ಮೈಸೂರು: ವೇಂಕಟಾಚಲಧಾಮದಲ್ಲಿ ವಿಜೃಂಭಿಸಿತು ರಾಯರ ವೈಭವ

Upayuktha
0




ಮೈಸೂರು: ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 353ನೇ ಉತ್ತರ ಆರಾಧನಾ ಮಹೋತ್ಸವದ ಅಂಗವಾಗಿ ಮೈಸೂರಿನ ಚಾಮರಾಜ ಜೋಡಿ ರಸ್ತೆ ಭಂಡಾರಕೇರಿ ಮಠದ ವೇಂಕಟಾಚಲ ಧಾಮದಲ್ಲಿ ಮಂಗಳವಾರ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಜೃಂಭಣೆಯಿಂದ ಚಾಲನೆ ನೀಡಲಾಯಿತು.


 ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಪ್ರತಿಷ್ಠಾಪಿಸಿರುವ ಶ್ರೀನಿವಾಸ ಮತ್ತು ಮೃತ್ತಿಕಾ ಸನ್ನಿಧಿ ಕ್ಷೇತ್ರದಲ್ಲಿ ರಾಯರ ವೃಂದಾವನಕ್ಕೆ  ಬೆಳಗ್ಗೆ 7ಕ್ಕೆ ಅಷ್ಟೋತ್ತರ ಪಾರಾಯಣ ನಂತರ ಪಂಚಾಮೃತಾಭಿಷೇಕ ನೆರವೇರಿತು. ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ಯರ ನೇತೃತ್ವದಲ್ಲಿ ವೃಂದಾವನಕ್ಕೆ ಪೂಜೆ, ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿಗೆ ನೂರಾರು ಭಕ್ತರು ಸಾಕ್ಷಿಯಾದರು. ಅರ್ಚಕ ಗಿರೀಶ ಆಚಾರ್ಯರ ಮಾರ್ಗದರ್ಶನದಲ್ಲಿ ಭಕ್ತರಿಂದ ರಾಯರ ಪಾದುಕೆಗಳಿಗೆ  ಪಾದಪೂಜೆ, ಕನಕಾಭಿಷೇಕ ಸಂಪನ್ನಗೊಂಡಿತು. ಶ್ರೀ ಸತ್ಯಧ್ಯಾನ ಭಜನಾ ಮಂಡಳಿಯ 30ಕ್ಕೂ ಹೆಚ್ಚು ವನಿತೆಯರು ದಾಸರ ಪದಗಳನ್ನು ಹಾಡಿ ಭಕ್ತಿಸುಧೆ ಹರಿಸಿದರು. ಭಕ್ತರು ರಥೋತ್ಸವ ಸೇವೆ ಮಾಡಿ ಭಕ್ತಿಭಾವ ಮೆರೆದರು. ನಂತರ ನೂರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು.


ದೇವರನಾಮ ಗಾಯನ:

ಸಾಂಸ್ಕೃತಿಕ ಕಾರ್ಯಕ್ರಮ ಸರಣಿಯಲ್ಲಿ ಮಂಗಳವಾರ ಸಂಜೆ 6ಕ್ಕೆ ಯುವ ಕಲಾವಿದೆ ಎ.ಆರ್. ಕೌಸಲ್ಯಾ ರಘುರಾಂ ತಂಡದಿಂದ ದೇವರ ನಾಮಗಳ ಗಾಯನ ಸೇವೆ ಗಮನ ಸೆಳೆಯಿತು. ಪಕ್ಕವಾದ್ಯದಲ್ಲಿ ಪ್ರಮಥ್ ರವಿಶಂಕರ್ (ಮೃದಂಗ) ಮತ್ತು ಶ್ರೀಲಲಿತಾ ರಾಮಕೃಷ್ಣ ( ವಯೋಲಿನ್) ಸಾಥ್ ನೀಡಿ ಪ್ರೌಢಿಮೆ ಮೆರೆದರು. ಯುವ ಕಲಾವಿದರ ಗೋಷ್ಠಿ ಮೆಚ್ಚುಗೆಗೆ ಪಾತ್ರವಾಯಿತು.


ನಂತರ ಪ್ರಾಕಾರ ಉತ್ಸವ, ಅಷ್ಟಾವಧಾನ ಸೇವೆ ಮತ್ತು ರಂಗಪೂಜೆ, ರಾಯರಿಗೆ ಮತ್ತು ಶ್ರೀನಿವಾಸ ದೇವರಿಗೆ ಮಹಾಮಂಗಳಾರತಿ   ಸಂಪನ್ನಗೊಂಡಿತು. ಬುಧವಾರ ರಾಯರ ಮಧ್ಯಾರಾಧನೆ ಅಂಗವಾಗಿ ದಿನಪೂರ್ಣ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top