ಪಣಜಿ: ಗೋವಾದಲ್ಲಿ ಎಲ್ಲ ಕನ್ನಡ ಸಂಘಟನೆಗಳು ಸೇರಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ, ಇದು ಒಂದು ಇತಿಹಾಸವಾಗಲಿದೆ. ಇಷ್ಟು ವರ್ಷಗಳ ಕಾಲ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ. ಈ ಕಾರ್ಯಕ್ರಮ ಅದ್ದೂರಿಯಾಗಿ ಗೋವಾದಲ್ಲಿ ಆಚರಣೆ ಮಾಡಲು ವಿಶೇಷ ಸಮಿತಿಯನ್ನು ಕೂಡ ಆಯ್ಕೆ ಮಾಡಲಾಗಿದೆ. ನವೆಂಬರ್ 17 ರಂದು ಉತ್ತರ ಗೋವಾದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಿದ್ದೇವೆ ಎಂದು ಗೋವಾ ಕರ್ನಾಟಕ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷ ಮುರಳಿ ಮೋಹನ್ ಶೆಟ್ಟಿ ನುಡಿದರು.
ದಕ್ಷಿಣ ಗೋವಾದ ಲಕ್ಷ್ಮೀ ಎಂಪಾಯರ್ ಹೋಟೆಲ್ ನಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮೀತಿಯ ಪೂರ್ವ ಭಾವಿ ಸಿದ್ಧತಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಗೋವಾದಲ್ಲಿ ಸುಮಾರು 5000 ಜನರನ್ನು ಒಗ್ಗೂಡಿಸಿ ನವೆಂಬರ್ 17 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡುವ ಸಂಕಲ್ಪ ಮಾಡಿಕೊಂಡಿದ್ದೇವೆ. ಇದಕ್ಕೆ ಸುಮಾರು 20 ಲಕ್ಷ ರೂ ಹಣ ಖರ್ಚಾಗಲಿದೆ. ಇದರಿಂದಾಗಿ ಗೋವಾದಲ್ಲಿರುವ ಎಲ್ಲ ಕನ್ನಡಿಗರು, ಕನ್ನಡಪರ ಸಂಘಟನೆಗಳು ಇದಕ್ಕೆ ಕೈಜೋಡಿಸಬೇಕು. ತನು, ಮನ, ಧನ ಸಹಾಯ ಮಾಡಬೇಕು. ಗೋವಾದಲ್ಲಿ ಎಲ್ಲ ಕನ್ನಡ ಸಂಘಟನೆಗಳೂ ಒಗ್ಗೂಡಿ ಆಚರಣೆ ಮಾಡುವ ಕರ್ನಾಟಕ ರಾಜ್ಯೋತ್ಸವ ಒಂದು ದಾಖಲೆಯಾಗಲಿದೆ. ಎಲ್ಲ ಕನ್ನಡಿಗರೂ ಕೂಡ ಪಾಲ್ಗೊಳ್ಳಬೇಕು. ಮುಂದೆ ಪ್ರತಿ ವರ್ಷ ಇದೇ ರೀತಿ ಕಾರ್ಯಕ್ರಮವನ್ನು ಎಲ್ಲರೂ ಒಟ್ಟಾಗಿ ಆಚರಿಸೋಣ ಎಂದು ಮುರಳಿ ಮೋಹನ್ ಶೆಟ್ಟಿ ಮನವಿ ಮಾಡಿದರು.
ಗೋವಾದಲ್ಲಿ ಇರುವ ಎಲ್ಲ ಕನ್ನಡಿಗರು, ಎಲ್ಲ ಕನ್ನಡ ಸಂಘಟನೆಗಳು ಒಟ್ಟಾದರೆ ನಮಗೆ ಬರುವ ಎಲ್ಲ ಸಮಸ್ಯೆಗಳನ್ನು ಒಗ್ಗಟ್ಟಾಗಿ ಎದುರಿಸಲು ಸಾಧ್ಯ. ನಮ್ಮ ಬೇರು ಗಟ್ಟಿಯಾಗಿರಬೇಕಾದರೆ ನಾವೆಲ್ಲ ಕನ್ನಡಿಗರು ಒಟ್ಟಾಇರಬೇಕು. ಆಗ ಸರ್ಕಾರದ ಮಟ್ಟದಲ್ಲಿಯೂ ನಮ್ಮ ಕೆಲಸವಾಗುತ್ತದೆ. ಇದರಿಂದಾಗಿ ನಾವೆಲ್ಲರೂ ಒಟ್ಟಾಗಿರಬೇಕು ಎಂದು ಮುರಳಿ ಮೋಹನ್ ಶೆಟ್ಟಿ ನುಡಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಕರ್ನಾಟಕ ರಾಜ್ಯೋತ್ಸವ ಸಮಿತಿಯ ಉಪಾಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ, ದಕ್ಷಿಣ ಗೋವಾ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ನಾಟೀಕರ್, ಕಾರ್ಯದರ್ಶಿ ಸುರೇಶ್ ರಜಪೂತ, ರವರು ಗೋವಾದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಈ ಸಭೆಯಲ್ಲಿ ಗೋವಾದ ವಿವಿಧ ಕನ್ನಡಪರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದು ತಮ್ಮ ತಮ್ಮ ಅಭಿಪ್ರಾಯ ಮಂಡಿಸಿದರು. ಮಡಗಾಂವ ಕನ್ನಡ ಸಂಘದ ಗಿರಿರಾಜ ಭಂಡಾರಕರ್ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದನಾರ್ಪಣೆಗೈದರು.
ಕರ್ನಾಟಕ ರಾಜ್ಯೋತ್ಸವ ಸಮಿತಿಯನ್ನು ಈ ಸಭೆಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.
ಗೌರವಾಧ್ಯಕ್ಷರಾಗಿ ಸಿದ್ಧಣ್ಣ ಮೇಟಿ, ಅಧ್ಯಕ್ಷರಾಗಿ ಮುರಳಿ ಮೋಹನ ಶೆಟ್ಟಿ, ಉತ್ತರ ಗೋವಾ ಉಪಾಧ್ಯಕ್ಷರಾಗಿ ಹನುಮಂತಪ್ಪ ಶಿರೂರ ರೆಡ್ಡಿ, ದಕ್ಷಿಣ ಗೋವಾ ಉಪಾಧ್ಯಕ್ಷರಾಗಿ ಮಂಜುನಾಥ ನಾಟೀಕರ್, ಕಾರ್ಯದರ್ಶಿಯಾಗಿ ಸುರೇಶ ರಜಪೂತ್, ಖಜಾಂಚಿಯಾಗಿ ಪ್ರಶಂತ ಜೈನ್, ಸಂಘಟನಾ ಅಧ್ಯಕ್ಷರಾಗಿ ರಾಜೇಶ್ ಶೆಟ್ಟಿ ಆಯ್ಕೆಯಾಗಿದ್ದು ಅಧೀಕೃತವಾಗಿ ಘೋಷಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ