- ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಥಕ್ಕರ್ ಫ್ಯಾಮಿಲಿ ಫೌಂಡೇಶನ್ ಸಹಯೋಗದಲ್ಲಿ ಅಡುಗೆ ಮನೆ ಸ್ಥಾಪನೆ
- ಈ ಹೊಸ ಅತ್ಯಾಧುನಿಕ ಅಡುಗೆ ಮನೆಯು ದೇಶದಲ್ಲಿರುವ ಅಕ್ಷಯ ಪಾತ್ರದ 75ನೇ ಅಡುಗೆ ಮನೆಯಾಗಿದೆ. ಈ ಅಡುಗೆ ಮನೆ ಮೂಲಕ 200 ಶಾಲೆಗಳ 35,000 ಮಕ್ಕಳಿಗೆ ಪೌಷ್ಟಿಕ ಮಧ್ಯಾಹ್ನದ ಊಟ ಒದಗಿಸಲಾಗುತ್ತದೆ.
ಬೆಂಗಳೂರು: ಯಲಹಂಕ, ಜಕ್ಕೂರು, ಹೆಬ್ಬಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ 200ಕ್ಕೂ ಹೆಚ್ಚು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಯ 35,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪೌಷ್ಠಿಕ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಉದ್ದೇಶದಿಂದ ಚಿಕ್ಕಜಾಲದಲ್ಲಿ ಅಕ್ಷಯ ಪಾತ್ರ ಫೌಂಡೇಶನ್ (ಟಿಎಪಿಎಫ್) ಹೊಸ ಅತ್ಯಾಧುನಿಕ ಅಡುಗೆ ಮನೆಯನ್ನು ಉದ್ಘಾಟಿಸಿದೆ.
ಥಕ್ಕರ್ ಫ್ಯಾಮಿಲಿ ಫೌಂಡೇಷನ್ ಸಹಯೋಗದಲ್ಲಿ ನಿರ್ಮಾಣವಾಗಿರುವ ಈ ಅಡುಗೆ ಮನೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಇನ್ಫೋಸಿಸ್ ಲಿಮಿಟೆಡ್‌ನ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಅವರು, "ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಪೌಷ್ಠಿಕ ಆಹಾರವನ್ನು ಒದಗಿಸುವ ಅಕ್ಷಯ ಪಾತ್ರದ ಮಹತ್ತರ ಕಾರ್ಯ ಶ್ಲಾಘನೀಯ. ಎಲ್ಲರೂ ಒಟ್ಟಾಗಿ ಸೇರಿದರೆ ಬದುಕನ್ನು ಬದಲಿಸಬಹುದು ಮತ್ತು ಎಲ್ಲರಿಗೂ ಉಜ್ವಲ ಭವಿಷ್ಯ ಒದಗಿಸಬಹುದು. ಈ ಅಡುಗೆ ಮನೆ ಸ್ಥಾಪನೆಗೆ ಸಹಯೋಗ ಒದಗಿಸಿದ ಥಕ್ಕರ್ ಕುಟುಂಬಕ್ಕೆ ಮತ್ತು ಊಟ ಒದಗಿಸುವ ಯೋಜನೆಯ ಶೇ.55-56ರಷ್ಟು ಊಟದ ಖರ್ಚು ಭರಿಸುತ್ತಿರುವ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ" ಎಂದರು.
ಕಂದಾಯ ಸಚಿವ ಕೃಷ್ಣ ಭೈರೇಗೌಡರು, "ನಾರಾಯಣ ಮೂರ್ತಿಯವರು ಮತ್ತು ಜನಾರ್ಧನ ಥಕ್ಕರ್ ಅವರು ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಿರುವುದು ಮೆಚ್ಚುಗೆ ಸಲ್ಲಿಸಲೇಬೇಕಾದ ವಿಚಾರವಾಗಿದೆ. ಮತ್ತಷ್ಟು ಶ್ರೀಮಂತ ವರ್ಗದ ಮಂದಿ ಸಮಾಜಕ್ಕೆ ಸೇವೆ ಸಲ್ಲಿಸಲು ಮುಂದಾಗಲು ಅವರು ಸ್ಫೂರ್ತಿ ನೀಡಿದ್ದಾರೆ" ಎಂದು ಹೇಳಿದರು.
ಅಕ್ಷಯ ಪಾತ್ರ ಫೌಂಡೇಶನ್ ನ ಸಂಸ್ಥಾಪಕ- ಅಧ್ಯಕ್ಷ ಶ್ರೀ ಮಧು ಪಂಡಿತ್ ದಾಸ ಮಾತನಾಡಿ, "ನಮ್ಮ ರಾಜ್ಯದ ಮಕ್ಕಳಿಗೆ ಊಟ ಒದಗಿಸುವ ಅವಕಾಶ ಒದಗಿಸಿದ್ದಕ್ಕೆ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ. ನಾವು ಪ್ರಸ್ತುತ ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ, ಮಂಗಳೂರು ಮತ್ತು ಮೈಸೂರುಗಳಲ್ಲಿರುವ ಒಂಭತ್ತು ಕೇಂದ್ರೀಕೃತ ಅಡುಗೆಮನೆಗಳ ಮೂಲಕ ಆಹಾರವನ್ನು ಒದಗಿಸುತ್ತಿದ್ದೇವೆ" ಎಂದು ಹೇಳಿದರು.
ಬೆಂಗಳೂರಿನ ಚಿಕ್ಕಜಾಲದಲ್ಲಿ ಆರಂಭಗೊಂಡಿರುವ ಅಡುಗೆ ಮನೆಯು ದೇಶದಲ್ಲಿರುವ ಅಕ್ಷಯ ಪಾತ್ರದ 75ನೇ ಕೇಂದ್ರೀಕೃತ ಅಡುಗೆ ಮನೆ ಆಗಿದೆ. ಬೆಂಗಳೂರಿನಲ್ಲಿನ 5ನೇ ಅಡುಗೆ ಮನೆ ಆಗಿದೆ.
ಕಾರ್ಯಕ್ರಮದಲ್ಲಿ ದಾನಿಗಳಾದ ಥಕ್ಕರ್ ಫ್ಯಾಮಿಲಿ ಫೌಂಡೇಶನ್ ನ ಚೇರ್ಮನ್ ಜನಾರ್ದನ್ ಠಕ್ಕರ್, ವೈಸ್ ಚೇರ್ಮನ್ ಲಿಂಡಾ ಥಕ್ಕರ್, ರಿಲಯನ್ಸ್ ಲಿಮಿಟೆಡ್ ನ ಸಿಐಓ ಜ್ಯೋತಿಂದ್ರ ಥಕ್ಕರ್, ಅಕ್ಷಯ ಪಾತ್ರ ಫೌಂಡೇಶನ್ ನ ಸಹ-ಸಂಸ್ಥಾಪಕ ಮತ್ತು ಉಪಾಧ್ಯಕ್ಷ ಚಂಚಲಪತಿ ದಾಸ ಮತ್ತು ಸಿಇಓ ಶ್ರೀಧರ್ ವೆಂಕಟ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

