ಬಾಳ ದಾರಿಗೆ ದಿಕ್ಸೂಚಿಯೇ ಗುರು

Upayuktha
0




ಅಂಧಕಾರ ಅಹಂಕಾರವ ದೂರ ಮಾಡಿ, ವಿದ್ಯೆ ಸುಜ್ಞಾನವ ಧಾರೆ ಎರೆದು, ಲೋಕದ ವಿಚಾರವ ತಿಳಿಯಲು ಅಕ್ಷರವೇ ಆಧಾರವೆಂದು ಸಾರಿ, ಅಕ್ಷರದ ಸಾಕ್ಷಾತ್ಕಾರ ಮಾಡಿ  ಬದುಕಿನ ಪುಟಗಳಲ್ಲಿ ಹೊಸ ಅಧ್ಯಾಯವನ್ನೇ ಬರೆದವರು ಶಿಕ್ಷಕರು. 


ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಅಮ್ಮನ ಲಾಲಿ ಹಾಡು ಕೇಳುತ್ತಾ. ಅ, ಆ, ಇ, ಈ...ಅಕ್ಷರವ ಕಲಿಯುತ್ತಾ ಶಾಲೆಗೆ ಬಂದು, ಶಾಲೆಯಲ್ಲಿ ಅಕ್ಷರ ಜ್ಞಾನದ ಜೊತೆ ಜೀವನದ ಮೌಲ್ಯವ ಅರಿತು, ಕಾಲೇಜಿನ ವಾತಾವರಣದಲ್ಲಿ ಬೆರೆತು ಇನ್ನಷ್ಟು ಆಳವಾದ ವಿಚಾರ ತಿಳಿದು ಮುಂದುವರೆಯಲು ಅವರೇ ಕಾರಣ. 


ನನ್ನ ಪಯಣದಲ್ಲಿ ಗುರುವಾಗಿ ದಾರಿ ತೋರಿದವರು ಹಲವರಿದ್ದಾರೆ. ʼನಾನುʼ ಎಂಬ ಕಲ್ಲನ್ನು ಸುಂದರ ಮೂರ್ತಿಯನ್ನು ಮಾಡಿ ಅದಕ್ಕೆ ರೂಪ ಕೊಟ್ಟು ಸಮಾಜದಲ್ಲಿ ಇತರರು ಗುರುತಿಸುವಂತೆ ಮಾಡಿದ್ದು ನನ್ನ ಸಾಧನೆಯಲ್ಲ, ಅದು ಗುರುವಿಗೆ ಸಲ್ಲಿಸುವ ಗೌರವವೇ ಆಗಿದೆ. ನನ್ನ ಪ್ರತಿ ಯಶಸ್ಸಿನ ಹಿಂದೆ ಗುರುಗಳ ಆದರ್ಶದಾಯಕ ಭರವಸೆಯ ನುಡಿಗಳು ಅಡಕವಾಗಿದೆ. ಗುರುಗಳು ನೀಡುತ್ತಿದ್ದ ಪೆಟ್ಟಿನ ರುಚಿಗಿಂತಲೂ, ಮಾತಿನ ಬಿಟ್ಟು ಜೋರಾಗಿ ಮನಸ್ಸಿಗೆ ನಾಟುತ್ತಿತ್ತು. ಬೇಗನೇ ಅರಿವಾಗುತ್ತಿತ್ತು.


ಬರೆಯಲು ನನ್ನಂತಹ ಸೋಮಾರಿಯ ಕೈಗೆ ಲೇಖನಿಯ ನೀಡಿ ಬರವಣಿಗೆ ಎಂದರೆ ಹೇಗಿರಬೇಕೆಂದು ಹೇಳಿಕೊಟ್ಟು ಬದುಕಿನ ರೂವಾರಿಯಾದರು. ಕನಸಿಗೆ ಬಣ್ಣ ಹಚ್ಚಿ ನನಸಿನ ಪಯಣಕ್ಕೆ ಸಾಥ್ ನೀಡಿದವರು.


ವಿದ್ಯಾರ್ಥಿಗಳು ಗುರುವನ್ನು ನೆಚ್ಚಿಕೊಳ್ಳುವುದು ತುಂಬಾನೇ ಕಡಿಮೆ. ಅವರ ತರಗತಿ ಬೋರ್ ಅಂತ ಹಲವರ ಅಭಿಪ್ರಾಯ. ಆದರೆ ಗುರುಗಳ ನಿಜವಾದ ಕಾಯಕ, ತನ್ನ ವಿದ್ಯಾರ್ಥಿ ಏನಾದರೂ ಸಾಧನೆ ಮಾಡಬೇಕು ಒಳ್ಳೆ ಕಲಿತು ಪಾಸ್ ಔಟ್ ಆಗಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಯಾಗಿ ಮೂಡಿ ಬರಬೇಕೆನ್ನುವ ಹಂಬಲ ಅವರಲ್ಲಿ ಇರುತ್ತದೆ. ಆ ವಿಚಾರ ನಮಗೆ ತಿಳಿಯುವುದೇ ಇಲ್ಲ.


ಎಲ್ಲಿ ತನ್ನ ಶಿಷ್ಯರು ಹಾದಿ ತಪ್ಪುತಿದ್ದಾರೆ ಎನ್ನುವಾಗಲೇ ಎಚ್ಚರಿಕೆ ನೀಡುತ್ತಾರೆ. ಅವರು ಆ ಹಾದಿಯಲ್ಲಿ ಮುಂದುವರಿಯಲು ಬಿಡದೆ ಉತ್ತಮರನ್ನಾಗಿ ಮಾಡುತ್ತಾರೆ. ಆದರೆ ಎಷ್ಟೋ ವಿದ್ಯಾರ್ಥಿಗಳಿಗೆ ತಮ್ಮ ಗುರುಗಳ ತ್ಯಾಗ, ನಿಸ್ವಾರ್ಥ ಸೇವೆ ತಿಳಿಯುವುದೇ ಇಲ್ಲ.


ಸಾಗರ ಎನ್ನುವ ವಿಶಾಲ ಜಗತ್ತಿನಲ್ಲಿ ಬದುಕೆನ್ನುವ ನಾವಿಗೆ ದಿಕ್ಸೂಚಿಯಾದವರು ಗುರುಗಳು. ಅವರು ತೋರಿಸಿದ ಮಾರ್ಗ, ನಾವು ಕೈಗೊಂಡ ಪಯಣ ಯಶಸ್ಸೆನ್ನುವ ದಡ ತಲುಪಿಸುತ್ತದೆ. ಬಿರುಗಾಳಿ, ಅಲೆಗಳೆನ್ನುವ ನಿರಂತರ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸು ಎನ್ನುವ ಆತ್ಮಸ್ಥೈರ್ಯವನ್ನು ಬದುಕಿನಲ್ಲಿ ತುಂಬಿ ಯಶಸ್ಸಿನ ಮೂಲಮಂತ್ರವಾಗಿ ಗುರುಗಳು ಬದಲಾಗುತ್ತಾರೆ. ಮುಂದೆ ಗುರಿ- ಹಿಂದೆ ಗುರು ಇದ್ದರೆ ಜೀವನದಲ್ಲಿ ಸಾಧನೆ ಸಾಧ್ಯ. ಯಾವುದೂ ಅಸಾಧ್ಯವಲ್ಲ. ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ. ಗುರುಭ್ಯೋ ನಮಃ.


- ಗಿರೀಶ್ ಪಿ.ಎಂ, ಕಾಸರಗೋಡು


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top