ವನಿತಾ ಕಥನ-13: ಅಹಲ್ಯಾ

Upayuktha
0


ಹಿಂದು ಪರಂಪರೆಯಲ್ಲಿ ಮಹಾಪಾತಕಗಳನ್ನು ನಾಶ ಮಾಡಲು ಪಂಚಕನ್ಯೆಯರನ್ನು ನಿತ್ಯದಲ್ಲಿಯೂ ಸ್ಮರಿಸಬೇಕು ಎಂಬ ಎಂದು ಶ್ಲೋಕವಿದೆ. "ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರಿ ತಥಾ ಪಂಚ ಕನ್ಯಾ ಸ್ಮರೇರ್‌ ನಿತ್ಯಮ್‌ ಮಹಾಪಾತಕ ನಾಶನಮ್‌" ಎಂಬ ಶ್ಲೋಕವು ಬ್ರಹ್ಮಪುರಾಣದಲ್ಲಿ ಉಲ್ಲೇಖಿತವಾಗಿದೆ.

 

ಇಂತಹ ಪಂಚ ಕನ್ಯೆಯರಲ್ಲಿ ಒಬ್ಬಳಾದ ಅಹಲ್ಯೆಯು ಬ್ರಹ್ಮನ ಮಾನಸ ಪುತ್ರಿ. ನೋಡಲು ಅಪರಿಮಿತ ಸುಂದರಿಯಾಗಿದ್ದ ಕಾರಣ ಇಂದ್ರಾದಿ ದೇವತೆಗಳು ಅವಳನ್ನು ತಮಗೆ ಧಾರೆ ಎರೆದು ವಿವಾಹ ಮಾಡಿಕೊಡಬೇಕೆಂದು ಕೇಳಲು ಆರಂಭಿಸಿದರು. ಆಗ ಬ್ರಹ್ಮದೇವರು ಸ್ವಯಂವರವನ್ನು ಏರ್ಪಡಿಸಿ ಪೃಥ್ವಿಯ ಪ್ರದಕ್ಷಿಣೆ ಮಾಡಿ ಬಂದವರೊಂದಿಗೆ ಅಹಲ್ಯೆಯ ವಿವಾಹವೆಂದು ಘೋಷಿಸಿದಾಗ ದೇವತೆಗಳೆಲ್ಲರೂ ತಮ್ಮ ತಮ್ಮ ವಾಹನದಲ್ಲಿ ಪ್ರದಕ್ಷಿಣೆಗೆ ಹೊರಟರು.   ಗೋದಾವರಿ ತೀರದ ಬ್ರಾಹ್ಮಣನಾದ ಗೌತಮ ಮಹರ್ಷಿಯು "ವೇದಗಳಲ್ಲಿ ಆಗ ಪ್ರಸವಗೊಂಡ ಕಪಿಲೆಯನ್ನು ಪ್ರದಕ್ಷಿಣೆ ಮಾಡಿದರೆ ಭೂಲೋಕ ಪ್ರದಕ್ಷಿಣೆಗೆ ಸಮ ಎಂದು ಹೇಳಲಾಗಿದೆ, ತನ್ನ ಆಶ್ರಮದಲ್ಲಿ ಇದೀಗ ಹುಟ್ಟಿದ ಕರುವಿನೊಂದಿಗೆ ಇದ್ದ ಕಪಿಲೆಯ ಮೂರು ಪ್ರದಕ್ಷಿಣೆ ಮಾಡಿ ಬಂದಿರುವ ಕಾರಣ ವೇದದ ವಚನದಂತೆ ನಾನು ಭೂ ಪ್ರದಕ್ಷಿಣೆ ಮಾಡಿ ಬಂದಿರುತ್ತೇನೆ. ಸ್ವಯಂವರದ ಪಣವನ್ನು ಗೆದ್ದ ಕಾರಣ ಅಹಲ್ಯೆಯನ್ನು ತನಗೆ ಕೊಟ್ಟು ಮದುವೆ ಮಾಡಬೇಕು" ಎಂದು ಕೇಳಿಕೊಳ್ಳುತ್ತಾರೆ. ಅಹಲ್ಯಯು ಕೂಡ ಗೌತಮ ಋಷಿಗಳನ್ನು  ಮೆಚ್ಚಿದ ಕಾರಣ ಬ್ರಹ್ಮ ದೇವರ ಅನುಗ್ರಹದಿಂದ ಅವರಿಬ್ಬರ ವಿವಾಹವು ನಡೆಯುತ್ತದೆ.  


ಗೋದಾವರಿ ತಟದಲ್ಲಿ ಗೌತಮ ಋಷಿಗಳು ಮತ್ತು ಅಹಲ್ಯೆಯರ ದಾಂಪತ್ಯ ಸುಗಮವಾಗಿ ನಡೆಯುತ್ತಿತ್ತು. ಆದರೂ ಅಹಲ್ಯೆಯ ಬಗೆಗೆ ಆಸೆಯನ್ನು ಹೊಂದಿದ್ದ ಇಂದ್ರನಿಗೆ  ಅವಳ ಕುರಿತಾದ ಇಂದ್ರನ ಮೋಹ ಕಡಿಮೆಯಾಗಿರಲಿಲ್ಲ. ಹಾಗೂ ಗೌತಮರ ಪುಣ್ಯ ಹರಣಕ್ಕಾಗಿ ಇಂದ್ರನು ಕೋಳಿಯ ರೂಪದಲ್ಲಿ ಹೋಗಿ ನಡು ರಾತ್ರಿಯಲ್ಲಿಯೇ ಕೂಗುತ್ತಾನೆ.  ಕೋಳಿ ಕೂಗಿದ ಸದ್ದಿನಂತೆ ಬೆಳಗಾಗಿದೆ ಎಂಬ ಕಾರಣದಿಂದ ಗೌತಮರು ಆಹ್ನಿಕಕ್ಕೆ ನದೀ ತೀರಕ್ಕೆ ಹೋಗುತ್ತಾರೆ. ಅದೇ ಸಮಯದಲ್ಲಿ ಇಂದ್ರನು ತನ್ನ ರೂಪವನ್ನು ಬದಲಿಸಿ ಗೌತಮರ ವೇಷದಲ್ಲಿ ಅಹಲ್ಯೆಯ ಬಳಿ ಬರುತ್ತಾನೆ. ಅವಳ ಬಳಿಯಲ್ಲಿ ಗೌತಮರ ವೇಷದಲ್ಲಿ ಬಂದ ಇಂದ್ರನು ಅವಳನ್ನು ಸೇರುವ ಆಸೆಯನ್ನು ಹೇಳಿದಾಗ ಮೊದಲಿಗೆ ಅನುಮಾನಿಸಿದ ಅಹಲ್ಯೆಯು ನಂತರ ಪತಿಯೇ ಬಂದಾಗ ನಿರಾಕರಣೆ ಮಾಡಬಾರದು ಎಂದು ಒಪ್ಪುತ್ತಾಳೆ. ಆದರೆ ಅವಳಿಗೆ ಪತಿಯಲ್ಲವೇನೋ ಎಂದು ಅನುಮಾನ ಬರುವ ಮೊದಲೇ ಅವಳ ಪಾತಿವ್ರತ್ಯವನ್ನು ಇಂದ್ರನು ಕಪಟದಿಂದ ಹರಣ ಮಾಡುತ್ತಾನೆ. 


ಗೌತಮರು ನದೀ ತೀರದಲ್ಲಿ ಬಂದು ಬೆಳಗಾಗದ್ದನ್ನು ಕಂಡು ಏನೋ ಸಂಚು ನಡೆದಿದೆ ಎಂದು ಯೋಚಿಸುತ್ತಾ ಪುನಃ ಆಶ್ರಮಕ್ಕೆ ಬಂದಾಗ ಮನೆಯಲ್ಲಿ ಇಂದ್ರನನ್ನು ತಮ್ಮ ರೂಪದಲ್ಲಿ ಮತ್ತು ಜೊತೆಗೆ ಅಹಲ್ಯೆಯನ್ನು ನೋಡಿ ಶಾಪವನ್ನು ನೀಡುತ್ತಾರೆ. ಪತಿಯ ಶಾಪದಿಂದ ಅಹಲ್ಯೆಯ ಕಲ್ಲಾಗುತ್ತಾಳೆ ಹಾಗೂ ಇಂದ್ರನು ನಿರ್ವೀರ್ಯನಾಗುತ್ತಾನೆ. ನಂತರ ಅಹಲ್ಯೆಯು ಪ್ರಾರ್ಥನೆಯಂತೆ ಗೌತಮರು ತ್ರೇತಾಯುಗದಲ್ಲಿ ರಾಮಾಯಣ ಕಾಲದಲ್ಲಿ ರಾಮಾವತಾರದಲ್ಲಿ ಅಹಲ್ಯೆಯ ಉದ್ದಾರವಾಗುತ್ತದೆ ಎಂಬ ವರವನ್ನು ನೀಡುತ್ತಾರೆ.  



ಆ ಸಮಯದಿಂದ ಅಹಲ್ಯೆಯು ಮುಕ್ತಿಗಾಗಿ ತ್ರೇತಾಯುಗದವರೆಗೂ ರಾಮನ ಬರುವನ್ನು ಕಾಯುತ್ತಾ ಕುಳಿತಿರುತ್ತಾಳೆ. ವಿಶ್ವಾಮಿತ್ರರೊಡನೆ ಯಜ್ಞದ ಸಂರಕ್ಷಣೆಗೆ ಹೋದಾಗ ಅವರು ರಾಮನನ್ನು ಗೌತಮನ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತಾರೆ. ಆ ಸಮಯದಲ್ಲಿ ಶ್ರೀ ರಾಮಚಂದ್ರನು ಶಿಲೆಯಾಗಿದ್ದ ಅಹಲ್ಯೆಯನ್ನು ತನ್ನ ಪುಣ್ಯತಮವಾದ ಪಾದಗಳಿಂದ ಸ್ಪರ್ಶಿಸಿದಾಗ ಅಹಲ್ಯೆಯು ಮೊದಲಿನಂತೆ ಆಗುತ್ತಾಳೆ. ಗೌತಮರು ಪತ್ನಿಯ ಮೇಲೆ ಅಸಮಾಧಾನ ಗೊಂಡಿದ್ದರೂ ಕೂಡ  ಅವಳ ಅಷ್ಟು ದಿನದ ತಪಸ್ಸಿನ ಫಲದಿಂದ ಪರಮಾತ್ಮನ ಅವತಾರವಾದ ಶ್ರೀ ರಾಮಚಂದ್ರನಿಂದ ಉದ್ಧಾರಗೊಂಡು ಪರಿಶುದ್ಧಳಾದ ಕಾರಣ ಅವಳನ್ನು ಕ್ಷಮಿಸಿ ಸ್ವೀಕಾರ ಮಾಡುತ್ತಾರೆ.


- ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top