ಜಗತ್ನಾಗ ಜಡಾನೂ ಅದ, ಚೇತನಾನೂ ಅದ...! ಎರಡೂ ಬ್ಯಾರಬ್ಯಾರೆ ಅಂತನಸೀದ್ರೂ, ಚೇತನಾ ಸ್ವಲ್ಪ ಶ್ರೇಷ್ಠ ಅಂತನಸ್ತದ. ಚೇತನಾ ಉಳ್ಳವ್ರೊಳಗ ಸ್ಥಾವರಕ್ಕಿಂತಾ ಜಂಗಮ ಪ್ರಾಣಿಗೋಳು, ಪ್ರಾಣಿಗಳೊಳಗ ಸ್ವಲ್ಪ ಬುದ್ಧಿ, ವಿವೇಕ ಉಪಯೋಗಿಸೋ ಇರುವೆ, ಗಿಳಿ, ನರಿ ಶ್ರೇಷ್ಠಾ ಅಂತನಸ್ತದ. ಇವಕ್ಕಿಂತಾ ಮನಷ್ಯಾ, ಮನಷ್ಯಾರೊಳಗ ಸಜ್ಜನ, ಸಜ್ಜನರಾಗ ಸಾತ್ವಿಕಾ, ಸಾತ್ವಿಕರಾಗ ಜ್ಞಾನಿ, ಜ್ಞಾನಿಗಳೊಳಗ ಜಪ-ತಪ-ಧ್ಯಾನ-ಮೌನ ಇವುಗೊಳ್ ನಿತ್ಯಾಚರಣೆ ಮಾಡೋವ್ರು, ಹಿಂಗ ಅನಷ್ಠಾನ ಮಾಡವ್ರೊಳಗ ಬ್ರಹ್ಮಜ್ಞಾನಿಗಳು, ಸಮಸ್ತ ಲೋಕದ ಕಲ್ಯಾಣಕ್ಕಾಗಿ ತಮ್ಮ ಬದುಕನ್ನಽಽ ತಪಸ್ಸಿನ್ಹಂಗ ಧಾರೆ ಎರೆವ್ರೂ ಮತ್ತೂ ಶ್ರೇಷ್ಠಂತ ಅಂತನಸ್ಕೋತಾರ...!
ಈ ಶ್ರೇಷ್ಠತನಾ ಪಡಕೋಬೇಕನ್ನೋ ಕೆಲವ್ರು ಹ್ಯಾಂಗಾದ್ರೂ ಪ್ರಸಿದ್ಧ ಆಗಬೇಕಂತ ಬಯಸ್ತಾರ. ಪ್ರಸಿದ್ಧ ಆಗೋದೂ ಅಷ್ಟು ಸಹಜ ಇಲ್ರಪಾ...! ಪ್ರಸಿದ್ಧಿ ಬೇಕ್ ಅನ್ನೋವ್ರಿಗೆ ಮೊದ್ಲೆಕ್ಕ ಮ್ಯಾಲೆ ಹೇಳಿದ್ ಸಿದ್ಧಿ ಬೇಕು. ಸಿದ್ಧಿ ಬೇಕ್ ಅನ್ನೋವ್ರಿಗೆ ಅಂತರಂಗದ್ ಶುದ್ಧಿ ಬೇಕು. ಅದು ಭಾವ, ಬುದ್ಧಿ, ಹೃದಯ, ದೇಹ, ಮನಸ್ಸು, ಅರ್ಥಶೌಚದ್ ಅಂದ್ರ ಹಣಕಾಸಿನ ವಿಚಾರದಾಗ ಶುದ್ಧಿ, ಹಿಂಗ ಭ್ಹಾಳ ಭ್ಹಾಳ ಅವರಪಾ...!
ಮನಶುದ್ಧಿ ಇಲ್ಲದವಂಗ ಮಂತ್ರದ್ ಫಲ ಇಲ್ಲಾ, ತನುಶುದ್ಧಿ ಇಲ್ಲದವಂಗ ತೀರ್ಥದ್ ಫಲ ಇಲ್ಲಾಂತ ಹರಿದಾಸರೂ ಹೇಳ್ಯಾರ...!
ಅಂದಮ್ಯಾಲೆ, ನಮ್ ಮನಸ್ಸು ಶುದ್ಧ ಇತ್ತಂದ್ರ ಎಲ್ಲಾರೊಳಗೂ ಪ್ರೀತಿ ವಿಶ್ವಾಸ ಸಹಜಾಗಿ ಮೂಡ್ತದ. ಬದುಕಿನ ಮೂಲಸೂತ್ರನ ಪ್ರೀತಿ ಅಂತಃಕರಣ ಅದರಪಾ. ಮಕ್ಕಳನ್ನಾ ಪ್ರೀತಸೋದು ವಾತ್ಸಲ್ಯಾ ಅಂತನಸ್ತದ. ಗೆಳ್ಯಾರನ ಪ್ರೀತ್ಸೋದು ಸಖ್ಯ, ಗಂಡ ಹೆಂಡತೀನ, ಹೆಂಡ್ತಿ ಗಂಡನ್ನ ಪ್ರೀತ್ಸೋದು ಪ್ರೇಮ ಅಂತನಸಿದ್ರ, ಅಣ್ತಮಂದ್ರು, ಅಕ್ತಂಗ್ಯಾರು ಪ್ರೀತ್ಸೋದು ಅಂತಃಕರಣ-ಅಭಿಮಾನ ಅನಸ್ತದ. ಹಂಗಽಽ, ಬಂಧುವರ್ಗದ್ ಆತ್ಮೀಯರನ್ನ ಪ್ರೀತ್ಸೋದು ವಿಶ್ವಾಸ ಅಂತನಸ್ತದ. ತಂದಿತಾಯಾರು, ಸದ್ಗುರುಗಳೊನ್ನ ಪ್ರೀತ್ಸೋದು ಗೌರವ, ಬದುಕಿನ ಸಾರ್ಥಕತೆ ಅಂತನಸಿದ್ರ, ಪರಮಾತ್ಮನ್ ಪ್ರೀತ್ಸೋದ ಭಕ್ತಿ ಅಂತನಸ್ತದ; ಮತ್ತ ಈ ಭಕ್ತಿಯಿಂದನ ಜೀವಕ್ಕ ಸದಾ ಮುಕ್ತ ಭಾವ ಸಿಗ್ತದ...!
ನೀವೇನಂತೀರಿ..., ಹೌದೋ ಅಲ್ಲೋ...!? ಹಿಂಗ ಸಿದ್ಧಿ-ಶುದ್ಧಿಯಿಂದ ಇರ್ಲಿಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡೋಣೇನೂ...!? ಆವಾಗ ಪ್ರಸಿದ್ಧಿ ಬ್ಯಾಡಂದ್ರೂ ತಾನ ಹಿಂಬಾಲಿಸಿಕೊಂಡು ಬರ್ತದ. ಪ್ರಸಿದ್ಧಿ ಏನ್ ಬ್ಯಾಡ್ರಪಾ, ಪರಮಾತ್ಮನ್ ಪ್ರೀತಿ ಇದ್ರ ಸಾಕು. ಅದರ ಹಿಂದನಽಽ ಧರ್ಮಾನೂ ಕುಣಕೋತ ಬರ್ತದ, ಇರ್ತದ..., ನೋಡ್ರಿ...!
-ಕುರಾಜನ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ