ಮಂಗಳಪ್ರದೆ ಗೌರಿ ಮೃದ್ಭವ ಗಣಪ

Upayuktha
1



ರಮ ವೈಷ್ಣವನಾದ, ಪರಮ ವೈರಾಗ್ಯಶಾಲಿಯಾದ, ಮನೋನಿಯಾಮಕ ಮಹಾರುದ್ರದೇವರನ್ನೇ ಪತಿಯಾಗಿ ಪಡೆಯಬೇಕೆಂದು ಅಟ್ಟಡವಿಯಲ್ಲಿ, ದಟ್ಟ ಅರಣ್ಯದಲ್ಲಿ ಸಾವಿರಾರು ವರ್ಷಗಳ ಕಾಲ ಕಠೋರವಾದ ತಪಸ್ಸು ಮಾಡಿ ತನ್ನ ಸುಕೋಮಲವಾದ ದೇಹವನ್ನು ದಂಡಿಸಿ, ಅಣುಅಣುವಲ್ಲೂ ಶಿವನನ್ನು ಕಾಣುತ್ತಾ, ಸದಾ ಮನದಲ್ಲಿ ಶಿವನನ್ನೇ ಸ್ಮರಿಸುತ್ತಾ, ಕೊನೆಗೂ ಈಕೆಯ ತಪಸ್ಸಿಗೆ ಶಿವ ಮೆಚ್ಚುವಂತೆ ಮಾಡಿ, ಶಿವನನ್ನು ಬಿಡದೇ ಪಡೆದುಕೊಂಡವಳು ಪಾರ್ವತಿ. ಅವರಿಬ್ಬರದೂ ಅನ್ಯೋನ್ಯ ದಾಂಪತ್ಯ. ಹೆಚ್ಚಿನ ವೃತಕಥೆಗಳು ಉಮಾಮಹೇಶ್ವರ ಸಂವಾದ ಎಂದೇ ಆರಂಭವಾಗುತ್ತವೆ. ತನ್ನ ಪತಿಯನ್ನೇ ಕೇಳಿ ತಿಳಿದುಕೊಳ್ಳುವ ಆಸಕ್ತಿ ಪಾರ್ವತಿಗೆ. ಇಂತಹ ವ್ರತಗಳನ್ನಾಚರಿಸಿದವರಿಗೆ ಸಕಲ ಅಭೀಷ್ಟಗಳನ್ನು ನೀಡಿ ಅನುಗ್ರಹಿಸುವವಳೇ ಗೌರಿ.  

ಸಕಲ ಪೂಜೆಗಳಲ್ಲಿ ಹೆಣ್ಣುಮಕ್ಕಳಿಗೆ, ವಿವಾಹಿತೆಯರಾದ ಸುಮಂಗಲಿಯರಿಗೆ ಗೌರಿಯ ಪೂಜೆ ಬಹಳ ವಿಶೇಷ, ಸ್ತ್ರೀಕುಲಕ್ಕೆ ಗೌರಿಯ ಅನುಗ್ರಹವಿರಲೇಬೇಕು. ಒಳ್ಳೆಯ ಪತಿ ಸಿಗಲು ಗೌರಿಯಲ್ಲಿ ಪ್ರಾರ್ಥಿಸುತ್ತಾರೆ. ಎಲ್ಲ ಮದುವೆಗಳಲ್ಲೂ ಮುಖ್ಯವಾಗಿ ಗೌರಿಪೂಜೆಯಿಂದಲೇ ಮದುವೆಯ ಮಂಗಳ ಕಾರ್ಯಕ್ರಮಗಳು ಆರಂಭವಾಗುತ್ತವೆ. ಮದುವೆ ಎರಡು ಜೀವಗಳ ಜೊತೆಗಷ್ಟೇ ಅಲ್ಲ, ಎರಡು ಕುಟುಂಬಗಳ ನಡುವೆ ಬೆಸೆಯುವ ಬಾಂಧವ್ಯ. ಮುಂದೆ ಮಕ್ಕಳು, ಅವರಲ್ಲಿ ಉತ್ತಮ ಸಂಸ್ಕಾರ, ಎಲ್ಲದರ ಸಂಗಮವೇ ಮದುವೆಯ ಮೂಲ ಉದ್ದೇಶ. ಉತ್ತಮ ಸಮಾಜದ ನಿರ್ಮಾಣಕ್ಕೂ ಮದುವೆ ಕಾರಣವಾಗುತ್ತದೆ ಎನ್ನಬಹುದು. ದಾಂಪತ್ಯ ಚೆನ್ನಾಗಿದ್ದರೆ ಎಲ್ಲವೂ ಸುಸೂತ್ರ. ಎಲ್ಲರಿಗೂ ನೆಮ್ಮದಿ. ಗೌರಿಪೂಜೆಯನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಮಾಡುತ್ತಾರೆ. ಜಾತಿಮತ ಬೇಧವಿಲ್ಲದೆ ಅವರವರ ಧರ್ಮಾಚರಣೆಯಂತೆ ಈ ವೃತವನ್ನು ಮಾಡುತ್ತಾರೆ.


ಕಥೆಯ ಹಿನ್ನಲೆ:

ಸೂತಪುರಾಣಿಕರು ಹೇಳುವಂತೆ, ಷಣ್ಮುಖನು ಸ್ವಾಮಿಯನ್ನು ಕುರಿತು ಇಷ್ಟಾರ್ಥವೃತದ ಬಗ್ಗೆ ಕೇಳಿದಾಗ, ಒಮ್ಮೆ ಪೂರ್ವಕಾಲದಲ್ಲಿ ಸರಸ್ವತೀನದಿತೀರದ ವಿಮಲಾಪುರವೆಂಬ ಪಟ್ಟಣದ ರಾಜ ಚಂದ್ರಪ್ರಭನು ತನ್ನ ಪತ್ನಿಯರಿಂದ ಸಂತೋಷದಿಂದಿದ್ದ. ಕ್ರೂರಪ್ರಾಣಿಗಳ ಭಯಂಕರ ಹಾವಳಿಯನ್ನು ಕಂಡ ರಾಜ ಬೇಟೆಯಾಡಲು ಅರಣ್ಯಕ್ಕೆ ಹೋದಾಗ ಅಲ್ಲಿ, ಸರೋವರದ ಹತ್ತಿರ ವೃತಾಚರಣೆ ಮಾಡುತ್ತಿದ್ದ ಅಪ್ಸರಾಸ್ರೀಯರನ್ನು ಕೇಳಿ ತಿಳಿದುಕೊಳ್ಳುತ್ತಾನೆ. ಈ ವೃತ ಭಾದ್ರಪದ ಶುದ್ಧ ತದಿಗೆಯಲ್ಲಿ ಆಚರಿಸಿ ಉದ್ಯಾಪನೆ ಮಾಡಿದರೆ ಪೂರ್ಣಫಲ ಎಂದರುಹಿದ ಸ್ತ್ರೀಯರ ಮಾತು ಕೇಳಿ ಆನಂದಭರಿತನಾಗಿ, ಮನೆಗೆ ಬಂದು ಪತ್ನಿಯರಿಗೆ ಈ ವೃತವನ್ನು ಮಾಡಲು ತಿಳಿಸಿದಾಗ ಹಿರಿಯ ಪತ್ನಿ ವೃತದ ದೋರಬಂಧನವನ್ನು ಕೋಪದಿಂದ ಅರಮನೆಯ ಹಿಂದಿದ್ದ ವಣಗಿದ ಮರದ ಮೇಲೆ ಎಸೆಯುತ್ತಾಳೆ. ಇದು ತಪ್ಪೆಂದು ರಾಜ ಹೇಳಿದರೂ ಕೇಳುವುದಿಲ್ಲ. ಆದರೆ ಆ ದಾರ ಎಸೆದ ವಣಗಿದ ಮರ ಚಿಗುರಿ ಫಲ ಪುಷ್ಪಗಳಿಂದ ತುಂಬಿದ್ದನ್ನು ಕಂಡು ಆಶ್ಚರ್ಯಚಕಿತಳಾಗಿ ನೋಡುತ್ತ ನಿಂತಿದ್ದ ಕಿರಿಯ ಪತ್ನಿ ದಾರವನ್ನು ತಂದು ನಿಷ್ಠೆಯಿಂದ ವೃತವನ್ನಾಚರಿಸಿ ರಾಜನ ಕೃಪೆಗೆ ಪಾತ್ರಳಾಗುತ್ತಾಳೆ. ದಾರವನ್ನು ಎಸೆದ ಪಾಪಕ್ಕೆ ಗುರಿಯಾದ ಹಿರಿಯ ಪತ್ನಿ ರಾಜನಿಂದ, ಎಲ್ಲರಿಂದಲೂ ತಿರಸ್ಕೃತಳಾಗಿ ಅರಣ್ಯ ಸೇರಿ ಆಶ್ರಮಗಳಲ್ಲೂ ಜಾಗ ಸಿಗದೆ, ಅಲೆದಾಡುತ್ತಾ, ತನ್ನ ತಪ್ಪಿನ ಅರಿವಾಗಿ ಗೌರಿ ದರ್ಶನಕ್ಕಾಗಿ ಪರಿತಪಿಸುತ್ತಾಳೆ. ನಂತರ ಗೌರಿಯನ್ನು  ಒಲಿಸಿಕೊಳ್ಳಲು ಪೂಜೆ ಪುನಸ್ಕಾರ, ಉಪವಾಸವನ್ನು ಆಚರಿಸುತ್ತಾಳೆ. ಆಕೆಯ ಸ್ತೋತ್ರದಿಂದ ಸಂತುಷ್ಟಳಾದ ಸ್ವರ್ಣಗೌರಿಯನ್ನು ಒಲಿಸಿಕೊಂಡು ನಂತರದಲ್ಲಿ ಪತಿಯೊಂದಿಗೆ ರಾಜ್ಯದಲ್ಲಿ ಸುಖಸಂತೋಷದಿಂದಿರುತ್ತಾಳೆ.

ಶ್ರಾವಣ ಆರಂಭವಾದಾಗಿನಿಂದಲೇ ಮಂಗಳಗೌರಿ, ವರಮಹಾಲಕ್ಷ್ಮಿ ವೃತಗಳು ಆರಂಭ. ಭಾದ್ರಪದ ಮಾಸದಲ್ಲಿ ಗೌರಿಪೂಜೆಯನ್ನು ಹಲವರು ಸ್ವರ್ಣಗೌರಿ ವೃತ. ಎಂದು ಆಚರಿಸುತ್ತಾರೆ. ಗೌರಿ ಹಬ್ಬವು ವಿಶೇಷವಾಗಿ ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ, ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಗಾಗಿ ಉಮೆಯ ಆಶೀರ್ವಾದವನ್ನು ಪಡೆದುಕೊಳ್ಳಲು ಆಚರಿಸುವ ಪ್ರಮುಖ ಹಬ್ಬವಾಗಿದೆ. ಪಾರ್ವತಿ ತಾನು ಸ್ನಾನ ಮಾಡುವಾಗ ಯಾರೂ ಬರದಂತೆ ನೋಡಿಕೊಳುಲು ತಾನೇ ಸೃಷ್ಟಿಸಿದ ಗಣಪನನ್ನು ನೇಮಿಸಿದಾಗ, ಶಿವ ಬಂದಾಗಲೂ ಒಳ ಬಿಡದೆ ತಾಯಿ ಮಾತನ್ನು ಶಿರಸಾ ಪಾಲಿಸಿ, ಶಿವನ ಕೋಪದಿಂದ ತನ್ನ ಶಿರವನ್ನೇ ಕಳೆದುಕೊಂಡು. ಗಜಮುಖನಾದ, ಏಕದಂತನಾದ, ತನ್ನ ಪ್ರೀತಿಯ ಹಾಗೂ ತುಂಟ ಮಗ ಗಣಪನನ್ನು ನೋಡಿಕೊಳ್ಳಲು ತಾಯಿ ಗೌರಿ ಮೊದಲೇ ಒಂದು ದಿನ ಆಗಮಿಸುತ್ತಾಳೆ. ಈ ಗೌರಿ ಹಬ್ಬವನ್ನು ಗಣೇಶ ಚತುರ್ಥಿಯ ಹಿಂದಿನ ದಿನ ಬರುವ ಶುಕ್ರವಾರದಂದು ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ಪಾರ್ವತಿ ದೇವಿಯ ರೂಪವಾದ ಗೌರಿ ದೇವಿಯ ವಿಗ್ರಹವನ್ನು ಮನೆಯಲ್ಲಿ ಇರಿಸಿ ಹೂವು, ಹಣ್ಣು ಮತ್ತು ಸಿಹಿ ತಿಂಡಿಗಳನ್ನು, ವಿಶೇಷವಾಗಿ ಶುದ್ಧ ಮೈಮನಸ್ಸುಗಳ ಮಡಿಯಿಂದ ಅರ್ಪಿಸುವ ಮೂಲಕ ಪೂಜಿಸುತ್ತಾರೆ. ಗೌರಿ ಪೂಜೆಯನ್ನು ಮಾಡುವುದರಿಂದ ಪತಿ ಪತ್ನಿ ನಡುವೆ, ಕುಟುಂಬದಲ್ಲಿ ಸಾಮರಸ್ಯ ವೃದ್ಧಿಯಾಗುವುದು. ಸ್ವರ್ಣಗೌರಿ, ಗ್ರಾಮೀಣ ಭಾಗದಲ್ಲಿ ಸನ್ನಲ ಗೌರಿ ವ್ರತವೆಂದೂ ಕರೆಯುತ್ತಾರೆ.


ಮೃದ್ಭವ ಗಣಪ:

ಶ್ರೀಜಗನ್ನಾಥದಾಸರು ಹರಿಕಥಾಮೃತಸಾರದಲ್ಲಿ,


ಏಕವಿಂಶತಿಮೋದಕಪ್ರಿಯ

ಮೂಕರನು ವಾಗ್ಮಿಗಳ ಮಾಳ್ಪ ಕೃ-

ಪಾಕರೇಶ ಕೃತಜ್ಞ ಕಾಮದ ಕಾಯೊ ಕೈವಿಡಿದು |

ಲೇಖಕಾಗ್ರಣಿ ಮನ್ಮನದ ದು-

ರ್ವ್ಯಾಕುಲವ ಪರಿಹರಿಸು ದಯದಿ ಪಿ-

ನಾಕಿಭಾರ್ಯಾತನುಜ ಮೃದ್ಭವ ಪ್ರಾರ್ಥಿಸುವೆ ನಿನಗೆ


ಗಣೇಶನನ್ನು `ಪಿನಾಕಿಭಾರ್ಯಾತನುಜ' ಎಂದು ವಿಶಿಷ್ಟಪದದಿಂದ ಕರೆದಿರುವರು. ಶಿವಪಾರ್ವತಿಯರ ಪುತ್ರನೆನೆಸಿದರೂ, ನೇರವಾಗಿ ಜನಿಸಿದ್ದು ಶಿವನ ಅನುಗ್ರಹವಿರುವ ಪಾರ್ವತಿಯಿಂದಲೇ ಎಂಬ ಕಥೆ ನಮಗೆ ತಿಳಿದೇ ಇದೆ.


`ಮೃದ್ಭವ' ಎಂದರೆ ಮಣ್ಣಿನಿಂದ ಹುಟ್ಟಿದವನೆಂದರ್ಥ.

 ಪೃಥ್ವಿನಾಮಕಳಾದ ಪಾರ್ವತಿ, ಗಣೇಶ ಪಾರ್ವತಿಯಿಂದ ವಿಶಿಷ್ಟರೀತಿಯಲ್ಲಿ ಹುಟ್ಟಿದ ಎಂಬದನ್ನು ತೋರಿಸುತ್ತದೆ. ಇನ್ನೊಂದು ರೀತಿಯಲ್ಲಿ ಅದ್ಭುತ ಸೃಷ್ಟಿ ಮಾಡುವ ಪಾರ್ವತಿಯ ಮಹಿಮೆಯೂ ಇಲ್ಲಿ ಉಕ್ತವಾಗಿದೆ. ತನ್ನ ದೇಹದ ಪೃಥ್ವಿ ಅಂಶದ ಸೂಕ್ಷ್ಮಭಾಗವನ್ನು ತೆಗೆದು ಆ ಮೂಲಕ ದೇಹ ನೀಡುವ ಅಪಾರಸಾಮರ್ಥ್ಯ ಪಾರ್ವತಿಯದು ಎಂದರ್ಥ. ದಕ್ಷ ತಾನು ಮಾಡುವ ಯಜ್ಞದಲ್ಲಿ ತನ್ನ ಪತಿಯಾದ ಶಿವನಿಗೆ ಹವಿಸ್ಸನ್ನು ಕೊಡದ ಕಾರಣದಿಂದ ಕೋಪಗೊಂಡು ತನ್ನ ದೇಹದಲ್ಲಿನ ಯೋಗಾಗ್ನಿಯಿಂದಲೇ ದೇಹ ದಹಿಸಿಕೊಂಡ ಸತೀದೇವಿಯೇ ಈ ಪಾರ್ವತಿ. ಪಾರ್ವತಿಯೇ ಗೌರಿ.

೨೧ ಸಂಖ್ಯೆ ಗಣಪನಿಗೆ ಬಹಳ ಪ್ರಿಯವಾದದ್ದು. ಮೋದಕ ಅಂದರೆ ಬಹಳ ಇಷ್ಟ. ಮನದ ಸಕಲ ಇಷ್ಟಾರ್ಥಗಳು ಸಿದ್ಧಿಸಬೇಕಾದರೆ ಗಣೇಶ ಮೋದಕಪ್ರಿಯ. ಮೇಲ್ನೋಟಕ್ಕೆ ಇದು ಗಣೇಶ ಸಿಹಿ ತಿನಿಸಿನ ಪ್ರಿಯ ಎಂಬಂತೆ ಕಾಣುವದು; ವಸ್ತುಸ್ಥಿತಿ ಹಾಗಲ್ಲ. `ಮೋದ' ಎಂದರೆ ಆನಂದ; `ಕ' ಎಂದರೆ ತೀರ್ಥ; `ಮೋದಕಪ್ರಿಯ' ಎಂದರೆ ಆನಂದತೀರ್ಥರಿಗೆ ಪ್ರಿಯನಾದವ ಎಂದರ್ಥ.

ಗಣೇಶ ಆಕಾಶಾಭಿಮಾನಿಯಾದ್ದರಿಂದ ಶಬ್ದ ಜ್ಞಾನ ನೀಡಿ ಮೂಕರನ್ನು ವಾಗ್ಮಿಗಳನ್ನಾಗಿ ಮಾಡುವನು.


`ಲೇಖಕಾಗ್ರಣಿ'


ಗಣೇಶ ಆಕಾಶಾಭಿಮಾನಿ. ಶಬ್ದದ ಅಭಿವ್ಯಕ್ತಿ ಆಕಾಶದಲ್ಲಿ, ಅದಕ್ಕೆಂದೇ ಶಬ್ದರೂಪವಾದ ಶಾಸ್ತ್ರವನ್ನು ಬರೆಯುವ ಕಾರ್ಯವನ್ನು ವೇದವ್ಯಾಸರು ಗಣೇಶನಿಗೆ ನೀಡಿದರು. ಶ್ರೀ ವೇದವ್ಯಾಸರಿಂದ ಮಹಾಭಾರತ ಲೇಖನಕ್ಕೆ ಅವಕಾಶ ಪಡೆದದ್ದರಿಂದ ಗಣೇಶ ಎಂಬುದು ಸ್ಪಷ್ಟ. `ಲೇಖಕೋ ಭಾರತಸ್ಯಾಸ್ಯ ಭವ ತ್ವಂ ಗಣನಾಯಕ'  ವ್ಯಾಸರು ಮಹಾಭಾರತದ ಲೇಖನಕಾರ್ಯಕ್ಕೆ ಗಣೇಶನಿಗೆ ಆದೇಶ ನೀಡಿದಾಗ, ಅದನ್ನು ಗಣೇಶ ಶಿರಸಾವಹಿಸಿ, ತನ್ನ ಲೇಖನಿ ನಿಲ್ಲದಂತೆ ಬರೆಸಲು ಕೇಳಿಕೊಂಡ. ಆಗ ಶ್ರೀವ್ಯಾಸರು ಅದಕ್ಕೆ ಸಮ್ಮತಿಸಿ, ಪ್ರತಿಯೊಂದನ್ನೂ ಅರ್ಥಮಾಡಿಕೊಂಡೇ ಬರೆಯಲು ಆಜ್ಞಾಪಿಸಿದರು. ಗಣೇಶ ಅದಕ್ಕೆ ಸಮ್ಮತಿಸಿದ. ಆದರೆ ಶ್ರೀವ್ಯಾಸರು ಹೇಳಿದ ಅಷ್ಟೂ ಶ್ಲೋಕಗಳನ್ನು ಅರ್ಥಮಾಡಿಕೊಂಡು ವ್ಯಾಸಾನುಗ್ರಹದಿಂದಲೇ ಬರೆದನು. ಪ್ರಯಾಸವಿಲ್ಲದಂತೆ ಬರೆದವನು. ಅವುಗಳನ್ನು ಬರೆದು, ಲೋಕದಲ್ಲಿ ವಿಸ್ತರಿಸಿರುವ ಕೆಲಸ ಮಾಡಿದವನು.

ಇಲಿ ರೂಪದಲ್ಲಿ ಬಂದಿದ್ದ ದೈತ್ಯನನ್ನೇ ಪರಾಭವಗೊಳಿಸಿ ಮೂಷಿಕವಾಹನನಾದ ಗಣೇಶನನ್ನು ಪ್ರಾರ್ಥಿಸುತ್ತಾ, ಬೇಡಿದಿಷ್ಟಾರ್ಥಗಳನ್ನು ನೀಡುವ ಈ ಗೌರಿಗಣೇಶ ಹಬ್ಬವನ್ನು ಆಚರಿಸೋಣ.


- ಡಾ. ವಿದ್ಯಾಶ್ರೀ ಕುಲಕರ್ಣಿ ಮಾನವಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

1 Comments
  1. ಬಹಳ ಉತ್ತಮ ಲೇಖನ, ಉಪಯುಕ್ತ ಮಾಹಿತಿ ಪದಗಳ ಸುಂದರ ಜೋಡಣೆ ಎಲ್ಲವೂ ಮನೋಹರವಾಗಿದೆ
    ಇನ್ನೂ ಹೆಚ್ಚಿನ ಲೇಖನಗಳು ಮೂಡಿ ಬರಲಿ

    ReplyDelete
Post a Comment
Maruti Suzuki Festival of Colours
Maruti Suzuki Festival of Colours
To Top