ಶ್ರೀಸತ್ಯಾತ್ಮವಾಣಿ- 48: ಪಾಪಕ್ಕೆ ಪರಮಾತ್ಮ ನೀಡುವ ಶಿಕ್ಷೆ, ನಮ್ಮ ಉದ್ಧಾರಕ್ಕೆ

Upayuktha
0


ಶ್ರೀಕೃಷ್ಣ ಪರಮಾತ್ಮ ಅದ್ಭುತವಾದ ನೃತ್ಯವನ್ನು ಮಾಡುತ್ತಿದ್ದಾನೆ. ಕೃಷ್ಣನ ದಿವ್ಯವಾದ ಭವ್ಯವಾದ ತಾಂಡವವನ್ನು ನೋಡಿ ಈ ಸದಾವಕಾಶವನ್ನು ಬಿಡಬಾರದು ಎಂದು ಬ್ರಹ್ಮದೇವರು ಮೃದಂಗವನ್ನು ಬಾರಿಸುತ್ತಾರೆ, ಹನುಮಂತ ದೇವರು ಬಹಳ ಅದ್ಭುತವಾದ ಗಾಯನ ಮಾಡುತ್ತಾರೆ, ಪ್ರಪಂಚದಲ್ಲಿ ಯಾರಾದರೂ ಚೆನ್ನಾಗಿ ಹಾಡುತ್ತಾರೆ ಎಂದರೆ ವಾಯುದೇವರ ವಿಶೇಷ ಅನುಗ್ರಹ ಬೇಕು. ಅದರಲ್ಲಿ ಹನುಮಂತ ದೇವರು ಪ್ರೇರಕರು. ರಾವಣನಿಗೆ ತಮ್ಮ ಪರಿಚಯ ಮಾಡಿಕೊಳ್ಳುವಾಗ ದಾಸೋಹಂ ಕೋಸಲೇಂದ್ರಸ್ಯ ಎಂದು ಹೇಳಿಕೊಂಡರು. ಹನುಂತ ಅಶೋಕವನವನ್ನು ನಾಶ ಮಾಡಿದ್ದು, ನೂರು ಯೋಜನ ದಾಟಿ ಬಂದದ್ದು ಹೇಳಿಕೊಂಡಿಲ್ಲ. ರಾಮಚಂದ್ರನ ದಾಸ ಎಂದು ಕೊಂಡಿದ್ದಾರೆ. ದಾಸರು ಎಂದರೆ ಅನೇಕ ತರಹದ ದಾಸರು ಇರುತ್ತಾರೆ, ಆದರೆ ಹನುಮಂತದೇವರು ಶ್ರೀರಾಮನ ಗುಣಗಣಗಾನವನ್ನು ಅತ್ಯಂತ ಮನೋಮೋಹಕವಾಗಿ ಆನಂದ ಆಗುವಂತೆ ಹಾಡುವ ದಾಸನು ಎಂಬ ಅಭಿಪ್ರಾಯದಲ್ಲಿ ಹೇಳಿಕೊಂಡಿದ್ದಾರೆ. 



ಒಂದು ಸಂದರ್ಭದಲ್ಲಿ ನಾರದರು ತಾವು ಅತ್ಯಂತ ಸುಂದರವಾಗಿ ಹಾಡುವವರು ಯಾರೂ ಇಲ್ಲ ಎಂಬ ಭಾವನೆ ಬಂದಿತ್ತು. ನಾರದರೂ ಹಾಗೂ ಹನುಮಂತ ಗುಡ್ಡದ ಮೇಲೆ ಕುಳಿತಿದ್ದರು, ನಾರದರು ವಿನೀತರು ವಿರಕ್ತರೂ ಆದರೂ ಕೂಡ ಅವರಲ್ಲಿ ತಾವು ಬಹಳ ಸುಂದರವಾಗಿ ಹಾಡುವವರು ಎಂಬ ಬಾವನೆ ಮೂಡಿತ್ತು. ನಾರದರು ಮೊದಲಿಗೆ ಬಹಳ ಅದ್ಭುತವಾಗಿ ಹಾಡಿದರು, ಹನುಮಂತನಿಗೆ ಸಂತೋಷ ಆಯಿತು. ಹನುಮಂತ ದೇವರು ಪ್ರಶಂಸೆ ಮಾಡಿದರು. ನಾನು ಸ್ವಲ್ಪ ಶ್ರೀರಾಮಚಂದ್ರನ ಗುಣಗಾನವನ್ನು ಮಾಡುತ್ತೇನೆ. ಆಗ ನಾರದರು ಹೇಳಿದರು ನೀವು ಹಾಡಿದರೆ ನನ್ನ ವೈಶಿಷ್ಟ್ಯ ತಿಳಿಯುತ್ತದೆ ಹಾಡಿರಿ ಎಂದರು ಹನುಮಂತ ದೇವರು ಅದ್ಭುತವಾಗಿ ಹಾಡಿದ್ದಾರೆ ಹಾಡೆಲ್ಲ ಮುಗಿದಮೇಲೆ ನೀವು ಇನ್ನೊಮ್ಮೆ ಹಾಡಿ ಎಂದು ನಾರದರಿಗೆ ಹೇಳಿದರೆ ನಾರದರ ತಂಬೂರಿ ಮೇಲೆ ಏಳಲೇ ಇಲ್ಲ ಏಕೆಂದರೆ ಹನುಮಂತದೇವರ ಗಾನ ಕೇಳಿ ಕಲ್ಲು ಕರಗಿ ತಂಬೂರಿ ಅದರಲ್ಲಿ ಹೂತು ಹೋಗಿದೆ. ಹನುಮಂತದೇವರ ಹಾಡಿಗೆ ಕಲ್ಲು ಕೂಡ ಕರಗುತ್ತದೆ.


ಇಂತಹ ಹನುಮಂತ ಶ್ರೀಕೃಷ್ಣ ಪರಮಾತ್ಮನ ನರ್ತನ ಮಾಡುವುದಕ್ಕೆ ಹಾಡುತ್ತಾನೆ. ಇಲ್ಲಿ ದೇವರ ಬಗ್ಗೆ ಹಾಡುತ್ತಿದ್ದಾರೆ ಆ ದೇವರು ಅದಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ರುದ್ರದೇವರು ತಾಳವನ್ನು ಬಾರಿಸುತ್ತಿದ್ದಾರೆ.  ಅಲ್ಲಿ ನೆರದಿದ್ದ ಎಲ್ಲರಿಗೂ ಆನಂದವಾಗಿದೆ ಎಲ್ಲರೂ ಕುಣಿಯುತ್ತಿದ್ದಾರೆ. ನಾಗ ಮತ್ತು ಅವನ ಪತ್ನಿಯರಿಗೆ  ದುಃಖವಾಗಿದ್ದು ಏಕೆಂದರೆ ಕೃಷ್ಣ ಹೀಗೆ ಕುಣಿದರೆ ಪತಿಯ ಪ್ರಾಣ ಹೋಗುತ್ತದೆ ಎಂಬ ಭಯವಾಗಿದೆ. ಆದರೆ ಕೃಷ್ಣನ ಬಗೆಗೆ ಬೇಸರ ಸಿಟ್ಟಿಲ್ಲ. ಹೀಗಾಗಿ ಶ್ರೀ ಕೃಷ್ಣ ಪರಮಾತ್ಮ ಅವರಿಗೆ ಅನುಗ್ರಹ ಮಾಡುತ್ತಾನೆ.


ನಾಗ ಪತ್ನಿಯರು ಕೃಷ್ಣ ಪರಮಾತ್ಮನಿಗೆ ಪತಿಯನ್ನು ದಂಡಿಸಿದ ಕಾರಣದಿಂದ ಜಗಳಕ್ಕೆ ಹೋಗದೇ ಅವನು ಮಾಡಿದ ಶಿಕ್ಷೆ ಸರಿಯಾಗಿದೆ. ಅಷ್ಟೆಲ್ಲ ಜನರ ಪ್ರಾಣ ಅವನಿಂದ ಹೋಗಿರುವ ಕಾರಣ ಪರಮಾತ್ಮ ನೀನು ಅವನಿಗೆ ಕೊಟ್ಟ ಶಿಕ್ಷೆ ನ್ಯಾಯವಾಗಿದೆ ಎಂದು ಹೇಳುತ್ತಾರೆ, ಬೇರೆ ಜನರಿಗೆ ಪೀಡೆಯಾಗುತ್ತಿರುವ ಜಾಗವನ್ನು ಬಿಟ್ಟು ಸುರಕ್ಷಿತ ಸ್ಥಾನಕ್ಕೆ ಹೋಗಬೇಕಿತ್ತು ಹಾಗೇ ಹೋಗದೇ ಇರುವ ಗಂಡನಿಗೆ ಶಿಕ್ಷೆಯನ್ನು ಕೊಟ್ಟು ಅವನ ಪಾಪ ಪರಿಹಾರ ಮಾಡಿದ್ದು ನಮ್ಮ ಸೌಭಾಗ್ಯ ಎಂದು ಹೇಳುತ್ತಾರೆ. ನಾವು ಮಾಡಿದ ಪಾಪದಿಂದ ಶಿಕ್ಷೆ ಅನುಭವಿಸುವಾಗ ದೇವರು ನಮಗೆ ಕೊಟ್ಟ ಕಷ್ಟಕ್ಕೆ ನಾವು ಅವನಿಗೆ ಕೃತಜ್ಞರಾಗಿರಬೇಕು. ಅವನು  ಪಾಪದ ಪ್ರಾಯಶ್ಚಿತ್ತಕ್ಕೆ ದುಃಖವನ್ನು ಕೊಟ್ಟು ಅದನ್ನು ಅನುಭವಿಸುವಂತೆ ಮಾಡಿ ನನ್ನನ್ನು ಪಾಪ ಮುಕ್ತನನ್ನಾಗಿ ಶುದ್ಧನನ್ನಾಗಿ ಮಾಡಿದ್ದೀಯ ಎಂದು ಪ್ರಾರ್ಥನೆಯನ್ನು ಮಾಡಬೇಕು. ಈ ಭಾವನೆ ಭಾಗವನನ್ನು ಕೇಳಿದ ಜನರಿಗೆ ಬಂದರೆ ಭಾಗವತ ಕೇಳಿದ್ದು ಸಾರ್ಥಕ.



ಮುಳ್ಳು ಚುಚ್ಚಿದಾಗ ಸೂಜಿ ಚುಚ್ಚಿದಾಗ ನೋವು ತಡೆದುಕೊಂಡರೆ ಮುಂದೆ ಹೆಚ್ಚು ತೊಂದರೆ ಆಗುವುದಿಲ್ಲ. ಅದರಂತೆ ಪರಮಾತ್ಮ ಕೂಡ ನಮ್ಮ ಪಾಪಗಳಿಗೆ ಸ್ವಲ್ಪ ಶಿಕ್ಷೆ ಕೊಟ್ಟು ಪಾಪನಾಶನ ಮಾಡುವುದು ಅವನ ಅನುಗ್ರಹ. ನಾವು ಮಾಡಿದ ಪಾಪಗಳು ಏಳೇಳು ಜನ್ಮಗಳಿಗೆ ತಾಪ ಮಾಡುತ್ತವೆ. ಕೆಲವು ಪಾಪಗಳು ನೂರಾರು ಜನ್ಮಗಳವರೆಗೂ ಬರುತ್ತದೆ. ಆ ಪಾಪಗಳ ಫಲವಾಗಿ ನೂರಾರು ಜನ್ಮಗಳವರೆಗೆ ನೋವನ್ನು ಅನುಭವಿಸುತ್ತಾನೆ. ಹೀಗಾಗಿ ಆಗಾಗ ಮಾಡುವ ತಪ್ಪಿಗೆ ಅಲ್ಲಿಯೇ ದಂಡ ಮಾಡುವುದು ಉತ್ತಮ ಎಂದು ಹೇಳುತ್ತಾರೆ. ಅವನ ಪಾಪಗಳಿಗೆ ನೀನು ಕೊಟ್ಟ ಶಿಕ್ಷೆ ನ್ಯಾಯ ಸಮ್ಮತವಾಗಿದ್ದರು ನಮಗೆ ವೈಧವ್ಯ ಕೊಡಬೇಡ ಎಂದು ನಾಗಪತ್ನಿಯರು ಪರಮಾತ್ಮನಿಗೆ ಶತ್ರುಗಳನ್ನು ಮಕ್ಕಳನ್ನು ಸಮನಾಗಿ ನೋಡುವ ಸ್ವಾಮಿ ನೀನು ಹೀಗಾಗಿ ನಮ್ಮ ಮೇಲೆ ಅನುಗ್ರಹ ಮಾಢು ಎಂದು ಕೇಳುತ್ತಾರೆ. ಪರಮಾತ್ಮನು ಅವರವರ ಕರ್ಮಗಳಿಗೆ ತಕ್ಕ ಫಲವನ್ನು ಕೊಡುತ್ತಾನೆ ಎಂಬ ಮಾತಿನಿಂದ ಪ್ರಾರ್ಥಿಸುತ್ತಾರೆ. ಅವನು ನಮ್ಮ ಗಂಡ ಅವನಿಂದ ನಮ್ಮ ಉಪಜೀವನ ಇದೆ. ಆದ್ದರಿಂದ ಅವನ ಸಾವಿನಿಂದ ನಾವು ದುಃಖ ಪಡುವಂತೆ ಮಾಡಬೇಡ ಎಂದು ಪ್ರಾರ್ಥಿಸುತ್ತಾರೆ ಪರಮಾತ್ಮ ಸಜ್ಜನರ ಪಾಪ ಪರಿಹಾರ ಮಾಡುತ್ತಾನೆ ಅದರೆ ಅಸಜ್ಜನರ ಪಾಪವನ್ನು ದೂರ ಮಾಡು ಎಂದು ಪ್ರಾರ್ಥಿಸುತ್ತಾರೆ. ಇಲ್ಲಿ ಸ್ವಭಾವತಃ ಒಳ್ಳೆಯದೇ ಇದ್ದರೂ ಸಹವಾಸದಿಂದ ಕೆಟ್ಟ ಸ್ವಭಾವ ಬಂದಿದೆ ಅದಕ್ಕೆ ಕ್ಷಮಿಸು ಎಂದು ಪ್ರಾರ್ಥಿಸುತ್ತಾರೆ. ಸಣ್ಣ ಪುಟ್ಟ ಪಾಪವನ್ನು ಮಾಡಿದರೆ ಕ್ಷಮೆ ಇದೆ, ಪ್ರಾಯಶ್ಚಿತ್ತವಿದೆ ಅವರನ್ನು ಕ್ಷಮೆ ಮಾಡುತ್ತಾನೆ. ವಿಷ್ಣು ಮತ್ತು ವಾಯು ದೇವರ ವಿರೋಧಿಗಳು ತಮ್ಮ  ಪಾಪ ಸಾಧನಕ್ಕೆ ಕಾರಣ ಇಂತಹ ಪಾಪವನ್ನು ಮಾಡಿದರೆ ಕ್ಷಮೆ ಇಲ್ಲವೇ ಇಲ್ಲ. ಪರಮಾತ್ಮನನ್ನು ವಿರೋಧ ಮಾಡುವವರಿಗೂ ಶಿಕ್ಷೆ ಮಾಡುತ್ತಾನೆ ಅವರಿಗೆ ಪಾಪ ಕಳೆಯುವುದಿಲ್ಲ ಅವರಿಗೆ ಕಷ್ಟ ಮಾತ್ರ ಕೊಡುತ್ತಾನೆ. ಪ್ರಾಯಶ್ಚಿತ್ತವಾಗಿ ಪಾಪನಾಶನವಾಗುವುದಿಲ್ಲ. ಪಾಪಿಗಳು ಅಲ್ಲ ಪುಣ್ಯವಂತರೂ ಅಲ್ಲ ಅಂತಹವರನ್ನು ಪರಮಾತ್ಮ ಏನು ಮಾಡುತ್ತಾನೆ ಎಂದರೆ ಸಂಸಾರವನ್ನೇ ಕೊಡುತ್ತಾನೆ ಮುಂದೆ ಹೋಗುವುದಿಲ್ಲ ಹಿಂದೆ ಬರುವುದಿಲ್ಲ. ಇದ್ದಲ್ಲೇ ಇಡುತ್ತಾನೆ. ನಿತ್ಯ ಸಂಸಾರದಲ್ಲಿ ಇರುವುದು ಅವರ ಶಿಕ್ಷೆ.


ಕಾಲಿಯನಾಗನಿಗೆ ಸರ್ಪಯೋನಿ ಬಂದಿದ್ದೇ ಅವನ ಪಾಪಕ್ಕಾಗಿಯೇ ಎಂದು ತಿಳಿದಿದೆ, ನೀನು ಕೊಟ್ಟ ಶಿಕ್ಷೆಯನ್ನು ಭಕ್ತಿಯಿಂದ ಸ್ವೀಕಾರ ಮಾಡಿದ್ದೇವೆ ಎಂದು ಹೇಳುತ್ತಾರೆ. ಬರುವ ರೋಗಗಳೆಲ್ಲವೂ ನಮಗೆ ಆಗುವ ಆಪರೇಷನ್ ಪರಮಾತ್ಮನೇ ಸರ್ಜನ್ ಆಗಿ ಪಾಪವನ್ನು ಕಿತ್ತೊಗೆಯುವ ಆಪರೇಷನ್ ಮಾಡುತ್ತಿದ್ದಾನೆ ಎಂದು ಚಿಂತನೆ ಮಾಡಿದರೆ ನಮಗೆ ಮಂಗಳವನ್ನು ಉಂಟು ಮಾಡುತ್ತಾನೆ ಎಂದು ತಿಳಿಯಬೇಕು. ಭಗವಂತನನ್ನು ದ್ವೇಷ ಮಾಡಬಾರದು ಮಾಡಿದರೆ ತಮಸ್ಸಿಗೆ ಹೋಗುತ್ತೇವೆ. ದೇವರು ಎಂದಿಗೂ ಶತ್ರುವಲ್ಲ ಅವನು ಎಂದಿಗೂ ಸಖ ಎಂದು ತಿಳಿದವ ಧನ್ಯನಾಗುತ್ತಾನೆ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top