ಮಂಗಳೂರು: ಮೂಡಾ ಹಗರಣದ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಚ್ಚ ನ್ಯಾಯಾಲದಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡ ಬಳಿಕ ಪಿವಿಎಸ್ ಬಳಿಯ ದ.ಕ ಜಿಲ್ಲಾ ಬಿಜೆಪಿ ಕಚೇರಿ ಮುಂದೆ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು ಇದು ಸತ್ಯಕ್ಕೆ ಸಂದ ಜಯವಾಗಿದೆ. ಮೂಡ ಹಗರಣವನ್ನು ಖಂಡಿಸಿ ಬಿಜೆಪಿ ಮೈಸೂರು ಚಲೋ ಯಾತ್ರೆ ನಡೆಸಿದ್ದಾಗ, ಇದು ರಾಜಕೀಯ ಷಡ್ಯಂತ್ರ, ಇದರಲ್ಲಿ ಯಾವುದೇ ಹುರುಳಿಲ್ಲ, ನಾನು ರಾಜೀನಾಮೆ ಕೊಡುವುದಿಲ್ಲ, ಬೇಕಿದ್ದರೆ ರಾಜ್ಯಪಾಲರೇ ರಾಜೀನಾಮೆ ಕೊಡಲಿ ಎಂದು ಭಂಡತನ ಪ್ರದರ್ಶಿಸಿದ್ದ ಸಿದ್ದರಾಮಯ್ಯನವರಿಗೆ ಹೈಕೋರ್ಟ್ ತೀರ್ಪು ಕಪಾಳ ಮೋಕ್ಷವಾಗಿದೆ. ಇವರ ಹಿಂಬಾಲಕರಂತೂ ರಾಜ್ಯಪಾಲರನ್ನು ಬಾಂಗ್ಲಾ ಮಾದರಿಯಲ್ಲಿ ಓಡಿಸುತ್ತೇವೆ ಎಂದಿದ್ದರು. ಸಾಲದ್ದಕ್ಕೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರ ವಿರುದ್ಧ ಸಚಿವ ಸಂಪುಟ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗಿತ್ತು. ಈಗ ಈ ಎಲ್ಲಾ ಭ್ರಷ್ಟರಿಗೆ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯಾಲಯದ ಮೂಲಕವೇ ಉತ್ತರ ಸಿಕ್ಕಿದೆ. ಈಗಲಾದರೂ ತಮ್ಮ ವಿರುದ್ಧ ನಡೆಯಲಿರುವ ತನಿಖೆಗೆ ಸಹಕರಿಸಲು ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿ ಹುದ್ದೆಯ ಘನತೆಯನ್ನು ಉಳಿಸಬೇಕೆಂದು ಶಾಸಕ ವೇದವ್ಯಾಸ ಕಾಮತ್ ಅವರು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿನ ಎಲ್ಲಾ ಹಗರಣಗಳು ಬಯಲಿಗೆ ಬರಲಿದ್ದು ಕಾಂಗ್ರೆಸ್ ಸರ್ಕಾರ ಗಂಟು ಮೂಟೆ ಕಟ್ಟುವುದು ನಿಶ್ಚಿತವೆಂದು ಶಾಸಕರು ಹೇಳಿದರು.
ಪ್ರತಿಭಟನೆಯಲ್ಲಿ ಶಾಸಕರುಗಳಾದ ಡಾ.ಭರತ್ ಶೆಟ್ಟಿ, ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯ, ಮೇಯರ್ ಮನೋಜ್ ಕೋಡಿಕಲ್, ಉಪಮೇಯರ್ ಭಾನುಮತಿ ಪಿ.ಎಸ್, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ದಿವಾಕರ ಪಾಂಡೇಶ್ವರ, ಸುಧೀರ್ ಶೆಟ್ಟಿ ಕಣ್ಣೂರು, ಜಗದೀಶ್ ಶೇಣವ, ನಂದನ್ ಮಲ್ಯ, ರಮೇಶ್ ಹೆಗ್ಡೆ, ಮಂಜುಳಾ ರಾವ್, ಮಹೇಶ್ ಜೋಗಿ, ಪೂಜಾ ಪೈ, ಯತೀಶ್ ಅರ್ವರ್, ರವೀಂದ್ರ ಶೆಟ್ಟಿ, ಪಾಲಿಕೆ ಸದಸ್ಯರುಗಳು, ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ