ನಾಳೆ ಶೃಂಗೇರಿ ಬಂದ್: ಮಲೆನಾಡಿನ ಸಾವಿರಾರು ಎಕರೆ ಭೂಮಿ ಕಂಪನಿಗಳಿಗೆ ನೀಡುವುದರ ವಿರುದ್ಧ ಪ್ರತಿಭಟನೆ

Upayuktha
0


ಪಶ್ಚಿಮ ಘಟ್ಟದ ಸಾವಿರಾರು ಎಕರೆ ಭೂಮಿಯನ್ನು 99 ವರ್ಷಗಳಿಗೆ ಕಾಫಿ, ಟೀ ಬೆಳೆಯುವುದಕ್ಕೆ ಅನೇಕ ಕಂಪನಿಗಳಿಗೆ ಲೀಸ್‌ಗೆ ಕೊಡಲಾಗಿದೆಯಂತೆ.  


ಅದು ಹೌದಾದರೆ, ಆ ಸಾವಿರಾರು ಎಕರೆ ಭೂಮಿ  ಜೀವ ವೈವಿಧ್ಯತೆಯೆ ಸೂಕ್ಷ್ಮ ಪ್ರದೇಶವಾಗಿ ಉಳಿಯುವುದಕ್ಕೆ ಸಾಧ್ಯವಾ?  ಕಾಫಿ, ಟೀ ಬೇಸಾಯಕ್ಕೆ ಅಲ್ಲಿ ರಾಸಾಯನಿಕ ಬಳಸುವುದಿಲ್ವಾ?  ಕಳೆನಾಶಕ ಉಪಯೋಗಿಸುವುದಿಲ್ಲವಾ?  ಪರಿಸರಕ್ಕೆ ಪೂರಕವಾದ ವೈವಿದ್ಯಮಯ ಮರಗಳನ್ನು ಅಲ್ಲಿ ಆ ಲೀಸ್ಡ್ ಕಂಪನಿಗಳು ಬೆಳಸಲು ಸಾಧ್ಯವಾ?  ಕಮರ್ಷಿಯಲ್ ಲಾಭವೇ ಪ್ರಮುಖವಾಗಿರುವಾಗ ಕಂಪನಿಗಳು ಪರಿಸರ ಹಿತವನ್ನು ನೋಡುತ್ತವೆಯಾ?  ಕಾಫಿ ಹಣ್ಣುಗಳನ್ನು ತಿಂದು ಬದುಕಲು ಮಂಗ, ಮುಶಿಯ, ಅಳಿಲು, ನವಿಲು, ಪಕ್ಷಿಗಳು, ಕಾಡು ಪ್ರಾಣಿಗಳನ್ನು ಅಲ್ಲಿಯ 'ರೈಟ್ರು' ಶಿಕಾರಿ ಮಾಡದೆ ಉಳಿಯಲು ಬಿಡ್ತಾರಾ? ಸಾವಿರಾರು ಎಕರೆಗಳ ಕಾಫಿ ಒಣಗಿಸಲು ನೂರಾರು ಎಕರೆ ಕಾಫಿ ಕಣಗಳ ಕಾಂಕ್ರೇಟ್ ಗ್ರೌಂಡ್ ಇರಲಿಕ್ಕಿಲ್ವಾ?  ಆ ಗ್ರೌಂಡ್ ಸಿದ್ದತೆಗೆ JCBಗಳು ಎಷ್ಟು ಗಂಟೆಗಳು ಮಣ್ಣು ದೊಗೆದಿರುವುದಿಲ್ಲ? ಆ ಬೃಹತ್ ತೋಟಗಳಿಗೆ 4×4 ಜೀಪ್ ತಿರುಗುವುದಕ್ಕೆ ಎಷ್ಟು ಸಾವಿರ ಕಿ.ಮೀ. ರಸ್ತೆ ಮಾಡಲು, ಎಷ್ಟು ಮರಗಳ ಬಲಿ ಆಗಿರಬಹುದು? ಎಷ್ಟು ಜೀವಿಗಳ ಪ್ರಾಣ ತೆಗೆದಿರಬಹುದು?  ಎಷ್ಟು ಪ್ರಾಣಿ ಪಕ್ಷಿಗಳ ಸಂತತಿಗಳೇ ನಾಶ ಆಗಿರಬಹುದು?


ಆ ಲೀಸ್ಡ್ ಮೋನೋ ಕಲ್ಚರ್ಡ್ ಏಕ ಬೆಳೆಯ ಸಾವಿರಾರು ಎಕರೆ ಭೂಮಿ ಹೇಗೆ ಪರಿಸರ ಸೂಕ್ಷ್ಮ ಜೀವ ವೈವಿಧ್ಯ ಪ್ರದೇಶ ಆಗಿ ಉಳಿಯಲು ಸಾಧ್ಯ?  


ಬಡ ರೈತರ ಗುಂಟೇ ಲೆಕ್ಕದ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ಮಾಡಿ, ನಾಳೆ ಆ ಜಾಗಗಳನ್ನೂ ಈ ಕಂಪನಿಗಳಿಗೆ 99 ವರ್ಷಗಳಿಗೆ ಲೀಸ್‌ಗೆ ಕೊಡುವ ಯೋಚನೆಯೇ ಈ ಬಡ ರೈತರ ಜಮೀನಿನ ಒತ್ತುವರಿ ತೆರವು ಹಿಂದಿನ ಕ್ಲೈಮ್ಯಾಕ್ಸ್ ಇರಬಹುದಾ? ವಿಜ್ಞಾನಿಗಳ ವರದಿಗಳನ್ನು, ಸರಕಾರದ ಕಾಯಿದೆಗಳನ್ನು ಟ್ರಂಪ್ ಕಾರ್ಡ್ ಆಗಿ ಬಳಸಿಕೊಂಡು ಬಡ ರೈತರನ್ನು, ಮಲೆನಾಡಿನ ನಾಗರಿಕರನ್ನು ಹೆದರಿಸಲಾಗುತ್ತಿದೆಯಾ?


ಕಸ್ತೂರಿ ರಂಗನ್ ವರದಿ ಜಾರಿ ಬಂದರೆ, 99 ವರ್ಷಗಳ ಲೀಸ್‌ನ ಪ್ರಭಾವಿ ಕಾಫಿ ಕಂಪನಿಗಳು ತಮ್ಮ ಸುಪರ್ದಿಯಲ್ಲಿರುವ ಸಾವಿರಾರು ಎಕರೆ ಸೂಕ್ಷ್ಮ ಪ್ರದೇಶವನ್ನು ಬಿಟ್ಟು ಕೊಡ್ತಾವಾ? ಹಾಗಂತ ಕನಸನ್ನಾದರೂ ಕಾಣಲಿಕ್ಕೆ ಸಾಧ್ಯವಾ?  ಆ ಲೀಸ್ಡ್ ಮೋನೋಕಲ್ಚರ್ಡ್ ಸಾವಿರಾರು ಎಕರೆಯನ್ನು ತೆರವು ಗೊಳಿಸಲು ಕಸ್ತೂರಿ ರಂಗನ್ ವರದಿಯಲ್ಲಿ ಹೇಳಲಾಗಿದೆಯಾ? ಹೇಳಿದ್ದರೆ, ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆಯಾ? ಹೇಳಿದ್ದರೆ, ಕಂಪನಿಗಳು ಆಕ್ಷೇಪಣೆ ಸಲ್ಲಿಸದೇ ಇರುತ್ತವಾ? ಆ ಆಕ್ಷೇಪಣೆಗಳಿಗೆ ಸರಕಾರಗಳು,  ಅಧಿಕಾರಿಗಳು, ಪ್ರಭಾವಿ ಜನ ಪ್ರತಿನಿಧಿಗಳು ಮನ್ನಣೆ ಕೊಡ್ತಾರಾ?  ಕೊಡಲು ಸಾಧ್ಯವಾ?


ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶಗಳ ವಿಚಾರಗಳನ್ನು ಅಗೆದಷ್ಟೂ ಸೂಕ್ಷ್ಮ ವಿಚಾರಗಳು ವಿಸ್ತರಿಸಿಕೊಳ್ಳುತ್ತವೆ. 


ಇದೆಲ್ಲ ಬಿಟ್ಟು, ಜೀವನ ನಿರ್ವಹಣೆಗೆ ಮಾಡಿಕೊಂಡ ಸಣ್ಣ ರೈತರ ಬದುಕನ್ನೇ ಕಸಿಯುವ ಒತ್ತುವರಿ ತೆರವಿಗೆ ಮತ್ತು ಕರ್ನಾಟಕದ ಸೂಕ್ಷ್ಮ ಪ್ರದೇಶ ಎಂದು ಘೋಷಣೆಗೆ ಕಾದಿರುವ ವ್ಯಾಪ್ತಿಯ 1553 ಗ್ರಾಮಗಳಲ್ಲಿ ಬದುಕು ಕಟ್ಟಿಕೊಂಡಿರುವ ಸಣ್ಣ ರೈತರ, ಬಡ ಕೃಷಿ ಕಾರ್ಮಿಕರ, ಸಾಮಾನ್ಯ ನಾಗರಿಕರ ಮೇಲೆ ಸರಕಾರ, ಮಂತ್ರಿಗಳು, ಉಸ್ತುವಾರಿ ಕಾರ್ಯದರ್ಶಿಗಳು ಒತ್ತುವರಿ ತೆರವು ದೊಣ್ಣೆ ಹಿಡ್ಕೊಂಡು ಕೆಂಗಣ್ಣು ಬೀರುವುದು ಯಾಕೆ!!?


ಒತ್ತುವರಿಯ ಬೆಂಕಿ ಸಾಮಾನ್ಯ ರೈತರ ಮನೆಯ ಅಂಗಳದಲ್ಲಿ ಬಂದು ನಿಂತಿದೆ.  100-200-ಸಾವಿರ ಎಕರೆಗಳ ಒತ್ತುವರಿಯ ಅಥವಾ ಲೀಸಿನ ದೊಡ್ಡ ಕುಳಗಳಿಗೆ, ಕಂಪನಿಗಳಿಗೆ ಯಾವ ಬೆಂಕಿಯೂ ತಾಗುವುದಿಲ್ಲ.


ನಾಡಿದ್ದು 17.08.2024 ಕೊಪ್ಪದ ಬೃಹತ್ ಪ್ರತಿಭಟನೆ ಯಶಸ್ವಿಯಾಗಿಸಿ, ನಮ್ಮ ಪ್ರತಿರೋಧವನ್ನು ಶಾಂತಿಯುತವಾಗಿಯೇವ್ಯವಸ್ಥೆಯ ಒಳಗಿನ ನಿರ್ದೇಶಕರಿಗೆ ಮುಟ್ಟಿಸಬೇಕಾಗಿದೆ.  


ನಮ್ಮ ಜೀವ-ಜೀವನದ ಪ್ರಶ್ನೆಯ ಈ ಹೋರಾಟದ ಸಾಂವಿಧಾನಿಕ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಬಳಸಿಕೊಂಡು ನಮ್ಮನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ. 


ಎಲ್ಲ ರೈತರಿಗೆ, ರೈತ ಕಾರ್ಮಿಕರಿಗೆ, ಮಲೆನಾಡ ನಾಗರಿಕರಿಗೆ ಸ್ವಾತಂತ್ರೋತ್ಸವದ ಶುಭಾಶಯಗಳು. 


ನಾಳೆ ನಾವೆಲ್ಲರೂ ಕೊಪ್ಪದಲ್ಲಿ ಪರಸ್ಪರ ಭೇಟಿ ಆಗುವ. ಒಂದು ಗಟ್ಟಿ ಧ್ವನಿಯೊಂದಿಗೆ


ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top