ಬೆಂಗಳೂರು: ಪ್ರತಿಷ್ಠಿತ ಆರ್‌ವಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ನ 2024ನೇ ಶೈಕ್ಷಣಿಕ ವರ್ಷದ ಬಿ.ಟೆಕ್ (ಆನರ್ಸ್) ಪದವಿ ತರಗತಿ ಆರಂಭಗೊಂಡಿದ್ದು, ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಹಾಗೂ ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹೊಸ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಸ್ಕೂಲ್ ಆಫ್ ಬ್ಯುಸಿನೆಸ್, ಸ್ಕೂಲ್ ಆಫ್ ಎಕನಾಮಿಕ್ಸ್ ಆಂಡ್ ಪಬ್ಲಿಕ್ ಪಾಲಿಸಿ, ಸ್ಕೂಲ್ ಆಫ್ ಡಿಸೈನ್ ಆಂಡ್ ಇನ್ನೋವೇಶನ್, ಸ್ಕೂಲ್ ಆಫ್ ಲಾ, ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ ಆಂಡ್ ಕ್ರಿಯೇಟಿವ್ ಆರ್ಟ್ಸ್ ನ ಸ್ನಾತಕೋತ್ತರ ಪದವಿ ತರಗಳು ಕೂಡ ಆರಂಭವಾಗಿದ್ದು, ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ ಕೋರಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದರು (ಬೆಂಗಳೂರು ದಕ್ಷಿಣ) ಮತ್ತು ಬಿಜೆವೈಎಂನ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು, "ಇತಿಹಾಸವನ್ನು ಗಮನಿಸಿದರೆ ಮಾನವನ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಅವಕಾಶ ಇರುವ ಮಹತ್ವದ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ನಮ್ಮ ಪೀಳಿಗೆ ಒಂದು ಸಾಮೂಹಿಕ ಉದ್ದೇಶವಿದೆ. ಅದೇನೆಂದರೆ ಭಾರತ ದೇಶವನ್ನು ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವುದು. ನಿಮ್ಮ ಶಿಕ್ಷಣ ಸಮಯದಲ್ಲಿ ಫೋಕಸ್ ಕಳೆದುಕೊಳ್ಳಬೇಡಿ. ದೊಡ್ಡದಾಗಿ ಸಾಧನೆ ಮಾಡುವತ್ತ ಚಿತ್ತ ಹರಿಸಿ. ವಿಶ್ವವಿದ್ಯಾನಿಲಯಗಳ ಪ್ರಯೋಗಾಲಯಗಳು ಮತ್ತು ತರಗತಿಗಳಲ್ಲಿ ಅತ್ಯುತ್ತಮ ಐಡಿಯಾಗಳು ಹುಟ್ಟಿಕೊಳ್ಳುತ್ತವೆ, ನಂತರ ಅದನ್ನು ವಾಣಿಜ್ಯ ಉದ್ದಿಮೆ ರೂಪದಲ್ಲಿ ಮಾರುಕಟ್ಟೆಗೆ ಕೊಂಡೊಯ್ಯುವ ಅವಕಾಶ ಇರುತ್ತದೆ" ಎಂದು ಹೇಳಿದರು.
ಆರ್‌ವಿ ವಿಶ್ವವಿದ್ಯಾನಿಲಯದ ಉಪಕುಲಪತಿ (ಐ/ಸಿ) ಪ್ರೊ. (ಡಾ.) ದ್ವಾರಿಕಾ ಪ್ರಸಾದ್ ಉನಿಯಾಲ್ ಅವರು, "ಆವಿಷ್ಕಾರ ಮನೋಭಾನ ಒದಗಿಸುವ ಮತ್ತು ಬದಲಾವಣೆ ಉಂಟು ಮಾಡುವ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ನಾವು ಒಂದು ಸಂಸ್ಥೆಯಾಗಿ ಬದ್ಧರಾಗಿದ್ದೇವೆ. ಆರ್‌ವಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಮಹತ್ವದ ಸಾಧನೆ ಮಾಡುವ ವೇದಿಕೆ ಒದಗಿಸುತ್ತೇವೆ" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರ್.ವಿ. ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಡಾ.(ಹೆಚ್.ಸಿ) ಎ.ವಿ.ಎಸ್. ಮೂರ್ತಿ, ಆರ್‌ವಿಯು ಪ್ರೊ ಚಾನ್ಸೆಲರ್ ಡಿ.ಪಿ. ನಾಗರಾಜ್, ಆರ್ ಎಸ್ ಎಸ್ ಟಿ ಅಧ್ಯಕ್ಷ ಡಾ.ಎಂ.ಪಿ. ಶ್ಯಾಮ್, ಆರ್‌ವಿಯು ನಿರ್ದೇಶಕ ನಿಖಿಲ್ ಮೂರ್ತಿ ಹಾಗೂ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.
ಆರ್‌ವಿ ವಿಶ್ವವಿದ್ಯಾಲಯದ ಬಿ.ಟೆಕ್ ಪದವಿಯನ್ನು ಕಂಪ್ಯೂಟಿಂಗ್ ವಿಷಯದಲ್ಲಿ ಅತ್ಯುನ್ನತ ಜ್ಞಾನ ಒದಗಿಸುವಂತೆ ರೂಪಿಸಲಾಗಿದೆ. ಜೊತೆಗೆ ಆರ್‌ವಿ ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ಪದವಿಗಳನ್ನು ವಿವಿಧ ಕ್ಷೇತ್ರದ ವೃತ್ತಿಪರರ ಅಗತ್ಯಗಳನ್ನು ಸೂಕ್ತವಾಗಿ ಪೂರೈಸುವ ನಿಟ್ಟಿನಲ್ಲಿ ವಿನ್ಯಾಸಗೊಂಡಿದ್ದು, ಅವರವರ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ನೆರವಾಗುತ್ತವೆ.
ಕಾರ್ಯಕ್ರಮದಲ್ಲಿ ಆರ್‌ವಿ ವಿಶ್ವವಿದ್ಯಾನಿಲಯವು ಶೈಕ್ಷಣಿಕವಾಗಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮೆರಿಟ್ ವಿದ್ಯಾರ್ಥಿವೇತನವನ್ನು ನೀಡಿ ಗೌರವಿಸಿತು. ಹೊಸ ವಿದ್ಯಾರ್ಥಿಗಳಿಗೆ ಮೂರು ದಿನಗಳ ಓರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ