ಮಂಗಳೂರು: ಕೂಟ ಬಂಧು ಮಂಗಳೂರು ಅಂಗ ಸಂಸ್ಥೆಯ ವತಿಯಿಂದ ಭಾನುವಾರ ಉಪಾಕರ್ಮವು ಪಾಂಡೇಶ್ವರದಲ್ಲಿರುವ ಗುರುನರಸಿಂಹ ಸಭಾ ಭವನದಲ್ಲಿ ನಡೆಯಿತು. ವೇದಮೂರ್ತಿ ಶಿವರಾಮ ಕಾರಂತ್ ಅವರ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನದಲ್ಲಿ ಸುಮಾರು 100ಕ್ಕೂ ಅಧಿಕ ಕೂಟ ಬಂಧುಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಅಕ್ಟೋಬರ್ 26 ಮತ್ತು 27ರಂದು ನಡೆಯುವ ಕೋಟ ಗಾಯತ್ರಿ ಜಪ ಯಜ್ಞಕ್ಕೆ ಪೂರ್ವಾಭಾವಿಯಾಗಿ ಕೂಟ ಬಂಧುಗಳು ಗಾಯತ್ರಿ ಜಪ ಸಂಕಲ್ಪವನ್ನು ಮಾಡಿಸಿ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಉಪಾಕರ್ಮದ ಧಾರ್ಮಿಕ ವಿಧಿ ವಿಧಾನದ ಬಳಿಕ ಮಾತನಾಡಿದ ಮಂಗಳೂರು ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ, ಮಂಗಳೂರು ವಲಯದ ಎಲ್ಲ ಕೂಟ ಬಂಧುಗಳನ್ನು ಒಂದೇ ವೇದಿಕೆಯಡಿಗೆ ತರುವ ಉದ್ದೇಶದಿಂದ ವರ್ಷ ಪೂರ್ತಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಮಂಗಳೂರು ವಲಯದ ಕೂಟ ಬಂಧುಗಳ ದಾಖಲೀಕರಣ ಮಾಡುವ ಉದ್ದೇಶವು ಸಂಘಟನೆಯ ಮುಂದಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದರು.
ಬ್ರಹ್ಮ ತೇಜೋ ಬಲಂ ಬಲಂ ಎಂಬ ಮಾತಿನಂತೆ ನಮ್ಮಲ್ಲಿ ಅಡಗಿರುವ ತೇಜಸನ್ನು ಉದ್ದೀಪನಗೊಳಿಸಿ, ಆ ಮೂಲಕ ಇಷ್ಟಾರ್ಥ ಸಿದ್ಧಿ ಹಾಗೂ ಸಾಮಾಜಿಕವಾಗಿ ಧಾರ್ಮಿಕವಾಗಿ ಬ್ರಾಹ್ಮಣರ ಮೇಲೆ ಆಗುವ ಪ್ರಹಾರಗಳನ್ನು ಧೈರ್ಯದಿಂದ ಎದುರಿಸಲು ಹಾಗೂ ಸರ್ವೇ ಜನಾಃ ಸುಖಿನೋ ಭವಂತು ಎಂಬ ಮಾತಿನಂತೆ ಗಾಯತ್ರಿ ಜಪ ಮಾಡಲಾಗುತ್ತದೆ. ಆದುದರಿಂದ ಇಂದಿನಿಂದ ತಾವು ಮಾತ್ರವಲ್ಲದೆ ಮನೆಯಲ್ಲಿರುವ ಎಲ್ಲರೂ ಸಾಧ್ಯವಾದಷ್ಟು ಜಪ ಮಾಡಬೇಕು ಎಂದು ಸಂಕಲ್ಪ ದೀಕ್ಷೆ ಉಪದೇಶಿಸಿದ ವೇದಮೂರ್ತಿ ಶಿವರಾಮ ಕಾರಂತ ಹೇಳಿದರು.
ಉಪಾಕರ್ಮದ ಬಳಿಕ ಸಾಮೂಹಿಕ ಜಪ ಮಾಡಲಾಯಿತು. ಅ.27ರಂದು ನಡೆಯುವ ಹೋಮದಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸುವಂತೆ ಆಹ್ವಾನವನ್ನು ಕೂಟ ಬಂಧುಗಳಿಗೆ ನೀಡಲಾಯಿತು.
ಟೂರಿಸಂ ಫೈನಾನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ಸ್ವತಂತ್ರ ನಿರ್ದೇಶಕ, ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್., ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಮಯ್ಯ, ಸಂಘಟನಾ ಕಾರ್ಯದರ್ಶಿ ಕೃಷ್ಣ ಮಯ್ಯ, ಕೋಶಾಧಿಕಾರಿ ಬಿ.ಸಿ. ಪದ್ಮನಾಭ ಮಯ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಸನ್ನ ಇರುವೈಲು, ಶಿವರಾಮಯ್ಯ, ಬಾಲಕೃಷ್ಣ ಐತಾಳ್, ಎ.ಶಿವರಾಮ ರಾವ್, ದಿವಾಕರ ಹೊಳ್ಳ, ಗೋಪಾಲಕೃಷ್ಣ ಭಟ್, ಗಣೇಶ್ ಪ್ರಸಾದ್, ಯೋಗೇಶ್ ನಾವಡ, ಚಂದ್ರಮೋಹನ ಕಾರಂತ್ ಎರಂಬು, ವಿವೇಕ್ ನಿರಂಜನ್, ಯೋಗೇಶ್ ಹೊಳ್ಳ, ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ