ದ.ಕ-ಕಾಸರಗೋಡು ಹವ್ಯಕ ಮಹಾಸಭೆಗೆ ಹೊಸ ಆಡಳಿತ ಸಮಿತಿ

Upayuktha
0


ಮಂಗಳೂರು: ದ.ಕ. ಮತ್ತು ಕಾಸರಗೋಡು ಹವ್ಯಕ ಮಹಾಸಭಾದ 42ನೇ ವಾರ್ಷಿಕ ಮಹಾಸಭೆಯು ಮಂಗಳೂರಿನ ನಂತೂರಿನಲ್ಲಿರುವ ಭಾರತೀ ಕಾಲೇಜಿನ ‘ಶಂಕರಶ್ರೀ’ ಸಭಾಭವನದಲ್ಲಿ ಸೆಪ್ಟೆಂಬರ್ 1 ರ ಭಾನುವಾರದಂದು ಮಹಾಸಭಾದ ಅಧ್ಯಕ್ಷರಾದ ನಿಡುಗಳ ಕೃಷ್ಣಭಟ್ಟರ ಅಧ್ಯಕ್ಷತೆಯಲ್ಲಿ ಜರಗಿತು. 


ಪ್ರಾರ್ಥನೆಯ ಬಳಿಕ ಉಪಾಧ್ಯಕ್ಷ ಗಿರೀಶ್ಚಂದ್ರ ಎ.ಟಿ. ಸ್ವಾಗತಿಸಿದರು. ಕಾರ್ಯದರ್ಶಿ ಈಶ್ವರಭಟ್ ಕೆ. ವರದಿ ವಾಚಿಸಿದರು. ಖಜಾಂಚಿ ಗೋಪಾಲಕೃಷ್ಣ ಭಟ್ ಕೆ. ಲೆಕ್ಕಪತ್ರ ಮಂಡಿಸಿದರು. ಲೆಕ್ಕಪತ್ರವನ್ನು ಚಾರ್ಟರ್ಡ್ ಅಕೌಂಟೆಂಟ್ ಶಾಮಭಟ್ ಪರಿಶೀಲಿಸಿ ಶಾಸ್ತ್ರೀಯವಾಗಿ ತಯಾರಿಸಿದ್ದರು. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೆಕ್ಕಪತ್ರವನ್ನು ಸಭೆಯು ಅನುಮೋದಿಸಿತು. 


ಅನಂತರ ನೂತನ ಕಾರ್ಯಕಾರಿ ಸಮಿತಿಯನ್ನು ಚುನಾವಣಾಧಿಕಾರಿಗಳಾದ ಜಿ.ಕೆ. ಭಟ್ ಕೊಣಾಜೆ ಮಂಡಿಸಿದರು. ಸಭೆಯು ಕರತಾಡನದೊಂದಿಗೆ ಸರ್ವಾನುಮತದಿಂದ ಹೊಸ ಸಮಿತಿಯನ್ನು ಸ್ವಾಗತಿಸಿತು. ಅನಂತರ ನಿಡುಗಳ ಕೃಷ್ಣಭಟ್ಟರು ಅಧ್ಯಕ್ಷ ಭಾಷಣ ಮಾಡಿದರು. 2023-24 ನೇ ಸಾಲಿನಲ್ಲಿ ಮಾಡಲಾದ ಪ್ರಮುಖ ಕೆಲಸಕಾರ್ಯಗಳನ್ನು ಪ್ರಸ್ತಾವಿಸಿ ಆಗಬೇಕಾಗಿರುವ ಹೊಸ ಕಾರ್ಯಗಳ ಕಡೆಗೆ ಬೆಳಕು ಚೆಲ್ಲಿದರು. ಸಹಕಾರ ನೀಡಿದ ಎಲ್ಲ ಪದಾಧಿಕಾರಿಗಳ ಸೇವೆ ಹಾಗೂ ಸಹಕಾರವನ್ನು ಅವರು ಸ್ಮರಿಸಿಕೊಂಡು ಕೃತಜ್ನತೆ ಸಲ್ಲಿಸಿದರು.  


ಮಹಾಸಭಾದ ಪೂರ್ವಾಧ್ಯಕ್ಷರು ಮತ್ತು ಹಿರಿಯ ಸದಸ್ಯರು, ಹಾಸ್ಟೆಲ್ ಸಂಚಾಲಕಿ ಶ್ರೀಮತಿ ವಿಜಯಲಕ್ಷ್ಮಿ ಉಳುವಾನ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಈಶ್ವರಭಟ್ ಕೆ. ವಂದನೆ ಸಲ್ಲಿಸಿದರು. 


ನೂತನ ಸಮಿತಿ:

ಭೋಜನದ ಬಳಿಕ ಹೊಸ ಪದಾಧಿಕಾರಿಗಳ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಹೊಸ ಸಮಿತಿಗೆ ಅಧ್ಯಕ್ಷರಾಗಿ ಗಿರೀಶ್ಚಂದ್ರ ಎ. ಟಿ., ಉಪಾಧ್ಯಕ್ಷರಾಗಿ ಕಲ್ಲಾಜೆ ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ಎಂ.ಟಿ. ಭಟ್ ಮೆದು ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಈಶ್ವರಭಟ್ ಕೆ., ಖಜಾಂಚಿಯಾಗಿ ಗೋಪಾಲಕೃಷ್ಣ ಭಟ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಿಡುಗಳ ಕೃಷ್ಣಭಟ್, ಡಾ. ವಸಂತಕುಮಾರ ಪೆರ್ಲ, ಕೆ. ಸದಾಶಿವ ಭಟ್, ಶ್ರೀಮತಿ ವಸಂತಿ ಎಸ್. ಭಟ್, ಶ್ರೀಮತಿ ಪುಷ್ಪಾ ಕೆ. ಖಂಡಿಗೆ, ಶ್ರೀಕೃಷ್ಣ ಎನ್, ಪಿ. ಸುಬ್ರಹ್ಮಣ್ಯ ಭಟ್, ತಾಳ್ತಜೆ ಸುಬ್ರಹ್ಮಣ್ಯ ಭಟ್, ರಾಮಕೃಷ್ಣ ಭಟ್ ಬೇತ ಮತ್ತು ಪ್ರವೀಣಶಂಕರ ಕೆ. ಆಯ್ಕೆಯಾದರು.  


ಈ ಸಂದರ್ಭದಲ್ಲಿ ನಿರ್ಗಮನ ಅಧ್ಯಕ್ಷರು ತನ್ನ ಅವಧಿಯಲ್ಲಿ ಸಹಕಾರ ನೀಡಿದ ಸರ್ವರಿಗೂ ವಂದನೆ ಸಲ್ಲಿಸಿದರು. ನೂತನ ಅಧ್ಯಕ್ಷರು ಸಂಸ್ಥೆಯ ಸುಗಮ ಮುನ್ನಡೆಗೆ ಎಲ್ಲರ ಸಹಕಾರ ಕೋರಿದರು. ಸಭೆಯ ಕೊನೆಯಲ್ಲಿ ಕಾರ್ಯದರ್ಶಿಯವರು ವಂದಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top