ಬಳ್ಳಾರಿ: ಹೆರಿಗೆ ನಂತರದಲ್ಲಿ ನವಜಾತ ಶಿಶುವಿಗೆ 12 ಮಾರಕ ರೋಗಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಯಸ್ಸಿಗನುಸಾರವಾಗಿ ನೀಡುವ ಲಸಿಕೆಗಳನ್ನು ತಪ್ಪದೇ ಕೊಡಿಸಲು ಪಾಲಕರ ಮನವೊಲಿಸಿ ಎಂದು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ವೈದ್ಯಾಧಿಕಾರಿಗಳಿಗೆ ಹೇಳಿದರು.
ಮಗುವಿಗೆ ಬಾಲ್ಯಾವಧಿ ಕಾಡುವ ಮಾರಕ ರೋಗಗಳನ್ನು ತಡೆಗಟ್ಟಲು ಪೋಲಿಯೋ ರೋಗಕ್ಕೆ ಪೋಲಿಯೋ ದ್ರಾವಣ, ಬಾಲಕ್ಷಯಕ್ಕೆ ಬಿಸಿಜಿ ಲಸಿಕೆ, ಕಾಮಾಲೆ ರೋಗಕ್ಕೆ ಹೆಪಟೈಟಿಸ್ ಚುಚ್ಚುಮದ್ದು, ಗಂಟಲು ಮಾರಿ, ನಾಯಿಕೆಮ್ಮು ಧನುರ್ವಾಯು ರೋಟ ವೈರಸ್, ಹೆಚ್ ಇನ್‌ಪ್ಲ್ಯುಯೆಂಜಾ, ಕಾಮಾಲೆಗಾಗಿ ಪೆಂಟಾವೈಲೆಂಟ್ ಲಸಿಕೆ, ರೋಟಾವೈರಸ್ ಅತಿಸಾರಭೇದಿಗೆ ನಿಮೋಕಾಕಲ್ ಲಸಿಕೆ, ಮೆದುಳು ಜ್ವರ ರೋಗಕ್ಕೆ ಜಾಪನೀಸ್ ಎನ್ಸ್ಪಲಿಟಿಸ್ ಲಸಿಕೆ, ದಡಾರ ರೂಬೇಲ್ಲಾ ರೋಗಕ್ಕೆ ಮಿಸಲ್ಸ್ ರೂಬೆಲ್ಲಾ ಲಸಿಕೆ ಹಾಗೂ ಸಂಜೆಯ ಹೊತ್ತು ಕಂಡುಬರುವ ಇರುಳುಗಣ್ಣು ರೋಗಕ್ಕೆ ವಿಟಾಮಿನ್-ಎ ಅನ್ನಾಂಗ ದ್ರಾವಣ ನೀಡಲಾಗುತ್ತಿದ್ದು, ಇವೆಲ್ಲವುಗಳನ್ನು ಮಗುವಿನ ಒಂದು ವರ್ಷದೊಳಗೆ ತಪ್ಪದೇ ಕೊಡಿಸಲು ಪೋಷಕರಿಗೆ ತಿಳಿಸಬೇಕು ಎಂದರು.
ಪ್ರತಿ ಅರೋಗ್ಯ ಕೇಂದ್ರಗಳಲ್ಲಿ ಹಾಗೂ ಗ್ರಾಮ ವಾರ್ಡ್ಗಳಲ್ಲಿ ಪ್ರತಿ ಗುರುವಾರ ಹಾಕುವ ಬಗ್ಗೆ ಹೆಚ್ಚು ಜಾಗೃತಿ ನೀಡಲು ಕೊರಿದರು. ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಣಾ ವೈದ್ಯಾಧಿಕಾರಿ ಡಾ.ಆರ್.ಎಸ್. ಶ್ರೀಧರ ಅವರು ಮಾತನಾಡಿ, ಪೋಲಿಯೋ, ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ದಡಾರ-ರೂಬೆಲ್ಲಾ ಮೆದುಳು ಜ್ವರಕ್ಕೆ 16 ರಿಂದ 23 ತಿಂಗಳು ಒಳಗೆ ಹೆಚ್ಚುವರಿಯಾಗಿ ಬೂಸ್ಟರ್ ಡೋಸ್ ರೂಪದಲ್ಲಿ ನೀಡಲಾಗುವುದು. 5 ರಿಂದ 6 ವರ್ಷದಲ್ಲಿ ಪುನಃ ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ರೋಗಿಗಳಿಗೆ ಎರಡನೇಯ ಬಾರಿ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಅವರು ತಿಳಿಸಿದರು.
ಗಾಳಿಸುದ್ದಿ ನಂಬಿ ಲಸಿಕೆ ಬೇಡವೆನ್ನುವವರಿಗೆ ಮನೆ ಭೇಟಿ, ಗುಂಪು ಸಭೆ, ಸಮುದಾಯ ಮುಖಂಡರ ಮೂಲಕ ಮಾಹಿತಿ ಒದಗಿಸಿ ಅವರಲ್ಲಿಯ ತಪ್ಪು ನಂಬಿಕೆಗಳನ್ನು ಹೋಗಲಾಡಿಸಿ ಎಲ್ಲಾ ಲಸಿಕೆಗಳನ್ನು ಹಾಕಿಸಲು ಶ್ರಮವಹಿಸಬೇಕು ಎಂದು ಕೋರಿದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ ಅವರು ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿ ಕಾರಿ ಡಾ.ವೀರೇಂದ್ರ ಕುಮಾರ್, ಹಿರಿಯ ವೈದ್ಯ ಡಾ.ನರಸಿಂಹಮೂರ್ತಿ, ಭಾರತೀಯ ಮಕ್ಕಳ ತಜ್ಞರ ಸಂಘದ ಡಾ.ಸುನೀಲ್, ಡಿಎನ್‌ಓ ಗಿರೀಶ್, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಈರಣ್ಣ, ಡಾ.ಭರತ್, ಡಾ.ಅರುಣ್, ಡಾ.ಮಂಜುನಾಥ ಜವಳಿ ಸೇರಿದಂತೆ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ