ರಾಜ್ಯದೊಳಗೆ ಸಿಬಿಐ ಮುಕ್ತ ಪ್ರವೇಶಕ್ಕೆ ಗೇಟ್ ಬಂದ್?

Upayuktha
0


ಭಾರತದ ಒಕ್ಕೂಟ ವ್ಯವಸ್ಥೆಯ ಒಳಗೆ ದಿನಕ್ಕೊಂದು ವಿಶೇಷ ವಿದ್ಯಮಾನ ನಡೆಯುತ್ತಾ ಇದೆ. ಕೇಂದ್ರದ ಸ್ವಾಯತ್ತತೆ ಸಂಸ್ಥೆ ಅನ್ನಿಸಿಕೊಂಡ ಸೆಂಟ್ರಲ್ ಬ್ಯರೇೂ ಆಫ್ ಇನ್ವೆಸ್ಟಿಗೇಶನ್ ಇನ್ನು ಮುಂದೆ ಕರ್ನಾಟಕದ ಗಡಿದಾಟಿ ಒಳಗೆ ಬರಬೇಕಾದರೆ ರಾಜ್ಯ ಸರ್ಕಾರದ ಒಪ್ಪಿಗೆ ಪಡೆದುಕೊಂಡು ಒಳಗೆ ಬರ ಬೇಕು; ತಪ್ಪಿದರೆ ಹೈಕೋರ್ಟ್ ಅಥವಾ ಸುಪ್ರೀಂ ಕೇೂರ್ಟಿನ ಅನುಮತಿ ಪಡೆದುಕೊಂಡು ಯಾವುದೆ ವ್ಯಕ್ತಿ ಅಥವಾ ಸಂಸ್ಥೆಗಳನ್ನು ತನಿಖೆಯ ವ್ಯಾಪ್ತಿಗೆ ಒಳಪಡಿಸಲು ಸಾಧ್ಯ ಅನ್ನುವ ನಿರ್ಬಂಧವನ್ನು ಹೇರುವ ನಿರ್ಧಾರಕ್ಕೆ ಕರ್ನಾಟಕ ಸರಕಾರ ಬಂದಿದೆ. ಈ ಮೊದಲು ಹಾಗಿರಲಿಲ್ಲ. ಸಿಬಿಐ ಮುಕ್ತವಾಗಿ ರಾಜ್ಯದೊಳಗೆ ಪ್ರವೇಶಿಸಿ ಯಾವುದೇ ತಪ್ಪಿತಸ್ಥರನ್ನು ತನಿಖೆಗೆ ಒಳಪಡಿಸುವ ಅವಕಾಶವಿತ್ತು. ಆದರೆ ಈಗ ಅದು ಸಾಧ್ಯವಾಗದು ಅನ್ನುವ ಮಿತಿಯನ್ನು ರಾಜ್ಯ ಸರಕಾರ ಹೇರಿದೆ.ಹಾಗಾದರೆ ಇದು ಇದುವರೆಗೆ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ತೆಗೆದುಕೊಂಡ ನಿರ್ಧಾರವಾ? ಖಂಡಿತವಾಗಿಯೂ ಅಲ್ಲ. ಈಗಾಗಲೆ ಆಂಧ್ರ, ಪಶ್ಚಿಮ ಬಂಗಾಳ ಸರಕಾರ ಈ ಎಚ್ಚರಿಕೆಯ ಗಂಟೆಯನ್ನು ಕೇಂದ್ರ ಸ್ವಾಯತ್ತತೆ ಸಂಸ್ಥೆಗೆ ನೀಡಿವೆ.


ಹಾಗಾದರೆ ಈ ನಿರ್ಬಂಧ ಮತ್ತು ಮುಕ್ತ ಪ್ರವೇಶ ಎಷ್ಟು ಸರಿ ಎಷ್ಟು ತಪ್ಪು ಅನ್ನುವ ಕುರಿತಾಗಿ ಮತ್ತೊಮ್ಮೆ ಚರ್ಚೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂವಿಧಾನಕವಾಗಿ ನೇೂಡಿದರೆ ಭಾರತ ಒಂದು ಒಕ್ಕೂಟ ರಾಜಕೀಯ ವ್ಯವಸ್ಥೆ. ಕಾನೂನುಬದ್ದವಾಗಿ ಒಂದಿಷ್ಟು ಅಧಿಕಾರ ಕೇಂದ್ರ ಸರಕಾರಕ್ಕೂ ಇದೆ. ಹಾಗೇನೆ ರಾಜ್ಯ ಸರ್ಕಾರಗಳಿಗೂ ಇದೆ. ಅದು ಕೂಡಾ ಸಂವಿಧಾನದಲ್ಲಿ ಸ್ವಷ್ಟವಾಗಿ ಮುದ್ರಿಸಲಾಗಿದೆ. ಆದರೂ ಕೂಡಾ ಮೊದಲಿನಿಂದಲೂ ಕೇಂದ್ರ  ಮತ್ತು ರಾಜ್ಯಗಳನಡುವಿನ ಸಂಬಂಧ ಹದಗೇಡುತ್ತಾ ಬಂದಿದೆ. ಅದು ಯಾವಾಗ ಕೇಳಿದರೆ ಕೇಂದ್ರದಲ್ಲಿ ಒಂದು ಪಕ್ಷದ ಸರ್ಕಾರ ಮತ್ತು ರಾಜ್ಯಗಳಲ್ಲಿ ಇನ್ನೊಂದು ಪಕ್ಷಗಳ ಸರ್ಕಾರ ವಿದ್ದಾಗ ಬಹುತೇಕ ಸಂದರ್ಭದಲ್ಲಿ ಇಂತಹ ಸಂಘರ್ಷಗಳನ್ನು ಅನುಭವಿಸುತ್ತಾ ಬಂದಿದ್ದೇವೆ. ಅದು ಸಂವಿಧಾನದ 356ನೇ ವಿಧಿ ಹೇರುವ ಸಂದರ್ಭದಲ್ಲಿ ಇರಬಹುದು, ತೆರಿಗೆ ಹಂಚಿಕೆಯ ಸಂದರ್ಭದಲ್ಲಿ ಇರ ಬಹುದು, ರಾಷ್ಟ್ರೀಯ  ಕಾನೂನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಇರಬಹುದು ಅಥವಾ ಕೇಂದ್ರ ಸ್ವಾಯತ್ತತೆ ಸಂಸ್ಥೆಗಳ ಅಧಿಕಾರ ಚಲಾವಣೆ ಸಂದರ್ಭದಲ್ಲಿ ಇರ ಬಹುದು. ಈ ಎರಡು ಶಕ್ತಿ ಕೇಂದ್ರಗಳ ನಡುವೆ ಸಾಕಷ್ಟು ತಿಕ್ಕಾಟಗಳು ನಡೆದಿದೆ ನಡೆಯುತ್ತಲೇ ಇದೆ.


ಇದೀಗ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮೇಲಿನ "ಮುಡಾ" ಪ್ರಕರಣದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲಿನ ಭೀತಿಯಿಂದಾಗಿ ಸಿಬಿಐ ಸಂಸ್ಥೆಯನ್ನು ರಾಜ್ಯದೊಳಗೆ ನುಸುಳಿ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ತುಂಬಾ ತರಾತುರಿಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಹಾಗಾದರೆ ಕೇಂದ್ರ ಸರ್ಕಾರ ಈ ಸ್ವಾಯತ್ತ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆಯಾ ಅನ್ನುವ ಪ್ರಶ್ನೆ ಮೂಡುವುದು ಸಹಜ. ಇದನ್ನು ಕೂಡಾ ಸಂಪೂರ್ಣ ತಳ್ಳಿ ಹಾಕಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಅದು ಹಲವಾರು ಸಂದರ್ಭದಲ್ಲಿ ಸಾಬೀತು ಆಗಿದೆ. ತನಿಖಾ ದಳ ತನ್ನ ಕೊಡಲಿಯನ್ನು ನಿಷ್ಪಕ್ಷಪಾತವಾಗಿ ಬೀಸಿದ್ದರೆ ಜನರು ಕೂಡಾ ಈ ಸ್ವಾಯತ್ತತೆಯ ಸಂಸ್ಥೆಯನ್ನು ಪ್ರಾಮಾಣಿಕವಾಗಿ ಬೆಂಬಲಿಸುತ್ತಿದ್ದಾರೊ ಏನೊ? ಆದರೆ ಆ ಪರಿಸ್ಥಿತಿ ಇಂದು ಇಲ್ಲ. ಅದೇ ರೀತಿ ರಾಜ್ಯದಲ್ಲಿರುವ ತನಿಖಾ ಸಂಸ್ಥೆಗಳ ಮೇಲೂ ವಿಪಕ್ಷದವರಿಗೂ ನಂಬಿಕೆ ಇಲ್ಲ. ಜನರು ಕೂಡ ನಂಬಿಕೆ ಕಳೆದುಕೊಂಡ ಪರಿಸ್ಥಿತಿ. ರಾಜ್ಯದಲ್ಲಿ ಸ್ವಾಯತ್ತ ಸಂಸ್ಥೆಗಳು ರಾಜ್ಯ ಸರ್ಕಾರದ ಕೈಗೊಂಬೆ.


ಹಾಗಾದರೆ ತಪ್ಪು ಮಾಡಿದವರನ್ನು ತನಿಖೆ ಮಾಡಬೇಕಾದ ನಿಷ್ಪಕ್ಷಪಾತ ಸಂಸ್ಥೆ ಎಲ್ಲಿದೆ? ಅನ್ನುವ ಯಕ್ಷಪ್ರಶ್ನೆ ಜನ ಸಾಮಾನ್ಯರನ್ನು ಕಾಡಲು ಶುರುವಾಗಿದೆ. ಸಿದ್ದರಾಮಯ್ಯನವರು ಕೂಡಾ ಅಷ್ಟೇ ಇದೇ ಲೇೂಕಾಯುಕ್ತವನ್ನು ದುರ್ಬಲಗೊಳಿಸುವ ಸಲವಾಗಿ ಅದರೊಳಗೊಂದು ಎ.ಸಿ.ಬಿ.  ರಚನೆ ಮಾಡಿ ಲೇೂಕಾಯುಕ್ತದ ಹಲ್ಲು ಮುರಿಯುವ ಕೆಲಸ ಮಾಡಿದ್ದರು. ಮುಂದೆ ಬಂದ ಸರ್ಕಾರ ಅದನ್ನು ದುರಸ್ತಿ ಮಾಡುವರೆ ಮೀನಾಮೇಷ ಮಾಡಿದ್ದನ್ನು ನಾವು ನೇೂಡಿದ್ದೇವೆ.


ಒಟ್ಟಿನಲ್ಲಿ ನಮ್ಮ ದುರದೃಷ್ಟವೊ ಏನೊ, ಬಿಜೆಪಿ ಕಾಂಗ್ರೆಸ್ ಈ ಎರಡು ಸಂತಾನದವರು ರಾಜ್ಯದ ಜನತೆಯ ನೆಮ್ಮದಿಯನ್ನು ಹಾಳು ಮಾಡಿರುವುದಂತೂ ಸತ್ಯ. ರಾಜ್ಯ/ ಕೇಂದ್ರ ಸರ್ಕಾರಗಳ ಚಟುವಟಿಕೆಗಳನ್ನು "ಓಂಬುಡ್ಸ್‌ಮನ್" (ombudsman) ರೀತಿಯಲ್ಲಿ ಕಾಯಬೇಕಾದ ಸಂಸ್ಥೆಗಳ ಇತಿಹಾಸವನ್ನೆ ಹಾಳು ಮಾಡುವ ರೀತಿಯಲ್ಲಿ ಮುಂದಾಗಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಅತಿ ದೊಡ್ಡ ಕಂಟಕವೆಂದೇ ಹೇಳಬೇಕಾಗಿದೆ.


- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top