ವನಿತಾ ಕಥನ- 16: ಜಗದ ತಾಯಿ ಸೀತಾಮಾತೆ

Upayuktha
0


ತ್ರೇತಾಯುಗದ ಸೀತಾ ದೇವಿ ಲಕ್ಷ್ಮಿಯ ಅವತಾರ. ಪಂಚ ಕನ್ಯೆಯರಲ್ಲಿ ಒಬ್ಬಳು ಸೀತಾ ದೇವಿ. ಜನಕ ಮಹಾರಾಜನಿಗೆ ಯಜ್ಞ ಭೂಮಿಯಲ್ಲಿ ನೇಗಿಲು ಬಡಿದು ಕಮಲದಲ್ಲಿ ಸಿಕ್ಕವಳು. ಸೀತಾ, ಜನಕನ ಕುವರಿ ಜಾನಕಿ, ಮಿಥಿಲಾ ಪಟ್ಟಣದ ಕುವರಿ ಮೈಥಿಲಿ ಎಂದೆಲ್ಲ ಹೆಸರಿನಿಂದ ಗುರುತಿಸಲ್ಪಡುವ ಸೀತಾ ಮಾತೆಯ ತಂದೆ ಜನಕ ಮಹಾರಾಜ, ಜನಕ ಮಹಾರಾಜನ ಇನ್ನೊಂದು ಹೆಸರು ಸೀರಧ್ವಜ. ಜನಕ ಮಹಾರಾಜನ ಪತ್ನಿ ಸುನಂದಾ ದೇವಿ. ಸೀತಾ ದೇವಿ ಜನಕ ಮಹಾರಾಜನ ಸಾಕು ಮಗಳು ಮತ್ತು ಊರ್ಮಿಳೆ ಸೀತೆಯ ತಂಗಿ. ವೈಶಾಖ ಶುಕ್ಲ ನವಮಿಯಂದು ಸೀತೆಯು ಜನಿಸಿದಳು ಅಥವಾ ಜನಕ ಮಹಾರಾಜನಿಗೆ ಸಿಕ್ಕ ದಿನವೆಂದು ಸೀತಾ ನವಮಿಯನ್ನು ಆಚರಿಸಲಾಗುತ್ತದೆ.


ಸಕಲ ಗುಣ ಸಂಪನ್ನಳೂ ಸುಂದರಳೂ ಆದ ಸೀತೆಯನ್ನು ಯಾರಿಗೆ ಕೊಟ್ಟು ಮದುವೆ ಮಾಡಬೇಕು ಎಂಬ ಯೋಚನೆ ಜನಕ ಮಹಾರಾಜನಿಗೆ ಬಂದಾಗ ಅವರ ವಂಶದ ರಾಜರಿಗೆ ದೊರೆತ ಶಿವ ಧನಸ್ಸಿಗೆ ಹೆದೆಯೇರಿಸುವ ಷರತ್ತಿನೊಂದಿಗೆ ಸ್ವಯಂವರವನ್ನು ಏರ್ಪಡಿಸಿದನು. ವಿಶ್ವಾಮಿತ್ರರು ಶ್ರೀರಾಮಚಂದ್ರನನ್ನು ಲಕ್ಷ್ಮಣನೊಡನೆ ಕರೆದುಕೊಂಡು ಬಂದು ಸ್ವಯಂವರದಲ್ಲಿ ಶ್ರೀರಾಮನಿಗೆ ಹೆದೆ ಏರಿಸಲು ಆಜ್ಞೆ ಮಾಡಿದಾಗ ಸೀತಾರಾಮರ ವಿವಾಹ ನೇರವೇರುತ್ತದೆ. ಸೀತಾರಾಮರ ಜೋಡಿ ಪ್ರಪಂಚದಲ್ಲೇ ಅನುರೂಪವಾದ ಜೋಡಿ. ಸಾಕ್ಷಾತ್‌ ಲಕ್ಷ್ಮೀಯ ಸ್ವರೂಪಳಾಗಿದ್ದ ಸೀತೆಯು ಮನೆಯವನರಿಗೆ ಪ್ರಜೆಗಳಿಗೆ ಅಪರಿಮಿತ ಆನಂದವನ್ನುಂಟು ಮಾಡುತ್ತಿದ್ದ ಶ್ರೀರಾಮಚಂದ್ರನ ದಾಂಪತ್ಯ ಇಂದಿನ ಜನರಿಗೆ ಬಹಳ ಉತ್ತಮ ಉದಾಹರಣೆಯಾಗಿದೆ.

ಕಷ್ಟವೇ ಇರಲಿ ಸುಖವೇ ಬರಲಿ ಪತಿಯ ಜೊತೆಗೆ ಇರಬೇಕು ಎಂಬುದನ್ನು ಸೀತೆ ಅತ್ಯತ್ತಮ ಉದಾಹರಣೆಯಾದರೆ ನ್ಯಾಯ ನೀತಿಗಳ ಪಾಲಕ ಮಾರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಇಬ್ಬರೂ ಜನರಿಗೆ ತಮ್ಮ ಜೀವನದ ಮೂಲಕ ಅನೇಕ ನೀತಿಯನ್ನು ಕಲಿಸಿದ್ದಾರೆ. ರಾಜಕುಮಾರಿಯಾಗಿ ಬೆಳೆದ ಸೀತೆ ಪತಿ ವನವಾಸಕ್ಕೆ ಹೋಗಲು ನಾರು ಮಡಿಯುಟ್ಟರೆ ತಾನು ಕೂಡ ನಾರುಮಡಿಯನ್ನು ಧರಿಸುತ್ತಾಳೆ. ಆಭರಣಗಳನ್ನು ಕೂಡ ತೆಗೆದಿಟ್ಟು ಹೋಗಿದ್ದ ಸೀತೆ ಅನಸೂಯಾ ದೇವಿಯ ಬಳಿ ಪಾತಿವ್ರತ್ಯದ ಧರ್ಮ ಆದರ್ಶ ಪತ್ನಿಯಾಗುವುದು ಮೊದಲಾದ ಸ್ತ್ರೀ ಧರ್ಮಗಳನ್ನು ಅನಸೂಯಾ ದೇವಿಯಿಂದ ತಿಳಿಯುತ್ತಾಳೆ. ಅನಸೂಯಾ ದೇವಿ ನೀಡಿದ ಆಭರಣಗಳನ್ನು ಕೂಡ ಧರಿಸುತ್ತಾಳೆ. ವನವಾಸದಲ್ಲಿ ಲಕ್ಷಣನನ್ನು ವಿಶ್ವಾಸದಿಂದ ನೋಡಿಕೊಳ್ಳುತ್ತಿರುತ್ತಾಳೆ. ದಶರಥನ ಮರಣದ ವಾರ್ತೆ ತಿಳಿದಾಗ ಶ್ರಾದ್ಧವನ್ನು ಮಾಡುವ ಸಾಮಗ್ರಿಯ ಅನ್ವೇಷಣೆಗೆ ಸಹೋದರರಿಬ್ಬರೂ ಹೋದಾಗ ಸಮಯ ಮೀರುತ್ತಿದೆ, ನೀನೇ ಪಿಂಡ ಪ್ರದಾನ ಮಾಡು ಎಂಬ ಮಾವನ ಆಜ್ಞೆಯಂತೆ ಪಿಂಡ ಪ್ರದಾನವನ್ನು ಕೂಡ ಮಾಡುತ್ತಾಳೆ.


ವನವಾಸದ ಪ್ರತಿ ಹೆಜ್ಜೆಯಲ್ಲಿಯೂ ಪತಿಯೊಡನೆ ಸಕ್ರಿಯಳಾಗಿ ಕುಟೀರವನ್ನು ಅಂದವಾಗಿಟ್ಟುಕೊಂಡು ಮನೆಯ ಕೆಲಸಗಳನ್ನು ಮಾಡಿಕೊಂಡು ಆಶ್ರಮದಿಂದ ಚುರುಕಾಗಿ ಓಡಾಡಿಕೊಂಡು ಇರುವ ಸೀತೆ ನವ ದಂಪತಿಗಳಿಗೆ ಉತ್ತಮ ಉದಾಹರಣೆಯಾಗಿದ್ದಾಳೆ. ಪತಿಯೊಂದಿಗೆ ಧರ್ಮದ ವಿಚಾರಗಳನ್ನು ಮಾತನಾಡುತ್ತಾ ಅವನಿಗೆ ಅನುರೂಪಳಾಗಿ ಅವನೊಂದಿಗೆ ವನವಾಸದಲ್ಲಿದ್ದ ಸೀತೆಗೆ ಶೂರ್ಪನಖಿಯ ಪ್ರವೇಶ ಕಂಟಕವನ್ನು ತಂದಿತು. ರಾಕ್ಷಸಿಯಾದ ಶೂರ್ಪನಖಿ ಶ್ರೀರಾಮಚಂದ್ರನ ರೂಪ ಕಾಂತಿಗಳಿಗೆ ಮರುಳಾಗಿ ಅವನನ್ನು ವರಿಸಲು ಕೇಳಿದಾಗ ಶ್ರೀರಾಮಚಂದ್ರ ತಾನು ಏಕ ಪತ್ನಿವ್ರತಸ್ಥನೆಂದು ಹೇಳಿದಾಗ ಸೀತೆಗೆ ಹಾನಿಯನ್ನು ಮಾಡಲು ಬಂದಳು. ಅವಮಾನಿತಳಾಗಿ ಕೆಟ್ಟ ಬುದ್ದಿಯಿಂದ ಸಹೋದರನ ತಲೆ ಕೆಡಿಸಿ ಸೀತಾಪಹರಣಕ್ಕೆ ನಿಮಿತ್ತಲಾಗುತ್ತಾಳೆ. ಮಾಯಾವಿ ರಾಕ್ಷಸರ ಸ್ಥಳವೆಂದು ತಿಳಿದಿದ್ದರೂ ಸೀತೆ ಬಂಗಾರದ ಬಣ್ಣದ ಜಿಂಕೆಯು ಮನಮೋಹಿಸಿತು.


ಮುಂದುವರಿಯುತ್ತದೆ......


- ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top