- ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾಸೇವೆ
- 3ನೇ ವಿಶ್ವ ಹವ್ಯಕ ಸಮ್ಮೇಳನಕ್ಕೆ ಕೈಜೋಡಿಸಲು ಕರೆ
ಗೋಕರ್ಣ: ಗ್ರಹಗಳಿಂದ ಬರುವ ಎಲ್ಲ ದೋಷಗಳನ್ನು ಒಬ್ಬ ಗುರು ಪರಿಹಾರ ಮಾಡಬಲ್ಲ. ಗುರುವಿನ ದೃಷ್ಟಿಮಾತ್ರದಿಂದಲೇ ಎಲ್ಲ ದೋಷಗಳು ಪರಿಹಾರವಾಗಬಲ್ಲವು. ಗುರುವಿನ ಯೋಗ್ಯತೆಯನ್ನು ಜ್ಯೋತಿಷ ಉತ್ತಮವಾಗಿ ನಿರೂಪಿಸಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಸಮರ್ಪಿತವಾದ ಗುರುಭಿಕ್ಷಾಸೇವೆಯನ್ನು ಸ್ವೀಕರಿಸಿ ನಿತ್ಯ ಪ್ರವಚನ ಸರಣಿಯಲ್ಲಿ ಜ್ಯೋತಿಷ ಶಾಸ್ತ್ರದ ಆಧಾರದಲ್ಲಿ 'ಕಾಲ'ದ ಕುರಿತಾಗಿ ಪ್ರವಚನವನ್ನು ಅನುಗ್ರಹಿಸಿದ ಶ್ರೀಗಳು, ಗ್ರಹಗಳ ಬಲ ಹೆಚ್ಚಿದಂತೆ ಫಲ ಹೆಚ್ಚು. ಬಲ ಕಡಿಮೆಯಾದಾಗ ದುಷ್ಫಲಗಳನ್ನು ನೀಡುತ್ತವೆ. ದೋಷವನ್ನು ಪರಿಹರಿಸುವ ವಿಚಾರದಲ್ಲಿ ಗುರುವಿಗೆ ಇರುವ ಬಲ ಇತರ ಯಾವ ಗ್ರಹಗಳಿಗೂ ಇಲ್ಲ. ಗುರು ಎಷ್ಟೇ ದುರ್ಬಲನಾದರೂ ಗುರು ತನ್ನ ಸ್ವಭಾವವನ್ನು ಬಿಡುವುದಿಲ್ಲ. ಮುಪ್ಪು, ಹಸಿವು, ಆಯಾಸದಿಂದ ಮುದಿಸಿಂಹವೊಂದು ಹೇಗೆ ಒಣ ಹುಲ್ಲನ್ನು ತಿನ್ನುವುದಿಲ್ಲ. ಮದ್ದಾನೆಯ ಕುಂಭಸ್ಥಳ ಸೀಳಿ ಆಹಾರ ಸಂಪಾದಿಸಬೇಕು ಎಂಬ ಯೋಚನೆ ಅದರದ್ದಾಗಿರುತ್ತದೆ. ಅಂತೆಯೇ ಸಂತ ಕೂಡಾ ಎಂಥದ್ದೇ ಕಷ್ಟಸ್ಥಿತಿಯಲ್ಲೂ ತನ್ನ ಸ್ವಭಾವ ಬದಲಾಯಿಸಿಕೊಳ್ಳುವುದಿಲ್ಲ ಎಂದು ಗುರುವಿನ ಮಹತಿಯನ್ನು ವಿವರಿಸಿದರು.
3ನೇ ವಿಶ್ವಹವ್ಯಕ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ: ಸಮಾಜದ ಸಂಘಟನೆ ಹಾಗೂ ಸಮಾಜೋನ್ನತಿಯ ಕಾರ್ಯಗಳಲ್ಲಿ ಹವ್ಯಕ ಮಹಾಸಭೆ ತೊಡಗಿಸಿಕೊಂಡಿದೆ ಎಂದ ಶ್ರೀಗಳು, ಡಿಸೆಂಬರ್ 27, 28 ಹಾಗೂ 29ರಂದು ನಡೆಯಲಿರುವ ಐತಿಹಾಸಿಕ 3ನೇ ವಿಶ್ವಹವ್ಯಕ ಸಮ್ಮೇಳನಕ್ಕೆ ಶುಭಹಾರೈಸಿ; ಶ್ರೀಮಠದ ಎಲ್ಲಾ ಶಿಷ್ಯರೂ ಐತಿಹಾಸಿಕ ಕಾರ್ಯಕ್ರಮಕ್ಕೆ ಕೈಜೋಡಿಸುವಂತೆ ಕರೆನೀಡಿದರು.
ಅಖಿಲ ಹವ್ಯಕ ಮಹಾಸಭಾ ವತಿಯಿಂದ ನಿರ್ದೇಶಕ ಆರ್.ಜಿ.ಹೆಗಡೆ ಹೊಸಾಕುಳಿ ದಂಪತಿಗಳು ಸರ್ವಸೇವೆ ನೆರವೇರಿಸಿದರು. ಮಹಾಸಭೆಯ ಉಪಾಧ್ಯಕ್ಷರಾದ ಶ್ರೀಧರ ಭಟ್ಟ ಕೆಕ್ಕಾರು, ಆರ್. ಎಂ. ಹೆಗಡೆ ಬಾಳೇಸರ, ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ, ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ ಸೇರಿದಂತೆ ಬೆಂಗಳೂರು- ಶಿವಮೊಗ್ಗ- ಉತ್ತರಕನ್ನಡ- ದಕ್ಷಿಣ ಕನ್ನಡ ಭಾಗಗಳ ನಿರ್ದೇಶಕರು, ಸಂಚಾಲಕರು ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ