ಮಂಗಳೂರು: ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ಮತ್ತು ಹಗರಣಗಳ ವಿರುದ್ಧ ನಾಳೆ (ಆ.3) ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಮತ್ತು ಜೆಡಿಎಸ್ ವರಿಷ್ಠರಾದ ಎಚ್.ಡಿ ಕುಮಾರಸ್ವಾಮಿ ಅವರ ಸಹಯೋಗದಲ್ಲಿ ಬೆಂಗಳೂರಿನಿಂದ ಮೈಸೂರು ತನಕ ಪಾದಯಾತ್ರೆ ಪ್ರಾರಂಭವಾಗಲಿದೆ. ಆ.7ರಂದು ಮೈಸೂರು ತಲುಪಲಿರುವ ಪಾದಯಾತ್ರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ 5,000ಕ್ಕೂ ಹೆಚ್ಚು ಕಾರ್ಯಕರ್ತರು ವಿವಿಧ ಮೋರ್ಚಾಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು, ಸಿದ್ದರಾಮಯ್ಯ ನೇತೃತ್ವದ ಸರಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಸಮರ ಸಾರಿದೆ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ವರೆಗೂ ಪಕ್ಷವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ನುಡಿದರು.
ವಾಲ್ಮೀಕಿ ನಿಗಮದ 187 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದು, ಈ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಅನೇಕ ಆಘಾತಕಾರಿ ಮಾಹಿತಿಗಳು ಹೊರಬಂದಿವೆ. ಇದರ ಬಗ್ಗೆ ವಿಧಾನಸಭೆಯಲ್ಲಿ ಮತ್ತು ಹೊರಗೆ ಅನೇಕ ಹೋರಾಟಗಳನ್ನು ಬಿಜೆಪಿ ಮಾಡುತ್ತಿದೆ. ಈ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಪತ್ತೆ ಮಾಡಿ ಶಿಕ್ಷೆಗೆ ಗುರಿಪಡಿಸಬೇಕಾದರೆ ಸಿಬಿಐ ತನಿಖೆಯೇ ನಡೆಯಬೇಕು. ಈ ಕುರಿತು ನೈಜವಾದ ಸ್ಪಷ್ಟ ಚಿತ್ರಣವನ್ನು ರಾಜ್ಯದ ಜನತೆಯ ಮುಂದಿಡುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ನಮ್ಮ ಶಾಸಕರ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಪ್ರಬಲವಾದ ಹೋರಾಟವನ್ನು ನಡೆಸಿದೆ. ಮುಡಾ ಹಗರಣದಲ್ಲಿ 4,000 ಕೋಟಿ ಯಷ್ಟು ಹಗರಣ ಮುಖ್ಯಮಂತ್ರಿಗಳ ನೇತೃತ್ವದಲ್ಲೇ ನಡೆದಿರುವುದು ಮಾಧ್ಯಮಗಳ ಮೂಲಕ ಜನತೆಗೆ ತಲುಪಿದೆ. ಮುಖ್ಯಮಂತ್ರಿಗಳ ಧರ್ಮಪತ್ನಿ ಪಾರ್ವತಿಯವರ ಹೆಸರಿನಲ್ಲಿ ನಿವೇಶನಗಳನ್ನು ಅಕ್ರಮವಾಗಿ ಪಡೆದುಕೊಳ್ಳಲಾಗಿರುವುದು ದಾಖಲೆಗಳ ಸಮೇತ ಬೆಳಕಿಗೆ ಬಂದಿದೆ ಎಂದು ಸತೀಶ್ ಕುಂಪಲ ಹೇಳಿದರು.
ಒಟ್ಟಿನಲ್ಲಿ ಈ ಎಲ್ಲ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ವರೆಗೂ ಹೋರಾಟವನ್ನು ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದು ಬಿಜೆಪಿಯ ಉದ್ದೇಶವಾಗಿದೆ. ಪಾದಯಾತ್ರೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್. ಅಶೋಕ್, ಹಿರಿಯ ನಾಯಕರಾದ ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ ಸದಾನಂದ ಗೌಡ, ಜೆಡಿಎಸ್ ವರಿಷ್ಠ ಮತ್ತು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಮುಖಂಡರು ಉದ್ಘಾಟಿಸಲಿದ್ದಾರೆ. ಕೆಂಗೇರಿಯಿಂದ ಮೈಸೂರು ತನಕ ಪಾದಯಾತ್ರೆ ನಡೆಯಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ರೀತಿಯ ಸಹಕಾರ ಮಾಡದ ಕಾಂಗ್ರೆಸ್ ಸರಕಾರ, ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ಭ್ರಷ್ಟಾಚಾರಗಳನ್ನು ನಡೆಸುತ್ತಲೇ ಬಂದಿದೆ ಎಂದು ಅವರು ಟೀಕಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಿಂದ 5,000 ಮಂದಿ ಕಾರ್ಯಕರ್ತರು ಯುವಮೋರ್ಚಾ ನೇತೃತ್ವದಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ ವಿವಿಧ ಇತರ ಮೋರ್ಚಾಗಳೂ ಈ ಪಾದಯಾತ್ರೆಗೆ ಸಹಯೋಗ ನೀಡಲಿವೆ. 200ಕ್ಕೂ ಹೆಚ್ಚು ಕಾರ್ಯಕರ್ತರ ಒಂದು ತಂಡ ಈಗಾಗಲೇ ಅಲ್ಲಿಗೆ ಹೊರಟಿದೆ ಎಂದು ಸತೀಶ್ ಕುಂಪಲ ಮಾಹಿತಿ ನೀಡಿದರು.
ಜಿಲ್ಲೆಯಿಂದ ಜಿಲ್ಲಾಧ್ಯಕ್ಷರು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲ ಪ್ರಮುಖರು ನಾಳೆ ಬೆಂಗಳೂರಿಗೆ ತೆರಳಿ ಪಾದಯಾತ್ರೆಯಲ್ಲಿ ಸೇರಿಕೊಳ್ಳಲಿದ್ದಾರೆ. 7ನೇ ತಾರೀಕಿನಂದು 2-3 ಸಾವಿರ ಕಾರ್ಯಕರ್ತರು ಒಟ್ಟಿಗೇ ಇಲ್ಲಿಂದ ಹೊರಟು ಪಾದಯಾತ್ರೆಯಲ್ಲಿ ಸೇರಿಕೊಳ್ಳಲು ತೀರ್ಮಾನಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಯತೀಶ್ ಅರ್ವಾರ, ಸಂಜಯ್ ಪ್ರಭು, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಮಹೇಶ್ ಜೋಗಿ, ರವೀಂದ್ರ ಶೆಟ್ಟಿ ಉಳಿದೊಟ್ಟು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ