಿ ವಿಕ್ರಮನ ಕೈ ಕಾಲು ಬರುವುದು, ಗಾಣದ ಮೇಲೆ ಕೂತು ಹಾಡಿದಾಗ ಸಾವಿರಾರು ದೀಪ ಹತ್ತುವುದು, ಮುಂತಾದ ಟ್ರಿಕ್ ಶಾಟ್ಸ್, ಜನರಿಗೆ ಹುಚ್ಚು ಹಿಡಿಸುತ್ತಿತ್ತು.
1958ರಲ್ಲಿ ಪ್ರವಾಹ ಪರಿಹಾರ ನಿಧಿಗಾಗಿ, 1954ರಲ್ಲಿ ಆರಂಭವಾಗಿದ್ದ ಕನ್ನಡ ಕಲಾವಿದರ ಸಂಘದ ಮೂಲಕ, ನಾಡಿನಾದ್ಯಂತ 'ಸಾಹುಕಾರ', 'ಬೇಡರ ಕಣ್ಣಪ್ಪ', 'ಎಚ್ಚಮ ನಾಯಕ' ನಾಟಕಗಳು ಜನರ ಮನಸೊರೆಗೊಂಡವು. ಖ್ಯಾತ ಚಲನಚಿತ್ರ ನಿರ್ದೇಶಕ ಜೋಡಿ ದೊರೆ ಭಗವಾನ್ ಇವರಲ್ಲಿ ಎಸ್.ಕೆ.ಭಗವಾನ್ ಸ್ಮರಿಸಿರುವಂತೆ ಈ ನಾಟಕಗಳ ರಂಗ ಪ್ರದರ್ಶನಕ್ಕೆ ನನ್ನ ತಂದೆ ಎನ್.ಎಸ್.ವಾಮನ್ ಮಾರ್ಗದರ್ಶನ ನೀಡಿದ್ದರು. 'ಸಾಹುಕಾರ' ನಾಟಕದಲ್ಲಿ ನಾಯಕನಾಗಿ ರಾಜಕುಮಾರ್, ಜಿಪುಣ ಸಾಹುಕಾರನಾಗಿ ಜಿ.ವಿ.ಅಯ್ಯರ್, ಕರಣಿಕರಾಗಿ ಬಾಲಕೃಷ್ಣ, ನರಸಿಂಹರಾಜು ಅಭಿನಯಿಸುತ್ತಿದ್ದರು. ಒಂದು ದೃಶ್ಯದಲ್ಲಿ ಊಟ-ಶಬ್ದ ಕೇಳಿದೊಡನೆ, ಮೈ ಮೇಲಿದ್ದ 5-6 set ಬಟ್ಟೆ, ಸರಸರನೆ ಕಳಚಿ ಓಡುತ್ತಿದ್ದ ನರಸಿಂಹರಾಜು ಅಭಿನಯ, ನಗೆ ಚೆಲ್ಲಿಸುತ್ತಿತ್ತು. 'ಬೇಡರ ಕಣ್ಣಪ್ಪ' ನಾಟಕದಲ್ಲಿ ಕಣ್ಣಪ್ಪನಾಗಿ ರಾಜ್, ಕಳ್ಳ ಪೂಜಾರಿಯಾಗಿ ಜಿ.ವಿ.ಅಯ್ಯರ್, ಅವರ ಮಗ ಕಾಶಿಯಾಗಿ ನರಸಿಂಹರಾಜು, ಈಶ್ವರನಾಗಿ ಕೆ.ಎಸ್.ಅಶ್ವಥ್ ಅವರ ಅಭಿನಯ ಮನೆಮಾತಾಯಿತು. 'ಎಚ್ಚಮ ನಾಯಕ' ಕೆ.ಹಿರಣ್ಣಯ್ಯ ಅವರ ದೇಶ ಪ್ರೇಮದ ಹಿನ್ನಲೆಯ ಐತಿಹಾಸಿಕ ನಾಟಿಕ. ಎಚ್ಚಮ ನಾಯಕನಾಗಿ ರಾಜ್, ಚಾಂದ್ ಖಾನ್ ಆಗಿ ಅಯ್ಯರ್, ಬಾದಶಹನಾಗಿ ವೀರಭದ್ರಯ್ಯ ಉಸ್ಮಾನ್ ಆಗಿ ಕೆ.ಎಸ್.ಅಶ್ವಥ್, ಸಿದ್ದಾಂತಿಯಾಗಿ ಬಾಲಕೃಷ್ಣ, ಶಾಸ್ತಿçಯಾಗಿ ನರಸಿಂಹರಾಜು, ಮೋಹಿನಿಯಾಗಿ ನಾಗರತ್ನಮ್ಮ ಮಿಂಚುತ್ತಿದ್ದರು. ವಿಜಯನಗರದ ಗತವೈಭವದ ಬಗೆಗಿನ 5 ಪುಟಗಳ, “ಅಯಿತು. ಕನ್ನಡಿಗರು ಕೈ ಮುರಿದು ಕುಳಿತರು” ಎಂಬ ಡೈಲಾಗ್, ರಾಜ್ ಅವರ ಬಾಯಿಯಲ್ಲೇ ಕೇಳಬೇಕಿತ್ತು. ಈ ಸಂಭಾಷಣೆಯ ಒಂದು ಭಾಗ ಭಲೇ ಜೋಡಿ ಚಲನಚಿತ್ರದಲ್ಲಿದೆ.
ಬಾಲಕೃಷ್ಣ:-ಟಿ.ಎನ್.ಬಾಲಕೃಷ್ಣ (ಬಾಲಣ್ಣ) - ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂಥ ನಟರಲ್ಲೊಬ್ಬರು. ಇವರು ಕನ್ನಡದ ಜನತೆಯನ್ನು ಹಲವು ದಶಕಗಳ ಕಾಲ ತಮ್ಮ ತೀಕ್ಷ್ಣ ಹಾಗು ನೈಜ ಅಭಿನಯದಿಂದ ರಂಜಿಸಿದ್ದಾರೆ. ಕನ್ನಡ ಚಿತ್ರರಂಗದ ವಲಯದಲ್ಲಿ, ಹಾಗು ಚಿತ್ರಪ್ರೇಮಿಗಳಲ್ಲಿ ಬಾಲಣ್ಣ ಎಂದೇ ಪರಿಚಿತರಾಗಿದ್ದ ಇವರಿಗೆ ಹುಟ್ಟಿನಿಂದಲೇ ಕಿವಿಯು ಸರಿಯಾಗಿ ಕೇಳಿಸುತ್ತಿರಲಿಲ್ಲ.
ಹಿನ್ನೆಲೆ: ಬಾಲಕೃಷ್ಣರ ಜನನ ನವೆಂಬರ್ 2,1916 ರಂದು ಹಾಸನ ಜಲ್ಲೆಯ ಅರಸೀಕೆರೆಯಲ್ಲಿ ಆಯಿತು. ಇವರ ತಂದೆ ತಾಯಿಯರು ದಿನಗೂಲಿಯಲ್ಲಿ ಜೀವಿಸುತಿದ್ದರು. ಈ ಶ್ರಮಜೀವಿಗಳಿಗೆ ಒಬ್ಬನೇ ಮಗ ಬಾಲಕೃಷ್ಣ. ಇದ್ದಕ್ಕಿದ್ದಂತೆ ತಂದೆಯು ಕಾಯಿಲೆ ತೀವ್ರ ಸ್ವರೂಪ ಪಡೆದಾಗ ತಾಯಿ ಕಂಡ ಕಂಡಲ್ಲಿ ಬಿಕ್ಷೆ ಬೇಡಿ ಹಣ ಹೊಂದಿಸಲು ಶ್ರಮ ಪಟ್ಟಳು, ಅದೂ ಸಾಲದಾದಾಗ ಬೇರೆ ದಾರಿ ಕಾಣದೆ ಅರಸೀಕೆರೆಯ ಮಂಡಿ ವ್ಯಾಪಾರಿಯ ಉಪ ಪತ್ನಿಗೆ ಮಗು ಬಾಲಕೃಷ್ಣನನ್ನು ಎಂಟು ರೂಪಾಯಿಗೆ ಮಾರಿದಳು. ಆ ಸಾಕು ತಾಯಿ ಬಾಲಕನನ್ನು ಅರಸೀಕೆರೆಯ ಶಾಲೆಗೆ ಸೇರಿಸಿದಳು. ಆದರೆ ಎಂಟನೆ ವಯಸ್ಸಿಗೆ ಬಾಲಣ್ಣನ ಶ್ರವಣಶಕ್ತಿ ಸಂಪೂರ್ಣ ಮಾಯವಾಯಿತು. ಕಲಿಕೆ ಕಷ್ಟವಾಯಿತು. ಲೋಯರ್ ಸೆಕಂಡರಿ ದಾಟುವುದೇ ಕಷ್ಟವಾದಾಗ ಕಲೆಯ ಕಡೆಗೆ ಆಸಕ್ತಿ ಹೊರಳಿತು. ಸ್ನೇಹಿತರ ಜೊತೆಗೂಡಿ ನಾಟಕವಾಡುವ ಹವ್ಯಾಸ ಬಲವಾಯಿತು. ಒಮ್ಮೆ ಸಾಕು ತಂದೆಯ ಜೇಬಿನಿಂದ ದುಡ್ಡು ಕದ್ದು ಸಿಕ್ಕಿ ಬಿದ್ದಾಗ ಸಾಕು ತಾಯಿ ಮನೆಯಿಂದಲೇ ದೂರ ಕಳುಹಿಸಿದಳು. ಅಲ್ಲಿಗೆ ಇದ್ದ ಮನೆಯ ಋಣ ತೀರಿತು. ಜಗತ್ತೇ ಮನೆಯಾಯಿತು. ನಾಟಕ ಕಂಪೆನಿಯ ಗೇಟು ಕಾಯುವುದು, ಬೋರ್ಡು ಬರೆಯುವುದು, ಪೋಸ್ಟರ್ ಅಂಟಿಸುವುದು... ಹೀಗೆ ಆರಂಭವಾದ ಇವರ ವೃತ್ತಿಜೀವನ ಮುಂದೆ ರಂಗಭೂಮಿಯ ನಟನೆಗೆ ತಿರುಗಿತು. ’ಕೃಷ್ಣಲೀಲಾ’ ಇವರು ಅಭಿನಯಿಸಿದ ಮೊದಲ ನಾಟಕ. ಚಾಮುಂಡೇಶ್ವರಿ, ಗುಬ್ಬಿ ಕಂಪೆನಿಗಳಲ್ಲಿ ಅಭಿನಯಿಸಿದ್ದ ಬಾಲಣ್ಣ ನೀಲಾಂಜನೆ, ಚಿತ್ರಾಂಗದೆ ಮುಂತಾದ 50 ನಾಟಕಗಳನ್ನು ಬರೆದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಬಾಲಕೃಷ್ಣ: ವರ್ಷ 1943 ರಲ್ಲಿ ರಾಧಾರಮಣ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು ಸುಮಾರು 510 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಸ್ಯ ನಟ, ಖಳ ನಟ, ಪೋಷಕ ನಟ ..-ಹೀಗೆ ಎಲ್ಲ ಬಗೆಯ ಪಾತ್ರಗಳಲ್ಲೂ ನಟಿಸಿ ಸೈ ಅನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಚಿರಸ್ಮರಣೀಯ. ಕಣ್ತೆರೆದು ನೋಡು, ಬಂಗಾರದ ಮನುಷ್ಯ, ತ್ರಿಮೂರ್ತಿ, ಸಂಪತ್ತಿಗೆ ಸವಾಲ್, ಗಂಧದ ಗುಡಿ, ಭಾಗ್ಯದ ಲಕ್ಷ್ಮಿ ಬಾರಮ್ಮ ಇವರು ಅಭಿನಯಿಸಿದ ಕೆಲವು ಪ್ರಮುಖ ಚಿತ್ರಗಳು. ಯಮಕಿಂಕರ ಅವರ ಅಭಿನಯದ ಕೊನೆಯ ಚಿತ್ರ. ಪರ ಭಾಷೆಯ ಸ್ಟುಡಿಯೋದವರು ಕನ್ನಡ ಚಿತ್ರಗಳ ಬಗ್ಗೆ ತೋರಿಸುವ ನಿರ್ಲಕ್ಷ ಅರಿತಿದ್ದ ಬಾಲಣ್ಣ ತಾವೇ ಸ್ವಂತ ಸ್ಟುಡಿಯೋ ನಿರ್ಮಿಸುವ ಸಂಕಲ್ಪ ಮಾಡಿದರು. ಕನ್ನಡಿಗರ ಅಭಿಮಾನದ ಸಾಕಾರವಾಗಲಿ ಎಂದು ಅದಕ್ಕೆ "ಅಭಿಮಾನ್"ಎಂದು ಹೆಸರಿಟ್ಟರು.
ರಾಧಾ ರಮಣ ಎಂ.ವಿ.ರಾಜಮ್ಮ, ಜಿದ್ದು ಟೈಗರ್ ಪ್ರಭಾಕರ್, ಜಯಮಾಲಾ, ಸಂಪತ್ತಿಗೆ ಸವಾಲ್‌ಡಾ.ರಾಜ್ ಕುಮಾರ್, ರಾಜಾ ಶಂಕರ್, ಮಂಜುಳ, ಜೋಕರ್ ಶ್ಯಾಮ್, ವಜ್ರಮುನಿ, ಗಲಾಟೆ ಸಂಸಾರ ಡಾ.ವಿಷ್ಣುವರ್ಧನ್, ಮಂಜುಳ, ರಜನೀಕಾಂತ್, ಶುಭಾ, ದ್ವಾರಕೀಶ್, ಬಂಗಾರದ ಮನುಷ್ಯ ಡಾ.ರಾಜ್ ಕುಮಾರ್, ಭಾರತಿ, ಶ್ರೀನಾಥ್, ವಜ್ರಮುನಿ, ಆದ್ವಾನಿ ಲಕ್ಷ್ಮೀದೇವಿ, ಲೋಕನಾಥ, ಭಟ್ಟಿ ಮಹಾದೇವಪ್ಪ, ಎಂ.ಪಿ.ಶಂಕರ್, ಕಣ್ತೆರೆದು ನೋಡು ಡಾ.ರಾಜ್ ಕುಮಾರ್, ಲೀಲಾವತಿ, ಜಿ.ವಿ.ಅಯ್ಯರ್, ರಾಜಾ ನನ್ನ ರಾಜಾ ಡಾ.ರಾಜ್ ಕುಮಾರ್, ಆರತಿ, ಎಡಕಲ್ಲು ಚಂದ್ರಶೇಖರ್, ಉಪಾಸನೆ ಸೀತಾರಾಂ, ಗಂಧದ ಗುಡಿ ಡಾ.ರಾಜ್ ಕುಮಾರ್, ಕಲ್ಪನಾ, ಡಾ.ವಿಷ್ಣುವರ್ಧನ್, ಆದ್ವಾನಿ ಲಕ್ಷ್ಮೀದೇವಿ, ನರಸಿಂಹ ರಾಜು, ಎಂ.ಪಿ.ಶಂಕರ್, ಬಂಗಾರದ ಪಂಜರ ಡಾ.ರಾಜ್ ಕುಮಾರ್, ಆರತಿ, ಅಶ್ವಥ್, ಲೋಕನಾಥ್, ಪಂಢರೀಬಾಯಿ, ಎಂ.ವಿ.ರಾಜಮ್ಮ, ಬೆಂಗಳೂರ್ ನಾಗೇಶ್, ಭಾಗ್ಯದ ಲಕ್ಷ್ಮೀ ಬಾರಮ್ಮ ಡಾ.ರಾಜ್ ಕುಮಾರ್, ಮಾಧವಿ, ಪರ್ವತ ವಾಣಿ, ಶಿವರಾಂ, ಭಕ್ತ ಕುಂಬಾರ ಡಾ.ರಾಜ್ ಕುಮಾರ್, ಲೀಲಾವತಿ, ದ್ವಾರಕೀಶ್, ಎಂ.ಎನ್. ಲಕ್ಷ್ಮೀದೇವಿ, ರಾಜಾಶಂಕರ್, ಮಂಜುಳ, ಸಂತ ತುಕಾರಾಂ ಡಾ.ರಾಜ್ ಕುಮಾರ್, ಲೀಲಾವತಿ ಅವರೊಂದಿಗೆ ಬಾಲಕೃಷ್ಣ ಹಲವು ಚಿತ್ರಗಳಲ್ಲಿ ನಟಿಸಿದ್ದರು.
ನಿರ್ಮಾಪಕರಾಗಿ ಬಾಲಕೃಷ್ಣ ಬಾಲಕೃಷ್ಣ ಅವರು ಕೆಲವು ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದರು. ರಣಧೀರ ಕಂಠೀರವ ಕಲಿತರೂ ಹೆಣ್ಣೇ ಪಂಚರತ್ನ,ಭಕ್ತ ಮಲ್ಲಿಕಾರ್ಜುನ ಚಿತ್ರಗಳಿಗೆ ಹಾಡು, ಸಂಭಾಷಣೆ ಬರೆದಿದ್ದರು.
ಪ್ರಶಸ್ತಿ /ಪುರಸ್ಕಾರಗಳು: 1989 -90 - ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಬಂಗಾರದ ಮನುಷ್ಯ ಚಿತ್ರದ ಅಭಿನಯಕ್ಕೆ ಶ್ರೇಷ್ಠ ಪೋಷಕ ನಟ ಪ್ರಶಸ್ತಿ,
ಬಾಲಕೃಷ್ಣ ಅವರು ಜುಲೈ 19,1996ರಂದು ಕ್ಯಾನ್ಸರ್ ನಿಂದ ನಿಧನರಾದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ