ಮಂಗಳೂರು: ಹಿಂದಿ ನಮ್ಮ ರಾಷ್ಟ್ರೀಯ ಭಾಷೆ. ದೇಶದ ಎಲ್ಲೆಡೆಯೂ ಹಿಂದಿ ಭಾಷಿಗರು ಇದ್ದಾರೆ. ಸರ್ಕಾರ, ವ್ಯಾಪಾರ ಎಲ್ಲದರಲ್ಲೂ ಹಿಂದಿ ಮಾನ್ಯತೆ ಪಡೆದಿದ್ದರೂ ಪ್ರಸ್ತುತ ಭಾರತೀಯರಿಗೆ ಹಿಂದಿಯ ಮೇಲಿನ ಒಲವು ಕಡಿಮೆಯಾಗುತ್ತಿದೆ. ವಿದೇಶಿಗರು ಹಿಂದಿ ಭಾಷೆ ಮಾತನಾಡಲು ಬಯಸುತ್ತಾರೆ. ಆದರೆ ಭಾರತೀಯರು ಹಿಂದಿ ಭಾಷೆಯನ್ನು ನಿರ್ಲಕ್ಷ್ಯಿಸುತ್ತಿದ್ದಾರೆ ಎಂದು ಹಿಂದಿ ಭಾಷಾ ಮುಖ್ಯ ಸಾಹಿತ್ಯಕಾರ ಡಾ. ಮೋಹನ ದಾಸ ನೈಮಿಷರಾಯ ವಿಷಾದ ವ್ಯಕ್ತಪಡಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಹಿಂದಿ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿಕೋಶದ ವತಿಯಿಂದ ಆಯೋಜಿಸಲಾಗಿದ್ದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಭಾರತೀಯರಾಗಿ ರಾಷ್ಟ್ರೀಯ ಭಾಷೆಯಲ್ಲಿ ಮಾತನಾಡದೇ ಸಂವಹನಕ್ಕಾಗಿ ಇಂಗ್ಲಿಷ್ ಭಾಷೆ ಮೊರೆ ಹೋದರೆ ಹಿಂದಿ ಭಾಷೆಯ ಸ್ಥಾನ ಮತ್ತು ಸ್ಥಿತಿಗತಿಗೆ ಧಕ್ಕೆಯಾಗುತ್ತದೆ. ಒಟ್ಟಾರೆಯಾಗಿ ಇಂಗ್ಲಿಷ್ ಭಾಷೆಯ ಪ್ರಭಾವದಿಂದ ಹಿಂದಿ ಭಾಷೆಯು ಅಳಿವಿನಂಚಿಗೆ ಸಾಗಿದೆ ಎಂದು ತಿಳಿಸಿದರು.
ಹಿಂದಿ ಸಾಹಿತ್ಯದಲ್ಲಿ ಗಾಂಧೀಜಿ ಮತ್ತು ಸ್ವಾಮಿ ವಿವೇಕಾನಂದರಂತಹ ಮಹಾನ್ ಸಾಧಕರು ತಮ್ಮನ್ನು ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಸಿನಿಮಾ ಹಾಗೂ ದೂರದರ್ಶನದಲ್ಲಿ ಹಿಂದಿ ಭಾಷೆಯ ಬಳಕೆ ಹೆಚ್ಚುತ್ತಿದೆಯಾದರೂ ನಿತ್ಯದ ಬದುಕಿನಲ್ಲಿ ಹಿಂದಿ ಭಾಷೆಗೆ ಕೊಡುತ್ತಿರುವ ಪ್ರಾಧಾನ್ಯತೆ ಕಡಿಮೆಯಾಗುತ್ತಿದೆ. ಇಂದಿನ ಆಧುನಿಕ ಯುಗದಲ್ಲಿ ಇಂಗ್ಲಿಷ್ ಭಾಷೆಯ ಪ್ರಭಾವದಿಂದ ದೂರದರ್ಶನದಂತಹ ಮಾಧ್ಯಮಗಳಲ್ಲೂ ಶುದ್ಧ ಭಾಷೆಯ ಬಳಕೆ ಕಡಿಮೆಯಾಗುತ್ತಿರುವುದು ಶೋಚನೀಯ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಪ್ರೊ. ನಾಗರತ್ನ ರಾವ್, ಹಿಂದಿ ವಿಭಾಗ ಉಪನ್ಯಾಸಕಿ ಪ್ರೊ. ಸುಮಾ ಟಿ. ಆರ್., ಡಾ. ನಾಗರತ್ನ ಶೆಟ್ಟಿ, ಡಾ. ಜ್ಯೋತಿ ಜ್ಞಾನೇಶ್ವರಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ