ನಮ್ಮ ಇಂದಿನ ಹಳ್ಳಿಗಳು ಹಿಂದಿನ ಹಳ್ಳಿಗಳಂತಿಲ್ಲ, ಪಟ್ಟಣದ ಯಾಂತ್ರಿಕ, ನಾಜೂಕಿನ ಜೀವನ ಶೈಲಿ ಹಳ್ಳಿಗೆಳನ್ನೂ ಆವರಿಸಿ, ಆಧುನಿಕ ಜೀವನ ಶೈಲಿಯತ್ತ ಬದಲಾಯಿಸಿಬಿಟ್ಟಿದೆ. ಈಗಿನ ಹಳ್ಳಿಗರು ಹೆಚ್ಚಾಗಿ ಪಟ್ಟಣದ ಜೀವನ ಶೈಲಿಯನ್ನೇ ಅನುಸರಿಸುತ್ತಿದ್ದಾರೆ. ಜನರಲ್ಲಿ ಒಗ್ಗಟ್ಟಿಲ್ಲ, ತಮ್ಮ ಪಾಡಿಗೆ ತಾವು ಎಂಬಂತೆ ಇರಲಿಚ್ಚಿಸುತ್ತಾರೆ. ದ್ವೇಷ, ಕಲಹವಂತೂ ತುಂಬಿ ತುಳುಕಾಡುತ್ತಿದೆ. ಅದರಲ್ಲೂ ನಮ್ಮ ರಾಜಕೀಯತೆ ಹಳ್ಳಿಗಳನ್ನೂ ಆವರಿಸಿ, ಅಣ್ಣ-ತಮ್ಮ. ತಂದೆ-ಮಗ, ಬಂಧು-ಬಳಗ ಎಂಬ ರಕ್ತ ಸಂಬಂಧವನ್ನೇ ಕಿತ್ತು ಗುಂಪು-ಗುಂಪುಗಳನ್ನು ಸೃಷ್ಟಿಸಿ, ಕಲಹವನ್ನು ಹುಟ್ಟುಹಾಕುತ್ತಿದೆ. ಚುನಾವಣೆಯ ಸಮಯ ಬಂತೆಂದರೆ ಹಳ್ಳಿಗರು ತಮ್ಮ ಕೆಲಸವನ್ನೂ ಬಿಟ್ಟು ಯಾರನ್ನೋ ಗೆಲ್ಲಿಸಲು ಅಥವಾ ಮತ್ಯಾರನ್ನೋ ಸೋಲಿಸಲು ಒಡಲಲ್ಲಿ ಹಗೆತನ ತುಂಬಿಕೊಂಡು ಓಡಾಡುತ್ತಾರೆ. ಇಷ್ಟೇ ಅಲ್ಲದೆ ನಮ್ಮ ಇಂದಿನ ಹಳ್ಳಿಯ ಯುವಕರು ಬೇರೆ ಬೇರೆ ಕೆಲಸ ಅರಸಿ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ.
'ಉಳುವಾ ಯೋಗಿಯ ನೋಡಲ್ಲಿ, ಉಳುವಾ ಯೋಗಿಯ ನೋಡಲ್ಲಿ' ಅಂದಿದ್ದರು. ಆದರೆ ಇಂದು, ಅದೇ ಹಳ್ಳಿಯ ಜನರು ನಗರಗಳಲ್ಲಿ ಮನೆ ತಾರಸಿಗೆ ಸಿಮೆಂಟು ಕಲಸಿ ಹಾಕುವ, ಮನೆ ಚಾಕರಿಗಳಲ್ಲಿ ನಿರತರಾಗಿರುವ, ರಸ್ತೆ ಡಿವೈಡರುಗಳಿಗೆ ಹಳದಿ ಕಪ್ಪು ಬಣ್ಣ ಬಳಿಯುವ, ಸೆಕ್ಯುರಿಟಿ ಗಾರ್ಡ್ ಆಗಿ ಸಾಫ್ಟ್‌ವೇರ್ ಕಂಪನಿಗಳಲ್ಲಿ ದುಡಿಯುವ ಯಾವುದೋ ಕಂಪನಿಗೆ ಪ್ಯೂನ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಇತ್ತೀಚೆಗೆ ಹೆಚ್ಚಿನ ಯುವಕರು ಉಳುವಾ ಯೋಗಿಗಳಾಗಿ ಉಳಿದಿಲ್ಲ. ಕರ್ನಾಟಕದಲ್ಲಂತೂ ಇದು ಅಕ್ಷರಶಃ ಸತ್ಯ, ಉತ್ತರ ಕರ್ನಾಟಕದ ಅನೇಕ ರೈತ ಕುಟುಂಬಗಳು ಬೆಂಗಳೂರಿಗೆ ಬಂದಿವೆ. 'ದುಡಿಮೆಯೆ ಬಡತನ ಅಳಿಸಲು ಸಾಧನ' ಅಂತ ಹಾಡಿದ ರೈತ ಹಳ್ಳಿಯಲ್ಲಿ ಅನುಭವಿಸಿದ ಬಡತನ ಅಳಿಸಿಹಾಕಲು ನಗರಕ್ಕೆ ಬಂದು ಕುಳಿತಿದ್ದಾನೆ. ಹೆಂಡತಿ ಮನೆಗೆಲಸ ಮಾಡಿ ಸಾವಿರದೈನೂರು, ಎರಡುಸಾವಿರ ಗಳಿಸುತ್ತಾಳೆ. ಗಂಡ ಅದೂ ಇದೂ ಚಾಕರಿ ಮಾಡಿ ಏನಿಲ್ಲವೆಂದ ರೂ ಐದಾರು ಸಾವಿರ ಗಳಿಸುತ್ತಾನೆ. ಹಳ್ಳಿಯಲ್ಲಿದ್ದರೆ ಇದು ಸಾಧ್ಯ ವಿತ್ತಾ? ಮಕ್ಕಳನ್ನು ಶಾಲೆಗೆ ಕಳಿಸುವುದು ಶಕ್ಯವಿತ್ತಾ? ಗದ್ದೆಗಳಲ್ಲಿ ದುಡಿಯದಿದ್ದರೇನಾಯಿತು ನಗರ ಕೈತುಂಬ ಕಾಸು ನೀಡಿದೆ ಎಂದು ತರ್ಕಬದ್ದವಾಗಿ ಮಾತಾಡಲು ಶುರು ಮಾಡಿದ್ದಾನೆ ರೈತ. ಹಳ್ಳಿ ಬಿಟ್ಟು ಪಟ್ಟಣ ಸೇರದ ರೈತನ ಮನೆ ದೊಡ್ಡ ನಗರದ ಪುಟಾಣಿ ಮನೆ, ರಾತ್ರಿಯೂ ದುಡಿಮೆ. ಎಷ್ಟೊತ್ತಿಗೋ ಮನೆಗೆ ಬರುತ್ತಾರೆ, ಅದೇನೋ ಪ್ಯಾಕೇಟ್ ಆಹಾರ ತಿನ್ನುತ್ತಾರೆ ಇತ್ಯಾದಿ. ಇದು ನಗರ ಜೀವನಕ್ಕೆ ಒಗ್ಗಿಹೋದ ಮಾನವರ ಕಥೆ.
ಇಂದಿನ ಹದಗೆಟ್ಟಿರುವ ವ್ಯವಸಾಯ ಪದ್ಧತಿಯಿಂದ ರೈತರು ಕೈಸುಟ್ಟುಕೊಳ್ಳುತ್ತಿರುವ ಸಂದರ್ಭದಲ್ಲೇ ನೆಲದ ಬೆಲೆ ಗಗನಕ್ಕೇರಿ, ಕೃಷಿಕರು ಕನಸಿನಲ್ಲಿಯೂ ಕಾಣದ ಕೋಟಿಗಳು ಅವರ ಕಾಲ ಬುಡಕ್ಕೆ ಬಂದು ಬೀಳುತ್ತಿದ್ದರೆ ಕೃಷಿ ಎಂಬುದು ಕಾಲ ಕಸವಾಯಿತು. ಸಾಲದ ಸುಳಿಗೆ ಸಿಕ್ಕ ಮತ್ತು ವಿವೇಚನೆಯಿಲ್ಲದ ರೈತರು ಕಾಂಚಾಣ ಕೈಲಿಡಿದು ಬಂದ ಕುಬೇರರ ಕಪಿಮುಷ್ಟಿಗೆ ಎಳ್ಳು ಜೀರಿಗೆ ಬೆಳೆವ ನೆಲವನ್ನೊಪ್ಪಿಸಿದರು. ಬರೀ ನೆಲಕ್ಕೇನೇ ಬೆಲೆ ಏರುತ್ತಿದ್ದರೆ, ಕೈ ಕೆಸರು ಮಾಡಿಕೊಳ್ಳಲಿಚ್ಛಿಸದ ಇನ್ನುಳಿದೆ ಗಡವ ರೈತರು ನೆಲವನ್ನತ್ತ ಮಾರಿಯೂ ಬಿಡದೆ, ವ್ಯವಸಾಯ ವನ್ನೂ ಮಾಡದೆ ಬೆಲೆ ಮತ್ತಷ್ಟು ದ್ವಿಗುಣಗೊಂಡ ನಂತರ ಬಿಕರಿ ಮಾಡಲು ನೆಲವನ್ನು ಕಾಂಪೌಂಡುಗಳಿಂದ ಸಿಂಗರಿಸಿ ಕಾದು ಕುಳಿತರು. ಈ ಪರಿಸ್ಥಿತಿ ಬೆಂಗಳೂರು ನಗರಕ್ಕಷ್ಟೇ ಸೀಮಿತವಾಗದೆ ಎಲ್ಲ ನಗರ, ಪಟ್ಟಣಗಳಿಗಷ್ಟೇ ಅಲ್ಲದೆ ತಾಲೂಕು ಕೇಂದ್ರಗಳಿಗೂ ವ್ಯಾಪಿಸಿ ಕೃಷಿ ಭೂಮಿ ಶಾಪಗ್ರಸ್ತವಾಯಿತು. ಕೃಷಿಕರು ಪೇಟೆಗಳ ಕೂಲಿಗಳಾಗತೊಡಗಿದರು. ರಾಸಾಯನಿಕ ಕೃಷಿಯೆಂಬ ರಾಕ್ಷಸನ ದಾಳಿಗೀಡಾದ ಅಪ್ಪಟ ಗ್ರಾಮಾಂತರ ಪ್ರದೇಶಗಳಲ್ಲಿ ಕೂಡ ಇವತ್ತು ಉಳುಮೆ ಕಾಣದ ನೆಲವೇ ಅಧಿಕವಾಗಿರುವುದನ್ನು ನೋಡಬಹುದು.
ನಗರಗಳ ಅಂಚಿನವರೆಗೆ ನೆಲ ಹಸಿರಾಗಿ, ಅದು ರಿಯಲ್ ಎಸ್ಟೇಟ್ ಕುಳಗಳ ಕಪಿ ಮುಷ್ಟಿಯಿಂದ ಪಾರಾದರೆ, ನಗರಗಳ ಬಾಡಿಗೆ ಗೂಡುಗಳೊಳಗೆ ಬವಣೆ ಪಡುತ್ತಿರುವ ಮತ್ತು ಸೂರಿಲ್ಲದ ಲಕ್ಷಾಂತರ ಜನರಿಗೆ ನಿವೇಶನ ಕೈಗೆಟುಕಿ ಸ್ವಂತ ಮನೆಯ ಕನಸು ಕೂಡ ನನಸಾಗುತ್ತದೆ. ಹೇಳುತ್ತಾ ಹೊದರೆ ಮುಗಿಯಲಾರದಷ್ಟು ಸಕಾರಾತ್ಮಕ ಅಂಶಗಳನ್ನು ಕಟ್ಟಿಕೊಡಬಲ್ಲ ಬೆಳೆ ಬೆಳೆಸಿದರಷ್ಟೇ ನೆಲದೊಡೆಯನೆಂದು ಸರಕಾರ ಆದೇಶ ಹೊರಡಿಸಿ ಜಾರಿಗೊಳಿಸಿದ್ದಾದರೆ ಅದಕ್ಕಿಂತಲೂ ಜನಪರ ನಿಲುವು ಬೇರೇನೂ ಇಲ್ಲ, ತಂತ್ರ, ಮಂತ್ರ, ಲೆಕ್ಕಾಚಾರ, ಚಾತುರ್ಯ ಮುಂತಾದ ನೈಸರ್ಗಿಕ ನಿಯಮಾವಳಿಗಳನ್ನು ಅಧಿಗಮಿಸುವ ದರೋಡೆ ಯನ್ನೇ ಶಿಕ್ಷಣವೆಂದು ಪ್ರಧಾನವಾಗಿ ಭಾವಿಸಲಾಗಿದೆ. ಪೇಟೆಯ ಎಳೆಯರಿಗೆ ತಾವು ತಿನ್ನುವ ಪದಾರ್ಥಗಳು ಮರದಲ್ಲಿ ಬಿಡುತ್ತವೋ, ಗಿಡದಲ್ಲಿ ಬಿಡುತ್ತವೋ ಗೊತ್ತೇ ಇಲ್ಲ, ಸರಕು, ಸಾಮಾಗ್ರಿ ಗಳಂತೆ ಕಾರ್ಖಾನೆಗಳಲ್ಲಿ ತಯಾರಾಗುತ್ತವೆಂದೇನಾದರೂ ಭಾವಿ ಸಿದರೆ ಆಶ್ಚರ್ಯಪಡುವಂತದ್ದೇನೂ ಇಲ್ಲ, ನೆಲದ ಸೌಲಭ್ಯವಿಲ್ಲದ ಪೇಟೆಗಳಲ್ಲಿ ಕೂಡ ತಾರಸಿಯ ಮೇಲೆ ಕುಂಡ ಗಳಲ್ಲಿ ತರ ತರದ ತರಕಾರಿ, ಹಣ್ಣು, ಹೂವುಗಳನ್ನು ಬೆಳೆಯುವ ಸಾಧ್ಯತೆಗಳಿರುವಾಗ ಪ್ರಾಥಮಿಕ ಶಿಕ್ಷಣದಿಂದಲೇ ಸಸ್ಯ ಪ್ರೀತಿ ಯನ್ನು ಕ್ರಿಯಾತ್ಮಕವಾಗಿ ಪರಿಗಣಿಸಬೇಕಾದ ಅಗತ್ಯ ಅತ್ಯಗತ್ಯ ವಾಗಿರಬೇಕಿತ್ತು. ಶಾಲೆಗಳಲ್ಲಿ ವಾರದ ಒಂದಿಡೀ ದಿನ ಮಕ್ಕಳಿಗೆ ಮರ-ಗಿಡ, ಬೆಳೆ-ಬಿತ್ತುಗಳನ್ನು ಬೆಳೆಸುವ ವಿಧಾನಗಳನ್ನು ಕಲಿಸಿದರೆ ಅದರ ದೂರಗಾಮಿ ಪರಿಣಾಮಗಳು ಅವರ ಭವಿಷ್ಯಕ್ಕೇನೆ ಬೆಳಕಾಗುತ್ತಿದ್ದವು. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಶ್ರೇಷ್ಠ ಎಂಬುದು ಹಳೆ ಯ ಮಾತು. ಆದರೆ ಅದು ಅಂದಿಗೂ ಇಂದಿಗೂ, ಎಂದೆಂ ದಿಗೂ ಶ್ರೇಷ್ಟವಾದದ್ದೇ. ನಮ್ಮ ಬಹುಜನರ ಜೀವನಾದಾರ, ಎಲ್ಲ ರ ಆಹಾರ ಈ ವಿದ್ಯೆಯಿಂದ ಮಾತ್ರ ದಕ್ಕುವಂಥದು. ಇಂಥ ಶ್ರೇಷ್ಟ ವಿದ್ಯೆಯನ್ನು ಇವತ್ತು ಕನಿಷ್ಟ ಮಟ್ಟಕ್ಕಿಳಿಸಿರುವ ನಮ್ಮ ವ್ಯವ ಸೈ ಗುರುತರ ಅಪರಾಧವನ್ನೇ ಎಸಗಿದೆ.
ಇವತ್ತು ಶಿಕ್ಷಣದಲ್ಲಿ ಶಿಖರಪ್ರಾಯವಾಗಿರಬೇಕಿದ್ದ, ಉನ್ನತ ಗೌರವಾದರಗಳಿಗೆ ಪಾತ್ರ ವಾಗಬೇಕಾಗಿದ್ದ ಮೇಟಿ ವಿದ್ಯೆಯ ಒಂದು ತುಣುಕೂ ಕೂಡ ಪ್ರಾಥಮಿಕ ಶಿಕ್ಷಣದ ಪಠ್ಯದಲ್ಲಾಗಲೀ, ಚಟುವಟಿಕೆಗಳಲ್ಲಾಗಲೀ ಸ್ಥಾನ ಪಡೆದಿಲ್ಲ. ಇದು ಅನ್ನ ದೇವರಿಗೆ ಎಸಗುತ್ತಿರುವ ಅನ್ಯಾವ ಲ್ಲದೆ ಬೇರೇನೂ ಅಲ್ಲ, ಉನ್ನತ ಶಿಕ್ಷಣದಲ್ಲಿ ಕೃಷಿ ವಿಜ್ಞಾನ ಒಂದು ಭಾಗವಾಗಿದೆಯಾದರೂ, ಅದು ಕೃಷಿಕರನ್ನು ಕೃಷಿಯಿಂದ ವಿಮು ಖರನ್ನಾಗಿಸುವಲ್ಲಿ ಶ್ರಮಿಸುತ್ತಿದೆಯಷ್ಟೆ, ಇವತ್ತು ಮೆಡಿಕಲ್, ಇಂಜಿನಿಯರಿಂಗ್ ಎಂಬ ರೋಗ ಮತ್ತು ಯಂತ್ರ ವಿಜ್ಞಾನಗಳು ಗಳಿಸಿಕೊಂಡಿರುವ ಅಗ್ರಪಟ್ಟವನ್ನು ನೋಡಿದರೆ ನಮ್ಮ ವ್ಯವಸ್ಥೆ ಎಷ್ಟೊಂದು ರೋಗಗ್ರಸ್ತವಾಗಿದೆ ಮತ್ತು ಎಷ್ಟೊಂದು ಯಾಂತ್ರಿಕ ವಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಕೃಷಿಯ ಮತ್ತು ಮರಗಿಡಗಳ ಶ್ರೇಷ್ಠತೆ, ಜೇಷ್ಟತೆ, ಅವುಗಳನ್ನು ಬೆಳೆಸುವ ಅಗತ್ಯ ಮತ್ತು ಸುಸ್ಥಿರ ವಿಧಾನಗಳನ್ನು ಎಳೆಯರ ಅರಿವಿಗೇ ತರದಂತೆ ರುವ ಜುಟ್ಟಿಗೆ ಮಲ್ಲಿಗೆ ಶಿಕ್ಷಣ ಪದ್ದತಿಯಿಂದ ಮತ್ತು ಕೃಷಿಯನ್ನು ಕೀಳಾಗಿ ಪರಿಗಣಿಸುತ್ತಿರುವ ನಮ್ಮ ನವ ಪುರೋಹಿತಶಾಹಿ ವರ್ಗದಿಂದಾಗಿಯೇ ಇವತ್ತು ಕೃಷಿಕರ ನವ ಪೀಳಿಗೆಯನ್ನು ಗ್ರಾಮಾಂತ್ರ ಪ್ರದೇಶಗಳಿಂದ ಹೊರದೂಡಲಾಗುತ್ತಿದೆ.
ಸಾಮಾನ್ಯವಾಗಿ ಗ್ರಾಮೀಣ ಜನರು ಬೇಗನೆ ಮಲಗಿ ಬೇಗನೆ ಎದ್ದು ತಮ್ಮ ಕೆಲಸಗಳಲ್ಲಿ ಮಗ್ನರಾಗುತ್ತಿದ್ದರು. ಹಳ್ಳಿಗಳು ಸಾಯಂ ಎಂಟು ಎಂಟೂವರೆ ಗಂಟೆಗೆ ನಿದ್ರೆಯಲ್ಲಿ ಮುಳುಗಿರುತ್ತಿದ್ದ ಕಾಲವೊಂದಿತ್ತು. ತದನಂತರ ಹಳ್ಳಿ ಹಳ್ಳಿಗೂ ವಿದ್ಯುತ್ ಹರಿದು ಬಂತು, ವಿದ್ಯುತ್ ಬೆಳಕಿನಲ್ಲಿ ಜನರು ಆರಾಮಾಗಿ ಓದುತ್ತಾ, ಹರಟೆ ಹೊಡೆಯುತ್ತಾ, ರೇಡಿಯಾ ಟೇಪ್ ರೆಕಾಡರ್ರ ಮೊದ ಲಾದುವನ್ನು ಕೇಳುತ್ತಾ ಸ್ವಲ್ಪ ತಡವಾಗಿ ಮಲಗಿ ನಿದ್ರಿಸಲು ಶುರು ಮಾಡಿದರು. ಆಮೇಲೆ ಬಂತು ಟೀವಿ, ಟೀವಿಯ ಬೆನ್ನಿಗೆ ವೀಸೀ ಆರ್. ತದನಂತರ ಧಾಳಿಯಿಟ್ಟವು ಡಿಶ್ ಆಂಟೆನಾ' ಮತ್ತು ಉಪಗ್ರಹ ಟೀವಿ ಚಾನಲ್'ಗಳು, ಮನೆಯ ಪ್ರತಿಯಾಬ್ಬರಿಗೂ ಒಂದೊಂದು ಚಾನಲ್ ಇಷ್ಟ ಶುರುವಾಯಿತು. ಗ್ರಾಮೀಣ ಜನರಿಗೆ ಮನೆಯಲ್ಲಿ ಕುಳಿತೇ ಸಿನೆ ಮಾಗಳನ್ನು ನೋಡಿ ಆನಂದಿಸುವ ಅವಕಾಶ ಮಾಡಿಕೊಟ್ಟವು. ಹಳ್ಳಿಗಳಲ್ಲಿ ಕೂಡಾ ಕೇಬಲ್ ಟೀವಿ ಮತ್ತು ವೀಡಿಯೋ ಲೈಬ್ರರಿಗಳು ಹುಟ್ಟಿಕೊಂಡುವು. ಈ ತೆರನಾದ ಟೀವಿಯ ಭರಾಟೆಯ " ನಡುವೆ ಹಳ್ಳಿಯ ದೈನಂದಿನ ಕಾರ್ಯಕ್ರಮಗಳಾದ ದೇವರ - ಭಜನೆ, ಮಕ್ಕಳ ಬಾಯಿಪಾಠ ಕಾರ್ಯಕ್ರಮ ಮತ್ತು ಸಂಜೆ ಎಲ್ಲರೂ ಒಟ್ಟಿಗೆ ಕುಳಿತು ಉಣ್ಣುವ ಸೌಹಾರ್ದ ಪೂರ್ಣ ಪರಿ ಪಾಠ ಹೆಚ್ಚಿನ ಮನೆಗಳಲ್ಲಿ ನಿಂತೇ ಹೋಯಿತು. ಸಾಯಂಕಾಲದ ಊಟವನ್ನು ಹೆಚ್ಚಿನ ಮನೆಮಂದಿ ಕೈತಟ್ಟೆ ಹಿಡಿದು ಟೀವಿಯ ಮುಂದೆ ಮಾಡತೊಡಗಿದರು. ಪೇಟೆಯ ಮನೆಗಳಂತೆಯೇ ಹಳ್ಳಿಮನೆಗಳ ಕ್ರಮ ಕೂಡಾ ಬದಲಾದವು. ಪೇಟೆಯಾಗಲೀ, ಹಳ್ಳಿಯಾಗಲೀ, ಶಾಲೆಗೆ ಹೋಗದ ಚಿಕ್ಕ ಮಗು ಕೂಡಾ ರಾತ್ರಿ ಹನ್ನೊಂದರ ತನಕ ಜಾಗರಣೆ ಮಾಡುವುದು ಈ ದಿನಗಳಲ್ಲಿ ಸರ್ವೇ ಸಾಮಾನ್ಯ.
ಕರ್ನಾಟಕದಲ್ಲಾಗಬಹುದು, ಇಡೀ ಭಾರತಲ್ಲೇ ಆಗಬಹುದು ವ್ಯವಸಾಯದಲ್ಲಿ ನೀರಾವರಿಗೆ ಸೀಮಿತ ಅವಕಾಶಗಳಿವೆ. ಮಳೆ ಯಾಶ್ರಯದಲ್ಲೇ ಅಧಿಕವಾಗಿ ಕೃಷಿ ಸಾಧ್ಯವಾಗಬೇಕಿದೆ. ಅದು ಸಾಧ್ಯವೂ ಕೂಡ. ರಾಸಾಯನಿಕ ಕೃಷಿ ವಿಧಾನಗಳಿಂದ ರೋಸಿ ಹೋದ ಅನೇಕ ಕೃಷಿಕರು ಇವತ್ತು ಸಾವಯುವ ಮತ್ತು ಸಹಜ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ಅದ್ಭುತಗಳನ್ನು ಮಾಡಿ ತೋರಿಸಿದ್ದಾರೆ. ಸರಳವೂ, ಸುಸ್ಥಿರವೂ, ಕಾರ್ಯಸಾಧ್ಯವಾಗುವಂತವೂ ಆದ ನಿಸರ್ಗ ಸ್ನೇಹಿ ವಿಧಾನಗಳಿಂದ ನಮ್ಮ ನೆಲ ಜಲ ವನ್ನು ದುಡಿಸಿಕೊಳ್ಳಬೇಕಾಗಿದೆ. ಆ ಮಾರ್ಗದಲ್ಲಿ ಕೃಷಿಯನ್ನು, ಕೃಷಿಕರನ್ನು ಹುರಿಗೊಳಿಸಬೇಕಾದ ಯುದ್ಧದೋಪಾದಿಯ ಕಾರ್ಯ ಸರ್ಕಾರದಿಂದ ಸಾಧ್ಯವಾಗಬೇಕು. ನಮ್ಮ ನೆಲ-ಜನಗಳ ಸದುಪಯೋಗ ಬಹಳ ನಿರ್ಲಕ್ಷ್ಯಕ್ಕೀಡಾಗಿರುವುದನ್ನು ಪ್ರಾಥಮಿ ಕವಾಗಿ ನಾವೆಲ್ಲರೂ ಅರಿತು, ಮೊದಲು ಈ ಮಣ್ಣಿನ ಮನುಷ್ಯ ರಂತೆ ನಮ್ಮ ನಡತೆಯನ್ನು ಕೂಡ ತಿದ್ದಿಕೊಳ್ಳುವುದು ಬಹು ಅಗತ್ಯ ವಾಗಿದೆ. ಹತ್ತಿರುವ ರೆಂಬೆಯನ್ನೇ ಕತ್ತರಿಸಿಕೊಳ್ಳುತ್ತಿರುವ ನಮ್ಮ ಮೂರ್ಖತನದ ಅರಿವು ನಮಗೇ ಆಗಬೇಕಾಗಿದೆ.
ಇಂದಿನ ಪೀಳಿಗೆಯ ನಗರದ ಮಕ್ಕಳಿಗೆ, ನಗರದಲ್ಲೇ ಬೆಳೆದು ದೊಡ್ಡವರಾದ ದೊಡ್ಡವರಿಗೆ ನಾಡಿನ ಜೀವನಾಡಿಯಾಗಿರುವ ಉಳುಮೆ, ಬಿತ್ತನೆ, ರೈತನ ದುಡಿಮೆ, ಹೊಲ-ಗದ್ದೆ ಇವುಗಳ ಬಗ್ಗೆ ಕಲ್ಪನೆಯಾದರೂ ಎಷ್ಟಿದೆ? ಬಸ್ಸಿನಲ್ಲೇ ರೈಲಿನಲ್ಲೋ ಹೋಗುವಾಗ ಮತ್ತು ಟಿವಿಗಳಲ್ಲಿ ನೋಡಿದ್ದೆಷ್ಟೋ ಅಷ್ಟು ಹಳ್ಳಿಯಲ್ಲಿದ್ದ ಅಜ್ಜ ಅಜ್ಜಿಯರೇ ಪಟ್ಟಣ ಬಂದು ಸೇರಿಯಾದ ಮೇಲೆ ಮೊಮ್ಮಕ್ಕಳು ಹಳ್ಳಿಗೆ ಹೋಗಿಯಾದರೂ ಏನು ಮಾಡುತ್ತವೆ ಬಿಡಿ. ನಗರದ ಮಕ್ಕಳಿಗೆ ಶಾಲಾ ಅಧ್ಯಯನ ಪ್ರವಾಸ ಕೈಗೊಳ್ಳುವ ಶಿಕ್ಷಕರು ಯಾವುದೋ ಊರು. ಯಾವುದೋ ಫ್ಯಾಕ್ಟರಿ, ಯಾವುದೋ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡು ಹೋಗುವ ಬದಲು ಹಳ್ಳಿಗಳಿಗೆ ಏಕೆ ಕರೆದುಕೊಂಡು ಹೋಗಬಾರದು? ಅಲ್ಲಿನ ಹೊಲ ಗಳು, ರೈತರು, ಗದ್ದೆಯ ಮೊಣಕಾಲುದ್ದ ಕೆಸರಿನಲ್ಲಿ ನಾಟಿ ಮಾಡುವುದನ್ನು, ಬೆಳೆದ ಬೆಳೆ ಸಂಸ್ಕರಿಸುವುದನ್ನು, ಹಳ್ಳಿಯ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯ ಏಕೆ ಮಾಡಿಕೊಡಬಾರದು? ಇಂಥದೊಂದು ಪ್ರಯೋಗವನ್ನು ಸರಕಾರವೇ ಮಾಡಬೇಕು. ನಗರದ ಟೆಕ್ಕಿಗಳಾದರೂ ಅಷ್ಟೇ, ವೀಕೆಂಡು ಬಂದರೆ ಟ್ರೆಕ್ಕಿಂಗು, ಸರ್ಫಿಂಗು, ಸೈಟ್ ಸೀಯಿಂಗು ಅಂತ ಹೆಂಡತಿ ಮಕ್ಕಳೊಡನೆ ತಿರುಗಾಡುವ ಬದಲು ಹಳ್ಳಿ ಜೀವನದ ಪರಿಚಯ ಮಾಡಿಕೊಳ್ಳಬಾರದೇಕೆ? ಇದನ್ನೆಲ್ಲಾ ಗಮನಿಸಿದರೆ, ನಮ್ಮ ಇಂದಿನ ಹಳ್ಳಿಯ ಯುವಪೀಳಿಗೆ ಇದಾವುದನ್ನೂ ತಿಳಿದುಕೊಳ್ಳದೆ ತಮ್ಮ ಪುರಾತನ ಬಳವಳಿಯನ್ನು ಹೇಳಹೆಸರಿಲ್ಲದಂತೆ ಮಾಡ ಹೊರಟಿದೆ. ಇದರಿಂದಲೇ ನಮ್ಮ ಇಂದಿನ ಹಳ್ಳಿಗಳು ತಮ್ಮ ಸೊಗಡನ್ನೇ ಕಳೆದುಕೊಳ್ಳುತ್ತಿವೆ.
- ಸರಸ್ವತಿ ವಿಶ್ವನಾಥ್ ಪಾಟೀಲ್, ಕಾರಟಗಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ