ಉಜಿರೆ:ಧರ್ಮಸ್ಥಳ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ ಉದ್ಘಾಟನೆ

Upayuktha
0


ಉಜಿರೆ:
ಎಂಟು ಶತಮಾನಗಳಿಂದ ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧಿ ದಾನದೊಂದಿಗೆ ಸರ್ವಧರ್ಮೀಯರ ಶ್ರದ್ಧಾ-ಭಕ್ತಿಯ ಹಾಗೂ ಸಾಮಾಜಿಕಸಾಮರಸ್ಯದ ಶ್ರದ್ಧಾಕೇಂದ್ರವಾಗಿ ಬೆಳೆಯುತ್ತಿರುವ, ಬೆಳಗುತ್ತಿರುವ ಪವಿತ್ರ ಕ್ಷೇತ್ರ ಧರ್ಮಸ್ಥಳವು ಭಕ್ತರಿಗೆ ಕಲಿಯುಗದ ಕಲ್ಪವೃಕ್ಷವಾಗಿದೆ. 


ಇಲ್ಲಿರುವ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿ, ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಬಾಹುಬಲಿ ಬೆಟ್ಟ, ಅಣ್ಣಪ್ಪಬೆಟ್ಟ, ಪ್ರಶಾಂತ ಪ್ರಾಕೃತಿಕ ಪರಿಸರ, ಪವಿತ್ರ ಪುಣ್ಯನದಿ ನೇತ್ರಾವತಿ – ಎಲ್ಲವುಗಳ ದರ್ಶನ ಮಾಡಿದಾಗ ನಮ್ಮ ಮಾನಸಿಕ ದುಃಖ, ದುಮ್ಮಾನಗಳೆಲ್ಲ ದೂರವಾಗಿ ಶಾಂತಿ, ನೆಮ್ಮದಿ ಸಿಗುತ್ತದೆ. ಧರ್ಮಸ್ಥಳವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಸ್ಕಾರದ ಪ್ರೇರಣೆ ಮತ್ತು ಸ್ಪೂರ್ತಿಯ ಕೇಂದ್ರವಾಗಿದೆ ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೆಳಿದರು.


ಅವರು ಭಾನುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ 26 ನೆ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.


ಭಜನೆ ಇದ್ದಲ್ಲಿ ವಿಭಜನೆ ಇರುವುದಿಲ್ಲ. ನೃತ್ಯಭಜನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವರ್ಧನೆಯಾಗುತ್ತದೆ. ಚಂಚಲವಾದ ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಪರಿಶುದ್ಧ ಮನಸ್ಸಿನಿಂದ ಭಜನೆ ಮಾಡಿದರೆ ಜನರೆಲ್ಲ ಜಿನರಾಗಬಹುದು. ಜನಾರ್ದನರೂ ಆಗಬಹುದು. ಭಜನೆಯಿಂದ ತೀರ್ಥಯಾತ್ರೆ ಮಾಡಿದಷ್ಟೆ ಪುಣ್ಯ ಸಂಚಯವಾಗುತ್ತದೆ. 


ಪ್ರತಿ ಮನೆಯಲ್ಲಿಯೂ ಭಜನೆ ಮಾಡಿದರೆ ಸತ್ಯ, ಧರ್ಮ, ನ್ಯಾಯ, ನೀತಿ, ಅಹಿಂಸೆಯ ನೆಲೆಯಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಧರ್ಮಸ್ಥಳದ ಜ್ಞಾನದಾಸೋಹ ಕಾರ್ಯವೂ ಶ್ಲಾಘನೀಯವಾಗಿದ್ದು, ತಾವು ಪೂರ್ವಾಶ್ರಮದಲ್ಲಿ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸುವ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸಿರುವುದನ್ನು ಧನ್ಯತೆಯಿಂದ ಸ್ಮರಿಸಿಕೊಂಡರು.


ರಾಷ್ಟ್ರಪತಿಗಳಿಂದ “ರಾಜರ್ಷಿ” ಗೌರವ ಪಡೆದು, ಪ್ರಧಾನಿಯವರಿಂದಲೂ ವಿಶಿಷ್ಠ ಕಾರ್ಯವೈಖರಿ ಬಗ್ಯೆ ಮೆಚ್ಚುಗೆ ಪಡೆದಿರುವ ಬಗ್ಯೆ ಹೆಗ್ಗಡೆಯವರನ್ನು ಸ್ವಾಮೀಜಿಯವರು ಅಭಿನಂದಿಸಿದರು.


ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನಾ ತರಬೇತಿ ಪಡೆದವರು ನಾಯಕತ್ವ, ಶಿಸ್ತು, ಸಂಯಮ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಆಯಾ ಊರಿನಲ್ಲಿ ಸಾಮಾಜಿಕ ಪರಿವರ್ತನೆ ಹಾಗೂ ಪ್ರಗತಿಯ ರೂವಾರಿಗಳಾಗಬೇಕು. ಉತ್ತಮ ಸಂಘಟಕರಾಗಿ ಆರೋಗ್ಯಪೂರ್ಣ ಸಮಾಜ ರೂಪಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.


ಬಾಲ್ಯದಲ್ಲಿ ತಮಗೆ ಮನೆಯಲ್ಲಿಯೆ ತಾಯಿ ರತ್ನಮ್ಮನವರಿಂದ ಜಪ, ಧ್ಯಾನ, ಭಜನೆ ಬಗ್ಯೆ ದೊರೆತ ಸಂಸ್ಕಾರ ಮತ್ತು ಮಾರ್ಗದರ್ಶನವನ್ನು ಸ್ಮರಿಸಿದರು. ಅಲ್ಲದೆ ಬೀಡಿನಲ್ಲೆ ಇದ್ದ ಗುರೂಜಿ (ಗುಣಪಾಲ) ಹಾಗೂ ಆಗಾಗ ಬರುತ್ತಿದ್ದ ಮಾರ್ನಾಡು ವರ್ಧಮಾನ ಹೆಗ್ಡೆ (ಮಾ.ವ. ಹೆಗ್ಡೆ) ಅವರ ಪ್ರೇರಣೆಯನ್ನೂ ಹೆಗ್ಗಡೆಯವರು ಸ್ಮರಿಸಿದರು.


ಮಾಣಿಲದ ಮೋಹನದಾಸ ಸ್ವಾಮೀಜಿ ಶುಭಾಶಂಸನೆ ಮಾಡಿದರು.ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.


ವರದಿ ಸಾದರಪಡಿಸಿದ ಭಜನಾ ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ, ಕಳೆದ 25 ತರಬೇತಿ ಕಮ್ಮಟಗಳಲ್ಲಿ  2725 ಭಜನಾ ಮಂಡಳಿಗಳ 5450 ಮಂದಿಗೆ ತರಬೇತಿ ನೀಡಲಾಗಿದೆ.ರಾಜ್ಯದಲ್ಲಿ 5000 ಭಜನಾ ಮಂಡಳಿಗಳಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ಭಜನೆಯಲ್ಲಿ ಪರಿಣತರಾಗಿದ್ದಾರೆ ಎಂದರು.


ಈ ಬಾರಿಯ ತರಬೇತಿ ಕಮ್ಮಟದಲ್ಲಿ ಹನ್ನೊಂದು ಜಿಲ್ಲೆಗಳಿಂದ 98  ಪುರುಷರು ಮತ್ತು 71 ಮಹಿಳೆಯರು ಸೇರಿದಂತೆ ಒಟ್ಟು 169 ಮಂದಿ ಭಾಗವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.ವಿದುಷಿ ಚೈತ್ರಾಭಟ್ ಧರ್ಮಸ್ಥಳ ಮತ್ತು ಬಳಗದವರ ನೃತ್ಯರೂಪಕದ ಮೂಲಕ ಪ್ರಾರ್ಥನೆ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.


ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಧನ್ಯವಾದವಿತ್ತರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ರಾಮ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top