ಉಜಿರೆ:ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಅಂಗವಾಗಿ ಸೇವಾ ಭಾರತಿ (ರಿ.), ಕನ್ಯಾಡಿ- ಸೇವಾಧಾಮ ಇದರ ನೇತೃತ್ವದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಘಟಕಗಳ ಸಹಯೋಗದಲ್ಲಿ ಗಾಲಿಕುರ್ಚಿ ಜಾಥಾ ಹಾಗೂ ಬೆನ್ನುಹುರಿ ಅಪಘಾತದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಉಜಿರೆಯ ಶ್ರೀ ಧ. ಮಂ. ಸ್ನಾತಕೋತ್ತರ ಕೇಂದ್ರದಿಂದ ಶ್ರೀ ಶಾರದಾ ಮಂಟಪದವರೆಗೆ ಗಾಲಿ ಕುರ್ಚಿ ಜಾಥಾ ನಡೆಯಿತು. ಬಳಿಕ, ಶಾರದಾ ಮಂಟಪದಲ್ಲಿ ನಡೆದ ಮಾಹಿತಿ ಕಾರ್ಯಾಗಾರವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, “ಆಸ್ತಿಗಿಂತಲೂ ಮಿಗಿಲಾಗಿ ಮುಖ್ಯವಾದುದು ಆರೋಗ್ಯ. ಆರೋಗ್ಯವೇ ಭಾಗ್ಯ. ಬೆನ್ನುಹುರಿ ಅಪಘಾತಕ್ಕೆ ಒಳಗಾದವರಿಗೆ ಬೇಕಾದುದು ಆತ್ಮಸ್ಥೈರ್ಯ” ಎಂದರು.
“ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯವು ಎಂದಿಗೂ ನಮ್ಮ ನೆನಪಿನಲ್ಲಿ ಇರಬೇಕಾದುದು. ನಾನು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕನಾಗಿದ್ದಾಗ ಕಲಿತ ಪಾಠ ಇದು” ಎಂದು ಅವರು ಹೇಳಿದರು.
ಸೇವಾಧಾಮದ ಸಂಸ್ಥಾಪಕ ಕೆ. ವಿನಾಯಕ್ ರಾವ್ ಮಾತನಾಡಿ, ಸೇವಾಧಾಮದಲ್ಲಿ ಪುನಃಶ್ಚೇತನಗೊಂಡು ಬದುಕನ್ನು ಕಟ್ಟಿಕೊಂಡ 211 ಜನರನ್ನು ನೆನಪಿಸಿಕೊಂಡರು.
ಬೆಳ್ತಂಗಡಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಪ್ರಕಾಶ್ ಪ್ರಭು ಮಾತನಾಡಿದರು. ಅಂಗವೈಕಲ್ಯ ಎನ್ನುವುದು ಯಾವತ್ತಿಗೂ ಒಂದು ನರಕ ಎನ್ನುವಂತೆ ಅಂದುಕೊಳ್ಳುವ ಬದಲು ಇದನ್ನು ಯಾವ ರೀತಿಯಲ್ಲಿ ಮೆಟ್ಟಿ ನಿಂತು ಬದುಕನ್ನು ಸುಂದರವಾಗಿಸಬಹುದು ಎಂಬುವುದನ್ನು ಯೋಚನೆ ಮಾಡಬೇಕು ಎಂದು ಹೇಳಿದರು.
ಮಂಗಳೂರು ಕೆ ಎಂ ಸಿ ಆಸ್ಪತ್ರೆಯ ವೈದ್ಯ ಆನ್, ಸೇವಾಧಾಮದ ಸಂಚಾಲಕ ಕೆ. ಪುರಂದರ ರಾವ್, ಶ್ರೀ ಧ. ಮಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಮಾತನಾಡಿದರು.
ಸೇವಾಭಾರತಿ ಅಧ್ಯಕ್ಷೆ ಸ್ವರ್ಣಗೌರಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿ ಡಾ. ಸೌಜನ್ಯ, ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಪೃಥ್ವಿ ಸಾನಿಕಮ್, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಶ್ರೀ ಧ. ಮಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಪ್ರೊ. ದೀಪ ಆರ್. ಪಿ. ಉಪಸ್ಥಿತರಿದ್ದರು.
ಎನ್ನೆಸ್ಸೆಸ್ ಸ್ವಯಂಸೇವಕರಾದ ವರ್ಷ ಕಾರ್ಯಕ್ರಮ ನಿರೂಪಿಸಿ, ಸುದರ್ಶನ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ