ಶಿಕ್ಷಕನೆಂಬ ಪ್ರೇರಕ ಶಕ್ತಿ

Upayuktha
0


'ಶಿಕ್ಷಕ' ಎಂಬ ಪದ ಕೇಳಿದ ಕೂಡಲೇ ನಮ್ಮಲ್ಲೇನೋ ಒಂದು ಭಕ್ತಿ ಭಾವ ಉದಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಅಭ್ಯುದಯದಲ್ಲೂ ಶಿಕ್ಷಕ ವಹಿಸುವ ಪಾತ್ರ ಅತ್ಯಂತ ಮಹತ್ವವಾದದ್ದು. ಭಾರತೀಯ ಸಂಸ್ಕೃತಿಯ ಪ್ರಕಾರ ಗುರು ಎನ್ನುವವರು ನಮಗೊಬ್ಬ ಮಾರ್ಗದರ್ಶಕರು. ಅವರು ನಮ್ಮಲ್ಲಿರುವ ಭೀತಿ ಹಾಗೂ ಅಜ್ಞಾನವನ್ನು ತೊಡೆದು ಸರ್ವಾಂಗೀಣ ಪ್ರಗತಿಗೆ ಕಾರಣರಾಗುವವರು. 'ಗು'ಪದದ ಅರ್ಥ ಅಂಧಕಾರ ಹಾಗೂ 'ರ' ಪದದ ಅರ್ಥ ಪ್ರಕಾಶ. ಅಂದರೆ ಗುರು ನಮ್ಮನ್ನು ಅಜ್ಞಾನದ ಅಂಧಕಾರದಿಂದ ಜ್ಞಾನವೆಂಬ ಪ್ರಕಾಶದ ಕಡೆಗೆ ಕರೆದೊಯ್ಯುವವರು. ರಾಮಕೃಷ್ಣ ಪರಮಹಂಸರ ಮಾತಿನಲ್ಲಿ ಹೇಳುವುದಾದರೆ "ನಿಜವಾದ ಜ್ಞಾನದ ಬೆಳಕಿನಿಂದ ಪ್ರಕಾಶಿತನಾದವನೇ ನಿಜವಾದ ಶಿಕ್ಷಕ".


'ಶಿಕ್ಷಕ'ಎಂಬುದು ಅಕ್ಷರ ಕಲಿಸುವಿಕೆ,ಆಧ್ಯಾತ್ಮಿಕ ಕ್ಷೇತ್ರಗಳಿಗೆ ಮಾತ್ರ ಸಂಬಂಧಿಸಿರದೆ ಅತ್ಯಂತ ವಿಸ್ತಾರದ ವ್ಯಾಪ್ತಿಯನ್ನು ಒಳಗೊಂಡಿದೆ. ಅದು ಸಂಸ್ಕೃತಿ, ಸಂಸ್ಕಾರ, ಸನ್ನಡವಳಿಕೆ, ಕ್ರೀಡೆ, ರಾಜಕೀಯ, ಸಾಹಿತ್ಯ, ಸಂಗೀತ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿನ ಗುರುಗಳಿಗೆ ವ್ಯಾಪಿಸಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ತಂದೆ ತಾಯಿ ಗುರುಗಳೇ ಹೌದು. ಶಿಕ್ಷಕನೆಂಬುವವನು ವ್ಯಕ್ತಿಯಲ್ಲ, ಅವನೊಂದು ಶಕ್ತಿಯಾಗಿದ್ದು ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯುವ ಮಹಾನ್ ಶಕ್ತಿಯಾಗಿದ್ದಾನೆ. ತಮಗಿಂತ ಶಿಷ್ಯರು ಉನ್ನತಿ ಹೊಂದಿದರೆ ತಮ್ಮ ಜೀವನ ಸಾರ್ಥಕ ಎಂದು ಭಾವಿಸುವ ಉದಾತ್ತ ಮನಸ್ಸಿನ ಶಿಕ್ಷಕರು ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರೇ ಹೌದು. ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಒಬ್ಬ ಅತ್ಯುತ್ತಮ ಗುರುವಿನ ಮಾರ್ಗದರ್ಶನವಿರುತ್ತದೆ. ಗುರು ತನ್ನ ಶಿಷ್ಯನಿಗೆ  ತಂದೆಯಾಗಿ, ಸಹೋದರನಾಗಿ, ಮಿತ್ರನಾಗಿ ಉದ್ಧಾರದ ಮಾರ್ಗಕ್ಕೆ ಕರೆದೊಯ್ಯುತ್ತಾನೆ. ತನ್ನ ವಿದ್ಯಾರ್ಥಿಯನ್ನು ಅತ್ಯುಚ್ಛ ಸ್ಥಾನದಲ್ಲಿ ನೋಡುವುದು ಪ್ರತಿಯೊಬ್ಬ ಶಿಕ್ಷಕನ ಕನಸಾಗಿರುತ್ತದೆ.


ಶಿಷ್ಯ ತನ್ನ ಗುರಿ ಸಾಧನೆಯಲ್ಲಿ ಸೋತಾಗ,ಮತ್ತೆ ಅವನಲ್ಲಿ ಆತ್ಮ ವಿಶ್ವಾಸ ತುಂಬಿ ಸಾಧನೆಗೆ ಹುರಿದುಂಬಿಸುತ್ತಾನೆ. ಶಿಕ್ಷಕ ರಾಷ್ಟ್ರದ ನಿರ್ಮಾತೃವಾಗಿದ್ದು ಮಕ್ಕಳು ದೇಶದ ಭವಿಷ್ಯವಾಗಿರುತ್ತಾರೆ. ಅವರನ್ನು ರಾಷ್ಟ್ರಸೇವೆಗೆ ಪ್ರೇರೇಪಿಸುವುದು ಗುರುವೇ. ವರ್ತಮಾನದಲ್ಲಿ ಭಾರತ ವಿಶ್ವಗುರುವಾಗುವ ಸಾಮರ್ಥ್ಯ ಹೊಂದಿದ್ದು ಅದಕ್ಕೆ ಕಾರಣ ನಮಗೆ ನಮ್ಮ ಶಿಕ್ಷಕರು ನೀಡಿದ ಅತ್ಯುತ್ತಮ ಶಿಕ್ಷಣವೇ ಆಗಿದೆ. ಗುರು ಎಂದರೆ ವ್ಯಕ್ತಿಯಲ್ಲ.ಅದೊಂದು ಶಕ್ತಿಯಾಗಿದ್ದು ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯವ ಮಹಾನ್ ಶಕ್ತಿಯಾಗಿದೆ. ತಮಗಿಂತ ತಮ್ಮ ಶಿಷ್ಯರು ಉನ್ನತಿ ಹೊಂದಿದರೆ ತಮ್ಮ ಜೀವನ ಸಾರ್ಥಕ ಎಂದು ಭಾವಿಸುವ ಉದಾತ್ತ ಮನಸ್ಸಿನ ಶಿಕ್ಷಕರು ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರೇ ಹೌದು. ಶಿಷ್ಯರಲ್ಲಿನ ದೌರ್ಬಲ್ಯಗಳನ್ನು, ಭೀತಿಗಳನ್ನು ಹೋಗಲಾಡಿಸಿ ಅವರಲ್ಲಿನ ಕೌಶಲ್ಯಗಳಿಗೆ ಸಾಣೆ ಹಿಡಿದು ಅವರನ್ನು ಸಾಧನೆಯ ಕಡೆ ಪ್ರೇರೇಪಿಸುವ ಶಿಕ್ಷಕ ಪ್ರತಿಯೊಬ್ಬರ ಜೀವನದಲ್ಲೂ ಪ್ರೇರಕ ಶಕ್ತಿಯೇ ಹೌದು.


ಶಿಷ್ಯರಲ್ಲಿನ ಸಾಮರ್ಥ್ಯ ಹೊರತಂದು ಅವರು ಉನ್ನತ ಗುರಿಗಳನ್ನು ಮುಟ್ಟಲು ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪ್ರೇರಣೆ ನೀಡುವ ಗುರು, ಶಿಷ್ಯರ ಬೆಳವಣಿಗೆ ಯಶಸ್ಸಿಗೆ ಭದ್ರ ತಳಪಾಯ ಹಾಕುತ್ತಾರೆ. ಎಂತಲೇ ನಮ್ಮ ಸಂಸ್ಕೃತಿಯಲ್ಲಿ ಗುರುವನ್ನು ದೇವರೆಂದು ಕರೆದು 'ಆಚಾರ್ಯ ದೇವೋಭವ'ಎಂದು ಗೌರವಿಸಿದೆ. ಇಂತಹ ಶಿಕ್ಷಕರನ್ನು ಕೃತಜ್ಞತೆಯಿಂದ ಸ್ಮರಿಸಿ ಗೌರವಿಸುವುದು ಸೆಪ್ಟೆಂಬರ್ ಐದರಂದು ಶ್ರೇಷ್ಠ ಶಿಕ್ಷಣತಜ್ಞರೂ, ರಾಜನೀತಿಜ್ಞರೂ, ದಾರ್ಶನಿಕರೂ ಆಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣರ ಜನ್ಮದಿನದ ಸ್ಮರಣಾರ್ಥ ಆಚರಿಸುವ 'ಶಿಕ್ಷಕರ ದಿನಾಚರಣೆಯ'ದ ಆಶಯವೇ ಹೌದು.


- ಎಸ್.ಎಲ್. ವರಲಕ್ಷ್ಮೀ ಮಂಜುನಾಥ್.

ನಂಜನಗೂಡು.​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top