ಸುವರ್ಣ ಸಮ್ಮಿಲನ ಕಾರ್ಯಕ್ರಮದಲ್ಲಿ ‘ಸುವರ್ಣ ಸೇವಾ ರತ್ನ’ ಪ್ರಶಸ್ತಿ ಪ್ರದಾನ

Chandrashekhara Kulamarva
0


ಉಜಿರೆ:
ಉಜಿರೆಯ ಶ್ರೀ ಧ. ಮಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳಿಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ  ಆಯೋಜಿಸಲಾಗಿದ್ದ ‘ಸುವರ್ಣ ಸಮ್ಮಿಲನ - ಇದು ಸುವರ್ಣ ಹೆಜ್ಜೆಗಳ ಅವಲೋಕನ’ ಕಾರ್ಯಕ್ರಮದಲ್ಲಿ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ, 'ಬದುಕು ಕಟ್ಟೋಣ ಬನ್ನಿ' ತಂಡದ ಸಂಚಾಲಕ ಮೋಹನ್ ಕುಮಾರ್ ಹಾಗೂ ಉಡುಪಿಯ ಸಮಾಜಸೇವಕ ರವಿ ಕಟಪಾಡಿ ಅವರನ್ನು ‘ಸುವರ್ಣ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಚದುರಿ ಹೋದ ಹಲವಾರು ಬದುಕುಗಳನ್ನು ಪುನರ್ನಿಮಾಣ ಮಾಡುವ ಜೊತೆ ಹಲವಾರು ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋಹನ್ ಕುಮಾರ್ ತಮ್ಮ ಮುಂದಾಳತ್ವದಲ್ಲಿ ನಡೆದ ಕೊಳಂಬೆ ಗ್ರಾಮದ ಪುನರುಜ್ಜೀವನದ ಕುರಿತು ಪ್ರಸ್ತಾಪಿಸಿದರು. “ಎನ್ ಎಸ್ ಎಸ್ ಎಂದಿಗೂ ನಮ್ಮ ಸೇವೆಯಲ್ಲಿ ಕೈ ಜೋಡಿಸುತ್ತಾ ಬಂದಿರುವುದು ತುಂಬಾ ಖುಷಿ ತರಿಸುವ ಸಂಗತಿ” ಎಂದು ಅವರು ಹೇಳಿದರು.


ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ತನ್ನ ಶರೀರಕ್ಕೆ ಬಣ್ಣ ಹಚ್ಚಿ, ವೇಷ ಧರಿಸಿ ಹಲವಾರು ಅಂಧ ಜೀವ ಮತ್ತು ಬಡ ಮಕ್ಕಳ ಬಾಳಿಗೆ ಬೆಳಕಾಗಿ, ಹೊಸ ಬಣ್ಣ ತುಂಬುತ್ತಿರುವ ರವಿ ಕಟಪಾಡಿ ಮಾತನಾಡಿ, ತಮ್ಮ ಅನುಭವನ್ನು ಹಂಚಿಕೊಂಡರು. “ನಿಜವಾಗಲೂ ನಾವು ಅಂದುಕೊಂಡ ಹಾಗೆ ನಮ್ಮ ಜೀವನ ನಮ್ಮ ಕೈಯಲ್ಲಿಲ್ಲ. ಬಾಲ್ಯದಲ್ಲಿ ಬಹಳ ಬಡತನದಲ್ಲೇ ನಾವು ಬೆಳೆದದ್ದು. ಆದ್ದರಿಂದಲೇ ನಮ್ಮ ವಿದ್ಯಾಭ್ಯಾಸ ಮೊಟಕುಗೊಂಡಿತು. 


ಆದರೂ ಕೂಡ ಯಾವುದೇ ತಪ್ಪು ಹಾದಿಯನ್ನು ತುಳಿಯದೇ ಉತ್ತಮ ರೀತಿಯಲ್ಲೇ ದುಡಿದು ಸಮಾಜಸೇವೆ ಮಾಡಬೇಕು ಎಂಬ ಸಂಸ್ಕಾರ ಕಲಿಸಿದ್ದು ನನ್ನ ತಂದೆ ತಾಯಿ. ಜೀವನದಲ್ಲಿ ತಂದೆ ತಾಯಿಗೆ ನೀಡುವ ಗೌರವ ನಮ್ಮ ಗುರುಗಳಿಗೂ ನೀಡಬೇಕು” ಎಂದು ಅವರು ಹೇಳಿದರು. “ನಾವು ಮಾಡುವ ಕೆಲಸ ನಮ್ಮ ಸೇವೆ ಎಂದಲ್ಲ. ಅದನ್ನು ನಮ್ಮ ಕರ್ತವ್ಯ ಎಂದು ತಿಳಿದುಕೊಳ್ಳಿ” ಎಂದು ಕಿವಿಮಾತು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, “ಮುಂದೆ ಬರುವಂತಹ ಸ್ವಯಂ ಸೇವಕರಿಗೆ ಈ ಸುವರ್ಣ ಸಮ್ಮಿಲನ ಮಾದರಿಯಾಗಿರಲಿ. ಸಮಾಜಮುಖಿ ಚಿಂತನೆ ಮತ್ತು ವಾಸ್ತವ ಬದುಕಿನ ಅರಿವಿಗೆ ಪ್ರಾಯೋಗಿಕ ಅನುಭವದ ಮೂಲಕ ಸೈದ್ಧಾಂತಿಕ ಕಲಿಕೆಯನ್ನು ಉಣಬಡಿಸುವ ಪ್ರಾಮಾಣಿಕ ಯೋಜನೆಯೇ ಎನ್ ಎಸ್ ಎಸ್” ಎಂದರು.


ಸನ್ಮಾನಿತರ ಸೇವೆಗೆ ಸಂಬಂಧಿಸಿದ ‘ಕೊಳಂಬೆ’ ಮತ್ತು ‘ರೈತ ಸಿರಿ’ ಎಂಬ ಶೀರ್ಷಿಕೆಯನ್ನೊಳಗೊಂಡ ಎರಡು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು.


ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಕರ್ನಾಟಕದ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಪ್ರತಾಪ್ ಲಿಂಗಯ್ಯ, ಮಂಗಳೂರು ವಿಶ್ವವಿದ್ಯಾನಿಲಯದ ರಾ. ಸೇ. ಯೋಜನಾ ಸಂಯೋಜಕ ಡಾ. ಶೇಷಪ್ಪ ಉಪಸ್ಥಿತರಿದ್ದರು.


ಕಾಲೇಜಿನ ಎನ್ ಎಸ್ ಎಸ್ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯೋಜನಾಧಿಕಾರಿ ಪ್ರೊ. ದೀಪ ಆರ್. ಪಿ. ವಂದಿಸಿ, ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ನಾಗಣ್ಣ ಡಿ. ಎ. ನಿರೂಪಿಸಿದರು.


 *ವೃಕ್ಷಾರೋಪಣ* 

ಸುವರ್ಣ ಸಂಭ್ರಮದ ನೆನಪಿಗಾಗಿ ಕಾಲೇಜು ಒಳಾಂಗಣದಲ್ಲಿ ಗಿಡ ನೆಡಲಾಯಿತು.


إرسال تعليق

0 تعليقات
إرسال تعليق (0)
To Top