ಹೆಣ್ಣುಭ್ರೂಣ ಹತ್ಯೆಗೆ ಕಡಿವಾಣ ಹಾಕಬೇಕು : ಡಾ. ಪ್ರತಾಪ್ ಕುಮಾರ್

Upayuktha
0


ಉಡುಪಿ:  ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡಿ, ಹೆಣ್ಣು ಭ್ರೂಣ ಹತ್ಯೆ ಮಾಡುವುದರಿಂದ ಸಮಾಜದಲ್ಲಿ ಲಿಂಗಾನುಪಾತದಲ್ಲಿ ವ್ಯತ್ಯಾಸ ಉಂಟಾಗಿ ಅಸಮತೋಲನವಾಗಿ ಸಮಸ್ಯೆಗಳು ಉಂಟಾಗುತ್ತವೆ. ಇವುಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿಯ ಅಧ್ಯಕ್ಷ ಡಾ. ಪ್ರತಾಪ್ ಕುಮಾರ್ ಹೇಳಿದರು.


ಅವರು ಗುರುವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಯವರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

  

ಇತ್ತೀಚೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡುವುದು ಮತ್ತು ಹೆಣ್ಣು ಭ್ರೂಣ ಹತ್ಯೆ ಮಾಡುವ ಪ್ರಕರಣಗಳು ಕೇಳಿ ಬರುತ್ತಿವೆ. ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳು ಎಲ್ಲಿಯೂ ನಡೆಯದಂತೆ ನೋಡಿಕೊಳ್ಳಲು ಜಿಲ್ಲಾ ಸಮಿತಿಯು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದರು.

  

ಭ್ರೂಣಲಿಂಗ ಪತ್ತೆ ಮಾಡುವುದು ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಜಿಲ್ಲೆಯ ಯಾವುದೇ ವೈದ್ಯಕೀಯ ಸಂಸ್ಥೆಗಳ ನರ್ಸಿಂಗ್ ಹೋಮ್‌ಗಳಲ್ಲಿ ಅಥವಾ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಕಂಡುಬಂದಲ್ಲಿ ಸಾರ್ವಜನಿಕರು ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿಗೆ ಮಾಹಿತಿ ನೀಡಬೇಕು. ಈ ರೀತಿ ಮಾಹಿತಿ ನೀಡಿ ಪ್ರಕರಣ ಸಾಬೀತಾದಲ್ಲಿ ಮಾಹಿತಿದಾರರಿಗೆ 1 ಲಕ್ಷ ರೂ. ವರೆಗೆ ನಗದು ಪ್ರೋತ್ಸಾಹ ಬಹುಮಾನವನ್ನು ನೀಡಲಾಗುವುದು ಎಂದರು.


ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸದಸ್ಯರುಗಳು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಅನಿರೀಕ್ಷಿತ ಭೇಟಿಗಳನ್ನು ಆಗಿಂದಾಗ್ಗೆ ನಡೆಸಬೇಕು ಹಾಗೂ ಅಲ್ಲಿನ ದಾಖಲೆಗಳ ಪರಿಶೀಲನೆಯನ್ನು ಸಹ ಮಾಡಬೇಕು ಎಂದರು.


ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಲಿಂಗಾನುಪಾತ 968 ಅನುಪಾತ ಇರುತ್ತದೆ. ಲಿಂಗಾನುಪಾತ ಅಸಮ ಆಗಿರುವ ಬಗ್ಗೆ ತಜ್ಞ ವೈದ್ಯರು ಈ ಬಗ್ಗೆ ಪರಾಮರ್ಶಿಸಿ, ವರದಿಯನ್ನು ಜಿಲ್ಲಾ ಮಟ್ಟದ ಪಿ.ಸಿ.ಪಿ.ಎನ್.ಡಿ.ಟಿ ಸಮಿತಿಗೆ ನೀಡಬೇಕು ಎಂದರು.


ಗರ್ಭಿಣಿ ಸ್ತಿಯರಿಗೆ  ಸ್ಕ್ಯಾನಿಂಗ್‌ಗೆ ವೈದ್ಯರು ಸಲಹೆ ಮಾಡಿದಾಗ ಸ್ಕ್ಯಾನಿಂಗ್ ಮಾಡುವ ಮುನ್ನ ತಾಯಿ ಕಾರ್ಡ್ ಪಡೆದಿರುವ ಬಗ್ಗೆ ಪರಿಶೀಲಿಸಬೇಕು. ಒಂದೊಮ್ಮೆ ಪಡೆಯದೇ ಇದ್ದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಪಡೆದುಕೊಳ್ಳುವಂತೆ ತಿಳಿಸಬೇಕು. ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಮೊಬೈಲ್‌ಗಳನ್ನು ಕೊಂಡೊಯ್ಯು ವುದು ಕಡ್ಡಾಯವಾಗಿ ನಿಷೇಧಿಸಬೇಕು ಎಂದರು. 


ಭ್ರೂಣಲಿಂಗ ಪತ್ತೆ ಮಾಡುವ ವೈದ್ಯಾಧಿಕಾರಿಗಳು ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳ ಮಾಲೀಕರುಗಳಿಗೆ 10 ಸಾವಿರ ರೂ. ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಇದೇ ಅಪರಾಧ ಪುನರಾವರ್ತನೆಯಾದಲ್ಲಿ ಐವತ್ತು ಸಾವಿರ ರೂ. ದಂಡದೊಂದಿಗೆ 5 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದರು.

  

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮರಾವ್, ಮಣಿಪಾಲ ಕೆ.ಎಂ.ಸಿ ಯ ಮಕ್ಕಳ ತಜ್ಞ ಡಾ. ಕಿರಣ ಹೆಬ್ಬಾರ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಡಾ. ಆಮ್ನಾ ಹೆಗ್ಡೆ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ದೀಕ್ಷಿತಾ, ಕಾರ್ಕಳ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅನಿತಾ ಪ್ರಭು ಹಾಗೂ ಮತ್ತಿತರರು ಉಪಸ್ಥಿತರಿದ್ದರು.  


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top