ತುಲಾಭಾರ, ಸಾಮೂಹಿಕ ಗಾಯನ, ಸ್ವರ್ಣ ರಥೋತ್ಸವ ವಿಶೇಷ
ಉಡುಪಿ: 37 ವರ್ಷಗಳ ಬಳಿಕ ಉಡುಪಿಯಲ್ಲಿ ತಮ್ಮ 45ನೇ ಚಾತುರ್ಮಾಸ್ಯ ವ್ರತವನ್ನು ಅತ್ಯಂತ ಅಭೂತಪೂರ್ವವೆಂಬತೆ ನಡೆಸಿ ಸಂಪನ್ನಗೊಳಿಸುತ್ತಿರುವ ಹಾಗೂ 70ನೇ ಜನ್ಮ ವರ್ಧಂತಿಯನ್ನು ಕಾಣುತ್ತಿರುವ ಶ್ರೀ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರಿಗೆ ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣಮಠದ ವತಿಯಿಂದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ದಿವ್ಯ ನೇತೃತ್ವದಲ್ಲಿ ಅಭಿನಂದನೋತ್ಸವ ವು ಶುಕ್ರವಾರ ಸಂಜೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಉಡುಪಿ ರಥಬೀದಿಯಲ್ಲಿ ಶ್ರೀ ಭಂಡಾರಕೇರಿ ಮಠದ ಪಟ್ಟದ ದೇವರಾದ ಶ್ರೀ ಕೋದಂಡರಾಮದೇವರ ಸ್ವರ್ಣ ರಥೋತ್ಸವ ನೆರವೇರಿದ ಬಳಿಕ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ವಿಶಿಷ್ಟ ಕಾರ್ಯಕ್ರಮದಲ್ಲಿ ನೂರಾರು ಮಾತೆಯರಿಂದ ಶ್ರೀ ವಿದ್ಯೇಶ ತೀರ್ಥರು ರಚಿಸಿದ ಹರಿಕೀರ್ತನೆಗಳ ಸಾಮೂಹಿಕ ಗಾಯನ, ವೇದ ವಾದ್ಯ ಮಂತ್ರ ಘೋಷಗಳ ಹಿನ್ನೆಲೆಯಲ್ಲಿ ನಾಣ್ಯಗಳಿಂದ ಶ್ರೀಗಳಿಗೆ ಸಾಲಂಕೃತ ತಕ್ಕಡಿಯಲ್ಲಿ ತುಲಾಭಾರ, ಮಂಗಳಾರತಿಗೈದ ಬಳಿಕ ಯಕ್ಷಕಿರೀಟಾಲಂಕೃತ ಸಿಂಹಾಸನದಲ್ಲಿ ಕುಳ್ಳಿರಿಸಿ ಶಾಲು ಹಾರ ಪುಷ್ಪಕಿರೀಟ ಧಾರಣ, ಪುಷ್ಪಾಭಿಷೇಕ, ಬೃಹತ್ ಕಡಗೋಲು, ನಿಧಿ, ಫಲವಸ್ತು ಸಹಿತ ಶ್ರೀ ಭಾಗವತ ಭಾಸ್ಕರ ಬಿರುದು ಹೊತ್ತ ಮಾನಪತ್ರ ಸಮರ್ಪಣಗೈದು ಶ್ರೀ ಪುತ್ತಿಗೆ ಉಭಯಶ್ರೀಗಳು ಅಭಿನಂದನೆ ಅರ್ಪಿಸಿದರು.
ಬಳಿಕ ಸಂದೇಶ ನೀಡಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು, ಶ್ರೀ ವಿದ್ಯೇಶತೀರ್ಥರು ಕಠಿಣ ಯತಿಧರ್ಮ ಪಾಲನೆ, ಶ್ರೀ ರಾಮದೇವರ ನಿತ್ಯೋಪಾಸನೆ, ಅಖಂಡ ಅಧ್ಯಯನ, ವೇದವ್ಯಾಖ್ಯಾನ, ಹರಿಕೀರ್ತನೆಗಳ ರಚನೆ, ವಿದ್ವತ್ ಪೋಷಣೆ, ನಿರಂತರ ಭಾಗವತ ಪ್ರವಚನ, ಮನೆಮನೆಗಳಲ್ಲಿ ಭಾಗವತ ಅಭಿಯಾನವೇ ಮೊದಲಾದ ಕೈಂಕರ್ಯ ವಿಶೇಷಗಳಿಂದ ಅಮಲ ಭಕ್ತಿ, ಸ್ತುತಿ, ಶ್ರುತಿ, ಶಕ್ತಿ, ದ್ಯುತಿ, ಸ್ಫೂರ್ತಿ, ಯುಕ್ತಿ ಹೀಗೆ ಸಪ್ತ 'ತಿ' ಗಳ ಸಂಗಮ ಸ್ವರೂಪರೆನಿಸಿ ಸಾರ್ಥಕ ಜೀವನದ ಎಪ್ಪತ್ತನ್ನು ಪೊರೈಸುತ್ತಿರುವ ಯತಿ ವಿಶಿಷ್ಟರಾಗಿದ್ದಾರೆ ಎಂದು ಬಣ್ಣಿಸಿದರಲ್ಲದೇ, ಅವರೊಂದಿಗೆ ತಾವು ಸಹಪಾಠಿಗಳಾಗಿದ್ದ ದಿನಗಳನ್ನು ಸ್ಮರಿಸಿಕೊಂಡು ತಮ್ಮ ಪರ್ಯಾಯ ಕಾಲದಲ್ಲಿ ಉಡುಪಿಯಲ್ಲಿ ಚಾತುರ್ಮಾಸ್ಯ ವ್ರತ ನಡೆಸಿದ್ದಕ್ಕಾಗಿ ವಿಶೇಷವಾಗಿ ಅಭಿನಂದಿಸಿದರು. ಪ್ರಸ್ತುತ ಕಾಲಘಟ್ಟದಲ್ಲಿ ನೂರಾರು ಹರಿಕೀರ್ತನೆಗಳನ್ನು ರಚಿಸಿ ತೀರಾ ಅಪರೂಪದ ಕೀರ್ತನಕಾರರಾಗಿರುವ ಅವರು ಶ್ರೀ ವ್ಯಾಸರಾಜರು, ಕನಕ ಪುರಂದರರೇ ಮೊದಲಾದ ಹರಿದಾಸರ ಸಾಲಿಗೆ ಸೇರಿ ಶ್ರೀ ವಿದ್ಯೇಶವಿಠಲದಾಸರಾಗಿದ್ದಾರೆ ಎಂದು ಪ್ರಶಂಶಿಸಿದರು.
ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿದರು. ಶ್ರೀ ವಿದ್ಯೇಶ ತೀರ್ಥರು ತಮ್ಮ ಸಂದೇಶಸಲ್ಲಿ ಭಗವಂತನೊಲುಮೆಗೆ ನಿಷ್ಕಲ್ಮಶವಾದ ಭಕ್ತಿಯೊಂದೇ ಪರಮಸಾಧನವೆಂದು ತಿಳಿಸಿ, ಉಡುಪಿಯಲ್ಲಿ ಈ ಬಾರಿಯ ಚಾತುರ್ಮಾಸ್ಯ ನಡೆಸಲು ಪ್ರೇರೇಪಿಸಿದ ಪುತ್ತಿಗೆ ಶ್ರೀಗಳನ್ನು ಅಭಿನಂದಿಸಿದರು.
ಹುಬ್ಬಳ್ಳಿಯ ಉದ್ಯಮಿ ಶ್ರೀಕಾಂತ ಕೆಮ್ತೂರು ಶುಭಾಂಸನೆಗೈದರು, ವಿದ್ವಾನ್ ಷಣ್ಮುಖ ಹೆಬ್ಬಾರ್ ಅಭಿನಂದನ ಪತ್ರ ವಾಚಿಸಿದರು.
ಮಠದ ದಿವಾನರಾದ ಮುರಳೀಧರ ಆಚಾರ್ಯ ನಾಗರಾಜ ಆಚಾರ್ಯ ಪ್ರಸನ್ನಾಚಾರ್ಯ, ವಿದ್ವಾಂಸರುಗಳಾದ ರಾಮನಾಥಾಚಾರ್ಯ ವೇದ ವ್ಯಾಸ ಪುರಾಣಿಕ ಮೊದಲಾದವರು ಉಪಸ್ಥಿತರಿದ್ದರು.
ವಿದ್ವಾನ್ ಗೋಪಾಲಾಚಾರ್ಯರು ಕಾರ್ಯಕ್ರಮನಿರೂಪಿಸಿದರು. ಅಮೇರಿಕಾದ ಭಕ್ತೆ ಶುಭಾ ಶೇಷಗಿರಿ ಪ್ರಾರ್ಥನಾಗೀತೆ ಹಾಡಿದರು.
ರಮೇಶ ಭಟ್, ರಾಜೇಶ ಉಪಾಧ್ಯ, ಮಹಿತೋಶ ಆಚಾರ್ಯ, ರಾಮಕೊಡಂಚ ಮೊದಲಾದವರು ಸಹಕರಿಸಿದರು. ವಿದುಷಿ ಶುಭಾ ಸಂತೋಷ್, ಉಷಾ ಹೆಬ್ಬಾರ್, ಶೋಭಾ ಉಪಾಧ್ಯಾಯ ಮೊದಲಾದವರು ಸಾಮೂಹಿಕ ವಿದ್ಯೇಶನಾದ ನೀರಾಜನದ ನಿರ್ದೇಶನಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ