-ಡಾ. ರೂಪಾ ರಾವ್
ದಾಂಪತ್ಯ ಅಥವಾ ಸಾಂಗತ್ಯ ಮುಂತಾದ ಸಂಬಂಧಗಳ ಅಡಿಪಾಯವೇ ಮಾನಸಿಕ, ದೈಹಿಕ ಮತ್ತು ಇನ್ನಿತರ ಅಗತ್ಯಗಳ ಪರಸ್ಪರ ಅವಲಂಬನೆ, ನಂಟು, ಹೊಂದಾಣಿಕೆ, ಪರಸ್ಪರ, ಗೌರವ, ನಂಬಿಕೆ ಮತ್ತು ಪ್ರೀತಿ. ಏಕೆಂದರೆ ಎರಡು ವಿಭಿನ್ನ ವ್ಯಕ್ತಿಗಳು ಪರಸ್ಪರರಲ್ಲಿ ಅನುರಕ್ತರಾಗಿಯೋ ಅಥವಾ ಮದುವೆ ಎಂಬ ಬಂಧಕ್ಕೆ ಬಿದ್ದಾಗ ಜೊತೆಗೇ ಇರುವ ಸಂಬಂಧ ಇದು.
ಈ ಸಂಬಂಧಗಳಲ್ಲಿ ಮೇಲಿನ ಯಾವುದೇ ಅಂಶವೂ ಏಕಮುಖವಾಗಿದ್ದರೆ ಅಂದರೆ ಕೇವಲ ಒಬ್ಬರಿಂದ ಮಾತ್ರ ಸಿಗುತ್ತಿದ್ದರೆ ಅಥವಾ ಉಸಿರುಗಟ್ಟಿಸು ವಂತಿದ್ದರೆ ಅಥವ ಇಬ್ಬರಲ್ಲೂ ಒಬ್ಬರು ಮಾತ್ರ ಈ ನಂಟನ್ನು ಹಿಡಿದಿಡುವ ಪ್ರಯತ್ನ ಮಾಡುತ್ತಿದ್ದರೆ ಅದು ಸಂಬಂಧವಾಗುವುದಿಲ್ಲ, ಪಂಜರವಾಗುತ್ತದೆ. ಇಂತಹ ಸಂಬಂಧವನ್ನು ಟಾಕ್ಸಿಕ್ ಸಂಬಂಧ ಎನ್ನುತ್ತಾರೆ. ಅಥವಾ ಸರಳವಾಗಿ ನಂಜಿನ ಪಂಜರವೆನ್ನಬಹುದು.
ಪ್ರೀತಿಯ ಮುಸುಗು ಹಾಕಿಕೊಂಡಾಗ ನಂಜೂ ಸಹಾ ಅಮೃತದಂತೇ ಅನಿಸುತ್ತದೆ. ಹಾಗೆಯೇ ಬಹಳ ಮಂದಿಗೆ ತಾವು ಟಾಕ್ಸಿಕ್ ಸಂಬಂಧದಲ್ಲಿ ಇರುವುದೇ ಗೊತ್ತೇ ಆಗಿರುವುದಿಲ್ಲ.
ಜೀವನವೇ ಇಷ್ಟೆಂದು ಭಾವಿಸುತ್ತಾ ಅದೊಂದು ಬಗೆಯ ಲರ್ನ್ಡ್ ಹೆಲ್ಸ್‌ಲೆಸ್‌ನೆಸ್ ಅಥವಾ ಮೈಗೂಡಿಸಿಕೊಂಡ ಅಸಹಾಯಕತೆಗೆ ಒಳಗಾಗಿರುತ್ತಾರೆ. ಆದ್ದರಿಂದ ಇವತ್ತು ಟಾಕ್ಸಿಕ್ ಸಂಬಂಧಗಳ ವಿವಿಧಮುಖಗಳನ್ನು ಪರಿಚಯಿಸಿಕೊಳ್ಳೋಣ.
1. ಕ್ರಿಟಿಕ್- ಟೀಕೆ ಸಂಬಂಧ / ಯಾವಾಗಲೂ ದೂರುವುದು
ಯಾವುದೇ ಸಂಬಂಧವಾಗಲಿ ಅಲ್ಲಿ ಪರಸ್ಪರ ಹೊಂದಾಣಿಕೆ, ಅರ್ಥೈಸುವಿಕೆ ಇರದೆ ಕೇವಲ ನಿಂದನೆ, ದೂರು ಕಾಣುತ್ತಿದ್ದರೇ ಅದ ಟೀಕಾ ಸಂಬಂಧ. ಈ ಸಂಬಂಧದಲ್ಲಿ ಒಬ್ಬರು ಅಥವಾ ಇಬ್ಬರೂ ಇನ್ನೊಬ್ಬರ ತಪ್ಪುಗಳನ್ನು ಸದಾ ಎತ್ತಿ ತೋರುವುದು, ಪ್ರಸ್ತುತಕ್ಕೆ ಸಂಬಂಧ ಪಡದ ಭೂತಕಾಲದ ವಿಷಯಗಳನ್ನು ತೆಗೆದು ನಿಂದಿಸುವುದು, ಅವರನ್ನು ತಮಾಷೆಯ ಹೆಸರಲ್ಲಿ ಇನ್ನೊಬ್ಬರನ್ನು ಅವಹೇಳನಗೊಳಿಸುವುದು ಅಪಮಾನಗೊಳಿಸುವುದು ಇಂತಹ ನಡುವಳಿಕೆಗಳು. ಇವುಗಳು ಆಗಾಗ ಆಗುತ್ತಿದ್ದರೆ ಆ ಸಂಬಂಧವನ್ನು ಮೂರು ವಿಮರ್ಶೆಗೆ ಒಳಪಡಿಸಬೇಕಾಗುತ್ತದೆ. ಇಂತಹ ಸಾಮಾನ್ಯವಾಗಿ ಮೆಚ್ಚುಗೆ ಹಾಗೂ ಕೃತಜ್ಞತೆಯ ತೋರ್ಪಡಿಕೆ ಕಡಿಮೆ ಇರುತ್ತದೆ.
2. Passive aggressive. ಸೈಲೆಂಟ್ ಟ್ರೀಟ್ಮೆಂಟ್, ಒಂದು ತರಹ ಸದ್ದಿಲ್ಲದೆ ಕೊಲೆ ನಡೆಸುವಂತಹದ್ದು. ಕೋಪ ಬಂದರೆ ಏನೆಂದು ಹೇಳದೇ ಮಾತುಕಥೆಯೂ ಆಡದೆ ಅಸಮಾಧಾನ, ಅಸಹಕಾರ ತೋರುವುದು. ಮೌನವೇ ಇಲ್ಲಿ ಆ ಇನ್ನೊಬ್ಬರನ್ನು ಕೊಲ್ಲುವ ಅಸ್ತ್ರ. ಬೇಕಾದ ಸಮಯದಲ್ಲಿ ಯಾವುದೇ ಸಹಕಾರ ಅಥವಾ ಸಹಾಯ ಮಾಡದೇ ಇರುವುದು ಸಹಾ.
3. ಪೊಸೆಸಿವ್ ನೆಸ್ (ಸ್ವಾಮ್ಯ ಸೂಚಕ) ಸಂಬಂಧಗಳು
ನೀನು ನನ್ನವಳು ನನ್ನನ್ನು ಕೇಳದೇ ಏನೂ ಮಾಡಬಾರದು, ಯಾರೊಡನೆಯೂ ಮಾತಾಡಬಾರದು, ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬಾರದು. ನನ್ನನ್ನು ಬಿಟ್ಟು ಯಾರೂ ನಿನ್ನನ್ನು ಹೊಗಳಬಾರದು. ಇಂತಹ ಹಲವಾರು ಕಟ್ಟುಪಾಡುಗಳನ್ನು ಹಾಕುವಂತಹ ಸಂಬಂಧದ ಬಗ್ಗೆ ಇದು. ಬಹಳ ಕಡೆ ಪ್ರೀತಿಯನ್ನು ಪೊಸೆಸಿವ್ನೆಸ್ ಗೆ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಅತಿಯಾದ ಪೊಸೆಸಿವ್ ನೆಸ್ ಆರೋಗ್ಯಕರ ಸಂಬಂಧಕ್ಕೆ ಒಳ್ಳೆಯದಲ್ಲ.
4. ನಾರ್ಸಿಸಿಸ್ಟ್ ಸಂಬಂಧ: ಇದೊಂದು ತರಹ ಸ್ವಾರ್ಥ ಸಂಬಂಧ. ಇಲ್ಲಿ ಯಾರಾದರೊಬ್ಬರು ಬೇರೆಯವರು ತನಗಿಂತ ಅಜ್ಞಾನಿಗಳು, ತಾನು ಹೇಳಿದಂತೆ ಎಲ್ಲವೂ ನಡೆಯಬೇಕೆಂಬ ಹಠ. ತಾನು ದೇವರು ಕೊಟ್ಟ ವರವನೇನೋ ಎನ್ನುವಷ್ಟು ಅಹಂಕಾರ. ಸಂಗಾತಿಯ ಮನಸನ್ನು, ಭಾವನೆಗಳಿಗೆ ಯಾವುದೇ ಬೆಲೆ ಇಲ್ಲ. ಎಂಪತಿ ಅಂತೂ ದೂರದ ಮಾತು. ತನ್ನ ಸಂಗಾತಿಯನ್ನು ಮಾನಸಿಕವಾಗಿ ಹಿಂಸಿಸುವುದೇ ಇವರಿಗೆ ಖುಷಿಯಾಗಿರುತ್ತದೆ.
5. ಕಲ್ಲಿನ ಗೋಡೆಯಂತಹ ಮನಸಿನ ಸಂಬಂಧ. ಇವರು ಯಾವುದೇ ಕಷ್ಟ ಅಂತ ಹೇಳಿಕೊಂಡರೂ, ಅಥವ ಖುಷಿ ಅಂದರೂ ಭಾವನೆಗಳಿಗೆ ಸ್ಪಂದನೆ ಸೊನ್ನೇ. ಒಂದು ತರಹ ಕಲ್ಲಿನ ಗೋಡೆ ತರಹ.ಕೋಣನ ಮುಂದೆ ಕಿನ್ನರಿ ಬಾರಿಸಿಕೊಂಡು, ಗೋರ್ಕಲ್ಲ ಮೇಲೇ ಮಳೆ ಸುರಿಯುವುದು ಇವರ ಬಳೀ ಏನೇ ಹೇಳಿಕೊಳ್ಳುವುದೂ ವ್ಯರ್ಥವಷ್ಟೇ ಹಾಗಾಗಿ ನಿಟ್ಟುಸಿರು ಬಾಳಿನುದ್ದಕ್ಕೂ ಕಾಲಿಟ್ಟ ಬುತ್ತಿ.
6. ಸಮಾಜವಿರೋಧಿ ವ್ಯಕ್ತಿತ್ವ ವದೋಷ (anti social personality disorder) ಒಂದು ರೀತಿಯಲ್ಲಿ ಸ್ಯಾಡಿಸ್ಟ್ ಅಥವಾ ಇನ್ನೊಬ್ಬರಿಗೆ ತೊಂದರೆ ಮಾಡಿ ತಮ್ಮ ಖುಷಿ ಹುಡುಕಿ ಕೊಳ್ಳುವ ಜನ. ಇವರುಗಳು ತಿದ್ದಿಕೊಳ್ಳುವುದು ಅಸಾಧ್ಯ. ಇಂತಹವರ ಸಂಗ ಯಾವತ್ತಿದ್ದರೂ ಅಪಾಯಕಾರಿಯೇ.
1, 2,3 ಹಾಗೂ 5ರ ಬಗೆಯ ಸಂಬಂಧಗಳು ಪರಸ್ಪರ ಮಾತುಕಥೆಗಳ ಮೂಲಕ ಸಂಬಂಧ ಸರಿಹೋಗುವ ಸಾಧ್ಯತೆಗಳಿವೆ.
4 ಮತ್ತು6 ಬಗೆಯ ಸಂಬಂಧಗಳು ಬದುಕು ಬಹಳ ಕಷ್ಟ. ಇವರುಗಳನ್ನು ಮಾತುಕತೆಯಾಗಲೀ ಕೌನ್ಸಿಲಿಂಗ್ ಆಗಲೀ ಸರಿಪಡಿಸುವುದು ಕಷ್ಟ. ಹಾಗಾಗಿ ಇವರ ಜೊತೆ ಹೊಂದಾಣಿಕೆಯೂ ಅಪಾಯವೇ.
ಬದುಕು ಬಹಳ ಕಡಿಮೆ ಅವಧಿಯದ್ದು. ಪ್ರತಿಯೊಬ್ಬರಿಗೂ ತಮ್ಮ ಬದುಕನ್ನು ಚಂದಗಾಣಿಸಿಕೊಳ್ಳುವ ಅಥವಾ ವಿರೂಪಗೊಳಿಸಿಕೊಳ್ಳುವ ಆಯ್ಕೆಯೂ ಇದೆ. ಇಂತಹ ವಿಷಪೂರಿತ ಸಂಬಂಧಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ತ್ಯಾಗಮಯಿ ಪಟ್ಟ ಹೊರಬೇಕೇ ಇಲ್ಲ ಇರುವಷ್ಟು ದಿನ ಚಂದಗಾಣಿಸಿಕೊಂಡು ಇರಬೇಕೇ ಎನ್ನುವುದನ್ನು ನಿರ್ಧರಿಸುವ ಸ್ವಾತ್ರಂತ್ರ್ಯವೂ ಕೂಡ ಇದೆ.
ಹಾಗಾಗಿ ನೀವು ಅಥವ ಯಾರೇ ಆಗಲಿ ಇಂತಹ ಟಾಕ್ಸಿಕ್ ಸಂಬಂಧಗಳಲ್ಲಿ ಸಿಲುಕಿ ನರಳುತ್ತಿದ್ದರೆ, ಆಯ್ಕೆ ಬಗ್ಗೆ ಯೋಚಿಸಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ