ಗೋಕರ್ಣ: ಇಲ್ಲಿನ ಸಾರ್ವಭೌಮ ಗುರುಕುಲದಲ್ಲಿ 'ಅಸ್ಮಾಕಂ ಸಂಸ್ಕೃತಮ್' ಕಾರ್ಯಕ್ರಮವು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ-ನಿರ್ದೇಶನಾಲಯ ಬೆಂಗಳೂರು, ಶ್ರೀ ರಾಘವೇಂದ್ರ ಭಾರತೀ ಸವೇದ ಸಂಸ್ಕೃತ ಮಹಾವಿದ್ಯಾಲಯ ಸುಬ್ರಹ್ಮಣ್ಯ- ಹೊನ್ನಾವರ ಹಾಗೂ ಸಾರ್ವಭೌಮ ಗುರುಕುಲದ ಸಂಸ್ಕೃತ ಭಾಷಾ ಸಂಘ ಇವುಗಳ ಸಹಯೋಗದಲ್ಲಿ "ಮಾತೃಭೂಮಿ" ಆವರಣದಲ್ಲಿ ಶನಿವಾರ ನಡೆಯಿತು.
ಮುಖ್ಯ ವಕ್ತಾರರಾಗಿ ಆಗಮಿಸಿದ ಗೋಕರ್ಣದ ಮೇಧಾ ದಕ್ಷಿಣಾಮೂರ್ತಿ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮಂಜುನಾಥ ಭಟ್ಟರು ಸಂಸ್ಕೃತದ ಇಂದಿನ ಸ್ಥಿತಿಗತಿಯ ಬಗ್ಗೆ ಸಂವಾದಾತ್ಮಕವಾಗಿ ಮಾತನಾಡುತ್ತಾ ಮಕ್ಕಳು ಸಂಸ್ಕೃತವನ್ನು ಉಳಿಸುವ ಯೋಧರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ವಾನ್ ಸುಧನ್ವಾ ಶಾಸ್ತ್ರಿಯವರು ಸಂಸ್ಕೃತ ಮತ್ತು ಸಂಸ್ಕೃತಿಗಳು ನಮ್ಮ ಜೀವತಂತುವಿನೊಂದಿಗೇ ಹರಿದು ಬಂದಿರುವುದರಿಂದ ಅತ್ಯಲ್ಪ ಪ್ರಯತ್ನದಿಂದ ನಾವು ಇದನ್ನು ಸಾಧಿಸಬಹುದು ಮತ್ತು ಇದನ್ನು ಸಾಧಿಸುವ ಗುರುತರ ಹೊಣೆ ನಮ್ಮ ಮೇಲಿದೆ ಎಂದರು.
ಆರಂಭದಲ್ಲಿ ಕಾರ್ಯಕ್ರಮದ ಸಂಯೋಜಕಿ ಶ್ರೀ ರಾಘವೇಂದ್ರ ಭಾರತೀ ಸವೇದ ಸಂಸ್ಕೃತ ಮಹಾವಿದ್ಯಾಲಯದ ಅಧ್ಯಾಪಕರಾದ ಡಾ. ಶ್ರೀದೇವಿ ಹೆಗಡೆಯವರು ಪ್ರಾಸ್ತಾವಿಕ ಮಾತನಾಡುತ್ತಾ ವಿಶ್ವ ವಿದ್ಯಾಲಯದ ಆಶಯ ಹಾಗೂ ಸಂಸ್ಕೃತ ಸಂಭಾಷಣೆಯ ಅಗತ್ಯತೆಗಳನ್ನು ತಿಳಿಸಿದರು.
ಪ.ಪೂ ವಿಭಾಗದ ಪ್ರಾಚಾರ್ಯೆ ಶ್ರೀಮತಿ ಶಶಿಕಲಾ ಕುರ್ಸೆ ಹಾಗೂ ಅಧ್ಯಾಪಕ ವೃಂದದವರ ಉಪಸ್ಥಿತಿಯಲ್ಲಿ ಸುಮಾರು 2 ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸಂಭಾಷಣಾ ಶಿಬಿರದಲ್ಲಿ ಭಾಗವಹಿಸಿದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು 1 ಘಂಟೆಯ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸ್ಕೃತದಲ್ಲಿ ನಡೆಸಿದರು.
ಗುರುಕುಲದ ಅಧ್ಯಾಪಕಿ ಕುಮಾರಿ ಭಾಗ್ಯಶ್ರೀ ಭಟ್ಟ ಅಭ್ಯಾಗತರನ್ನು ಸ್ವಾಗತಿಸಿ ಪರಿಚಯಿಸಿದರು. ಕುಮಾರಿ ಸ್ನೇಹಗೌರಿ ಧನ್ಯವಾದ ಸಮರ್ಪಿಸಿದರು.
ಒಂಬತ್ತನೇ ತರಗತಿಯ ವಿದ್ಯಾರ್ಥಿಗಳ ವೇದಘೋಷದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಕುಮಾರಿ ಭಾರ್ಗವಿ ಹಾಗೂ ಕುಮಾರಿ ಧನ್ಯಾ ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಾರ್ಯಕ್ರಮವು ಸಂಸ್ಕೃತದಲ್ಲೇ ನಡೆದದ್ದು ವಿಶೇಷ ಮೆರಗನ್ನು ನೀಡಿತು. ಗುರುವಂದನೆಯಿಂದ ಪ್ರಾರಂಭಗೊಂಡ ಕಾರ್ಯಕ್ರಮವು ಶಾಂತಿಮಂತ್ರದೊಂದಿಗೆ ಸಂಪನ್ನಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ