- ರಾಮಕೃಷ್ಣ ಮಠದಲ್ಲಿ ಮೇಧಾ - ಶೈಕ್ಷಣಿಕ ವಿಚಾರ ಸಂಕಿರಣ ಸಂಪನ್ನ
- ಸುಮಾರು 550 ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳು ಭಾಗಿ
ಮಂಗಳೂರು: "ಭಾರತದ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದರು ಸ್ವಾಭಿಮಾನದ ನಿಜವಾದ ಸಂಕೇತ. ಭವಿಷ್ಯ ಭಾರೆಅತದ ಶಕ್ತಿ ಯುವ ಜನಾಂಗ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವ ಬೆಳವಣಿಗೆಗೆ ಇಂತಹ ವಿಚಾರ ಸಂಕಿರಣಗಳು ಸಹಕಾರಿ. ನಮ್ಮೆಲ್ಲರ ಹೆಗಲ ಮೇಲೆ ಉತ್ತಮ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿಯಿದೆ. ಯುವಕರು ಬಲಿಷ್ಠರಾದರೆ ಮಾತ್ರ ದೇಶ ಬಲಿಷ್ಠವಾಗಲು ಸಾಧ್ಯ. ಇದರ ಜೊತೆಗೆ ವ್ಯಕ್ತಿತ್ವ ಬೆಳವಣಿಗೆಗೆ ಮೌಲ್ಯ ಶಿಕ್ಷಣ ಅಗತ್ಯ. ತಾಳ್ಮೆಯನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳೋಣ. ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶವನ್ನು ಅರ್ಥೈಸಿಕೊಂಡು ಜೀವನ ರೂಪಿಸೋಣ" ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು. ಟಿ. ಖಾದರ್ ಅವರು ಹೇಳಿದರು.
ಮಂಗಳೂರಿನ ರಾಮಕೃಷ್ಣ ಮಿಷನ್ ನಲ್ಲಿ ನಡೆದ ಮೇಧಾ- ಪದವಿ ವಿದ್ಯಾರ್ಥಿಗಳ ವಿಚಾರ ಸಂಕಿರಣಡಾ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಮಂಗಳೂರಿನ ರಾಮಕೃಷ್ಣ ಮಿಷನ್ ಆಧುನಿಕ ಯುವ ಪೀಳಿಗೆಯಲ್ಲಿ ಜೀವನ ಮೌಲ್ಯಗಳನ್ನು ತುಂಬಲು ಈ ಮೌಲ್ಯಾಧಾರಿತ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣದ ಸ್ಮರಣಾರ್ಥ "ಶಿಕ್ಷಣ ಮತ್ತು ಮಾನವ ಶ್ರೇಷ್ಠತೆ" ಎಂಬ ಪರಿಕಲ್ಪನೆಯಲ್ಲಿ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೋಡ್ ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕರಾದ ದೀಕ್ಷಿತ್ ರೈ ಅವರು, "ನಾವು ಸರಿ ದಾರಿಯಲ್ಲಿ ನಡೆಯುತ್ತಿದ್ದೆವೋ ಇಲ್ಲವೋ ಎಂಬ ಚಿಂತೆ ನಮಗೆ ಯಾವಾಗಲೂ ಕಾಡುತ್ತಿರುತ್ತದೆ. ಜೀವನದಲ್ಲಿ ದೊಡ್ಡ ಅವಕಾಶಗಳು ನಮಗಾಗಿ ಕಾಯುತ್ತಿರುತ್ತವೆ. ಕಠಿಣ ಪರಿಶ್ರಮ ಪಟ್ಟಾಗ ಜೀವನ ತನ್ನ ದಾರಿಯನ್ನು ತಾನಾಗಿಯೇ ನಮಗೆ ತೋರುತ್ತದೆ. ಆದಷ್ಟು ಹೆಚ್ಚು ಜ್ಞಾನಾರ್ಜನೆಯನ್ನು ಮಾಡಿ ಜ್ಞಾನ ನಿಮ್ಮನ್ನು ಒಂದು ದಿನ ಉನ್ನತಿಗೆ ಕರೆದೊಯ್ಯುತ್ತದೆ. ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ಕಠಿಣ ಪರಿಶ್ರಮ ನಿಮ್ಮ ಬದುಕನ್ನು ಬದಲಾಯಿಸುತ್ತದೆ" ಎಂದು ಹೇಳಿದರು.
ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ ಹಾಗೂ ಸಂವಾದ ನಡೆಯಿತು. ಕಾನ್ಪುರದ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿಗಳದ ಪೂಜ್ಯ ಸ್ವಾಮಿ ಆತ್ಮಶ್ರದ್ಧಾನಂದಜಿ ಮೊದಲ ಅವಧಿಯನ್ನು ನಡೆಸಿಕೊಟ್ಟರು. ಎರಡನೇ ಅವಧಿಯಲ್ಲಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ ಸಂದೀಪ್ ವಸಿಷ್ಠ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ನಂತರ "ಶಿಕ್ಷಣ ಮತ್ತು ಮಾನವ ಶ್ರೇಷ್ಠತೆ" ಎಂಬ ವಿಷಯದ ಕುರಿತಾಗಿ ನಡೆದ ಸಂವಾದದಲ್ಲಿ ಉಡುಪಿಯ ಡಾ. ಎಂ. ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ, ಮಂಗಳೂರಿನ ಚೇರ್ ಸ್ಟುಡಿಯೋದ ಪ್ರೊಪ್ರೈಟರ್ ಶ್ರೀ ರಾಘವೇಂದ್ರ ನೆಲ್ಲಿಕಟ್ಟೆ ಮತ್ತು ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ ಸಂದೀಪ್ ವಸಿಷ್ಠ ಭಾಗವಹಿಸಿದರು. ಭಾರತೀಯ ಸೇನೆಯ ನಿವೃತ್ತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿ, ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕರಾದ ರಂಜನ್ ಬೆಳ್ಳರ್ಪ್ಪಾಡಿ ವಂದಿಸಿದರು. ಸಂತೋಷ್ ಆಳ್ವ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ