ಅಂಬಿಕಾ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದಿಂದ ಉಪನ್ಯಾಸ ಕಾರ್ಯಕ್ರಮ

Upayuktha
0

ಸ್ವದೇಶೀ ವಸ್ತುಗಳ ಬಳಕೆಗೆ ಆದ್ಯತೆ ನೀಡುವುದು ಅಗತ್ಯ : ಅನನ್ಯಾ ವಿ


ಪುತ್ತೂರು:
ದೇಶದ ಅಭಿವೃದ್ಧಿ ನಮ್ಮ ಕೈಯಲ್ಲಿದೆ. ಹೊಸ ಹೊಸ ಆಲೋಚನೆಗಳ ಮೂಲಕ ದೇಶಕ್ಕೆ ನಮ್ಮದಾದ ಕೊಡುಗೆಗಳನ್ನು ಕೊಡಬಹುದು. ನೂತನ ಉದ್ಯಮಗಳನ್ನು ಆರಂಭಿಸುವ ಮುಖೇನವೂ ದೇಶದ ಪ್ರಗತಿಯಲ್ಲಿ ನಾವು ಭಾಗೀದಾರರಾಗುವುದಕ್ಕೆ ಸಾಧ್ಯವಿದೆ ಎಂದು ಅಂಬಿಕಾ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್  ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ನನ್ನ ಕೊಡುಗೆ’ ಎಂಬ ವಿಷಯದ ಬಗೆಗೆ ಬುಧವಾರ ಮಾತನಾಡಿದರು.


ಸ್ವದೇಶೀ ವಸ್ತುಗಳ ಬಳಕೆಯನ್ನೇ ಮಾಡುತ್ತೇವೆ ಎಂಬ ಸಂಕಲ್ಪವೂ ದೇಶದ ಅಭಿವೃದ್ಧಿಗೆ ಪೂರಕ. ಇಂದು ನಾವು ಬಳಸುತ್ತಿರುವ ಹಲವಾರು ವಸ್ತುಗಳು ವಿದೇಶೀ ಮೂಲದವುಗಳು. ಆದರೆ ನಾವು ಬಳಸುವ ಪ್ರತಿಯೊಂದು ವಿದೇಶೀ ವಸ್ತುವಿಗೂ ಪರ್ಯಾಯವಾಗಿ ಭಾರತೀಯ ವಸ್ತುಗಳು ಲಭ್ಯವಿದೆ ಎಂಬುದನ್ನು ತಿಳಿದುಕೊಳ್ಳಬೇಕು. ನಾವೇ ನಮ್ಮ ದೇಶದ ಉತ್ಪನ್ನಗಳನ್ನು ಖರೀದಿಸದಿದ್ದರೆ ನಾಳೆ ನಾವು ಉದ್ಯಮಿಗಳಾಗಿ ನಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಾಗ ಜನ ಖರೀದಿ ಮಾಡಬೇಕೆಂದು ಬಯಸುವುದು ಸಾಧುವೆನಿಸುತ್ತದೆಯೇ ಎಂದು ಪ್ರಶ್ನಿಸಿದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ದೇಶಕ್ಕೆ ನಮ್ಮಿಂದ ಏನೂ ಕೊಡುವುದಕ್ಕೆ ಸಾಧ್ಯವಿಲ್ಲದಿದ್ದರೆ ಕನಿಷ್ಟ ಉಪದ್ರ ಕೊಡದಿರುವುದೇ ಕೊಡುಗೆಯೆನಿಸುತ್ತದೆ. ಆದರೆ ಈ ದೇಶದಲ್ಲಿ ಹುಟ್ಟಿ, ಇಲ್ಲಿನ ಅನ್ನಾಹಾರ ಸೇವಿಸಿ ದೇಶಕ್ಕೇ ಕಂಟಕವೆನಿಸುವವರು ದೇಶದ ಅಭಿವೃದ್ಧಿಗೆ ತೊಡಕಾಗುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಹಾಕದಿರುವುದು, ನೀರು, ಗಾಳಿಗಳನ್ನು ಮಲಿನಗೊಳಿಸದಿರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ನುಡಿದರು.


ತನ್ನ ನೆತ್ತಿಯ ಮೇಲೆ ಎರಡು ಬಾಂಬ್‌ಗಳು ಬಿದ್ದರೂ ಕೆಲವೇ ವರ್ಷಗಳಲ್ಲಿ ಜಪಾನ್ ಮತ್ತೊಮ್ಮೆ ಎದ್ದು ನಿಂತ ಉದಾಹರಣೆ ಕಣ್ಣ ಮುಂದಿದೆ. ನಮ್ಮ ದೇಶ ಅತ್ಯಂತ ಹೆಚ್ಚು ಜನಸಂಖ್ಯೆ ಉಳ್ಳ ದೇಶ. ಹೀಗಿರುವಾಗ ಎಲ್ಲರೂ ಏಕಮನಸ್ಸಿನಿಂದ ದೇಶದ ಅಭಿವೃದ್ಧಿಯನ್ನು ಧೇನಿಸಿದರೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂದೆನಿಸಲು ಹೆಚ್ಚು ಸಮಯ ಬೇಕಿಲ್ಲ. ದೇಶಪ್ರೇಮಿಗಳಾಗಿ ಬೆಳೆಯುವುದೇ ಈ ದೇಶಕ್ಕೆ ನಾವು ಕೊಡುವ ಅತಿದೊಡ್ಡ ಕೊಡುಗೆ ಎಂದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಹರ್ಷಿತ್ ಪಿಂಡಿವನ, ಕನ್ನಡ ಉಪನ್ಯಾಸಕ ಗಿರೀಶ ಭಟ್, ವಾಣಿಜ್ಯ ಉಪನ್ಯಾಸಕಿ ಶ್ರೀಕೀರ್ತನಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಪರ್ಣಾ ಪ್ರಾರ್ಥಿಸಿದರು. ವಿದ್ಯಾರ್ಥಿ ಅವನೀಶ್ ಸ್ವಾಗತಿಸಿ, ವಿದ್ಯಾರ್ಥಿನಿ ಸ್ವಾತಿ ವಂದಿಸಿದರು. ವಿದ್ಯಾರ್ಥಿನಿ ಅಕ್ಷಿತಾ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top