-ಎಂ.ಜಿ. ಮಹೇಶ್
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸಿದ್ಧಾಂತ, ಚಿಂತನೆಗಳು ಸಮಾಜವಾದನಾ ಅಥವಾ ಮಜಾವಾದನಾ? ಈ ಪ್ರಶ್ನೆ ಈಗ ಎಲ್ಲರಿಗೂ ಕಾಡುತ್ತಿದೆ. ಇತ್ತೀಚಿನ ಬೆಳವಣಿಗೆ ನಂತರ ಕರ್ನಾಟಕ ಮಾತ್ರವಲ್ಲ, ದೇಶದಲ್ಲಿ ಇಂಥದ್ದೊಂದು ಗಂಭೀರ ಪ್ರಶ್ನೆ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಜೋರಾಗಿ ಮಾರ್ದನಿಸುತ್ತಿದೆ.
ಮುಡಾ ಹಗರಣ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠ ಹಾಗೂ ಜನಪ್ರತಿನಿಧಿಗಳ ನ್ಯಾಯಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅಸ್ತು ಎಂದು ತೀರ್ಪು ಕೊಟ್ಟ ಬಳಿಕ ಕರ್ನಾಟಕದ ರಾಜಕಾರಣವೇ ಹೊಸ ತಿರುವಿನಲ್ಲಿ ಬಂದು ನಂತಿದೆ. ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಬಗ್ಗೆ ಜನರು ಅನೇಕ ರೀತಿಯಲ್ಲಿ ಚರ್ಚೆ, ವ್ಯಾಖ್ಯಾನಗಳನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ನಾಲ್ಕು ದಶಕದ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲ ಎಂದು ಕಾಂಗ್ರೆಸ್ಸಿಗರು, ಸಿದ್ದರಾಮಯ್ಯ ಬೆಂಬಲಿಗರು ಹೇಳುತ್ತಿದ್ದಾರೆ. ಈ ಮಾತು ಹಾಸ್ಯಾಸ್ಪದ ಅಲ್ಲದೇ ಮತ್ತೇನೂ ಅಲ್ಲ.
ಕಾಗೆಯೊಳಗೆ ಕಪ್ಪು ಬಣ್ಣ ಹುಡುಕುವುದುದು ಎಷ್ಟು ಕಷ್ಟವೋ ಹಾಗೆಯೇ ಈ ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ ಎಂದು ಹುಡುಕುವುದು ಸಹ ಅಷ್ಟೇ ಕಷ್ಟ". ಮುಡಾ ಹಗರಣದಿಂದ ಬಚಾವ್ ಆಗಲು ಸಿದ್ದರಾಮಯ್ಯ ಅವರು ಏನೆಲ್ಲ ಶತಾಯಗತಾಯ ಪ್ರಯತ್ನ ಮಾಡಿದರು ಎಂಬುದು ಎಷ್ಟು ಸತ್ಯವೋ ಅವರು ಈ ಪ್ರಕರಣದಲ್ಲಿ ನಾನು ಭಾಗಿಯಾಗಿಲ್ಲ, ಭ್ರಷ್ಟಾಚಾರವೇ ಮಾಡಿಲ್ಲ ಎಂದು ಹೇಳುತ್ತಿರುವುದು ಸಹ ಅಷ್ಟೇ ಸುಳ್ಳು, ಸುಳ್ಳು ಎಂಬುದು ಕಟು ಸತ್ಯ.
ಅನೇಕ ಸಂದರ್ಭ, ಪರಿಸ್ಥಿತಿಗೆ ಅನುಗುಣ ಮೌಲ್ಯಾಧಾರಿತ, ನೈತಿಕ, ಸೈದ್ದಾಂತಿಕ ರಾಜಕಾರಣಕ್ಕೆ ನಮ್ಮ ಇತಿಹಾಸವೇ ಸಾಕ್ಷಿಯಾಗಿದೆ. ನೈತಿಕತೆ ಎಂಬುದು ಸಾರ್ವಜನಿಕ ಬದುಕಿನ ಅತೀ ಶ್ರೇಷ್ಠ ಗುಣ. ಇಂಥ ನೈತಿಕತೆ ರಾಜಕಾರಣಿಗಳಿಗೆ ಬೇಕು. ಅನೇಕ ರಾಜಕಾರಣಿಗಳು ನೈತಿಕತೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಆಗಾಗ್ಗೆ ಎದುರಾದ ನೈತಿಕತೆಯ ಪರೀಕ್ಷೆಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಇದಕ್ಕಾಗಿ ಹುದ್ದೆ, ಪದವಿ ತ್ಯಜಿಸಿ ಮೌಲ್ಯ ಎತ್ತಿ ಹಿಡಿದಿದ್ದಾರೆ.
ಸಣ್ಣ ರೈಲು ದುರಂತದ ಘಟನೆ ನಡೆದಾಗ ಅಂದು ಲಾಲ್ ಬಹಾದ್ದೂರ್ ಶಾಸ್ತ್ರಿ, ಹವಾಲಾ ಹಗರಣ ಆರೋಪ ಬಂದಾಗ ಲಾಲಕೃಷ್ಣ ಆಡ್ವಾಣಿ ಅವರು ರಾಜೀನಾಮೆ ನೀಡಿದ್ದರು. ಇಂಥ ಅನೇಕರು ತಮ್ಮ ರಾಜಕೀಯ ಜೀವನದಲ್ಲಿ ಮೇರು ವ್ಯಕ್ತಿತ್ವ ಪ್ರದರ್ಶಿಸಿ ಆದರ್ಶವಾಗಿದ್ದನ್ನು ನಾವು ನೋಡಿದ್ದೇವೆ. "Morality is strongest tool in politics" ಎಂಬುದು ತೋರಿಸಿಕೊಟ್ಟಿದ್ದಾರೆ. ನೈತಿಕತೆ ಇದ್ದವರು ಸಮಾಜದಲ್ಲಿ ಎದೆ ಎತ್ತಿ, ಎದೆತಟ್ಟಿ, ಅಭಿಮಾನದಿಂದ, ನಿರ್ಭಿಡೆಯಿಂದ ರಾಜಕಾರಣ ಮಾಡುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ದೇವರಾಜ ಅರಸು ಅವರು ಸಿಎಂ ಇದ್ದಾಗ ನಡೆದ ಒಂದು ಘಟನೆ ಈಗ ಸ್ಮರಿಸುವುದು ಪ್ರಸ್ತುತ ಎನಿಸುತ್ತದೆ. ಮಹಿಳೆಯೊಬ್ಬಳು ಮಂತ್ರಿಯೊಬ್ಬರ ಮನೆಯಿಂದ ರಾತ್ರಿ ಹೊತ್ತಿನಲ್ಲಿ ಹೊರಗೆ ಓಡಿ ಬಂದಿದ್ದಳು. ಈ ವಿಷಯ ಚರ್ಚೆಗೆ ಬರುತ್ತಲೇ ಅರಸು ಅವರು ತಕ್ಷಣ ಸಚಿವ ಸಂಪುಟ ಸಭೆ ಕರೆದಿದ್ದರು. ಸಭೆಯಲ್ಲಿ ಆ ಮಂತ್ರಿ ವಿರುದ್ದ ಕ್ರಮದ ತೀರ್ಮಾನ ಮಾಡುತ್ತಾರೆ. ಸಭೆ ಮುಗಿದ ತಕ್ಷಣವೇ ಆ ಮಂತ್ರಿ ಖುದ್ದು ರಾಜೀನಾಮೆ ಕೊಡ್ತಾರೆ. ಅರಸು ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ಇಂದು ಆ ಘಟನೆ ನೆನಪಿಸಿಕೊಳ್ಳಲಿ.
ಕೆಂಗಲ್ ಹನುಮಂತಯ್ಯ ಸಿಎಂ ಇದ್ದಾಗ ಎಲೆಕ್ಟ್ರಿಕ್ ಪರಿಕರ ಖರೀದಿಯಲ್ಲಿ ಅಕ್ರಮದ ಆರೋಪಗಳು ಬಂದಿದ್ದವು. ಆಗಿನ ಇಂಧನ ಸಚಿವ ಸಿದ್ದಲಿಂಗಯ್ಯ ಮೇಲೆ ಆರೋಪ ಬರುತ್ತದೆ. ಸಿದ್ದಲಿಂಗಯ್ಯ ಅವರು ಇಲ್ಲಿ ತಪ್ಪು ಮಾಡಿರಲಿಲ್ಲ. ಆದರೆ ಆರೋಪ ಬಂದ ಕಾರಣ ತಕ್ಷಣ ರಾಜೀನಾಮೆ ಕೊಡುತ್ತಾರೆ. ಸ್ವತಃ ಸಿಎಂ ಕೆಂಗಲ್ ಹನುಮಂತಯ್ಯ ಅವರು ರಾಜೀನಾಮೆ ಕೊಡಬೇಡಿ ಎಂದರೂ ಸಿದ್ದಲಿಂಗಯ್ಯ ಅವರು ಈ ಪ್ರಕರಣದ ಸತ್ಯಾಸತ್ಯತೆ ಹೊರಗೆ ಬರುವವರೆಗೆ ಕುರ್ಚಿ ಬೇಡ ಎಂದು ರಾಜೀನಾಮೆ ಕೊಡ್ತಾರೆ. ಸಿದ್ದರಾಮಯ್ಯ ಇದು ನೆನಪಿಸಿಕೊಳ್ಳಲಿ.
ನಿಜಲಿಂಗಪ್ಪ, ಬಿ.ಡಿ.ಜತ್ತಿ ಅವರು ಸಿಎಂ ಇದ್ದಾಗ ಇಂಥ ನೈತಿಕ ಮೌಲ್ಯ ಎತ್ತಿ ಹಿಡಿಯುವ ಸಾಕಷ್ಟು ಕೆಲಸ ನಡೆದಿವೆ. ಎಸ್.ಬಂಗಾರಪ್ಪ ಸಿಎಂ ಇದ್ದಾಗ ಕ್ಲಾಸಿಕ್ ಕಂಪ್ಯೂಟರ್ ಹಗರಣ ಬಂತು. ಬಂಗಾರಪ್ಪ ರಾಜೀನಾಮೆ ಕೊಟ್ಟರು. ಸಿದ್ದರಾಮಯ್ಯ ಇದನ್ನು ಸಹ ನೆನಪಿಸಿಕೊಳ್ಳಲಿ.
ರಾಮಕೃಷ್ಣ ಹೆಗಡೆ ಸಿಎಂ ಇದ್ದಾಗ ಕೆಲವು ಆರೋಪ ಬಂದಿದ್ದವು. ಹೆಗಡೆ ಅವರ ಅಳಿಯನ ತಂಗಿ ಮಾಡಿದ ಜಮೀನು ಅಕ್ರಮದ ಕೇಸ್ ಸಂಬಂಧ ರಾಜೀನಾಮೆ ಕೊಟ್ಟರು. ಸಿ.ಎಂ.ಇಬ್ರಾಹಿಂ ಅವರು ಸಾರ್ವಜನಿಕ ಕಾರ್ಯಕ್ರಮದ ಭಾಷಣದಲ್ಲಿ ತನ್ನ ಕೈಯಲ್ಲಿನ ರೋಲ್ಯಾಕ್ಸ್ ವಾಚ್ ತೋರಿಸಿದ್ದರು. ಕೊಲ್ಲಿ ದೇಶದವರ ಜೊತೆಗೆ ನನ್ನ ನಿಕಟ ಸಂಪರ್ಕ ಇದೆ ಎಂದಿದ್ದರು. ಈ ಬಗ್ಗೆ ಇಬ್ರಾಹಿಂ ವಿರುದ್ಧ ಗೂಢಾಚಾರದ ಆರೋಪ ಬಂದಾಗ ಅವರು ರಾಜೀನಾಮೆ ಕೊಟ್ಟಿದ್ದರು. ಸಾರ್ವಜನಿಕ ಭಾಷಣದಲ್ಲಿ ಆಡಿದ ಮಾತಿಗೆ ನೈತಿಕ ಹೊಣೆ ಹೊತ್ತು ಇಬ್ರಾಹಿಂ ರಾಜೀನಾಮೆ ನೀಡಿದ್ದರು. ಮೌಲ್ಯಾಧಾರಿತ ರಾಜಕಾರಣಕ್ಕೆ ಬೆಲೆ ಕೊಟ್ಟ ಅನೇಕ ನಿದರ್ಶನಗಳು ನಮ್ಮಲ್ಲಿ ಇವೆ. ಸಿದ್ದರಾಮಯ್ಯ ಅವರು ಇದನ್ನೆಲ್ಲ ನೆನಪಿಸಿಕೊಳ್ಳಲಿ.
ಸಿದ್ದರಾಮಯ್ಯ ಅವರು ಸ್ವತಃ ಅವರ ಮೇಲೆ ಬರುತ್ತಿರುವ ಆರೋಪಗಳನ್ನು ಅವರೇ ತಿರಸ್ಕಾರ ಮಾಡುತ್ತಿದ್ದಾರೆ. ವಿಚಿತ್ರವೆಂದರೆ ಯಾವುದೇ ಸಾಂವಿಧಾನಿಕ ಸಂಸ್ಥೆಗಳು ಸಿದ್ದರಾಮಯ್ಯ ಅವರನ್ನು ನಿರ್ದೋಶಿ ಎಂದು ಹೇಳಿಲ್ಲ. ಆದರೂ ಸ್ವತಃ ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ, ನಾನು ತಪ್ಪೇ ಮಾಡಿಲ್ಲ ಎನ್ನುತ್ತಿರುವುದು ವಿಚಿತ್ರ. ಇದು ಯಾವ ಮೌಲ್ಯ? ಇದ್ಯಾವ ನೈತಿಕತೆ? ಇದ್ಯಾವ ಸಮಾಜವಾದ ಸಿದ್ಧಾಂತ? ಎಂಬುದೇ ಅರ್ಥವಾಗುತ್ತಿಲ್ಲ.
ಸಿದ್ದರಾಮಯ್ಯ ಮೇಲೆ ಅನೇಕ ಗುರುತರ ಆರೋಪಗಳು ಇವೆ. ಅರ್ಕಾವತಿ ಬಡಾವಣೆ ಅಕ್ರಮ ಬಯಲಿಗೆ ಬಂತು. ಅಂದಿನ ಲೋಕಾಯುಕ್ತ ಮುಂದೆ ಸಿದ್ದರಾಮಯ್ಯ ವಿರುದ್ಧ ನೂರಾರು ಕೇಸ್ ಗಳಿದ್ದವು. ಆಗ ಸಿದ್ದರಾಮಯ್ಯ ಅವರು ಈ ಪ್ರಕರಣದಿಂದ ಬಚಾವ್ ಆಗಲು ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿದರು! ಭ್ರಷ್ಟಾಚಾರ ನಿಗ್ರಹ ದಳ( ಎಸಿಬಿ) ಸ್ಥಾಪನೆ ಮಾಡಿ, ತಮ್ಮ ಅಧಿಕಾರಿಗಳನ್ನು ಬಳಸಿಕೊಂಡು ತಮ್ಮ ಮೇಲೆ ಬಿ- ರಿಪೋಟ್೯ ಹಾಕಿಕೊಂಡರು!! ಇದು ರಾಜ್ಯದ ಜನರು ಮರೆತಿಲ್ಲ. ಈಗ ಮುಡಾ ಹಗರಣದಲ್ಲಿ ಸಿಲುಕಿದರೂ ನಾನು ಸತ್ಯವಾನ, ಪ್ರಾಮಾಣಿಕ ಎಂದು ಸಾಚಾತನದ ಪೋಸು ಕೊಡುತ್ತಿದ್ದಾರೆ. ಮುಡಾ ಹಗರಣದಲ್ಲಿ ಅವರ ಅಧೀನದ ಪೊಲೀಸ್ ಅಧಿಕಾರಿ ಅದ್ಹೇಗೆ ತನಿಖೆ ಪ್ರಾಮಾಣಿಕವಾಗಿ ಮಾಡಲು ಸಾಧ್ಯ? ಸಾಧ್ಯವೇ ಇಲ್ಲ. ಸಮಾಜ ಸುಧಾರಕರ ಬಗ್ಗೆ ಭಾಷಣ ಮಾಡುವ ಸಿದ್ದರಾಮಯ್ಯ ಅವರಿಗೆ ಎಲ್ಲಿದೆ ನೈತಿಕತೆ? ನಿಮ್ಮ ಮಾತು ಭಾಷಣಕ್ಕೆ ಸೀಮಿತ ಎಂಬುದು ಎಷ್ಟು ಸಲ ಸಾಬೀತುಪಡಿಸಲು ಹೊರಟಿದ್ದಿರಿ? ನೈತಿಕತೆ ನಿಮಗೆ ಇದ್ದರೆ ಮೊದಲು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು.
ಅನೇಕ ರಾಜಕಾರಣಿಗಳು, ಅನೇಕ ಮಹನೀಯರು ನಮ್ಮಲ್ಲಿ ಆಗಿ ಹೋಗಿದ್ದಾರೆ.
ದೇಶ, ಸಮಾಜ ಸುಧಾರಣೆಗೆ ಬದುಕು ಸವೆಸಿದ್ದಾರೆ. ಬುದ್ಧ ಬಸವ, ಅಂಬೇಡ್ಕರ್, ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ ಹೀಗೆ ಅನೇಕರು ಅಪಾರ, ಅಮೋಘ ಸೇವೆ ಸಲ್ಲಿಸಿ ಆದರ್ಶರಾಗಿದ್ದಾರೆ. ಇವರ ಮಾತು ಭಾಷಣ ಮಾಡಿ ಸಿದ್ದರಾಮಯ್ಯ ಅವರೇ ನಾಟಕವಾಡುವುದು ಬೇಡ. ನೀವು ನಿರಪರಾಧಿ, ತಪ್ಪಿತಸ್ಥ ಅಲ್ಲ ಎಂದಾದರೆ ಮತ್ತೆ ಸಿಎಂ ಆಗಿ. ಇದಕ್ಕೆ ಯಾರದೇ ಅಭ್ಯಂತರ ಇಲ್ಲ.
ಸಾರ್ವಜನಿಕ ಬದುಕಿನಲ್ಲಿ ನೈತಿಕತೆ ಇಟ್ಟುಕೊಂಡು ಹಿರಿಮೆ, ಗರಿಮೆ ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಇದೇ ಎಲ್ಲ ಸಮಾಜ ಸುಧಾರಕರ, ವಿಭೂತಿಪುರುಷರ, ಲೋಹಿಯಾವಾದದ ಮಾರ್ಗ. ಇದೇ ಸಮಾಜವಾದವೂ ಹೌದು. ನೀವು ಸಮಾಜವಾದದ ಹೆಸರಿನಲ್ಲಿ ಮಜಾವಾದ ಮಾಡುವ ಕೆಲಸ ಮಾಡುತ್ತಿಲ್ಲವೆ ಸಿದ್ದರಾಮಯ್ಯ ಅವರೇ? ಕೈಯಲ್ಲಿ ಹುಬ್ಲೋಟ್ ವಾಚ್ ಹಾಕೋದು ಯಾವ ಸಮಾಜವಾದ? ಸಿದ್ದರಾಮಯ್ಯ ಅವರೇ ಇದು ನಿಮ್ಮ ಸಮಾಜವಾದ ಸಿದ್ಧಾಂತ, ನೈತಿಕ ಮೌಲ್ಯ ಸಮಾಜಕ್ಕೆ ತೋರಿಸುವ ಕಾಲ. ಇದರಲ್ಲಿ ನಿಮಗೆ ನಂಬಿಕೆ ಇದ್ದರೆ ಈ ಕೂಡಲೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಿ. ತನಿಖೆ ಎದುರಿಸಿ. ನಿಮ್ಮದು ತಪ್ಪಿಲ್ಲ ಎಂದರೆ ಮತ್ತೆ ಸಿಎಂ ಕುರ್ಚಿ ಅಲಂಕರಿಸಿ. ತನಿಖೆ ಮುನ್ನವೇ ನಾನು ನಿರ್ದೋಶಿ ಎಂದು ಹೇಳಿಕೊಳ್ಳುವುದು ಸಂವಿಧಾನ, ಪ್ರಜಾಪ್ರಭುತ್ವ, ಈ ನೆಲದ ಕಾನೂನಿಗೆ ಧಿಕ್ಕರಿಸಿದಂತಾಗುತ್ತದೆ. ಭಗವಂತ ನಿಮಗೆ ಇನ್ನಾದರೂ ಒಳ್ಳೆಯ ಬುದ್ಧಿ ಕೊಡಲಿ ...
(ಲೇಖಕರು ಬಿಜೆಪಿ ರಾಜ್ಯ ವಕ್ತಾರರು)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


