ಬೆಂಗಳೂರಿನ ಮತ್ತಿಕೆರೆಯ ರಾಘವೇಂದ್ರ ಸ್ವಾಮಿಗಳ ಮಠ ಬಹಳವಿಶಿಷ್ಟವಾದದ್ದು. ವ್ಯಾಸರಾಜರ ನಂತರ ಪೀಠವನ್ನು ಆಳಿದ ಐದನೇ ಪೀಠಾಧಿಪತಿಗಳು ಮಹಾ ಮಹಿಮೋಪೇತರು, ವಾದಿಸಿoಹರು, ಕಂಬಾಲೂರು ರಾಮಚಂದ್ರ ತೀರ್ಥರು ಪೂಜಿಸಿದ ಸೀತಾ ಸಮೇತ ರಾಮಚಂದ್ರ ಲಕ್ಷ್ಮಣ ಹಾಗೂ ಆಂಜನೇಯ ಪ್ರತೀಕಗಳು ಮತ್ತು 1974ರಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತಿಕಾ ಬೃಂದಾವನ ಸ್ಥಾಪಿಸಲ್ಪಟ್ಟು ಪ್ರತಿದಿನ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ದಿವ್ಯ ತಾಣವಾಗಿದೆ. ಪ್ರತಿ ಏಕಾದಶಿಯಂದು ರಾತ್ರಿ ಇಡೀ ಜಾಗರಣೆ, ಹರಿನಾಮಸ್ಮರಣೆ ಕೀರ್ತನ ಯಜ್ಞವನ್ನು ನಡೆಸುತ್ತಿರುವುದು ಶ್ಲಾಘನೀಯ.
ಸುಮಾರು ಮೂರು ನಾಲ್ಕು ದಶಕದ ಹಿಂದೆ ಒಂದು ವಾರ ಕಾಲ 'ನ ಭೂತೋ ನ ಭವಿಷ್ಯತಿ' ಎನ್ನುವಂತೆ ನಡೆದ ಅಖಿಲ ಭಾರತ ವ್ಯಾಸದಾಸ ಸಾಹಿತ್ಯ ಸಮ್ಮೇಳನದಲ್ಲಿ 20ಕ್ಕೂ ಹೆಚ್ಚು ಮಾಧ್ವ ಪೀಠಾಧಿಪತಿಗಳು, ದೇಶಾದ್ಯಂತದಿಂದ ಬಂದ ಅನೇಕ ಹರಿದಾಸರು ವಿದ್ವಾಂಸರ ಸಮ್ಮಿಲನ ಐತಿಹಾಸಿಕ ದಿಗ್ವಿಜಯ.
ಶ್ರೀಮಠದ ಒಂದು ವಿಶೇಷವೆಂದರೆ ಒಳ ಪ್ರಾಂಗಣದ ಗೋಡೆಯ ಮೇಲೆ ಹರಿದಾಸರ ಭಾವಚಿತ್ರಗಳನ್ನು ತಾರತಮ್ಯವಾಗಿ ಪ್ರದರ್ಶಿಸಲಾಗಿದೆ. ಅದರಂತೆ ಪ್ರತಿ ಹರಿದಾಸರ ಹಾಗೂ ಯತಿಗಳ ಆರಾಧನೆಯನ್ನು ಅರ್ಥಪೂರ್ಣವಾಗಿ ನಡೆಸುತ್ತಾ ಬಂದಿದ್ದಾರೆ.
ಹರಿದಾಸ ಸಾಹಿತ್ಯ ಸಾಗರದ ತರಂಗಗಳಲ್ಲಿ ಮದ್ವಸಿದ್ಧಾಂತ ಗಂಗಾ ಸ್ರೋತಸ್ಸು ಪ್ರವಹಿಸುತ್ತಿದೆ. ಹರಿದಾಸ ವರೇಣ್ಯರು ತಮ್ಮ ಸಾಹಿತ್ಯ ಜಟೆಯಲ್ಲಿ ಈ ಸಿದ್ಧಾಂತ ಗಂಗೆಯನ್ನು ಧರಿಸಿ ಅದನ್ನು ಜನಮಾನಸದಲ್ಲಿ ಹರಿಸಿದ ಮಹನೀಯರು. ಈ ಸಿದ್ಧಾಂತವೇ ಜೀವಾಳವಾಗಿಯುಳ್ಳ ದಾಸ ಸಾಹಿತ್ಯದ ಪರಂಪರೆಯಲ್ಲಿ ಅನೇಕ ದಾಸ ವರೇಣ್ಯರು ಭಗವಂತ -ಧರ್ಮ- ನೀತಿ -ಸಂಸ್ಕೃತಿ- ಸದಾಚಾರ -ಸಂಪ್ರದಾಯ ಉಪಾಸನ- ಸಮಾಜ ಮುಂತಾದ ಪ್ರಮುಖ ಸಾಹಿತ್ಯ ವಿಶೇಷ ದಿಂದ ಗುರುತಿಸಿಕೊಂಡಿದ್ದಾರೆ .
ಮಂಗಳಾಂಗ ಹರಿವಿಠಲ ಅಂಕಿತದಿಂದ ಆಧುನಿಕ ದಾಸ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿರುವ ಡಾ. ಎನ್ ಜಿ ವಿಜಯಲಕ್ಷ್ಮಿ ರಾಘವೇಂದ್ರ ಆಚಾರ್ಯ ಸಾತ್ವಿಕ ಚೇತನ. ಪ್ರೌಢಶಾಲಾ ಶಿಕ್ಷಕಿಯಾಗಿ ಹಿಂದಿ ಭಾಷೆಯಲ್ಲಿ ಮಧ್ವಸಂಪ್ರದಾಯದ ಕೃಷ್ಣ ಕಾವ್ಯ ಹಾಗೂ ವಲ್ಲಭ ಸಂಪ್ರದಾಯದ ಕೃಷ್ಣ ಕಾವ್ಯದ ತುಲನಾತ್ಮಕ ಅಧ್ಯಯನ ಕುರಿತು ಪ್ರೌಢ ಪ್ರಬಂಧ ರಚಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ. 25ಕ್ಕೂ ಅಧಿಕ ಕೃತಿಗಳ ರಚನೆಕಾರರಾಗಿ ಸದಾ ನಗುಮುಖದ, ಎರಡು ದಶಕದಿಂದ ಮತ್ತಿಕೆರೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸ್ತ್ರೀಯರನ್ನು ಸಂಘಟಿಸಿ ಅವರಿಗೆ ನಮ್ಮ ಪರಂಪರೆಯ ಆಚಾರ ವಿಚಾರಗಳ ಮಹತ್ವವನ್ನು ತಿಳಿಸಿಕೊಡುವ ಅನೇಕ ಕಾರ್ಯಕ್ರಮ ಗಳನ್ನು ರೂಪಿಸಿ ಶ್ರೀ ಮಠದ ಅಭ್ಯುದಯ ಅಭಿವೃದ್ಧಿ ಕಾರ್ಯಗಳಲ್ಲಿ ಮಹತ್ತರ ಪಾತ್ರ ವಹಿಸಿರುತ್ತಾರೆ.
ಮಹಿಳೆಯರಿಂದಲೇ ಧರ್ಮದ ಉಳಿವು ಎಂಬ ಮಾತಿಗೆ ಅನುಗುಣವಾಗಿ ಪ್ರಸಕ್ತ ಸಮಾಜಕ್ಕೆ ವ್ಯಾಸ ಸಾಹಿತ್ಯದಷ್ಟೇ ಅಷ್ಟೇ ಏಕೆ ಅದಕ್ಕಿಂತ ಮಿಗಲಾಗಿ ದಾಸ ಸಾಹಿತ್ಯದ ಅಗತ್ಯವಿದೆಯೆಂದು ಮನಗಂಡು ಮಠದ ಗೋಡೆಯ ಮೇಲಿರುವ 50ಕ್ಕೂ ಹೆಚ್ಚು ಹರಿದಾಸರ ಭಾವಚಿತ್ರಗಳಿಂದ ಪ್ರೇರಿತರಾಗಿ ಯತಿ ಪರಂಪರೆ ಮತ್ತು ದಾಸ ಪರಂಪರೆಯ ಪರಿಚಯವನ್ನು ಸ್ಥೂಲವಾಗಿ ಈ ಪುಸ್ತಕದಲ್ಲಿ ಮಾಡಿಕೊಟ್ಟಿದ್ದಾರೆ.
ಮಧ್ವಾಚಾರ್ಯರಿಂದ ಆರಂಭಿಸಿ ವರಾಹ ವಿಠಲ ದಾಸರವರೆಗೆ ಕಾಲ ಗಣನೆಗೆ ಅನುಸಾರವಾಗಿ ಆರೋಹಣ ಕ್ರಮದಲ್ಲಿ 55 ಹರಿದಾಸರುಗಳ ಪರಿಚಯ ಕೆಲಸ ಸುಲಭ ಸಾಧ್ಯವಲ್ಲ. ಇದೊಂದು ಪರಿಶೋಧನಾತ್ಮಕ ಯೋಜನೆ. ಪ್ರಚಲಿತ ಹರಿದಾಸರ ಸಂಖ್ಯೆಗಿಂತ ಅಪ್ರಚಲಿತರ ಸಂಖ್ಯೆ ಹೆಚ್ಚು. ಈ ವಿಷಯ ಸಂಪಾದನೆಯಲ್ಲಿ ಕಾಣುವ ಕೃಷಿ ತುಂಬಾ ಮೆಚ್ಚುಗೆಗೆ ಪಾತ್ರವಾದದ್ದು.
ಸಾಗರಕಟ್ಟೆ ಪ್ರದ್ಯುಮ್ನ ತೀರ್ಥರು, ವಿದ್ಯಾರತ್ನಾಕರರು, ವಿದ್ಯಾ ಪ್ರಸನ್ನತೀರ್ಥರು, ವರದೇಂದ್ರ ತೀರ್ಥರು, ವ್ಯಾಸ ತತ್ವಜ್ಞ ತೀರ್ಥರು ಮುಂತಾದವರ ಮಾಹಿತಿ ಈ ಕೃತಿ ಯಲ್ಲಿ ಸೇರ್ಪಡೆಯಾದಲ್ಲಿ ಕೃತಿಯ ಮೌಲಿಕತೆ ಇನ್ನು ಹೆಚ್ಚಾಗುವುದು.
ಕೃತಿಯ ಹೆಸರು: ಮತ್ತಿಕೆರೆ ಮಠ -ಹರಿದಾಸ ಕೂಟ
ಸಂಪಾದನೆ: ಡಾ ಎನ್ ಜಿ ವಿಜಯಲಕ್ಷ್ಮಿ ರಾಘವೇಂದ್ರ ಆಚಾರ್ಯ
ಪ್ರಕಾಶಕರು: ವಿಕೆ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್ ಮಲ್ಲೇಶ್ವರಂ, ಬೆಂಗಳೂರು
ಪುಟಗಳು-258, ಬೆಲೆ: ರೂ 400/-
ಪ್ರತಿಗಳಿಗೆ ಸಂಪರ್ಕಿಸಿ 9035185102
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ