ಮುಂದಿನ 10 ದಿನಗಳಲ್ಲಿ ಕೆಲಸ ಪೂರ್ಣಗೊಳಿಸಲು ಸಲಹೆ
ಕಲ್ಬುರ್ಗಿ: ಉದ್ಘಾಟನೆಗೆ ಸಜ್ಜಾಗಿ ನಿಂತಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ಬಾಕಿ ಉಳಿದಿರುವ ಕೆಲಸ ಕಾರ್ಯಗಳನ್ನು ಮುಂದಿನ 10 ದಿನಗಳಲ್ಲಿ ಪೂರ್ಣಗೊಳಿಸಲು ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಲ್ಬುರ್ಗಿಯಲ್ಲಿ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು ಸೆಪ್ಟೆಂಬರ್ 17ರಂದು ಮಂಗಳವಾರ ಆಗಮಿಸಿದ ಅವರು ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಗತಿ ಕಾರ್ಯವನ್ನು ವೀಕ್ಷಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡುತ್ತಾ ಮುಂದಿನ 10 ದಿನಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ಉದ್ಘಾಟನೆಗೆ ಸಜ್ಜುಗೊಳಿಸಬೇಕು. ಅತ್ಯಾಧುನಿಕವಾಗಿ ಆರೋಗ್ಯ ಸೌಲಭ್ಯ ಸಿಗುವಂತಾಗಲು ಕೆಕೆಆರ್‌ಡಿಬಿ ಆರ್ಥಿಕ ನೆರವಿನೊಂದಿಗೆ ರಾಜ್ಯ ಸರ್ಕಾರವು ನಿರ್ಮಾಣ ಮಾಡಿದ ಈ ಆಸ್ಪತ್ರೆಗೆ ಬೇಕಾಗಿರುವ ಎಲ್ಲಾ ವೈದ್ಯಕೀಯ ಉಪಕರಣಗಳನ್ನು ಕೂಡಲೇ ಅಳವಡಿಸಬೇಕು. ಲಾಂಡ್ರಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಕ್ಯಾತ್ ಲ್ಯಾಬ್, ಶಸ್ತ್ರ ಕ್ರಿಯೆಯ ಕೊಠಡಿ, ಜನರಲ್ ವಾರ್ಡ್, ವಿಶೇಷ ವಾರ್ಡ್, ವೈದ್ಯರ ಕೊಠಡಿ,ಲಿಫ್ಟ್, ಸಾರ್ವಜನಿಕರ ಪ್ರವೇಶ ದ್ವಾರ ಮುಂತಾದೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಅತ್ಯಾಧುನಿಕ ಮಾದರಿಯ ಮೆಂಟಲ್ ಥೆರಪಿ ಆಡಿಟೋರಿಯಂ ಸುಸಜ್ಜಿತವಾಗಿ ನಿರ್ಮಾಣ ಮಾಡಿರುವುದಕ್ಕೆ ಡಾ. ಶಾಲಿನಿ ರಜನೀಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಂದರೇಶ್ ಬಾಬು, ಪ್ರಭಾರಿ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ವೀರೇಶ್ ಪಾಟೀಲ್, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿ ಪ್ರಮೀಳಾ ಎಂ.ಕೆ, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂತೋಷ್ ಭೀಮರಾವ್, ಇಂಜಿನಿಯರ್ ಶ್ರೀಪಾದ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಪರ ನಿರ್ದೇಶಕರಾದ ಪ್ರವೀಣಪ್ರಿಯ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ