ಆಳ್ವಾಸ್ ಕಾಲೇಜ್ ‘ವಾರ್ಷಿಕ ದಿನಾಚರಣೆ’

Upayuktha
0


ಮೂಡುಬಿದಿರೆ: ಅರೆ ವೈದ್ಯಕೀಯ ರಾಷ್ಟ್ರೀಯ ಆಯೋಗದ ಕರ್ನಾಟಕ ರಾಜ್ಯ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ, ಅರೆ ವೈದ್ಯಕೀಯ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವನ್ನು ಒತ್ತಿ ಹೇಳಿದರು.


ಪ್ರವೇಶಗಳನ್ನು ಪ್ರಮಾಣೀಕರಿಸುವುದು, ಶೈಕ್ಷಣಿಕ ಮತ್ತು ಸೇವಾ ಗುಣಮಟ್ಟವನ್ನು ಖಾತ್ರಿಪಡಿಸುವುದು, ಗರಿಷ್ಠ ದಾಖಲಾತಿಯನ್ನು ನಿರ್ಧರಿಸುವುದು ಹಾಗೂ ಮೂಲಸೌಕರ್ಯಗಳನ್ನು ಭದ್ರಪಡಿಸುವುದರ ಜೊತೆಗೆ  ಪದವಿಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಕೌನ್ಸಿಲ್‌ನಲ್ಲಿ ನೋಂದಣಿಗೆ ಅವಕಾಶ ನೀಡುವುದು  ಇವರ ಪ್ರಮುಖ ಆದ್ಯತೆಗಳಾಗಿವೆ ಎಂದು ತಿಳಿಸಿದರು.  


ಮೂಡುಬಿದಿರೆಯ ಮುಂಡ್ರುದೆಗುತ್ತು ಕೆ ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಬುಧವಾರ ಆಳ್ವಾಸ್ ಕಾಲೇಜ್ ಆಫ್ ಫಿಸಿಯೋಥೆರಪಿ, ಆಳ್ವಾಸ್ ಕಾಲೇಜ್ ಆಫ್ ನರ್ಸಿಂಗ್, ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ಸ್ ಮತ್ತು ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳ  ‘ವಾರ್ಷಿಕ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಅರೆ ವೈದ್ಯಕೀಯ ಕ್ಷೇತ್ರವು ವ್ಯಾಪಕವಾದ ವೃತ್ತಿ ಅವಕಾಶಗಳನ್ನು ಹೊಂದಿದೆ. 51ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಇದು ಒಳಗೊಂಡಿದೆ. ಕಾಲೇಜಿನ ಅವಧಿಯಲ್ಲಿ ಕಲಿಯುವ ತಾಂತ್ರಿಕ ಕೌಶಲ್ಯಗಳು, ಸಂಘಟನಾ ಚತುರತೆ ಹಾಗೂ ಮೌಲ್ಯಗಳನ್ನು ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು.  ವೈದ್ಯಕೀಯೇತರ ಹಿನ್ನೆಲೆಯಿಂದ ಬಂದ ತಾನು ಇಂದು ಎನ್‌ಸಿಎಹೆಚ್‌ನ ಅಧ್ಯಕ್ಷ ಹುದ್ದೆಗೇರಿದ ಅನುಭವವನ್ನು ವಿವರಿಸಿದರು. ಸ್ಪಷ್ಟ ಗುರಿ ಹಾಗೂ ಆ ನಿಟ್ಟಿನಲ್ಲಿ ಪ್ರಯತ್ನ ನಮ್ಮನ್ನು ಯಶಸ್ವಿಯಾಗಲು ಸಹಕರಿಸುತ್ತದೆ ಎಂದು ತಿಳಿಸಿದರು.

   

ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೊ-ಛಾನ್ಸಿಲರ್ ವಿಶಾಲ್ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪೋಷಕರು ಮತ್ತು ಶಿಕ್ಷಕರು ಸೇರಿದಂತೆ ತಮಗೆ ಶಿಕ್ಷಣವನ್ನು ಪಡೆಯಲು ಸಹಕರಿಸಿದವರನ್ನು ಸದಾ  ಸ್ಮರಿಸಬೇಕು.  ಶಿಸ್ತು, ತಾಳ್ಮೆ, ನೈತಿಕತೆ ಹಾಗೂ  ಸಕಾರಾತ್ಮಕ ದೃಷ್ಟಿಕೋನವನ್ನು ಆಳವಡಿಸಿಕೊಂಡಿರಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ಮುಂದೆ ಬರಬೇಕು ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಅರೆ ವೈದ್ಯಕೀಯ  ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಲಭಿಸುವ  ವೃತ್ತಿ ಸಂಬಂದಿತ ಅನನ್ಯತೆಯನ್ನು ವಿವರಿಸಿದರು.


 ತಂತ್ರಜ್ಞಾನ-ಕೇಂದ್ರಿತ ಉದ್ಯೋಗಗಳಿಗಿಂತ ಭಿನ್ನವಾಗಿ,  ಅರೆ ವೈದ್ಯಕೀಯ  ವೃತ್ತಿಯಲ್ಲಿ ವ್ಯಕ್ತಿಗಳೊಂದಿಗೆ ನೇರ ಸಂಪರ್ಕ ಸಾಧಿಸುವ ಮೂಲಕ ಗರಿಷ್ಠ ಉದ್ಯೋಗ ತೃಪ್ತಿಯನ್ನು ಪಡೆಯಲು ಸಾಧ್ಯ ಎಂದರು.   ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡವರು ಪ್ರೀತಿ, ಸಹನೆ, ನಮ್ರತೆ ಮತ್ತು ಸಹಾನುಭೂತಿಯಂತಹ ಗುಣಗಳನ್ನು ಮೈಗೂಡಿಸಿಕೊಂಡಿರಬೇಕು ಎಂದರು.


ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಚರ್ಯ ಡಾ ಬಿಎ ಯತಿಕುಮಾರ ಸ್ವಾಮಿ ಗೌಡ ವಂದಿಸಿ, ಸೌಧ ಕಾರ‍್ಯಕ್ರಮ ನಿರೂಪಿಸಿದರು.  ಆಳ್ವಾಸ್ ಅರೆ ವೈದ್ಯಕೀಯ ಕಾಲೇಜಿನ ವಾರ್ಷಿಕ ಮ್ಯಾಗಜೀನ್  ‘ಸಂಯುಕ್ತ’  ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.  


ಆಳ್ವಾಸ್ ಹೆಲ್ತ್ ಸೆಂಟರ್‌ನ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ ಹನಾ ಶೆಟ್ಟಿ, ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲೆ ಡಾ. ಕ್ಷಮಾ ಶೆಟ್ಟಿ, ಅರೆ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಶಂಕರ ಶೆಟ್ಟಿ, ಆಡಳಿತಾಧಿಕಾರಿ ಹೇಮಂತ್, ಜಿಎನ್‌ಎಮ್ ಕಾಲೇಜಿನ ಇನ್‌ಚಾರ್ಜ ಪ್ರಾಂಶುಪಾಲೆ ಶೈಲಾ ಮೇರಿ ಡಿಸೋಜಾ  ಇದ್ದರು. 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top