ಭಾರತದ ಸ್ವಾತಂತ್ರ್ಯ ಸಮರದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅದ್ಭುತ ಸ್ಥಾನವಿದೆ. ಸ್ವಾತಂತ್ರ್ಯ ಹೋರಾಟವು ಜನಸಾಮಾನ್ಯರ ಹೋರಾಟವಾಗಿ ಬಿಂಬಿತವಾಗಲು ಸಾರ್ವಜನಿಕ ಗಣೇಶೋತ್ಸವದ ಪಾತ್ರ ಅಗ್ರಗಣ್ಯ.
ಹೌದು, 1893 ರ ಕಾಲಘಟ್ಟ. ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಮಂದಗಾಮಿಗಳ ಯುಗವೆಂದೆ ಖ್ಯಾತಿಯನ್ನು ಪಡೆದಿರುವ ಸಮಯ. ಮಂದಗಾಮಿಗಳೆಂದರೆ ಅದೊಂದು ಅತೀ ಕಡಿಮೆ ಜನಸಂಖ್ಯೆಯ ಸುಶಿಕ್ಷಿತ ವರ್ಗ. ಈ ಶಿಕ್ಷಣವನ್ನವರು ಬ್ರಿಟಿಷರ ಶಿಕ್ಷಣ ಸಂಸ್ಥೆಗಳಲ್ಲೇ ಪಡೆದಿದ್ದರು. ಬ್ರಿಟಿಷರ ನಿರ್ಮಾಣ ಎನಿಸಿಕೊಂಡಿದ್ದ ಇವರು ಬ್ರಿಟಿಷರು ಭಾರತದಲ್ಲಿ ನಡೆಸುತ್ತಿದ್ದುದು ಸಂವಿಧಾನಬದ್ಧ ಸರ್ಕಾರವೆಂದು ಭಾವಿಸಿದ್ದರು. ಅಲ್ಲದೆ ಇವರ ವಿರುದ್ಧ ಮಾಡಬೇಕಾದದ್ದು ಸಂವಿಧಾನ ಬದ್ಧ ಹೋರಾಟಗಳು ಮಾತ್ರವೆಂಬುದು ಇವರ ನಿಲುವಾಗಿತ್ತು. ಇನ್ನೊಂದೆಡೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ಪಡೆದುಕೊಳ್ಳಲು ಭಾರತೀಯರು ಪರಿಪಕ್ವತೆಯನ್ನು ಸಾಧಿಸಿಲ್ಲವೆಂಬುದು ಹಾಗೂ ಭಾರತೀಯರು ಪಕ್ವತೆಯನ್ನು ಸಾಧಿಸುವ ತನಕ ಬ್ರಿಟಿಷರ ಆಳ್ವಿಕೆಯು ಭಾರತಕ್ಕೆ ಅಗತ್ಯವಿದೆ ಎಂಬುದು ಇವರ ಅಭಿಪ್ರಾಯವಾಗಿತ್ತು.
ಆ ಸಂದರ್ಭದಲ್ಲಿ ಜನಸಾಮಾನ್ಯರು ಅಷ್ಟಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುತ್ತಿರಲಿಲ್ಲ. ಅಲ್ಲದೆ 1857 ರ ನಂತರ ಭಾರತೀಯ ಎಲ್ಲಾ ರಾಜರುಗಳು ಬ್ರಿಟಿಷರ ಸಾಮಂತರು ಎಂಬಂತೆ ಬ್ರಿಟಿಷ್ ರಾಣಿ ನಿರ್ಧರಿಸಿ ಆಗಿತ್ತು. ಆದ್ದರಿಂದ ಈ ಸಂದರ್ಭದಲ್ಲಿ ಯಾವುದೇ ಭಾರತೀಯ ಆಳರಸರು ಬಹಿರಂಗವಾಗಿ ಬ್ರಿಟಿಷರ ವಿರುದ್ಧ ತಿರುಗಿ ಬೀಳುವ ಪರಿಸ್ಥಿತಿಯಲ್ಲಿರಲಿಲ್ಲ. ಆಗ ಜನಸಾಮಾನ್ಯರನ್ನು ಬಡಿದೆಬ್ಬಿಸುವ ಮಹತ್ಕಾರ್ಯವನ್ನು ಮಾಡಿರುವುದೇ ಬಾಲಗಂಗಾಧರ ತಿಲಕ್ ಹಾಗೂ ಇವರ ಸಾರ್ವಜನಿಕ ಗಣೇಶೋತ್ಸವ ಪರಿಕಲ್ಪನೆ.
ಅದಾಗಲೇ ಬ್ರಿಟಿಷ್ ಸರ್ಕಾರ ಭಾರತೀಯರ ಧಾರ್ಮಿಕ ಹಕ್ಕುಗಳಿಗೆ ಅಡೆತಡೆಗಳನ್ನು ತರುವುದಿಲ್ಲವೆಂಬ ಶಾಸನವನ್ನು ಹೊರಡಿಸಿತ್ತು. ಕಾನೂನು ಬದ್ಧವಾಗಿ ಅವರು ಭಾರತೀಯರ ಧಾರ್ಮಿಕ ವಿಚಾರಗಳನ್ನು ಪ್ರಶ್ನಿಸುತ್ತಿರಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡ ತೀವ್ರಗಾಮಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ತಿಲಕಪ್ರಾಯರಾಗಿ ವಿರಾಜಿಸುವ ಬಾಲಗಂಗಾಧರ್ ತಿಲಕ್ ರವರು 1893 ರಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಪುಣೆಯಲ್ಲಿ ಪ್ರಾರಂಭಿಸಿದರು. ಸಂಪೂರ್ಣ ಸ್ವಾತಂತ್ರ್ಯ ಸಾಧಿಸುವುದು ಇವರ ಗುರಿಯಾಗಿತ್ತು. ಇದರ ಹಿಂದೆ ಮಣ್ಣಿನ ಗಣಪತಿಯ ವಿಗ್ರಹವನ್ನು ಮಾಡಿ ಆರಾಧಿಸುವ ಪದ್ಧತಿ ಕೇವಲ ಮನೆಗಳ ಒಳಗೆ ಸೀಮಿತವಾಗಿತ್ತು. ಆದರೆ ಇದನ್ನೊಂದು ಸಾರ್ವಜನಿಕರ ಭಾಗವಹಿಸುವಿಕೆಯ ಹಬ್ಬವನ್ನಾಗಿಸಿ, ತನ್ಮೂಲಕ ಜನರು ಒಂದೆಡೆ ಸೇರುವಂತೆ ಮಾಡಿದ್ದು ಇದೇ ತಿಲಕರು.
ಮನೆಗಳಲ್ಲಿ ಒಂದೆರಡು ದಿನಗಳಿಗೆ ಸೀಮಿತವಾಗಿದ್ದ ಈ ಗಣೇಶೋತ್ಸವ ಪದ್ಧತಿಯನ್ನು ಹತ್ತು ದಿನ ಹದಿನೈದು ದಿನಗಳ ತನಕ ವಿಜ್ರಂಭಣೆಯಿಂದ ಮಾಡುವ ಆಚರಣೆಯನ್ನಾಗಿ ಇವರು ಮಾಡಿದರು. ಈ ಆಚರಣೆ ಒಂದೆಡೆ ಸಾಗುತ್ತಿದ್ದಾಗ ಸ್ವಾತಂತ್ರ್ಯ ಹೋರಾಟಗಾರರು ಗುಪ್ತವಾಗಿ ಸಭೆ ಸೇರುತ್ತಿದ್ದರು. ಅಲ್ಲದೆ ತಮ್ಮ ಮುಂದಿನ ನಡೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿ ಕೊಳ್ಳುತ್ತಿದ್ದರು. ಇನ್ನೊಂದೆಡೆಯಲ್ಲಿ ಬಂದ ಭಕ್ತಾದಿಗಳಿಗೆ ದೇಶಪ್ರೇಮವನ್ನು ಬಿತ್ತುತ್ತಿದ್ದರು. ಅಲ್ಲದೆ ಆಂಗ್ಲರಿಗೆ ಸ್ವಲ್ಪವೂ ಅನುಮಾನ ಬಾರದಂತೆ ತಮ್ಮ ತೀವ್ರಗಾಮಿ ಹೋರಾಟಕ್ಕೆ ಮುನ್ನುಡಿಯನ್ನು ಬರೆದರು.
ಮುಂದಿನ ತಮ್ಮ ಸ್ವರಾಜ್ಯ ಹಾಗೂ ಸ್ವದೇಶಿ ಕೇಂದ್ರಿತ ಹೋರಾಟಕ್ಕೆ ಈ ಸಾರ್ವಜನಿಕ ಗಣೇಶೋತ್ಸವ ಪರಿಕಲ್ಪನೆ ಅಗ್ರ ಮುನ್ನುಡಿಯನ್ನು ಬರೆಯಿತು. ಇದರೊಂದಿಗೆ ಅವರು ಪ್ರಾರಂಭಿಸಿದ ಶಿವಾಜಿ ಜಯಂತಿ ಕಾರ್ಯಕ್ರಮವು ಸ್ವಾತಂತ್ರ್ಯ ಹೋರಾಟದ ಕಹಳೆಯನ್ನು ಊದಲು ತನ್ನದೇ ಆದ ಪಾತ್ರವನ್ನು ವಹಿಸಿತು.
ಈ ರೀತಿಯಾಗಿ ಇಂದು ರಾಷ್ಟ್ರದಾದ್ಯಂತ ಪಸರಿಸಿರುವ ಅತಿ ವಿಜ್ರಂಭಣೆಯ ಸಾರ್ವಜನಿಕ ಗಣೇಶೋತ್ಸವ ಪದ್ಧತಿ ಭಕ್ತಿಯ ಧಾರೆಯನ್ನು ಎರೆಯುವುದಲ್ಲದೆ ರಾಷ್ಟ್ರಪ್ರೇಮದ ಮಹಾನ್ ಇತಿಹಾಸದ ಜೀವಂತ ಸಾಕ್ಷಿಯಾಗಿ ನಮ್ಮೆದುರು ಕಂಗೊಳಿಸುತ್ತಿದೆ.
- ಅಭಿಜ್ಞಾ ಉಪಾಧ್ಯಾಯ
ಇತಿಹಾಸ ಪ್ರಾಧ್ಯಾಪಕಿ
SDM ಕಾಲೇಜು, ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ