ವಿಜಯಪುರ: ಮಕ್ಕಳ ಹಕ್ಕುಗಳ ಮತ್ತು ಅವರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಯೂನಿಸೆಫ್, ರಾಜ್ಯದ ಎಲ್ಲ ಪತ್ರಿಕೋದ್ಯಮ ವಿಭಾಗಳೊಂದಿಗೆ ಕೆಲಸ ಮಾಡಲು ಬಾಲ ವಿಕಾಸ ಅಕಾಡೆಮಿ ಸಿದ್ಧವಿದೆ. ಒಪ್ಪಂದ ಮಾಡಿಕೊಂಡು ಇದಕ್ಕೆ ಅಗತ್ಯವಾದ ಅನುದಾನ ನೀಡಲಾಗುವುದು ಎಂದು ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಯುನಿಸೆಫ್ ಪ್ರಾಯೋಜಕತ್ವ ಮತ್ತು ಇವರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡ ಮಕ್ಕಳ ಹಕ್ಕುಗಳು, ರಕ್ಷಣೆ ಮತ್ತು ಆರೋಗ್ಯ ಎಂಬ ವಿಷಯದ ಕುರಿತು ಮಾಧ್ಯಮ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಜಾತಿ, ಪಂಥ, ಬೇಧವಿಲ್ಲ. ಕೇವಲ ಸರ್ಕಾರಿ ಸೌಲಭ್ಯಗಳ ಮೂಲಕ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಸಾಧ್ಯವಿಲ್ಲ. ಪ್ರೀತಿ, ಮಮತೆಯಿಂದ ಮಾತ್ರ ಮಗುವಿನ ಮುಖ್ಯ ವಾಹಿನಿ ಮತ್ತು ಮನೋವಿಕಾಸ ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಕ್ಕಳಲ್ಲಿ ಸಂಸ್ಕಾರದ ಮನೋವಿಕಾಸ ಬಿತ್ತುವ ಹೊಣೆ ನಮ್ಮೆಲ್ಲರ ಮೇಲಿದೆ. ನಾವು ಬೇರೆಡೆಯಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಬಹುದು. ಆದರೆ, ಒಳ್ಳೆಯ ಮಕ್ಕಳನ್ನು ಆಮದು ಮಾಡಿಕೊಳ್ಳಲು ಸಾಧ್ಯವೇ ಎಂಬ ಆಲೋಚನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಸರ್ಕಾರ, ಮಾಧ್ಯಮಗಳು ಮತ್ತು ಯೂನಿಸೆಫ್ ಹಾಗೂ ಪ್ರತಿ ಕುಟುಂಬದ ಜವಾಬ್ದಾರಿ ಆಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಯುನಿಸೆಫ್‍ನ ಪ್ರಸೂನ್ ಸೇನ್ ಮಾತನಾಡಿ, ದೇಶದ ಅಭಿವೃದ್ಧಿ ವಿಚಾರದಲ್ಲಿ ಮಕ್ಕಳ ವಿಕಾಸವೂ ಅತಿ ಮುಖ್ಯ ಅಂಶ. ಮಕ್ಕಳ ಹಕ್ಕುಗಳ ರಕ್ಷಣೆ, ಮಾನಸಿಕ, ದೈಹಿಕ ವಿಕಾಸ, ಆರೋಗ್ಯ ವಿಚಾರದಲ್ಲಿ ಯುನಿಸೆಫ್ ಹೆಚ್ಚು ಒತ್ತು ಕೊಟ್ಟು ಈ ವಿಚಾರವಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಕಳೆದ ಹತ್ತು ವರ್ಷಗಳಿಂದಲೂ ವಿವಿಗಳ ಸಹಯೋಗದೊಂದಿಗೆ ಪತ್ರಕರ್ತರಿಗೆ ಕಾರ್ಯಾಗಾರ ನೀಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ ಮಾತನಾಡಿ, ದೇಶದಲ್ಲಿ 18 ವರ್ಷದೊಳಗಿನ ಮಕ್ಕಳ ಸಂಖ್ಯೆ ಶೇ. 30ರಷ್ಟು ಇದೆ. 1990ರಿಂದ ಈಚೆಗೆ ಹಕ್ಕು ಆಧಾರಿತ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮಕ್ಕಳ ಬದುಕುವ, ಶಿಕ್ಷಣ, ಆರೋಗ್ಯ ಮತ್ತು ಭಾಗವಹಿಸುವಿಕೆ ಬಗ್ಗೆ ಅವಶ್ಯ ಇದೆ. ಮಕ್ಕಳ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ಆಗುತ್ತಿದೆ. ಆದರೆ, ನಮಗೆ ಅವು ಮೇಲ್ನೋಟಕ್ಕೆ ಕಾಣುವುದಿಲ್ಲ. ಗ್ರಾಮೀಣ, ನಗರ ಪ್ರದೇಶಕ್ಕೆ ಬೇರೆ-ಬೇರೆ ಗಂಭೀರ ಸಮಸ್ಯೆಗಳು ಇದೆ. ವಲಸೆ, ಅರ್ಧಕ್ಕೆ ಶಾಲಾ ಬಿಟ್ಟ ಮಕ್ಕಳ ಸಮಸ್ಯೆಗಳು ಇವೆ. ಹೀಗಾಗಿ ನೀತಿ, ನಿರೂಪಣೆ ಮತ್ತು ದತ್ತಾಂಶಗಳ ವಿಶ್ಲೇಷಣೆ ಮಾಡುವ ಅಗತ್ಯ ಇದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿದರು. ಕಾರ್ಯಾಗಾರದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ, ಬೆಳಗಾವಿ ವಿಭಾಗದ ವಿವಿಧ ಜಿಲ್ಲೆಗಳಿಂದ ಆಯ್ದ ಮೂವತ್ತಕ್ಕೂ ಅಧಿಕ ಪತ್ರಕರ್ತರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ.ಸಪ್ನಾ ಎಸ್.ಎಂ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ತಮೀನಾ ಕೋಲಾರ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಸಂದೀಪ್ ನಾಯಕ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ