ಸುಚಿತ್ರ ಥಿಯೇಟರ್ ನಲ್ಲಿ 'ಕಲ್ಜಿಗ' ಬಿಡುಗಡೆ

Upayuktha
0


ಮಂಗಳೂರು: ಮಲ್ಟಿಫ್ಲೆಕ್ಸ್‌ನಲ್ಲಿ ಬಿಡುಗಡೆಗೊಂಡು ಜನಮೆಚ್ಚುಗೆ ಪಡೆಯುತ್ತಿರುವ 'ಕಲ್ಜಿಗ' ಸಿನಿಮಾ ನಗರದ ಸುಚಿತ್ರ ಥಿಯೇಟರ್ ನಲ್ಲಿ ಶುಕ್ರವಾರ ಮುಂಜಾನೆ ಬಿಡುಗಡೆಗೊಂಡಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಬಹಳ ಸಮಯದ ಬಳಿಕ ಸುಚಿತ್ರ ಥಿಯೇಟರ್ ನಲ್ಲಿ ತುಳುನಾಡ ಕಲಾವಿದರ ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನು ಮುಂದೆಯೂ ಇಲ್ಲಿ ತುಳು ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಾಗಿ ಮಾಲಕರು ಹೇಳಿದ್ದಾರೆ. ಅವರಿಗೆ ಅಭಿನಂದನೆಗಳು” ಎಂದರು.


ಡಾ. ದೇವದಾಸ್ ಕಾಪಿಕಾಡ್ ಮಾತಾಡಿ, “ತುಳು ಸಿನಿಮಾಗಳಿಗೆ ಸುಚಿತ್ರ ಥಿಯೇಟರ್ ನಲ್ಲಿ ಅವಕಾಶ ನೀಡುತ್ತಿಲ್ಲ ಎಂಬ ಬೇಸರ ಇತ್ತು. ಅದು ನಿವಾರಣೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಇಲ್ಲಿಗೆ ಬಂದು ಸಿನಿಮಾ ವೀಕ್ಷಿಸಿ ಕಲ್ಜಿಗ ಸಿನಿಮಾವನ್ನು ಗೆಲ್ಲಿಸಿ” ಎಂದರು.


ಪ್ರಕಾಶ್ ಪಾಂಡೇಶ್ವರ್ ಮಾತಾಡಿ, “ಕಲ್ಜಿಗ ಸಿನಿಮಾ ನಾನು ನೋಡಿದ್ದೇನೆ. ಸಿನಿಮಾದಲ್ಲಿ ನಟಿಸಿರುವ ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ” ಎಂದರು. 


ವೇದಿಕೆಯಲ್ಲಿ ನಟ ಅರ್ಜುನ್ ಕಾಪಿಕಾಡ್, ಥಿಯೇಟರ್ ಮಾಲಕ ಪ್ರಶಾಂತ್, ನಿರ್ಮಾಪಕ ಶರತ್ ಕುಮಾರ್ ಎ.ಕೆ., ಶರ್ಮಿಳಾ ಕಾಪಿಕಾಡ್, ಮಾಧ್ಯಮ ಅಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಜ್ಯೋತಿಷ್ ಶೆಟ್ಟಿ, ಭೋಜರಾಜ್ ವಾಮಂಜೂರ್, ಅನೂಪ್ ಸಾಗರ್, ಕಾವ್ಯ ಅರ್ಜುನ್ ಕಾಪಿಕಾಡ್, ಸದಾಶಿವ ಅಮೀನ್, ರಂಜನ್ ಬೋಳೂರು, ನಿರ್ದೇಶಕ ಸುಮನ್ ಸುವರ್ಣ, ಮಾಧವ ಶೆಟ್ಟಿ ಬಾಳ ಉದಯ ಆಚಾರ್ಯ, ಆನಂದ ಬಂಗೇರ, ಶನಿಲ್ ಗುರು, ಶಾಂತಾರಾಮ್ ಮತ್ತಿತರರು ಉಪಸ್ಥಿತರಿದ್ದರು.



ಉಪಯುಕ್ತ ನ್ಯೂಸ್ ಅಭಿಮತ:

ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ಅತ್ಯುತ್ತಮ, ಹಾಗೂ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಸದಭಿರುಚಿಯ  ಚಿತ್ರಗಳು ಇತ್ತೀಚೆಗೆ ಹೊರಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಬೆಂಗಳೂರು-ಗಾಂಧಿನಗರ ಕೇಂದ್ರಿತ ಕನ್ನಡ ಚಿತ್ರರಂಗ ಇದೀಗ ಕರಾವಳಿ ಕೇಂದ್ರಿತವಾಗಿ ಬದಲಾಗುತ್ತಿರುವುದು ಒಟ್ಟಾರೆ ಚಿತ್ರರಂಗದ ಬೆಳವಣಿಯ ದೃಷ್ಟಿಯಿಂದಲೂ ಉತ್ತಮ ಬದಲಾವಣೆ ಎನ್ನಲು ಅಡ್ಡಿಯಿಲ್ಲ.

ಋಷಭ್ ಶೆಟ್ಟಿ ಅವರ 'ಕಾಂತಾರ' ಚಿತ್ರದ ಭರ್ಜರಿ ಯಶಸ್ವಿನ ನಂತರ ವಿಶೇಷವಾಗಿ ಕರಾವಳಿ ಮೂಲದ ಚಿತ್ರೋದ್ಯಮಿಗಳು ಅದನ್ನು ಸ್ಫೂರ್ತಿಯಾಗಿ, ಮಾನದಂಡವಾಗಿ ಪರಿಗಣಿಸಿ ಕಡಿಮೆ ವೆಚ್ಚದ ಅದ್ದೂರಿ ಪರಿಣಾಮದ ಚಿತ್ರಗಳನ್ನು ನಿರ್ಮಿಸುತ್ತಿರುವುದು, ಆ ಮೂಲಕ ಸ್ಟಾರ್ ಕಲಾವಿದರ ಹೊರತಾಗಿ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ.

ಇಂತಹ ಸದಭಿರುಚಿಯ ಚಿತ್ರಗಳ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವುದು ಉದ್ಯೋನ್ಮುಖ ನಿರ್ದೇಶಕ ಸುಮನ್ ಸುವರ್ಣ ಅವರ ನಿರ್ದೇಶನದ 'ಕಲ್ಜಿಗ' ಚಿತ್ರ. ಚಿತ್ರ ಬಿಡುಗಡೆಗೆ ಮುನ್ನ ಒಂದಿಷ್ಟು ಅಪಸ್ವರಗಳು ಕೇಳಿಬಂದರೂ ಚಿತ್ರ ನೋಡಿದ ಬಳಿಕ ಯಾವ ಆಕ್ಷೇಪಕ್ಕೂ ಆಧಾರವಿಲ್ಲ ಎಂಬುದು ಚಿತ್ರಪ್ರೇಮಿಗಳ ಅಭಿಮತವಾಗಿದೆ. ಮನೆಮಂದಿ ಎಲ್ಲರೂ ಜತೆಗೆ ಕುಳಿತು ವೀಕ್ಷಿಸಬಹುದಾದ ಚಿತ್ರವಿದು.

ತುಳುನಾಡಿನ ದೈವದ ಹಿರಿಮೆಯನ್ನು ಚಿತ್ರದಲ್ಲಿ ಎತ್ತಿಹಿಡಿಯಲಾಗಿದೆ. ಹೀಗಾಗಿ ಆ ಕಾರಣಕ್ಕೆ ಆಕ್ಷೇಪ ಎತ್ತುವವರು ಚಿತ್ರವನ್ನು ನೋಡದೇ ಮಾತನಾಡುವವರು ಎಂದು ಭಾವಿಸುವಂತಾಗಿದೆ. ಈ ಚಿತ್ರ ಗೆಲ್ಲಲಿ, ಶತದಿನಗಳನ್ನು ಕಾಣಲಿ. ಎನ್ನುವುದು ಇಂದು ಚಿತ್ರ ವೀಕ್ಷಿಸಿದವರ ಹಾರೈಕೆಯಾಗಿದೆ. 

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top