ಮಂಗಳೂರು: ನಗರದ ಜ್ಯೋತಿ-ಕೆಎಂಸಿ ಆಸ್ಪತ್ರೆ ಬಳಿ ನಿರ್ಮಾಣಗೊಳ್ಳಬೇಕಿರುವ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ರವರ ಭವ್ಯ ಪ್ರತಿಮೆ ಸಹಿತ ಆಕರ್ಷಕ ವೃತ್ತಕ್ಕೆ ಸಂಪೂರ್ಣ ಸಹಮತವಿದ್ದು ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದೆಂದು ಶಾಸಕ ವೇದವ್ಯಾಸ ಕಾಮತ್ ರವರು ತಿಳಿಸಿದರು.
ಈ ಬಗ್ಗೆ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ, ಮುಂಡಾಲ ಯುವ ವೇದಿಕೆ ಮಂಗಳೂರು, ಆದಿ ದ್ರಾವಿಡ ಸಮಾಜ ಸಂಘಟನೆಗಳು ಶಾಸಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಶಾಸಕರು ನಗರದ ಜ್ಯೋತಿಯಂತಹ ಪ್ರಮುಖ ಭಾಗದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆ ಸಹಿತ ವೃತ್ತ ನಿರ್ಮಿಸುವುದು ನಮ್ಮೆಲ್ಲರಿಗೂ ಹೆಮ್ಮೆಯೂ ಹೌದು, ಜವಾಬ್ದಾರಿಯೂ ಹೌದು. ಮೇಯರ್ ಅವರು ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿದ್ದು, ಹತ್ತು ಹಲವು ಸಭೆಗಳನ್ನು ನಡೆಸಿದ್ದು ಎಲ್ಲವೂ ಅಭಿನಂದನಾರ್ಹ. ಮಂಗಳೂರು ಸ್ಮಾರ್ಟ್ ಸಿಟಿಯಡಿಯಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದ್ದು ವಿಶೇಷ ಆದ್ಯತೆಯ ಮೇರೆಗೆ ಶೀಘ್ರವಾಗಿ ಪೂರ್ಣಗೊಳ್ಳುವ ಬಗ್ಗೆ ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ನಗರದಲ್ಲಿ ಸುಂದರವಾದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಹಾಗೂ ಪ್ರತಿಮೆಯು ನಿರ್ಮಾಣಗೊಂಡಿದ್ದು ಇಲ್ಲಿ ಗಮನಾರ್ಹ.
ಸ್ಟೇಟ್ ಬ್ಯಾಂಕ್ ನ ಅವೈಜ್ಞಾನಿಕ ಬ್ಯಾರಿಕೇಡ್ ಗಳನ್ನು ಕೂಡಲೇ ತೆರವುಗೊಳಿಸಿ :-
ನಗರದ ಸ್ಟೇಟ್ ಬ್ಯಾಂಕ್ ನಿಂದ ಹಂಪನಕಟ್ಟೆವರೆಗೆ ಅವೈಜ್ಞಾನಿಕವಾಗಿ ಬ್ಯಾರಿಕೇಡ್ ಅಳವಡಿಸಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೇವಲ ಉಸ್ತುವಾರಿ ಸಚಿವರ ಮೌಖಿಕ ಆದೇಶವೆಂದು ಹೀಗೆ ಏಕಾಏಕಿ ಯಾರಿಗೂ ಮಾಹಿತಿ ನೀಡದೇ ದಿನ ಬೆಳಗಾಗುವುದರೊಳಗೆ ಅರ್ಥವಿಲ್ಲದ ನಿಯಮಗಳನ್ನು ಜನರ ಮೇಲೆ ಹೇರುವ ಮೊದಲು ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕಿತ್ತು. ಕ್ಷೇತ್ರದ ಶಾಸಕನಾದ ನನಗಂತೂ ಈ ಬಗ್ಗೆ ಯಾವುದೇ ಮಾಹಿತಿಯೇ ನೀಡಿಲ್ಲ. ಹಾಗಾದರೆ ಇವರ ಮಟ್ಟಿಗೆ ಕ್ಷೇತ್ರದ ಜನಪ್ರತಿನಿಧಿಗಳ, ಸಾರ್ವಜನಿಕರ ಅಭಿಪ್ರಾಯ ಲೆಕ್ಕಕ್ಕಿಲ್ಲವೇ?
ಈ ಅವ್ಯವಸ್ಥೆಯಿಂದ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರು ಸೇರಿದಂತೆ ರಿಕ್ಷಾ ಚಾಲಕರಿಂದ ದಿನನಿತ್ಯ ಅನೇಕಾರು ಕರೆಗಳು ಬರುತ್ತಿದ್ದು ಅವರಿಗೆ ಯಾರು ಉತ್ತರ ಕೊಡುತ್ತಾರೆ? ಈ ಕೂಡಲೇ ಅವರೆಲ್ಲರ ಆಗ್ರಹದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಇಲ್ಲಿನ ಅವೈಜ್ಞಾನಿಕ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರ ಪರವಾಗಿ ಸ್ಟೇಟ್ ಬ್ಯಾಂಕ್ ನಲ್ಲಿಯೇ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದೆಂದು ಶಾಸಕರು ಎಚ್ಚರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ